₹10ಕ್ಕೆ ಇ-ಪ್ರಮಾಣೀಕೃತ ಪ್ರತಿಗಳ ವಿತರಣೆ: ಇ-ಫೈಲಿಂಗ್‌ ಅಳವಡಿಸಿಕೊಳ್ಳಲು ನ್ಯಾ. ಸೂರಜ್ ಗೋವಿಂದರಾಜ್ ಕರೆ

"ಮನಸ್ಸಿನ ಸ್ವಚ್ಛತೆ, ಆಲೋಚನೆ ಮತ್ತು ಅಭಿವ್ಯಕ್ತಿಯಲ್ಲಿ ಸ್ಪಷ್ಟತೆ ವಕೀಲರಿಗೆ ಮುಖ್ಯ" ಎಂದ ಹೆಚ್ಚುವರಿ ಸಾಲಿಸಿಟರ್‌ ಜನರಲ್ ಕೆ ಅರವಿಂದ್ ಕಾಮತ್.
Justices Suraj Govindaraj, H Shanthi Bhushan & ASG Arvind Kamath participated in cleanliness drive
Justices Suraj Govindaraj, H Shanthi Bhushan & ASG Arvind Kamath participated in cleanliness drive
Published on: 

"ಕರ್ನಾಟಕ ಹೈಕೋರ್ಟ್‌ನಲ್ಲಿ ಕೇವಲ ₹10ಕ್ಕೆ ಇ-ಪ್ರಮಾಣೀಕೃತ ಪ್ರತಿಗಳನ್ನು ಪಡೆಯುವ ಸೌಲಭ್ಯವಿದ್ದು, ಪುಟವಾರು ಶುಲ್ಕ ಪಾವತಿಸಿ ಪ್ರಮಾಣೀಕೃತ ಪ್ರತಿಗಳಿಗೆ ಅರ್ಜಿ ಸಲ್ಲಿಸುವ ಅಗತ್ಯವನ್ನು ಇದು ತಪ್ಪಿಸಿದೆ" ಎಂದು ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಶನಿವಾರ ಹೇಳಿದರು.

ಹೆಚ್ಚುವರಿ ಸಾಲಿಸಿಟರ್ ಜನರಲ್ ಕಚೇರಿ ವತಿಯಿಂದ ಹೈಕೋರ್ಟ್ ಆವರಣದಲ್ಲಿ ಆಯೋಜಿಸಿದ್ದ ‘ಸ್ವಚ್ಛತಾ ಹಿ ಸೇವಾ 2026’ ಅಭಿಯಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

"ಕೇಂದ್ರ ಸರ್ಕಾರದ ಪರ ವಕೀಲರು ಇ-ಫೈಲಿಂಗ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಮೂಲಕ ಕಾಗದದ ಬಳಕೆಯನ್ನು ಕಡಿಮೆ ಮಾಡಬೇಕು" ಎಂದು ನ್ಯಾ. ಸೂರಜ್‌ ಗೋವಿಂದರಾಜ್‌ ಕರೆ ನೀಡಿದರು.

"ಹೆಚ್ಚುವರಿ ಸಾಲಿಸಿಟರ್ ಜನರಲ್ ಕಚೇರಿಯು ತನ್ನದೇ ಆದ ಒಂದು ಸಂಸ್ಥೆಯಾಗಿದ್ದು, ಸರ್ಕಾರದ ಹಿತಾಸಕ್ತಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಅಲ್ಲಿನ ವಕೀಲರು ಪರಸ್ಪರ ಅಸೂಯೆ ಹಾಗೂ ಅನಾರೋಗ್ಯಕರ ಪೈಪೋಟಿಯಂತಹ ನಕಾರಾತ್ಮಕ ಭಾವನೆಗಳಿಗೆ ಅವಕಾಶ ನೀಡದೆ ಒಗ್ಗಟ್ಟಿನಿಂದ ಕೆಲಸ ಮಾಡಬೇಕು" ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಅರವಿಂದ್ ಕಾಮತ್ ಅವರು ಸ್ವಚ್ಛತೆಯ ವಿವಿಧ ಆಯಾಮಗಳ ಕುರಿತು ಮಾತನಾಡಿ, ವಿಶೇಷವಾಗಿ ಮನಸ್ಸಿನ ಸ್ವಚ್ಛತೆಯ ಮಹತ್ವವನ್ನು ಒತ್ತಿ ಹೇಳಿದರು.

“ಅಸ್ತವ್ಯಸ್ತವಾದ ಪರಿಸರವು ಆಲೋಚನೆಯ ಸ್ಪಷ್ಟತೆಯ ಮೇಲೆ ಪರಿಣಾಮ ಬೀರುತ್ತದೆ. ಆಲೋಚನೆಯಲ್ಲಿ ಸ್ಪಷ್ಟತೆ ಇಲ್ಲದಿದ್ದರೆ ಅಭಿವ್ಯಕ್ತಿಯಲ್ಲಿಯೂ ಸ್ಪಷ್ಟತೆ ಇರುವುದಿಲ್ಲ. ಅಭಿವ್ಯಕ್ತಿಯಲ್ಲಿನ ಸ್ಪಷ್ಟತೆ ವಕೀಲರ ಪ್ರಮುಖ ಸಾಧನವಾಗಿದೆ” ಎಂದರು.

