ಬಿ ರಿಫೋರ್ಟ್‌ಗಳ ಮಾಹಿತಿ ಸಮರ್ಪಕವಾಗಿ ನೀಡದ ಎಸಿಬಿ ವಿರುದ್ಧ ಕರ್ನಾಟಕ ಹೈಕೋರ್ಟ್ ಮತ್ತೆ ಗರಂ

“ಎಡಿಜಿಪಿ ವಿರುದ್ಧ ಅನಮಾನ ಬರಲೂ ಕಾರಣಗಳಿವೆ. ಎಸಿಬಿ ಎಡಿಜಿಪಿ ಆತ್ಮಸಾಕ್ಷಿಯನ್ನ ಕೇಳಿಕೊಳ್ಳಲು ಹೇಳಿ” ಎಂದು ನ್ಯಾಯಾಲಯ ಎಡಿಜಿಪಿ ಪರ ವಕೀಲರಿಗೆ ಕಟುವಾಗಿ ತಿಳಿಸಿತು.
Karnataka HC, Anti Corruption Bureau and Justice H P Sandesh
Karnataka HC, Anti Corruption Bureau and Justice H P Sandesh
Published on

ಬೆಂಗಳೂರು ಜಿಲ್ಲಾಧಿಕಾರಿ ಜೆ ಮಂಜುನಾಥ್‌ ಲಂಚ ಪ್ರಕರಣದ ವಿಚಾರಣೆ ವೇಳೆ ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥ ಎಸಿಬಿ ಎಡಿಜಿಪಿ ಸೀಮಂತ್‌ ಕುಮಾರ್‌ ಮತ್ತೆ ಕರ್ನಾಟಕ ಹೈಕೋರ್ಟ್‌ನ ಕೆಂಗಣ್ಣಿಗೆ ತುತ್ತಾದರು.

ಗುರುವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಎಚ್‌ ಪಿ ಸಂದೇಶ್‌ ಅವರಿದ್ದ ಏಕಸದಸ್ಯ ಪೀಠ ಬಿ ರಿಪೋರ್ಟ್‌ಗಳ ಕುರಿತಾದ ಮಾಹಿತಿಯನ್ನು ಸಮರ್ಪಕವಾಗಿ ನೀಡದ ಮತ್ತು ಸಹಿ ಮಾಡದೆ ವರದಿ ಸಲ್ಲಿಸಿದ ಎಸಿಬಿಯ ನಡೆಯ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿತು.

“ನೀವು ನೀಡಿದ ವರದಿ ಸಂಪೂರ್ಣ ಸತ್ಯವಲ್ಲ. ನೀವು ಈ ಆಟ ಆಡುತ್ತೀರೆಂದು ತಿಳಿದೇ ಮಾಹಿತಿ ಪಡೆದಿರುವೆ. ಈ ವರ್ಷ ನೀವು ಸಲ್ಲಿಸಿದ ಬಿ ರಿಪೋರ್ಟ್‌ಗಳ ವಿವರ ಇಲ್ಲ. ಮಾರ್ಚ್‌, ಜೂನ್‌ ತಿಂಗಳ ಬಿ ರಿಪೋರ್ಟ್‌ ಸಲ್ಲಿಸಿದ್ದೀರಿ. 819 ಸರ್ಚ್‌ ವಾರೆಂಟ್‌ಗಳನ್ನು ಪಡೆಯಲಾಗಿತ್ತು. 28 ಸರ್ಚ್‌ ವಾರೆಂಟ್‌ ಜಾರಿಗೊಳಿಸಲು ಸಾಧ್ಯವಾಗಿಲ್ಲ. ನ್ಯಾಯಾಲಯ ಹೇಳಿದ ಬಳಿಕ ಜಿಲ್ಲಾಧಿಕಾರಿಯನ್ನು ಆರೋಪಿ ಮಾಡಿದ್ದೀರಿ. ಈಗ ದಾಳಿ ಮಾಡಿದ್ದೀರಿ. ಮೊದಲೇ ಏಕೆ ದಾಳಿ ನಡೆಯಲಿಲ್ಲ?” ಎಂದು ಎಸಿಬಿ ಪರ ವಕೀಲರನ್ನು ನ್ಯಾಯಾಲಯ ಪ್ರಶ್ನಿಸಿತು.

