ಕ್ರಿಮಿನಲ್ ಪ್ರಕರಣಗಳ ಈಚೆಗಿನ ಸ್ಥಿತಿ ಪರಿಶೀಲಿಸದೆ ರೌಡಿ ಶೀಟ್ ತೆರೆಯುವಂತಿಲ್ಲ: ಹೈಕೋರ್ಟ್

“ರೌಡಿ ಶೀಟ್ ತೆರೆಯುವುದು ಅಥವಾ ಮುಂದುವರಿಸುವುದು ಗಂಭೀರ ನಾಗರಿಕ ಪರಿಣಾಮಗಳನ್ನು ಉಂಟುಮಾಡುತ್ತದೆ” ಎಂದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್; ಕ್ರಿಮಿನಲ್ ಪ್ರಕರಣಗಳ ಸಮಗ್ರ ಡಿಜಿಟಲ್ ಡೇಟಾಬೇಸ್ ರೂಪಿಸಲು ಸೂಚನೆ.
Karnataka HC and Justice Suraj Govindaraj
Karnataka HC and Justice Suraj Govindaraj
Published on: 

ಕ್ರಿಮಿನಲ್ ಪ್ರಕರಣಗಳ ಪ್ರಸ್ತುತ ಸ್ಥಿತಿಯನ್ನು ಪರಿಶೀಲಿಸದೆ ವ್ಯಕ್ತಿಯೊಬ್ಬರ ವಿರುದ್ಧ ರೌಡಿ ಶೀಟ್ ತೆರೆಯಲು ಅಥವಾ ಮುಂದುವರಿಸಲು ನೋಟಿಸ್ ನೀಡುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ರಾಜ್ಯ ಪೊಲೀಸ್ ಇಲಾಖೆಗೆ ನಿರ್ದೇಶಿಸಿದೆ. ಅಲ್ಲದೆ, ವ್ಯಕ್ತಿಗಳ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳ ಸಂಪೂರ್ಣ ಮಾಹಿತಿಯನ್ನು ಒಳಗೊಂಡ ಸಮಗ್ರ ಡಿಜಿಟಲ್ ಡೇಟಾಬೇಸ್ ಅಭಿವೃದ್ಧಿಪಡಿಸುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಸೂಚಿಸಿದೆ.

ತುಮಕೂರಿನ 26 ವರ್ಷದ ಆಂಥೋನಿ ಡೇವಿಡ್ ಜೆ ಅಲಿಯಾಸ್ ಕುಟ್ಟಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠವು ಈ ನಿರ್ದೇಶನಗಳನ್ನು ನೀಡಿದೆ.

ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ವಿಚಾರಣಾ ನ್ಯಾಯಾಲಯವು ವಜಾಗೊಳಿಸುವ ಮೂಲಕ ಖುಲಾಸೆಗೊಳಿಸಿದ್ದರೂ, ಅದೇ ಪ್ರಕರಣ ಬಾಕಿಯಿದೆ ಎಂಬ ಕಾರಣಕ್ಕೆ ರೌಡಿ ರಿಜಿಸ್ಟರ್‌ನಲ್ಲಿ ಹೆಸರು ಸೇರಿಸಲು ಜುಲೈ 16ರಂದು ನೀಡಿದ್ದ ನೋಟಿಸ್ ಪ್ರಶ್ನಿಸಿ ಅರ್ಜಿದಾರ ಹೈಕೋರ್ಟ್ ಮೆಟ್ಟಿಲೇರಿದ್ದರು.