“ನಾವು ವಾಸಿಸುವ ಹಾಗೂ ಕೆಲಸ ಮಾಡುವ ಸ್ಥಳಗಳನ್ನು ಸ್ವಚ್ಛವಾಗಿ ಮತ್ತು ಅಚ್ಚುಕಟ್ಟಾಗಿ ಇಟ್ಟುಕೊಳ್ಳಬೇಕು. ಅಸೂಯೆ ಮತ್ತು ಅನಾರೋಗ್ಯಕರ ಪೈಪೋಟಿಯಂತಹ ನಕಾರಾತ್ಮಕ ಭಾವನೆಗಳಿಂದಲೂ ಮನಸ್ಸನ್ನು ಮುಕ್ತವಾಗಿಟ್ಟುಕೊಳ್ಳಬೇಕು” ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನ್ಯಾಯಮೂರ್ತಿ ಎಚ್ ಶಾಂತಿ ಭೂಷಣ್ ಅವರು ವಕೀಲರು ಪ್ರತಿನಿತ್ಯ ಬಳಸುವ ಕಡತಗಳನ್ನು ಸ್ವಚ್ಛವಾಗಿ ಮತ್ತು ವ್ಯವಸ್ಥಿತವಾಗಿ ಇಟ್ಟುಕೊಳ್ಳುವ ಅಗತ್ಯವನ್ನು ತಿಳಿಸಿದರು. ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡ ಕೇಂದ್ರ ಸರ್ಕಾರದ ವಕೀಲರನ್ನು ಅವರು ಅಭಿನಂದಿಸಿದರು.

ಶನಿವಾರ ಬೆಳಗ್ಗೆ 7.30ಕ್ಕೆ ಹೈಕೋರ್ಟ್ ಆವರಣದಲ್ಲಿರುವ ವಕೀಲರ ಸಂಘದ ಲಾಂಜ್‌ನಲ್ಲಿ ಅಭಿಯಾನದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಸುಮಾರು 40 ಮಂದಿ ಕೇಂದ್ರ ಸರ್ಕಾರದ ವಕೀಲರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಉದ್ಘಾಟನಾ ಕಾರ್ಯಕ್ರಮದ ಬಳಿಕ ಮುಖ್ಯ ಅತಿಥಿಗಳು ಸ್ವಚ್ಛತಾ ಸಾಮಗ್ರಿಗಳನ್ನು ವಕೀಲರಿಗೆ ಹಸ್ತಾಂತರಿಸುವ ಮೂಲಕ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು. ಹೈಕೋರ್ಟ್‌ನ 4 ಮತ್ತು 5ನೇ ಗೇಟ್‌ಗಳ ಸಮೀಪದ ವಾಹನ ನಿಲುಗಡೆ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ಪ್ಲಾಸ್ಟಿಕ್ ಬಾಟಲಿಗಳು, ಪಾನ್ ಮಸಾಲಾ ಪೊಟ್ಟಣಗಳು, ಬಾಟಲಿ ಮುಚ್ಚಳಗಳು, ಬಿಸಾಡಿದ ತಟ್ಟೆಗಳು, ಪಾದರಕ್ಷೆಗಳು ಸೇರಿದಂತೆ ಹಲವು ಬಗೆಯ ತ್ಯಾಜ್ಯವನ್ನು ಸಂಗ್ರಹಿಸಿ ಇಡೀ ವಾಹನ ನಿಲುಗಡೆ ಪ್ರದೇಶವನ್ನು ಸ್ವಚ್ಛಗೊಳಿಸಲಾಯಿತು.

‘ಸ್ವಚ್ಛತಾ ಮೇಂ ಸಹಭಾಗ್: ಸ್ವಚ್ಛ ಭಾರತ್, ವಿಕಸಿತ ಭಾರತ್’ ಎಂಬ ರಾಷ್ಟ್ರೀಯ ಆಶಯದಡಿ ಈ ಅಭಿಯಾನ ಆಯೋಜಿಸಲಾಗಿತ್ತು. ವಕೀಲ ಹಾಗೂ ಕೇಂದ್ರ ಸರ್ಕಾರದ ವಕೀಲರಾದ ಜಗದೀಶ್ ಕುಂಬಾರ್ ಸಂಚಾಲಕರಾಗಿ ಮತ್ತು ಆತ್ಮ ಹಿರೇಮಠ ಸಹ-ಸಂಚಾಲಕರಾಗಿ ಕಾರ್ಯನಿರ್ವಹಿಸಿದರು.

Kannada Bar & Bench
kannada.barandbench.com