ಬೇರೆ ಸಂಸ್ಥೆಗಳು ಟೂರ್ನಿ ನಡೆಸಲು ಮಾರ್ಗಸೂಚಿ ರೂಪಿಸಲು ಬಿಎಐಗೆ ಹೈಕೋರ್ಟ್‌ ನಿರ್ದೇಶನ

ವಿಶ್ವ ಬ್ಯಾಡ್ಮಿಂಟನ್ ಒಕ್ಕೂಟದಿಂದ ಮಾನ್ಯತೆ ಪಡೆಯದ ಸಂಸ್ಥೆಯು ನಡೆಸುವ ಪಂದ್ಯಾವಳಿಯಲ್ಲಿ ಭಾಗವಹಿಸುವ ಕ್ರೀಡಾಪಟುಗಳ ಹಕ್ಕಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು.
Badminton Association of India and Karnataka High Court
Badminton Association of India and Karnataka High Court

ನೋಂದಾಯಿತ ಆಟಗಾರರು ಅಥವಾ ತರಬೇತುದಾರರಿಗೆ ಬ್ಯಾಡ್ಮಿಂಟನ್ ಪಂದ್ಯಾವಳಿ ನಡೆಸಲು ಇತರ ಸಂಸ್ಥೆಗಳ ಅರ್ಜಿಗಳ ಪರಿಗಣನೆಗೆ ಮಾರ್ಗಸೂಚಿಗಳನ್ನು ರೂಪಿಸುವಂತೆ ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಷನ್‌ಗೆ (ಬಿಎಐ) ನಿರ್ದೇಶಿಸಿದೆ [ಬಿಟ್‌ಸ್ಪೋರ್ಟ್‌ ಪ್ರೈವೇಟ್‌ ಲಿಮಿಟೆಡ್‌ ಮತ್ತು ಇತರರು ವರ್ಸಸ್‌ ಭಾರತ ಸರ್ಕಾರ ಮತ್ತು ಇತರರು].

ಟೂರ್ನಿಗಳನ್ನು ನಡೆಸಲು ಬೇರೆ ಸಂಸ್ಥೆಗಳಿಂದ ಅರ್ಜಿ ಸ್ವೀಕರಿಸಲು ಅವಕಾಶವಿಲ್ಲ ಎಂಬ ಬಿಎಐ ವಾದವನ್ನು ನ್ಯಾಯಮೂರ್ತಿ ಆರ್‌ ದೇವದಾಸ್‌ ಅವರ ನೇತೃತ್ವದ ಏಕಸದಸ್ಯ ಪೀಠವು ತಿರಸ್ಕರಿಸಿದೆ.

ಇತರೆ ಸಂಸ್ಥೆಗಳು ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಲು ವಿಶ್ವ ಬ್ಯಾಡ್ಮಿಂಟನ್‌ ಒಕ್ಕೂಟದ ನಿರ್ಣಯದಲ್ಲಿ ಅಂಥ ಮಾರ್ಗಸೂಚಿ ರೂಪಿಸಲು ಅವಕಾಶವಿದೆ ಎಂದು ನ್ಯಾಯಾಲಯ ಹೇಳಿದೆ.

“ವಿಶ್ವ ಬ್ಯಾಡ್ಮಿಂಟನ್‌ ಒಕ್ಕೂಟದ ಜೊತೆ ಸಮಾಲೋಚನೆ ನಡೆಸಿ ಅರ್ಜಿ ಸ್ವೀಕರಿಸಲು ಮತ್ತು ಪಂದ್ಯಾವಳಿ ನಡೆಸಲು ಅಗತ್ಯವಾದ ನಿಯಮಾವಳಿಯನ್ನು ಬಿಎಐ ರೂಪಿಸಬೇಕು ಎಂಬುದು ಈ ನ್ಯಾಯಾಲಯದ ಖಚಿತ ಅಭಿಪ್ರಾಯ” ಎಂದು ಹೇಳಿದೆ.

ಜಾಗತಿಕ ಮಟ್ಟದಲ್ಲಿ ಬಿಡಬ್ಲ್ಯುಎಫ್‌ನಿಂದ ಗುರುತಿಸಲ್ಪಡದ ಸಂಸ್ಥೆಯು ನಡೆಸುವ ಪಂದ್ಯಾವಳಿಯಲ್ಲಿ ಭಾಗವಹಿಸುವ ಕ್ರೀಡಾಪಟುಗಳ ಹಕ್ಕಿಗೆ ಸಂಬಂಧಿಸಿದ ವಿಷಯದ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು.

ಮಾನ್ಯತೆ ಹೊಂದಿರದ ಟೂರ್ನಿಯಲ್ಲಿ ಭಾಗವಹಿಸದಂತೆ ಆಟಗಾರರು, ತರಬೇತುದಾರರು ಮತ್ತು ತಾಂತ್ರಿಕ ಸಿಬ್ಬಂದಿಗೆ ಬಿಎಐ ಹೊರಡಿಸಿದ್ದ ಸುತ್ತೋಲೆಗೆ ನ್ಯಾಯಾಲಯವು ತಡೆಯಾಜ್ಞೆ ನೀಡಿತ್ತು. ಈ ಆದೇಶವನ್ನು ಸುಪ್ರೀಂ ಕೋರ್ಟ್‌ ಕಳೆದ ಆಗಸ್ಟ್‌ನಲ್ಲಿ ಬದಿಗೆ ಸರಿಸಿತ್ತು.

Kannada Bar & Bench
kannada.barandbench.com