5, 8, 9 & 11ನೇ ತರಗತಿ ಬೋರ್ಡ್‌ ಪರೀಕ್ಷೆಗಳು ಅಬಾಧಿತ; ಪರೀಕ್ಷೆ ನಡೆಸಲು ಅನುಮತಿಸಿದ ಹೈಕೋರ್ಟ್‌

ರಾಜ್ಯ ಸರ್ಕಾರದ ಸುತ್ತೋಲೆ ರದ್ದುಪಡಿಸಿದ್ದ ಏಕಸದಸ್ಯ ಪೀಠದ ಆದೇಶವನ್ನು ಬದಿಗೆ ಸರಿಸಿದ ಕರ್ನಾಟಕ ಹೈಕೋರ್ಟ್‌ ಪರೀಕ್ಷೆ ನಡೆಸುವ ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದಿದೆ.
Justices K Somashekar and Rajesh Rai K
Justices K Somashekar and Rajesh Rai K

ಸುಪ್ರೀಂ ಕೋರ್ಟ್‌ ಆದೇಶದಿಂದಾಗಿ ನಿಲ್ಲಿಸಲಾಗಿದ್ದ 5, 8, 9 & 11ನೇ ತರಗತಿಗಳ ಬೋರ್ಡ್‌ ಪರೀಕ್ಷೆಗಳನ್ನು ನಡೆಸಲು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಅನುಮತಿಸಿದೆ.

ರಾಜ್ಯದ 5, 8, 9 ಮತ್ತು 11ನೇ ತರಗತಿಗಳಿಗೆ ಬೋರ್ಡ್ ಮಟ್ಟದ ಮೌಲ್ಯಾಂಕನ ಪರೀಕ್ಷೆ ನಡೆಸಲು ಮುಂದಾಗಿದ್ದ ರಾಜ್ಯ ಸರ್ಕಾರದ ಸುತ್ತೋಲೆ ರದ್ದುಪಡಿಸಿದ್ದ ಏಕಸದಸ್ಯ ಪೀಠದ ಆದೇಶವನ್ನು ಬದಿಗೆ ಸರಿಸಿರುವ ಕರ್ನಾಟಕ ಹೈಕೋರ್ಟ್‌ ಪರೀಕ್ಷೆ ನಡೆಸುವ ಸರ್ಕಾರದ ನಿರ್ಧಾರವನ್ನು ಸಿಂಧುಗೊಳಿಸಿದೆ. ಆ ಮೂಲಕ ಪರೀಕ್ಷೆ ನಡೆಸಲು ಕೋರಿದ್ದ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದೆ.

ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೆ ಸೋಮಶೇಖರ್ ಮತ್ತು ರಾಜೇಶ್ ರೈ ಕೆ ಅವರ ನೇತೃತ್ವದ ಪೀಠವು ಸುದೀರ್ಘ ಕಾಲ ನಡೆಸಿ ಹಿಂದಿನ ಸೋಮವಾರ ಆದೇಶ ಕಾಯ್ದಿರಿಸಿತ್ತು.

ಈ ಹಿಂದೆ ವಿಚಾರಣೆ ವೇಳೆ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ವಿಕ್ರಮ್‌ ಹುಯಿಲಗೋಳ ಅವರು “ರಾಜ್ಯ ಪಠ್ಯಕ್ರಮ ಅಳವಡಿಸಿಕೊಂಡಿರುವ ಎಲ್ಲ ಮಕ್ಕಳಿಗೂ ಸಮಾನ ಶಿಕ್ಷಣ ವ್ಯವಸ್ಥೆ ಬೇಕಾಗಿದೆ. ಆದ್ದರಿಂದ, ಶಿಕ್ಷಣ ಇಲಾಖೆ ಬೋರ್ಡ್ ಪರೀಕ್ಷೆಗೆ ಮುಂದಾಗಿದೆ. 10 ಮತ್ತು 12ನೇ ತರಗತಿ ಮಕ್ಕಳಿಗೆ ನಡೆಸುವ ಪರೀಕ್ಷೆಯ ರೀತಿ ಎಂದು ತಿಳಿಯಬಾರದು. ಮಕ್ಕಳು ಹಲವು ದಿನಗಳಿಂದ ಸಿದ್ಧತೆ ಮಾಡಿಕೊಂಡಿರುತ್ತಾರೆ. ಆದರೆ, ಪರೀಕ್ಷಾ ದಿನಾಂಕಗಳನ್ನು ಮತ್ತೆ ಮತ್ತೆ ಬದಲಾವಣೆ ಮಾಡುವುದರಿಂದ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗುತ್ತಾರೆ. ಕರ್ನಾಟಕ ಶಿಕ್ಷಣ ಕಾಯಿದೆ ಸೆಕ್ಷನ್‌ 145ರ ಅಡಿ ಯಾವುದೇ ನಿಯಮಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸಬೇಕಿಲ್ಲ” ಎಂದು ವಾದಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Related Stories

No stories found.
Kannada Bar & Bench
kannada.barandbench.com