Also Read
ಸಾರ್ವಜನಿಕ ಹಿತದೃಷ್ಟಿಯಿಂದ ವರ್ಗಾವಣೆ ಬೆದರಿಕೆ ಎದುರಿಸಲೂ ಸಿದ್ಧ: ಹೈಕೋರ್ಟ್‌ ನ್ಯಾ. ಸಂದೇಶ್‌ ಸ್ಫೋಟಕ ನುಡಿ

“ಜಿಲ್ಲಾಧಿಕಾರಿಗೆ ನೌಕರೇತರ ವ್ಯಕ್ತಿ ಸಹಾಯ ಮಾಡಲು ಹೇಗೆ ಸಾಧ್ಯ? ಪ್ರಕರಣದ ಒಂದನೇ ಆರೋಪಿ ಜೊತೆ ಮಾತನಾಡಲು ಖುದ್ದು ಜಿಲ್ಲಾಧಿಕಾರಿ ಹೇಳಿದ್ದಾರೆ. ಒಂದನೇ ಆರೋಪಿ ಆದೇಶ ಸಿದ್ಧವಿದ್ದರೂ ಜಿಲ್ಲಾಧಿಕಾರಿ ಏಕೆ ಸಹಿ ಮಾಡಲಿಲ್ಲ?” ಎಂದು ಅದು ಕೇಳಿತು.

ಬೆಂಗಳೂರು ಎಸ್‌ಪಿ ನೇಮಕದಲ್ಲಿರುವ ತಾರತಮ್ಯದ ಕುರಿತೂ ಕಿಡಿಕಾರಿದ ನ್ಯಾಯಾಲಯ “ಎಡಿಜಿಪಿಗೆ ಮಣಿಯದ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌ಚಂದ್ರ ಅವರಿಗೆ ಹೊಣೆ ನೀಡಿಲ್ಲ. ಇದೇನಾ ನಿಮ್ಮ ಕಾರ್ಯವೈಖರಿ?” ಎಂದು ಕುಟುಕಿತು.

ಇದೇ ವೇಳೆ ಎಡಿಜಿಪಿ ವಿರುದ್ಧ ತಮಗೇನೂ ವೈಯಕ್ತಿಕ ದ್ವೇಷ ಇಲ್ಲ ಎಂದ ನ್ಯಾಯಮೂರ್ತಿಗಳು 2022ರಲ್ಲಿ ದಾಖಲಾದ ಬಿ ರಿಪೋರ್ಟ್‌ಗಳ ವಿವರ ಇಲ್ಲ. ಎಸಿಬಿ ಎಡಿಜಿಪಿಯನ್ನು ರಕ್ಷಿಸಿಕೊಳ್ಳಲಿಕ್ಕಾಗಿಯೇ ಮಾಹಿತಿ ನೀಡಿಲ್ಲ. ಎಡಿಜಿಪಿ ವಿರುದ್ಧ ಅನಮಾನ ಬರಲೂ ಕಾರಣಗಳಿವೆ. ಎಸಿಬಿ ಎಡಿಜಿಪಿ ಆತ್ಮಸಾಕ್ಷಿಯನ್ನ ಕೇಳಿಕೊಳ್ಳಲು ಹೇಳಿ ಎಂದು ನ್ಯಾಯಾಲಯ ಎಡಜಿಪಿ ಪರ ವಕೀಲರಿಗೆ ಕಟುವಾಗಿ ಹೇಳಿತು.

ಈ ಹಿಂದಿನ ವಿಚಾರಣೆ ವೇಳೆ "ಎಸಿಬಿ ಕಲೆಕ್ಷನ್‌ ಸೆಂಟರ್‌ ಆಗಿದೆ. ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದರವರಿಗೂ ಅದು ಬಿ ರಿಪೋರ್ಟ್‌ ಹಾಕುತ್ತಿದೆ" ಎಂದು ನ್ಯಾಯಮೂರ್ತಿಗಳು ಗುಡುಗಿದ್ದರು. ಅಲ್ಲದೆ ಎಡಿಜಿಪಿಯನ್ನು ತರಾಟೆಗೆ ತೆಗೆದುಕೊಂಡದ್ದಕ್ಕೆ ತಮಗೆ ವರ್ಗಾವಣೆ ಬೆದರಿಕೆ ಹಾಕಲಾಗುತ್ತಿದೆ ಎಂಬ ಸ್ಫೋಟಕ ಮಾಹಿತಿಯನ್ನೂ ಅವರು ಹಂಚಿಕೊಂಡಿದ್ದರು. ನ್ಯಾಯಮೂರ್ತಿಗಳ ಮಾತುಗಳು ದೇಶದ ಗಮನ ಸೆಳೆದಿದ್ದವು.

ಅಂತಿಮವಾಗಿ, ಎಸಿಬಿ ಸಲ್ಲಿಸಿರುವ ಬಿ ರಿಪೋರ್ಟ್‌ಗಳ ಮಾಹಿತಿಯನ್ನು ಸಲ್ಲಿಸುವಂತೆ ಹೈಕೋರ್ಟ್‌ ರಿಜಿಸ್ಟ್ರಾರ್ ಅವರಿಗೆ ಸೂಚಿಸಿದ ಪೀಠವು ವಿಚಾರಣೆಯನ್ನು ಜುಲೈ 11ಕ್ಕೆ ಮುಂದೂಡಿತು.

Kannada Bar & Bench
kannada.barandbench.com