ವಕೀಲರಿಗೆ ವಿಮೆ: ದೆಹಲಿ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರವೂ ಯೋಜನೆ ಜಾರಿಗೊಳಿಸಬಹುದೇ? ಹೈಕೋರ್ಟ್‌ ಪ್ರಶ್ನೆ

ವಕೀಲರಿಗೆ ವಿಮೆ ಕಲ್ಪಿಸುವ ಸಂಬಂಧ ರಚನಾತ್ಮಕ ಯೋಜನೆ ರೂಪಿಸುವ ಕುರಿತು ಕಾನೂನು ವ್ಯವಹಾರಗಳ ಇಲಾಖೆಯು ಸಮಿತಿಯನ್ನೇನಾದರೂ ರಚಿಸಿದೆಯೇ ಎಂಬ ಕುರಿತು ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿದೆ.
Lawyers
Lawyers
Published on

ವಕೀಲರ ಅನುಕೂಲಕ್ಕಾಗಿ ದೆಹಲಿ ಸರ್ಕಾರ ಕಳೆದ ವರ್ಷ ಜಾರಿಗೊಳಿಸಿರುವಂತೆ ರಾಜ್ಯ ಸರ್ಕಾರವೂ ವಿಮಾ ಯೋಜನೆಯನ್ನು ರೂಪಿಸಬಹುದೇ ಎಂದು ಕರ್ನಾಟಕ ಹೈಕೋರ್ಟ್ ಮಂಗಳವಾರ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ.

ಈ ಸಂಬಂಧ ಅಧಿಕಾರಿಗಳು, ವಿವಿಧ ವಕೀಲರ ಪರಿಷತ್‌ಗಳ ಪದಾಧಿಕಾರಿಗಳು, ಭಾರತೀಯ ಜೀವ ವಿಮಾ ಸಂಸ್ಥೆ ಮತ್ತು ನ್ಯೂ ಇಂಡಿಯಾ‌ ಅಶ್ಯೂರೆನ್ಸ್‌ ಕಂಪೆನಿಯೂ ಸೇರಿದಂತೆ ನಾಲ್ಕು ಸಾರ್ವಜನಿಕ ವಲಯದ ವಿಮಾ ಕಂಪೆನಿಗಳ ಜೊತೆ ಸಭೆಯೊಂದನ್ನು ಆಯೋಜಿಸುವಂತೆ ರಾಜ್ಯ ಸರ್ಕಾರಕ್ಕೆ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ನೇತೃತ್ವದ ಪೀಠವು ಸೂಚಿಸಿದೆ.

“ಮೇಲೆ ಹೇಳಲಾದ ಯೋಜನೆಯು ರಾಜ್ಯದಾದ್ಯಂತ ಇರುವ ವಕೀಲರ ಸಂಘಗಳ ಅರ್ಹ ಸದಸ್ಯರಿಗೆ ಅನ್ವಯವಾಗುವುದನ್ನು ರಾಜ್ಯ ಸರ್ಕಾರ ಖಾತರಿಪಡಿಸಬೇಕು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ” ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಕಳೆದ ವರ್ಷ ದೆಹಲಿ ಸರ್ಕಾರ ಜಾರಿಗೊಳಿಸಿರುವ ಯೋಜನೆಯ ಬಗ್ಗೆ ಉಲ್ಲೇಖಿಸಿರುವ ನ್ಯಾಯಾಲಯವು ಅಂತಹದ್ದೇ ಯೋಜನೆಯನ್ನು ಕರ್ನಾಟಕದಲ್ಲಿ ಜಾರಿಗೊಳಿಸಲು ಸಾಧ್ಯವಿದೆಯೇ ಎಂದು ಪ್ರಶ್ನಿಸಿದೆ.

“ದೆಹಲಿ ಸರ್ಕಾರ ಜಾರಿಗೆ ತಂದಿರುವ ಯೋಜನೆಯ ರೀತಿಯಲ್ಲಿಯೇ ಭಾರತೀಯ ಜೀವ ವಿಮಾ ಸಂಸ್ಥೆ ಅಥವಾ ಬೇರಾವುದೇ ವಿಮಾ ಕಂಪೆನಿಯ ಜೊತೆಗೂಡಿ ಏನಾದರೂ ಮಾಡಲು ಸಾಧ್ಯವಿದೆಯೇ?” ಎಂದು ನ್ಯಾಯಾಲಯ ಪ್ರಶ್ನಿಸಿದೆ.