ಅರ್ಜಿದಾರರ ವಿರುದ್ಧ ರೌಡಿ ಶೀಟ್ ತೆರೆಯಲು ಈ ಹಿಂದೆ ನೀಡಲಾಗಿದ್ದ ನೋಟಿಸ್ ಅನ್ನು 2024ರ ಜುಲೈ 22ರಂದು ಹೈಕೋರ್ಟ್‌ನ ಮತ್ತೊಂದು ಪೀಠ ರದ್ದುಗೊಳಿಸಿತ್ತು. ಇದಾದ ಬಳಿಕ, ಸಂಬಂಧಪಟ್ಟ ಕ್ರಿಮಿನಲ್ ಪ್ರಕರಣದಲ್ಲಿ 2025ರ ಜುಲೈ 10ರಂದು ಸತ್ರ ನ್ಯಾಯಾಲಯವು ಅರ್ಜಿದಾರರನ್ನು ಖುಲಾಸೆಗೊಳಿಸಿತ್ತು. ಅರ್ಜಿದಾರರ ವಿರುದ್ಧ ಬೇರೆ ಯಾವುದೇ ಕ್ರಿಮಿನಲ್ ಪ್ರಕರಣ ಬಾಕಿಯಿದೆ ಎಂದು ರಾಜ್ಯ ಸರ್ಕಾರವೂ ಹೇಳಿರಲಿಲ್ಲ.

ಈ ಹಿನ್ನೆಲೆಯಲ್ಲಿ, “ಪ್ರತಿವಾದಿಗಳು ಅವಲಂಬಿಸಿದ್ದ ಏಕೈಕ ಕ್ರಿಮಿನಲ್ ಪ್ರಕರಣದಲ್ಲಿ ಅರ್ಜಿದಾರರು ಖುಲಾಸೆಗೊಂಡ ನಂತರ ಅವರ ಹೆಸರಿನಲ್ಲಿ ರೌಡಿ ಶೀಟ್ ತೆರೆಯಲು ಅಥವಾ ಮುಂದುವರಿಸಲು ಯಾವುದೇ ವಾಸ್ತವಿಕ ಅಥವಾ ಕಾನೂನುಬದ್ಧ ಆಧಾರ ಇರಲಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ಇದು ಪ್ರತ್ಯೇಕ ಪ್ರಕರಣವಲ್ಲ ಎಂದು ಗಮನಿಸಿದ ಹೈಕೋರ್ಟ್, ಕ್ರಿಮಿನಲ್ ಪ್ರಕರಣ ದಾಖಲಾದ ಮಾತ್ರಕ್ಕೆ ಅದರ ಮುಂದಿನ ಸ್ಥಿತಿಯನ್ನು ಪರಿಶೀಲಿಸದೆ ರೌಡಿ ಶೀಟ್ ತೆರೆಯಲು ಅಥವಾ ಮುಂದುವರಿಸಲು ಪೊಲೀಸರು ನೋಟಿಸ್ ನೀಡುತ್ತಿರುವುದನ್ನು ಉಲ್ಲೇಖಿಸಿದೆ. ಹಲವು ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಗೊಂಡಿದ್ದರೂ, ಪ್ರಕರಣಗಳು ವಜಾಗೊಂಡಿದ್ದರೂ, ಆರೋಪಮುಕ್ತರಾಗಿದ್ದರೂ, ಪ್ರಕರಣಗಳು ರಾಜಿ ಮೂಲಕ ಇತ್ಯರ್ಥಗೊಂಡಿದ್ದರೂ ಅಥವಾ ತನಿಖೆ ಮುಕ್ತಾಯಗೊಂಡಿದ್ದರೂ ಹಳೆಯ ಮಾಹಿತಿಯ ಆಧಾರದ ಮೇಲೆ ನೋಟಿಸ್‌ಗಳನ್ನು ನೀಡಲಾಗುತ್ತಿದೆ. ಇದರಿಂದ ಅನಗತ್ಯವಾಗಿ ನಾಗರಿಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಬೇಕಾದ ಪರಿಸ್ಥಿತಿ ಉಂಟಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ.

