ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳ: ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಬಯಸಿದ ಹೈಕೋರ್ಟ್‌

“ಕೋವಿಡ್‌ ನಂತರ ವಿಶ್ವದ ಬೇರೆ ಕಡೆ ಯುದ್ಧಗಳು ನಡೆಯುತ್ತಿರುವುದರಿಂದ ವಿವಿಧ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದೆ. ಆದರೆ, ಕಾರ್ಮಿಕರಿಗೆ ಅದೇ ವೇತನ ಪಾವತಿಸಬೇಕೆ?” ಎಂದು ಹಿರಿಯ ವಕೀಲ ವಿಕ್ರಮ್‌ ಹುಯಿಲಗೋಳ ವಾದಿಸಿದರು.
ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳ: ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಬಯಸಿದ ಹೈಕೋರ್ಟ್‌
Published on

ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳ ಪ್ರಶ್ನಿಸಿ ಕರ್ನಾಟಕ ಎಂಪ್ಲಾಯರ್ಸ್‌ ಅಸೋಸಿಯೇಶನ್‌ ಸಲ್ಲಿಸಿರುವ ಅರ್ಜಿಯಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿವಾದಿಯನ್ನಾಗಿಸುವಂತೆ ಹೈಕೋರ್ಟ್‌ ಮಂಗಳವಾರ ನಿರ್ದೇಶಿಸಿದೆ.

ರಾಜ್ಯ ಕಾರ್ಮಿಕ ಇಲಾಖೆಯು 2026ರ ಮೇ 22ರಂದು ಕನಿಷ್ಠ ವೇತನ ಪರಿಷ್ಕರಿಸಿ ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ಕರ್ನಾಟಕ ಎಂಪ್ಲಾಯರ್ಸ್‌ ಅಸೋಸಿಯೇಶನ್‌ ಮತ್ತು ಎತಿರಿಯಲ್‌ ಮಷೀನ್ಸ್‌ ಪ್ರೈವೇಟ್‌ ಲಿಮಿಟೆಡ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ಜ್ಯೋತಿ ಮೂಲಿಮನಿ ಅವರ ಏಕಸದಸ್ಯ ಪೀಠ ನಡೆಸಿತು.

Justice Jyoti Mulimani
Justice Jyoti Mulimani

“ನೀವು (ಅರ್ಜಿದಾರರು) ಕೇಂದ್ರ ಸರ್ಕಾರದ ಕಾಯಿದೆಯನ್ನು ಉಲ್ಲೇಖಿಸುತ್ತಿರುವುದರಿಂದ ಕೇಂದ್ರ ಸರ್ಕಾರವನ್ನು ಪಕ್ಷಕಾರರನ್ನಾಗಿ ಮಾಡಬೇಕು. ಕೇಂದ್ರ ಸರ್ಕಾರ ಏನು ಹೇಳುತ್ತದೆ ಎಂಬುದನ್ನು ನೋಡಬೇಕಿದೆ” ಎಂದು ಪೀಠ ಹೇಳಿತು. ಅರ್ಜಿದಾರರ ಪರ ಹಿರಿಯ ವಕೀಲ ಎಸ್‌ ಎಸ್‌ ನಾಗಾನಂದ್‌ ಅವರ ವಾದ ಆಲಿಸಿದ ಪೀಠವು ಕೇಂದ್ರ ಸರ್ಕಾರವನ್ನು ಪ್ರತಿವಾದಿಯನ್ನಾಗಿಸಲು ನಿರ್ದೇಶಿಸಿ, ವಿಚಾರಣೆಯನ್ನು ಜೂನ್‌ 9ಕ್ಕೆ ಮುಂದೂಡಿತು.

SS Naganand
SS Naganand

ನಾಗಾನಂದ್‌ ಅವರು “ಶೇ.60ರಷ್ಟು ವೇತನ ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ನರ್ಸಿಂಗ್‌ ಹೋಮ್‌, ಕಾಲೇಜುಗಳು ಮುಚ್ಚುತ್ತವೆ. ಅಷ್ಟು ಸಂಬಳವನ್ನು ಅವರು ಪಾವತಿಸಲಾಗದು. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟದಲ್ಲಿ ಅತ್ಯಂತ ಹೆಚ್ಚು ಕನಿಷ್ಠ ವೇತನ ನಿಗದಿಯಾಗಿದೆ. ರಾಜ್ಯದ ಪ್ರತಿಯೊಬ್ಬ ಕಾರ್ಮಿಕನಿಗೂ ಸಮಸ್ಯೆಯಾಗುತ್ತದೆ. ಮಧ್ಯಂತರ ಆದೇಶ ಮಾಡದೇ ಇದ್ದರೆ ಆಸ್ಪತ್ರೆ, ಶೈಕ್ಷಣಿಕ ಸಂಸ್ಥೆಗಳು, ಸಾವಿರಾರು ಕೈಗಾರಿಕೆಗಳು ಲಕ್ಷಾಂತರ ಕಾರ್ಮಿಕರಿಗೆ ಹೊಸ ಆದೇಶದ ಅನ್ವಯ ವೇತನ ಪಾವತಿಸಬೇಕಾಗುತ್ತದೆ” ಎಂದರು.