ವಕೀಲರಿಗೆ ವಿಮೆ ಕಲ್ಪಿಸುವ ಸಂಬಂಧ ರಚನಾತ್ಮಕ ಯೋಜನೆ ರೂಪಿಸುವ ಕುರಿತು ಕಾನೂನು ವಿಚಾರಗಳ ಇಲಾಖೆಯು ಸಮಿತಿಯನ್ನೇನಾದರೂ ರಚಿಸಿದೆಯೇ ಹಾಗೂ ಆ ಸಮಿತಿಯು ಯಾವುದಾದರೂ ಶಿಫಾರಸ್ಸುಗಳನ್ನು ಮಾಡಿದೆಯೇ ಎಂಬ ಕುರಿತು ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ಇದೇ ವೇಳೆ ಸೂಚಿಸಿದೆ. ಪ್ರತಿಕ್ರಿಯೆ ದಾಖಲಿಸಲು ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ಎರಡು ವಾರಗಳ ಸಮಯ ನೀಡಿದೆ.

Also Read
ವಕೀಲರು ಅಸಹಾಯಕರೇನಲ್ಲ, ತಮ್ಮ ಕುಂದುಕೊರತೆಗಳನ್ನು ಚರ್ಚಿಸಲು ಸಶಕ್ತರು: ಪಿಐಎಲ್ ವಜಾಗೊಳಿಸಿದ ಹೈಕೋರ್ಟ್

ರಾಜ್ಯದಲ್ಲಿ ಕೋವಿಡ್‌ ಸೋಂಕಿತ ರೋಗಿಗಳು ಎದುರಿಸುತ್ತಿರುವ ಸಂಕಷ್ಟಗಳ ಸಂಬಂಧ ಎರಡು ಪತ್ರಗಳನ್ನು ನ್ಯಾಯಾಲಯವು ಸ್ವೀಕರಿಸಿತ್ತು. ಇವುಗಳನ್ನು ಆಧರಿಸಿ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡ ಅರ್ಜಿಯ ವಿಚಾರಣೆಯನ್ನು ಪೀಠವು ನಡೆಸುವ ಸಂದರ್ಭದಲ್ಲಿ ಮೇಲಿನಂತೆ ಹೇಳಿದೆ. ದೆಹಲಿ ಹೈಕೋರ್ಟ್‌ ಕಳೆದ ವರ್ಷದ ಅಕ್ಟೋಬರ್‌ 7ರಂದು ಅಲ್ಲಿನ ವಕೀಲರ ವಿಮಾ ಯೋಜನೆಗೆ ಸಂಬಂಧಿಸಿದಂತೆ ಹೊರಡಿಸಿದ ಆದೇಶದ ಕುರಿತು ಬೆಂಗಳೂರು ವಕೀಲರ ಸಂಘವು ಮೆಮೊ ಮೂಲಕ ರಾಜ್ಯ ಹೈಕೋರ್ಟ್‌ಗೆ ಗಮನಸೆಳೆದಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಆದೇಶ ನೀಡಿದೆ.

ದೆಹಲಿಯ ವಕೀಲರ ಪರಿಷತ್‌ನ ಸಲಹೆಯ ಮೇರೆಗೆ ದೆಹಲಿ ಸರ್ಕಾರವು ಮುಖ್ಯಮಂತ್ರಿ ವಕೀಲರ ಕಲ್ಯಾಣ ಯೋಜನೆ ಎಂಬ ವಿಮಾ ನೀತಿಯನ್ನು ರೂಪಿಸಿದೆ. ಇದಕ್ಕೆ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ದೆಹಲಿ ಹೈಕೋರ್ಟ್‌ ಒಪ್ಪಿಗೆ ನೀಡಿದೆ.

Kannada Bar & Bench
kannada.barandbench.com