ವಿದೇಶಿ ಶಕ್ತಿಗಳಿಂದ ಪ್ರೇರಣೆ ಪಡೆದು ಪರಿಸರ ಸಂರಕ್ಷಣಾ ಕಾಯಿದೆ ಜಾರಿಗೆ ತರಲಾಗಿದೆ ಎಂದು ಆರೋಪಿಸಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಸಿದ್ದ ಅಫಿಡವಿಟ್ ಹಿಂಪಡೆಯಲು ಕರ್ನಾಟಕ ಹೈಕೋರ್ಟ್ ಮಂಗಳವಾರ ಅನುಮತಿ ನೀಡಿತು.
ಪರಿಸರ ರಕ್ಷಣೆ ಕುರಿತಂತೆ ಎರಡು ಪರಿಸರ ಸಂಬಂಧಿ ಸಂಸ್ಥೆಗಳಿಗೆ ತಲಾ ರೂ. 2.5 ಲಕ್ಷ ಹಣವನ್ನು ದೇಣಿಗೆಯಾಗಿ ನೀಡಲಾಗಿದೆ ಎಂದು ಎನ್‌ಎಚ್‌ಎಐ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಉದಯ ಹೊಳ್ಳ ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ ಬಳಿಕ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಎಸ್ ಎಸ್ ಮಗದುಮ್ ಅವರಿದ್ದ ವಿಭಾಗೀಯ ಪೀಠ ಈ ಅನುಮತಿ ನೀಡಿತು.
ಅಫಿಡವಿಟ್ ಹಿಂಪಡೆಯಲು ಬಯಸಿದರೆ ಪರಿಸರ ಸಂಸ್ಥೆಗಳಿಗೆ ಹಣ ದಾನ ಮಾಡಬೇಕು ನ್ಯಾಯಾಲಯ ಕಳೆದ ವಾರ ಎನ್‌ಎಚ್‌ಎಐಗೆ ಷರತ್ತು ವಿಧಿಸಿತ್ತು. ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿ ಮತ್ತು ಭಾರತೀಯ ವನ್ಯಜೀವಿ ಸಂಸ್ಥೆಗೆ ಎನ್ಎಚ್‌ಎಐ ದೇಣಿಗೆ ನೀಡಿದೆ.
“ಜನವರಿ 4ರಂದು ಸಲ್ಲಿಸಿದ್ದ ಅಫಿಡವಿಟ್ ಹಿಂಪಡೆಯಲು ಕೋರಿ ಎನ್‌ಎಚ್‌ಎಐ ಸಲ್ಲಿಸಿದ್ದ ಅರ್ಜಿ ಸಂಬಂಧ ನಾವು ಅನುಮತಿ ನೀಡುತ್ತಿದ್ದೇವೆ. ಈ ಆದೇಶದ ಪ್ರಕಾರ ದಾಖಲೆಯಲ್ಲಿ ಸಲ್ಲಿಸಲಾಗಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಆಕ್ಷೇಪಣೆಗಳನ್ನು ಹೇಳಿಕೆಯಾಗಿ ಪರಿಗಣಿಸುವುದಿಲ್ಲ. ಆದರೂ ಅದು ದಾಖಲೆಯಲ್ಲಿ ಉಳಿದಿರುತ್ತದೆ. ಪರಿಸರಕ್ಕೆ ಸಂಬಂಧಿಸಿದ ಕಾನೂನುಗಳ ಕುರಿತಂತೆ ಎನ್‌ಎಚ್‌ಎಐ ಅಧಿಕಾರಿಗಳು ಸೂಕ್ಷ್ಮವಾಗಿ ವರ್ತಿಸುತ್ತಾರೆ ಎಂದು ನಾವು ಭಾವಿಸುತ್ತೇವೆ ಮತ್ತು ನಂಬುತ್ತೇವೆ” ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ. ಈ ಸಂಬಂಧ ಒಂದು ತಿಂಗಳ ಒಳಗಾಗಿ ಹೊಸ ಆಕ್ಷೇಪಣೆ/ಅಫಿಡವಿಟ್ ಸಲ್ಲಿಸುವಂತೆ ಎನ್‌ಎಚ್‌ಎಐ ಹಾಗೂ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ.
