ಅತ್ಯಾಚಾರ ಆರೋಪಿಯಾದ ಪೊಲೀಸ್ ಅಧಿಕಾರಿಗೆ ವಿಚಾರಣಾಧೀನ ನ್ಯಾಯಾಲಯ ನೀಡಿದ್ದ ನಿರೀಕ್ಷಣಾ ಜಾಮೀನನ್ನು ಈಚೆಗೆ ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದ್ದು, ಪೊಲೀಸ್ ಅಧಿಕಾರಿಯಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯ ನೆರವಿಗೆ ನ್ಯಾಯಾಲಯ ಬರಬೇಕಿತ್ತು ಎಂದಿದೆ.
ಆರೋಪಿಗೆ ವಿಚಾರಣಾಧೀನ ನ್ಯಾಯಾಲಯ ಮಂಜೂರು ಮಾಡಿದ್ದ ನಿರೀಕ್ಷಣಾ ಜಾಮೀನನ್ನು ನ್ಯಾಯಮೂರ್ತಿ ಎಚ್ ಪಿ ಸಂದೇಶ್ ಅವರಿದ್ದ ಏಕಸದಸ್ಯ ಪೀಠ ರದ್ದುಗೊಳಿಸಿದ್ದು, ಪ್ರಕರಣದ ವಿಚಾರಣೆಯನ್ನು ಕೋರ್ ಆಫ್ ಡಿಟೆಕ್ಟಿವ್ಸ್‌ಗೆ (ಸಿಒಡಿ) ವರ್ಗಾಯಿಸಿದೆ.
ಆರೋಪಿ ಅಧಿಕಾರಿ ಪೊಲೀಸ್ ಠಾಣೆಯಲ್ಲಿ ಸುಲಭವಾಗಿ ಕೈಗೆ ಸಿಗುವಾಗ ಬಂಧಿಸುವುದನ್ನು ಬಿಟ್ಟು ಅವರು ಮುಕ್ತವಾಗಿ ಸಂಚರಿಸಲು ಪೊಲೀಸರು ಅವಕಾಶ ಮಾಡಿಕೊಟ್ಟಿರುವುದಕ್ಕೆ ಇದು ಅತ್ಯುತ್ತಮ ಉದಾಹರಣೆ ಎಂದು ನ್ಯಾಯಾಲಯ ಹೇಳಿದೆ. “ಆರೋಪಿ ಅಧಿಕಾರಿಯ ವಿರುದ್ಧ ದೂರು ದಾಖಲಿಸಿರುವುದನ್ನು ಬಿಟ್ಟರೆ ಪೊಲೀಸ್ ಇಲಾಖೆಯು ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳಲು ಆರೋಪಿಗೆ ಸಹಾಯ ಮಾಡಿದೆ. ಆರೋಪಿಗೆ ಪೊಲೀಸ್ ಅಧಿಕಾರಿಗಳು ಸಹಾಯ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ” ಎಂದು ಪೀಠ ಹೇಳಿದೆ.
ಆರೋಪಿಯು ಪೊಲೀಸ್ ಅಧಿಕಾರಿ ಎಂಬುದನ್ನು ಮರೆತು ವಿಚಾರಣಾಧೀನ ನ್ಯಾಯಾಲಯವು ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ ಎಂದು ಪೀಠ ಹೇಳಿದೆ. “ಪೊಲೀಸ್ ಅಧಿಕಾರಿಯಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎನ್ನಲಾದ ಸಂತ್ರಸ್ತೆಯ ನೆರವಿಗೆ ನ್ಯಾಯಾಲಯ ಧಾವಿಸಬೇಕು… ಪ್ರಕರಣದ ವಾಸ್ತವಿಕ ಅಂಶಗಳ ಮೇಲೆ ಗಮನಹರಿಸದೆ, ಆರೋಪಿಯು ಪೊಲೀಸ್ ಅಧಿಕಾರಿ ಎಂಬುದನ್ನು ಪರಿಗಣಿಸದೆ, ವಿಶೇಷವಾಗಿ ಅಧಿಕಾರಿಯ ವಿರುದ್ಧ ಐಪಿಸಿಯ ಸೆಕ್ಷನ್ 376ರ ಅಡಿ ದೂರು ದಾಖಲಿಸಿದಾಗಲೂ ವಿಚಾರಣಾಧೀನ ನ್ಯಾಯಾಲಯವು ಅದರಲ್ಲೂ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ” ಎಂದು ಹೈಕೋರ್ಟ್ ಹೇಳಿದ್ದು, ವಿಚಾರಣಾಧೀನ ನ್ಯಾಯಾಲಯದ ಆದೇಶವನ್ನು ಬದಿಗೆ ಸರಿಸಿದೆ.
“ಅಧಿಕಾರಿಯಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎನ್ನಲಾದ ಸಂತ್ರಸ್ತೆ ಕೆಳಹಂತದಿಂದ ಮೇಲ್ಮಟ್ಟದ ಅಧಿಕಾರಿಗಳು, ಗೃಹ ಸಚಿವರು ಮತ್ತು ಮುಖ್ಯಮಂತ್ರಿಗೆ ದೂರು ವರ್ಗಾಯಿಸಿದ್ದರೂ ಯಾವುದೇ ಕ್ರಮವಾಗದಿದ್ದಾಗ ನ್ಯಾಯಾಲಯವು ಸಂತ್ರಸ್ತೆಯ ನೆರವಿಗೆ ಧಾವಿಸಬೇಕು” ಎಂದು ಆದೇಶದಲ್ಲಿ ಹೇಳಲಾಗಿದೆ.
ಸಂತ್ರಸ್ತೆಯು ತನ್ನ ಲ್ಯಾಪ್‌ಟಾಪ್ ಕಳವಾಗಿದ್ದರ ಸಂಬಂಧ ದೂರು ನೀಡಲು ಠಾಣೆಗೆ ತೆರಳಿದ್ದಾಗ ಆರೋಪಿಯ ಪರಿಚಯವಾಗಿತ್ತು. ವಿವಾಹವಾಗುವುದಾಗಿ ನಂಬಿಸಿ ಆರೋಪಿತ ಅಧಿಕಾರಿಯು ಆಕೆಯನ್ನು ಲಾಡ್ಜ್‌ಗೆ ಕರೆದೊಯ್ದಿದ್ದರು. ವಿವಾಹವಾಗುವ ಭರವಸೆ ನೀಡಿ ಲೈಂಗಿಕ ಸಂಬಂಧಕ್ಕೆ ಅಧಿಕಾರಿ ಒತ್ತಾಯಿಸಿದ್ದು, ಆಕೆ ಅದನ್ನು ನಿರಾಕರಿಸಿದ್ದರು ಎನ್ನಲಾಗಿದೆ. ಆಗ ಅಧಿಕಾರಿಯು ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಮಧ್ಯೆ, ಅದಾಗಲೇ ಅಧಿಕಾರಿಗೆ ವಿವಾಹವಾಗಿದೆ ಎಂಬ ಅಂಶ ಬೆಳಕಿಗೆ ಬಂದಿತ್ತು. ಅಧಿಕಾರಿಯ ಸಂಬಂಧಿಗಳು ಅವರ ವಿರುದ್ಧ ದೂರುವುದನ್ನು ನಿಲ್ಲಿಸುವಂತೆ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಇದ್ಯಾವುದನ್ನೂ ಲೆಕ್ಕಿಸದ ಸಂತ್ರಸ್ತೆಯು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂದರ್ಭದಲ್ಲಿ ವಿಚಾರಣೆಗೆ ಸಂತ್ರಸ್ತೆಯನ್ನು ಅನೇಕ ಬಾರಿ ಠಾಣೆಗೆ ಕರೆಸಿದ ಪೊಲೀಸ್ ಇನ್ಸ್‌ಪೆಕ್ಟರ್, ಇತರೆ ಅಧಿಕಾರಿಗಳ ಸಮ್ಮುಖದಲ್ಲಿ ಆಕೆಗೆ ಬೆದರಿಕೆಯೊಡ್ಡಿ, ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮೂರು ದಿನ ಕಾನೂನುಬಾಹಿರವಾಗಿ ಕಸ್ಟಡಿಯಲ್ಲಿಟ್ಟು ಬಳಿಕ ನನ್ನನ್ನು ಮನೆಗೆ ಕಳುಹಿಸಲಾಗಿತ್ತು ಎಂದು ಸಂತ್ರಸ್ತೆ ಆರೋಪಿಸಿದ್ದರು.
