ರಾಷ್ಟ್ರೀಯ ಹೋಮಿಯೋಪತಿ ಆಯೋಗ ಕಾಯಿದೆ (ಎನ್‌ಸಿಎಚ್)-2020ರ ವಿವಿಧ ನಿಬಂಧನೆಗಳ ಸಾಂವಿಧಾನಿಕ ಸಿಂಧುತ್ವವನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ಎತ್ತಿ ಹಿಡಿದಿದೆ.
ಕಾಯಿದೆ ನಿಬಂಧನೆಗೆ ಒಳಪಟ್ಟ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಹೋಮಿಯೋಪತಿ ಪದವಿ ಕೋರ್ಸ್‌ಗಳ ಪ್ರವೇಶಾತಿಗೆ ರಾಷ್ಟ್ರೀಯ ಪ್ರವೇಶ ಅರ್ಹತಾ ಪರೀಕ್ಷೆ (ನೀಟ್) ನಿಗದಿಪಡಿಸಿದ್ದನ್ನು ಪ್ರಶ್ನಿಸಿ ರಾಜ್ಯ ಹೋಮಿಯೋಪತಿ ವೈದ್ಯಕೀಯ ಕಾಲೇಜು ಮ್ಯಾನೇಜ್‌ಮಂಟ್‌ಗಳ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಅಲೋಕ್ ಅರಾಧೆ ಮತ್ತು ವಿಜಯಕುಮಾರ್ ಎ.ಪಾಟೀಲ್ ಅವರ ನೇತೃತ್ವದ ವಿಭಾಗೀಯ ಪೀಠವು ಇತ್ಯರ್ಥಪಡಿಸಿದೆ.
ಆಯುಷ್ ಸಚಿವಾಲಯದ 2022ರ ಅಕ್ಟೋಬರ್ 18ರ ಮಾರ್ಗಸೂಚಿ ಮತ್ತು ಡಿಸೆಂಬರ್ 6ರಂದು ರಾಷ್ಟ್ರೀಯ ಹೋಮಿಯೋಪತಿ ಆಯೋಗ ರೂಪಿಸಿರುವ ನಿಯಮಾವಳಿಗಳು 2022ರ ಜುಲೈ 19ರಿಂದ ಆರಂಭವಾಗಿರುವ ಹೋಮಿಯೋಪತಿಕ್ ಮೆಡಿಸನ್ ಸರ್ಜರಿ (ಬಿಎಚ್‌ಎಂಎಸ್) ಪದವಿ ಕೋರ್ಸ್‌ಗಳಿಗೆ ಅನ್ವಯಿಸುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.
2022-23ನೇ ಶೈಕ್ಷಣಿಕ ಸಾಲಿಗೆ ಶೈಕ್ಷಣಿಕ ಅರ್ಹತೆಯನ್ನು ಆಧರಿಸಿ ಬಾಕಿ ಉಳಿದಿರುವ ಸೀಟುಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಜಿದಾರ ಕಾಲೇಜುಗಳಿಗೆ ಅನುಮತಿಸಬೇಕು ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.
ಕಾಯಿದೆಯ ಸೆಕ್ಷನ್ 14ರಲ್ಲಿ ನೀಟ್ ಪರೀಕ್ಷೆಯ ಅಡಿ ಬಿಎಚ್‌ಎಂಎಸ್ ಕೋರ್ಸ್ ಸೇರ್ಪಡೆಗೆ ಅವಕಾಶ ಮಾಡಲಾಗಿದೆ. ಸೆಕ್ಷನ್ 14ರ ಜಾರಿಯ ಮೂಲಕ ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿಯನ್ನು ನಿಯಂತ್ರಿಸಲಾಗಿದೆ. ಇದು ಸಂವಿಧಾನ ಅಥವಾ ಶಾಸನದ ಅಡಿ ಯಾವುದೇ ರೀತಿಯಲ್ಲಿಯೂ ಅರ್ಜಿದಾರರ ಹಕ್ಕಿನ ಉಲ್ಲಂಘನೆಯಾಗುವುದಿಲ್ಲ. ಹಿಂಗತಿ (ರೆಟ್ರೊಗ್ರೆಷನ್) ಸಿದ್ಧಾಂತದ ತತ್ವವು ಈ ಪ್ರಕರಣಕ್ಕೆ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.