“ರೌಡಿ ಶೀಟ್ ತೆರೆಯುವುದು ಅಥವಾ ಮುಂದುವರಿಸುವುದು ಗಂಭೀರ ನಾಗರಿಕ ಪರಿಣಾಮಗಳನ್ನು ಉಂಟುಮಾಡುತ್ತದೆ” ಎಂದು ನ್ಯಾಯಾಲಯ ಹೇಳಿದೆ.

ರೌಡಿ ಶೀಟ್ ಎಂಬುದು ಸಾರ್ವಜನಿಕ ಸುವ್ಯವಸ್ಥೆ ಕಾಪಾಡಲು ಮತ್ತು ಅಭ್ಯಾಸಬದ್ಧ ಅಪರಾಧಿಗಳ ಮೇಲೆ ನಿಗಾ ಇಡಲು ಬಳಸುವ ಆಡಳಿತಾತ್ಮಕ ಕ್ರಮವಾಗಿದ್ದರೂ, ಅದು ವ್ಯಕ್ತಿಯ ಗೌರವ, ಘನತೆ, ಸ್ವಾತಂತ್ರ್ಯ, ಉದ್ಯೋಗ, ವ್ಯವಹಾರ ಮತ್ತು ಸಾಮಾಜಿಕ ಸ್ಥಾನಮಾನದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಅಲ್ಲದೆ, ನಿರಂತರ ಪೊಲೀಸ್ ನಿಗಾಕ್ಕೂ ಕಾರಣವಾಗಬಹುದು ಎಂದು ನ್ಯಾಯಾಲಯ ಹೇಳಿದೆ.

“ಆದ್ದರಿಂದ ಇಂತಹ ಕ್ರಮವನ್ನು ವಾಡಿಕೆಯಂತೆ ಅಥವಾ ಯಾಂತ್ರಿಕವಾಗಿ ಕೈಗೊಳ್ಳುವಂತಿಲ್ಲ” ಎಂದು ಸ್ಪಷ್ಟಪಡಿಸಿದ ನ್ಯಾಯಾಲಯವು ರೌಡಿ ಶೀಟ್ ತೆರೆಯಲು ಅಥವಾ ಮುಂದುವರಿಸಲು ಕಾನೂನುಬದ್ಧ ಆಧಾರವಿದೆಯೇ ಎಂಬುದನ್ನು ಸಂಬಂಧಪಟ್ಟ ಪ್ರಾಧಿಕಾರವು ಲಭ್ಯವಿರುವ ಮತ್ತು ಪ್ರಸ್ತುತ ಮಾಹಿತಿಯ ಆಧಾರದ ಮೇಲೆ ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿತು.

ಪೊಲೀಸ್ ಇಲಾಖೆಯ ಬಳಿ ಈಗಾಗಲೇ ಅಪರಾಧ ಮತ್ತು ಅಪರಾಧಿಗಳ ಮೇಲಿನ ನಿಗಾ ಜಾಲ ವ್ಯವಸ್ಥೆ (ಸಿಸಿಟಿಎನ್‌ಎಸ್‌) ಮತ್ತು ಅಂತರ ನಿರ್ವಹಣಾ ಅಪರಾಧ ನ್ಯಾಯ ವ್ಯವಸ್ಥೆಯಂತಹ (ಇಸಿಜೆಎಸ್‌) ಡಿಜಿಟಲ್ ವ್ಯವಸ್ಥೆಗಳಿವೆ. ನ್ಯಾಯಾಂಗದಲ್ಲಿಯೂ ಇ-ಕೋರ್ಟ್ಸ್ ಯೋಜನೆಯಡಿ ಪ್ರಕರಣಗಳ ನಿರ್ವಹಣೆ ಡಿಜಿಟಲೀಕರಣಗೊಂಡಿದೆ ಎಂದು ನ್ಯಾಯಾಲಯ ಹೇಳಿದೆ.