ಮುಂದುವರಿದು, “ಹಿಂಪಡೆಯಲಾಗಿರುವ ಕಾಯಿದೆಯನ್ನು ಆಧರಿಸಿ ವೇತನ ಹೆಚ್ಚಿಸಲು ಅಧಿಸೂಚನೆ ಹೊರಡಿಸಬಹುದೇ?” ಎಂದು ಪ್ರಶ್ನಿಸಿದರು.

Vikram Huilgol
Vikram Huilgol

ಅಖಿಲ ಭಾರತ ಟ್ರೇಡ್‌ ಯೂನಿಯನ್‌ಗಳ ಕೇಂದ್ರೀಯ ಒಕ್ಕೂಟ ಪ್ರತಿನಿಧಿಸಿದ್ದ ಹಿರಿಯ ವಕೀಲ ವಿಕ್ರಮ್‌ ಹುಯಿಲಗೋಳ ಅವರು “2017ರಲ್ಲಿ ಕೊನೆಯ ಬಾರಿಗೆ ವೇತನ ಪರಿಷ್ಕರಣೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಕೋವಿಡ್‌ 19 ಸಾಂಕ್ರಾಮಿಕ ಬಂದು ಹೋಗಿದೆ. ವಿಶ್ವದ ಬೇರೆ ಕಡೆ ಯುದ್ಧಗಳು ನಡೆಯುತ್ತಿರುವುದರಿಂದ ವಿವಿಧ ವಸ್ತುಗಳ ಬೆಲೆ ಹೆಚ್ಚಾಗಿದೆ. ಆದರೆ, ಕಾರ್ಮಿಕರಿಗೆ ಅದೇ ವೇತನ ಪಾವತಿಸಬೇಕೆ?” ಎಂದರು.

ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು ಆಕ್ಷೇಪಣೆ ಸಲ್ಲಿಸಲು ಒಂದು ವಾರ ಕಾಲಾವಕಾಶ ಕೋರಿದರು.

Advocate General K Shashi Kiran Shetty
Advocate General K Shashi Kiran Shetty

ಕೆಲವು ಕ್ಷೇತ್ರಗಳಲ್ಲಿ ಶೇ. 60ರಷ್ಟು ವೇತನ ಹೆಚ್ಚಳವಾಗಿದ್ದು, ಉದ್ಯೋಗದಾತರ ಮೇಲೆ ಆರ್ಥಿಕ ಹೊರೆ ಬಿದ್ದಿದೆ. 84 ನಿಗದಿತ ಉದ್ಯೋಗಗಳ ಪೈಕಿ 34 ಉದ್ಯೋಗಗಳಲ್ಲಿ 2022–23ರಿಂದ ವೇತನ ಪರಿಷ್ಕರಣೆಯಾಗಿದೆ. ಈ ಪರಿಷ್ಕರಣೆಯನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಕೈಗಾರಿಕಾ ಕೇಂದ್ರಿತ ವಿಚಾರಗಳನ್ನು ಪರಿಗಣಿಸದೇ ಎಲ್ಲಾ ಉದ್ಯೋಗಗಳಲ್ಲಿ ವೇತನ ಪರಿಷ್ಕರಣೆ ಮಾಡುವುದು ಕಾನೂನಿಗೆ ವಿರುದ್ಧವಾಗಿದೆ. ನ್ಯಾಯಾಲಯದ ಅನುಮತಿ ಇಲ್ಲದೇ ಸಲಹಾ ಮಂಡಳಿಯ ಶಿಫಾರಸ್ಸುಗಳನ್ನು ಜಾರಿಗೊಳಿಸಬಾರದು ಎಂದು ಈಗಾಗಲೇ ಹೈಕೋರ್ಟ್‌ ಮಧ್ಯಂತರ ಆದೇಶ ಮಾಡಿದೆ ಎಂದು ಅರ್ಜಿಯಲ್ಲಿ ಗಮನಸೆಳೆಯಲಾಗಿದೆ.

ಇಷ್ಟಾದರೂ 2026 ಮೇ 22ರಂದು ರಾಜ್ಯ ಸರ್ಕಾರವು ಆಕ್ಷೇಪಾರ್ಹವಾದ ಅಂತಿಮ ಅಧಿಸೂಚನೆ ಹೊರಡಿಸಿದೆ. ವೇತನ ಪರಿಷ್ಕರಣೆ ಅಳವಡಿಸಿರುವ ನಿಯಮ ಮತ್ತು ಇದು ಕನಿಷ್ಠ ವೇತನ ಕಾಯಿದೆ ಹಾಗೂ ಸುಪ್ರೀಂ ಕೋರ್ಟ್‌ ರೂಪಿಸಿರುವ ಮಾನದಂಡಗಳಿಗೆ ಪೂರಕವಾಗಿಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ.

Kannada Bar & Bench
kannada.barandbench.com