

ಕಳೆದ ತಿಂಗಳು ತೆರೆಕಂಡಿದ್ದ ಹಿಂದಿಯ ʼಜಾಲಿ ಎಲ್‌ಎಲ್‌ಬಿ 3ʼ ಸಿನಿಮಾ ಬಿಡುಗಡೆಗೆ ನಿರ್ಬಂಧ ವಿಧಿಸುವಂತೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಳಿಸುವುದರ ಜೊತೆಗೆ ಕ್ಷುಲ್ಲಕವಾಗಿ ಅರ್ಜಿ ಸಲ್ಲಿಕೆ ಮಾಡಲಾಗಿದೆ ಎಂದು ಅರ್ಜಿದಾರರಿಗೆ ವಿಧಿಸಿದ್ದ ₹50 ಸಾವಿರ ದಂಡವನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ಕೈಬಿಟ್ಟಿದೆ.
ಅರ್ಜಿದಾರೆ ವಕೀಲೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ವಿಭಾಗೀಯ ಪೀಠವು ನಡೆಸಿತು.
“ಅರ್ಜಿದಾರೆ ಕ್ಷುಲ್ಲಕ ಅರ್ಜಿ ಸಲ್ಲಿಸಿದ್ದಕ್ಕಾಗಿ ಕ್ಷಮೆ ಕೋರಿದ್ದು, ದಂಡದ ರೂಪದಲ್ಲಿ ₹50 ಸಾವಿರ ವಿಧಿಸಿದ್ದನ್ನು ಕೈಬಿಡುವಂತೆ ಕೋರಿದ್ದಾರೆ. ಅರ್ಜಿದಾರೆ ಈಚೆಗೆ ಪ್ರಾಕ್ಟೀಸ್ ಆರಂಭಿಸಿದ್ದು, ಆಕೆ ತನ್ನ ತಂದೆಯನ್ನು ಕಳೆದುಕೊಂಡಿರುವುದರಿಂದ ಮಾನಸಿಕ ಸಂತುಲನ ಕಳೆದುಕೊಂಡಿದ್ದಾರೆ ಎಂದು ತಿಳಿಸಲಾಗಿದೆ. ಅದಾಗ್ಯೂ, ದಂಡವನ್ನು ರದ್ದುಪಡಿಸಲು ನಮಗೆ ಇಚ್ಛೆಯಿಲ್ಲ. ಆದರೆ, ಅನಿಯಂತ್ರಿತ ಸಂದರ್ಭ ಎದುರಾಗಿರುವ ವಿಚಾರವನ್ನು ಅರ್ಜಿದಾರೆಯ ವಕೀಲರು ಗಮನಕ್ಕೆ ತಂದಿರುವುದರಿಂದ ದಂಡದ ಮೊತ್ತವನ್ನು ರದ್ದುಪಡಿಸಲಾಗಿದೆ” ಎಂದು ನ್ಯಾಯಾಲಯ ಹೇಳಿದೆ.
ಇದಕ್ಕೂ ಮುನ್ನ, ಅರ್ಜಿದಾರೆಯನ್ನು ಪ್ರತಿನಿಧಿಸಿದ್ದ ವಕೀಲರು “ಅರ್ಜಿದಾರೆಯು ಹೊಸದಾಗಿ ವಕೀಲಿಕೆ ಆರಂಭಿಸಿದ್ದು, ದಾವೆ ಹೂಡುವುದರ ಪರಿಣಾಮದ ಬಗ್ಗೆ ಅವರಿಗೆ ಅರಿವು ಇರಲಿಲ್ಲ. ದಂಡದ ಮೊತ್ತ ರದ್ದುಪಡಿಸಲು ಮರುಪರಿಶೀಲನಾ ಅರ್ಜಿಯನ್ನು ದಾಖಲಿಸಲಾಗಿದೆ” ಎಂದರು.
ಇದಕ್ಕೆ ಪೀಠವು “ಇದು ಕಾನೂನು ಪ್ರಕ್ರಿಯೆಯ ದುರ್ಬಳಕೆ ಎಂದು ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ಹೇಳಲಾಗಿತ್ತು. ಯಾರಿಗೂ ದಂಡ ವಿಧಿಸುವುದನ್ನು ನಾವು ಬಯಸುವುದಿಲ್ಲ. ಮಾಧ್ಯಮಗಳಲ್ಲಿ ಕ್ಷುಲ್ಲಕ ಪ್ರಚಾರ ಪಡೆಯಲು ನ್ಯಾಯಾಲಯವನ್ನು ಬಳಕೆ ಮಾಡಲಾಗಿದೆ. ಪತ್ರಿಕೆಯಲ್ಲಿ ತನ್ನ ಹೆಸರು ಬರಬೇಕು ಎಂಬ ಉದ್ದೇಶ ಹೊಂದಿರುವುದರಿಂದ ಅರ್ಜಿದಾರರು ದಂಡ ಪಾವತಿಸಬೇಕು” ಎಂದಿತು.
“ಪಿಐಎಲ್ ಸಲ್ಲಿಕೆ ಮಾಡುವಾಗಲೇ ದಂಡ ವಿಧಿಸಿದರೆ ಅದಕ್ಕೆ ಬದ್ಧವಾಗಿರುವುದಾಗಿ ಅರ್ಜಿದಾರರು ಮುಚ್ಚಳಿಕೆ ಬರೆದುಕೊಟ್ಟಿರುತ್ತಾರೆ. ಪಿಐಎಲ್ ಸಲ್ಲಿಸುವವರು ಇದರ ಬಗ್ಗೆ ಎಚ್ಚರಿಕೆ ಹೊಂದಿರಬೇಕು” ಎಂದು ನ್ಯಾಯಾಲಯ ಹೇಳಿತು.
ಇದಕ್ಕೆ ಅರ್ಜಿದಾರರ ಪರ ವಕೀಲರು “ಅರ್ಜಿದಾರೆಯು ಹೊಸದಾಗಿ ವಕೀಲಿಕೆ ಆರಂಭಿಸಿದ್ದು ಆಕೆಯ ತಂದೆಯೂ ತೀರಿ ಹೋಗಿದ್ದಾರೆ” ಎಂದು ವಿನಂತಿಸಿದರು.
ಆಗ ಪೀಠವು “ತತ್ವದ ಆಧಾರದ ಮೇಲೆ ದಂಡ ರದ್ದುಪಡಿಸುತ್ತಿಲ್ಲ. ಅರ್ಜಿದಾರರಿಗೆ ಎಚ್ಚರಿಸಿ” ಎಂದು ಸೂಚಿಸಿ ದಂಡ ಕೈಬಿಟ್ಟಿತು.
ಸೆಪ್ಟೆಂಬರ್ 19ರಂದು ಹಿಂದಿಯ ʼಜಾಲಿ ಎಲ್‌ಎಲ್‌ಬಿ 3ʼ ಸಿನಿಮಾ ಬಿಡುಗಡೆಯಾಗುತ್ತಿದ್ದು, ಅದಕ್ಕೆ ನಿರ್ಬಂಧ ವಿಧಿಸಬೇಕು ಎಂದು ಅರ್ಜಿದಾರರು ಕೋರಿದ್ದರು.