ಅಂತಹ ಮಾಹಿತಿ ವಿದ್ಯುನ್ಮಾನ ರೂಪದಲ್ಲಿ ಲಭ್ಯವಿರುವಾಗ, ಹಳೆಯ ಅಥವಾ ಅಪೂರ್ಣ ಮಾಹಿತಿಯ ಆಧಾರದ ಮೇಲೆ ಕ್ರಮ ಆರಂಭಿಸಲು ಯಾವುದೇ ಸಮರ್ಥನೆ ಇರಲು ಸಾಧ್ಯವಿಲ್ಲ” ಎಂದು ನ್ಯಾಯಾಲಯ ಹೇಳಿತು.

ಪೊಲೀಸ್ ಕಂಪ್ಯೂಟರ್ ವಿಭಾಗದ ಪೊಲೀಸ್‌ ಮಹಾನಿರ್ದೇಶಕರು ಹೊಸ ಡಿಜಿಟಲ್ ವೇದಿಕೆಯನ್ನು ಅಭಿವೃದ್ಧಿಪಡಿಸುವ ಅಥವಾ ಈಗಿರುವ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವ ಸಾಧ್ಯತೆಯನ್ನು ಪರಿಶೀಲಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

ಈ ವೇದಿಕೆಯಲ್ಲಿ ಸಿಸಿಟಿಎನ್‌ಎಸ್‌, ಐಸಿಜೆಎಸ್‌, ಇ-ಕೋರ್ಟ್ಸ್ ದತ್ತಾಂಶ ಮತ್ತು ಇತರ ಲಭ್ಯವಿರುವ ಸರ್ಕಾರಿ ದತ್ತಾಂಶಗಳಿಂದ ಮಾಹಿತಿಯನ್ನು ಸಂಯೋಜಿಸಬೇಕು. ಪ್ರಕರಣಗಳ ದಾಖಲು, ಆರೋಪಪಟ್ಟಿ ಸಲ್ಲಿಕೆ, ವಿಚಾರಣೆಯ ಬಾಕಿ ಸ್ಥಿತಿ, ಖುಲಾಸೆ, ಅಪರಾಧ ಸಾಬೀತು, ಆರೋಪಮುಕ್ತಿ, ಪ್ರಕರಣಗಳ ರದ್ದು, ಮೇಲ್ಮನವಿ, ಮರುಪರಿಶೀಲನೆ ಹಾಗೂ ತನಿಖೆ ಮುಕ್ತಾಯಗೊಂಡಿರುವ ವಿವರಗಳು ಲಭ್ಯವಾಗುವಂತೆ ವ್ಯವಸ್ಥೆ ರೂಪಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.

ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳಲ್ಲಿ ನಡೆಯುತ್ತಿರುವ ಸಂಬಂಧಿತ ವಿಚಾರಣೆಗಳು ಹಾಗೂ ಕ್ರಿಮಿನಲ್ ಪ್ರಕರಣಗಳ ವಿಚಾರಣೆಗೆ ತಡೆ ಅಥವಾ ಅಮಾನತು ನೀಡಿರುವ ಆದೇಶಗಳ ಮಾಹಿತಿಯನ್ನೂ ಒಳಗೊಳ್ಳಬೇಕು. ದತ್ತಾಂಶವನ್ನು ನೈಜ ಸಮಯದಲ್ಲಿ ಅಥವಾ ನಿಯಮಿತ ಅವಧಿಗಳಲ್ಲಿ ನವೀಕರಿಸಿ, ಪೊಲೀಸರು ಪ್ರಸ್ತುತ ಮತ್ತು ನಿಖರ ಮಾಹಿತಿಯನ್ನು ಪಡೆಯುವಂತೆ ಮಾಡಬೇಕು ಎಂದು ನ್ಯಾಯಾಲಯ ಹೇಳಿದೆ.