100 ಕಿಲೋಮೀಟರ್‌ಗಿಂತ ಹೆಚ್ಚಿನ ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣೆಗೆ ವಿನಾಯಿತಿ ನೀಡುವಂತೆ 2013 ರಲ್ಲಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ನ್ಯಾಯಾಲಯಕ್ಕೆ ಸಲ್ಲಿಕೆಯಾಗಿತ್ತು. ಅರ್ಜಿಯ ವಿಚಾರಣೆ ವೇಳೆ ಎನ್ಎಚ್ಐಎ ವಿವಾದಾತ್ಮಕ ಹೇಳಿಕೆ ನೀಡಿತ್ತು. "ಪರಿಸರ ಸಂರಕ್ಷಣೆ ಕಾಯಿದೆಯಡಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ಲಾಭರಹಿತ ಸ್ವಯಂ ಸೇವಾ ಸಂಸ್ಥೆಗಳು ವಿದೇಶಿ ಶಕ್ತಿಗಳ ಪ್ರೇರಣೆಯಿಂದ ಕಾರ್ಯ ನಿರ್ವಹಿಸುತ್ತಿವೆ" ಎಂದು ಅದು ಆರೋಪಿಸಿತ್ತು.
“ಅಮ್ನೆಸ್ಟಿ ಇಂಟರ್‌ನ್ಯಾಷನಲ್ ರೀತಿಯ ಪರಿಸರ ಕ್ರಿಯಾ ಗುಂಪುಗಳೆಂದು ತಮ್ಮನ್ನು ತಾವು ಕರೆದುಕೊಳ್ಳುವ ಭಾರತದ ಅನೇಕ ಸಂಸ್ಥೆಗಳು ಅಭಿವೃದ್ಧಿ ಯೋಜನೆಗಳ ಮೇಲೆ ದಾಳಿ ನಡೆಸುತ್ತಾ ಸರ್ಕಾರದ ನೀತಿ ಮತ್ತು ಅಧಿಸೂಚನೆಗಳನ್ನು ಪ್ರಶ್ನಿಸುತ್ತಾ ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿವೆ. ಅನೇಕ ಎನ್‌ಜಿಒಗಳು ವಿದೇಶಿ ಮೂಲಗಳಿಂದ ಮತ್ತು ಚರ್ಚ್‌ಗಳಿಂದ ಹಣ ಪಡೆಯುತ್ತಿವೆ," ಎಂದು ಅದು ಹೇಳಿತ್ತು.
ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾ. ಓಕಾ ಅವರು “ಹೈಕೋರ್ಟ್ ನ್ಯಾಯಮೂರ್ತಿಯಾಗಿ ತಮ್ಮ 17 ವರ್ಷಗಳ ಅನುಭವದಲ್ಲಿ ಸರ್ಕಾರಿ ಸಂಸ್ಥೆಯೊಂದು ಈ ರೀತಿಯ ಅಸಹ್ಯಕರ ವಾದ ಮಂಡಿಸಿದ್ದನ್ನು ನೋಡಿಲ್ಲ” ಎಂದು ಹೇಳುವ ಮೂಲಕ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೆ ಎನ್‌ಎಚ್‌ಎಐ ಇದಕ್ಕೆ ವಿವರಣೆ ನೀಡಬೇಕು ಎಂದು ಕೂಡ ಸೂಚಿಸಿತ್ತು.
ಆಕ್ಷೇಪಣಾ ಹೇಳಿಕೆಯಲ್ಲಿ ಮಾಡಿದ ಅನಗತ್ಯ ಮತ್ತು ವಿವಾದಾತ್ಮಕ ಆರೋಪಗಳಿಗೆ ಬೇಷರತ್ ಕ್ಷಮೆ ಯಾಚಿಸಿ ಎನ್‌ಎಚ್‌ಎಐ ಹೊಸ ಅಫಿಡವಿಟ್ ಸಲ್ಲಿಸಿದೆ. ನ್ಯಾಯಾಲಯದ ಮುಂದೆ ಮನವಿ ಸಲ್ಲಿಸುವಾಗ ನ್ಯಾಯಸಮ್ಮತತೆಯನ್ನು ಖಾತ್ರಿಪಡಿಸಿಕೊಳ್ಳುವುದಾಗಿ ಅದು ಪೀಠಕ್ಕೆ ಭರವಸೆ ನೀಡಿದೆ.