ರಾಜ್ಯದಾದ್ಯಂತ ಪೊಲೀಸ್ ಅಧಿಕಾರಿಗಳು ರೌಡಿ ಶೀಟ್ ತೆರೆಯಲು ಅಥವಾ ಮುಂದುವರಿಸಲು ನೋಟಿಸ್ ನೀಡುವ ಮೊದಲು ಕ್ರಿಮಿನಲ್ ಪ್ರಕರಣಗಳ ಇತ್ತೀಚಿನ ಸ್ಥಿತಿಯನ್ನು ಪರಿಶೀಲಿಸುವುದನ್ನು ಕಡ್ಡಾಯಗೊಳಿಸಿ ಆಡಳಿತಾತ್ಮಕ ಸೂಚನೆಗಳನ್ನು ಹೊರಡಿಸುವಂತೆ ಪೊಲೀಸ್ ಮಹಾನಿರ್ದೇಶಕರು ಹಾಗೂ ಪೊಲೀಸ್ ಮಹಾನಿರೀಕ್ಷಕರಿಗೆ ಹೈಕೋರ್ಟ್ ನಿರ್ದೇಶಿಸಿದೆ.

ಪರಿಶೀಲನೆ ನಡೆಸಿದ ದಿನಾಂಕ, ಮಾಹಿತಿಯ ಮೂಲ, ಇನ್ನೂ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳು ಹಾಗೂ ಪ್ರಕರಣಗಳ ಪ್ರಸ್ತುತ ಸ್ಥಿತಿಯನ್ನು ಪರಿಗಣಿಸಿ ಕ್ರಮ ಕೈಗೊಳ್ಳಲು ಇರುವ ಕಾರಣಗಳನ್ನು ಸಂಬಂಧಪಟ್ಟ ಪ್ರಾಧಿಕಾರವು ಲಿಖಿತವಾಗಿ ದಾಖಲಿಸಬೇಕು ಎಂದು ನ್ಯಾಯಾಲಯ ಹೇಳಿದೆ.

“ಯಾವುದೇ ನೋಟಿಸ್ ನೀಡುವ ಮೊದಲು ಇಂತಹ ಪರಿಶೀಲನೆ ಮತ್ತು ತೃಪ್ತಿಯ ದಾಖಲಾತಿ ಅತ್ಯಗತ್ಯ ಪೂರ್ವಾಪೇಕ್ಷೆಯಾಗಿರುತ್ತದೆ” ಎಂದು ನ್ಯಾಯಾಲಯ ನಿರ್ದೇಶಿಸಿದೆ.

ಸರ್ಕಾರವು ಮಾದರಿ ವ್ಯಾಜ್ಯಕಾರನಾಗಿ ತನ್ನಲ್ಲಿರುವ ತಂತ್ರಜ್ಞಾನ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು ಎಂದು ಒತ್ತಿಹೇಳಿರುವ ಹೈಕೋರ್ಟ್, ಅನಗತ್ಯ ಪ್ರಕರಣಗಳನ್ನು ತಪ್ಪಿಸುವುದು, ಸರಿಯಾದ ಮಾಹಿತಿಯ ಆಧಾರದ ಮೇಲೆ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳುವುದು ಮತ್ತು ಹಳೆಯ ಅಥವಾ ತಪ್ಪಾದ ದಾಖಲೆಗಳಿಂದ ನಾಗರಿಕರ ಮೂಲಭೂತ ಹಕ್ಕುಗಳು ಹಾಗೂ ಗೌರವಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ರಾಜ್ಯದ ಜವಾಬ್ದಾರಿಯಾಗಿದೆ ಎಂದು ಅಭಿಪ್ರಾಯಪಟ್ಟಿತು.

ಅಂತಿಮವಾಗಿ, ಹೈಕೋರ್ಟ್ ಅರ್ಜಿಯನ್ನು ಪುರಸ್ಕರಿಸಿ, ಪ್ರಶ್ನಿಸಲಾದ ನೋಟಿಸ್ ಅನ್ನು ರದ್ದುಗೊಳಿಸಿತು.

Attachment
PDF
Anthony David Vs State of Karnataka
Preview
Kannada Bar & Bench
kannada.barandbench.com