ಬಳಿಕ, ಸಂತ್ರಸ್ತೆಯು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬೆಳ್ತಂಗಡಿಯ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಿಗೆ ತಮ್ಮ ಅಹವಾಲನ್ನು ವಿವರಿಸಿ ದೂರು ನೀಡಿದ್ದರು. ಆರೋಪಿಯ ವಿರುದ್ಧ ಎಫ್‌ಐಆರ್ ದಾಖಲಾಗುತ್ತಿದ್ದಂತೆ ಆರೋಪಿ ಅಧಿಕಾರಿಯನ್ನು ಅಮಾನತು ಮಾಡಲಾಗಿತ್ತು. ಇದರ ಬೆನ್ನಿಗೇ ಆರೋಪಿ ಅಧಿಕಾರಿ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದು, ವಿಚಾರಣಾಧೀನ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಹೀಗಾಗಿ ಸಂತ್ರಸ್ತೆಯು ಹೈಕೋರ್ಟ್ ಮೆಟ್ಟಿಲೇರಿದ್ದು, ನಿರೀಕ್ಷಣಾ ಜಾಮೀನು ರದ್ದತಿಗೆ ಕೋರಿದ್ದರು.
ನ್ಯಾಯದಾನ ಕೋರಿದ್ದಕ್ಕಾಗಿ ಪೊಲೀಸರಿಂದ ಹಿಂಸೆಗೆ ಒಳಗಾಗಿದ್ದು, ನನ್ನ ಮೂಲಭೂತ ಹಕ್ಕುಗಳು ಉಲ್ಲಂಘನೆಯಾಗಿವೆ. ಸಂಬಂಧಪಟ್ಟ ಪ್ರಾಧಿಕಾರವೂ ಯಾವುದೇ ಕ್ರಮಕೈಗೊಂಡಿಲ್ಲ. ನನ್ನ ಚಾರಿತ್ರ್ಯ ಹರಣ ಮಾಡಲಾಗಿದ್ದು, ಚಿತ್ರಹಿಂಸೆ ನೀಡಲಾಗಿದೆ. ಹೀಗಾಗಿ, ಆರೋಪಿಯ ನಿರೀಕ್ಷಣಾ ಜಾಮೀನು ರದ್ದು ಮಾಡಿ, ಪ್ರಕರಣವನ್ನು ಸಿಒಡಿಗೆ ವಹಿಸಬೇಕು ಎಂದು ಖುದ್ದು ಹಾಜರಿದ್ದ ಸಂತ್ರಸ್ತೆ ಕೋರಿದ್ದರು.
ಮತ್ತೊಂದು ಕಡೆ ಆರೋಪಿಯು ವಿಶೇಷ ಸಂದರ್ಭಗಳಲ್ಲಿ ಮಾತ್ರ ಸಿಆರ್‌ಪಿಸಿ ಸೆಕ್ಷನ್ 482 ಉಲ್ಲೇಖಿಸಿ ನಿರೀಕ್ಷಣಾ ಜಾಮೀನು ರದ್ದುಗೊಳಿಸಬಹುದು. ಎರಡನೆಯದಾಗಿ, ಅರ್ಜಿದಾರೆಯು ಇತರ ವಿರುದ್ಧ ದೂರು ನೀಡುವ ಚಾಳಿ ಹೊಂದಿದ್ದಾರೆ ಎಂದಿದ್ದರು.
ವಾಸ್ತವಿಕ ಅಂಶಗಳನ್ನು ಗಮನಿಸಿದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಯುತ ತನಿಖೆ ನಡೆದಿಲ್ಲ ಎಂದು ನ್ಯಾಯಾಲಯ ಹೇಳಿದೆ. “ಸ್ಥಳೀಯ ಪೊಲೀಸರ ಮೇಲೆ ಗಂಭೀರ ಆರೋಪ ಮಾಡಿದಾಗಲೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯು ಅದೇ ಠಾಣೆಯ ಪೊಲೀಸರಿಗೆ ತನಿಖೆಯ ಜಬಾಬ್ದಾರಿ ವಹಿಸಿದ್ದಾರೆ. ಇನ್‌ಸ್ಪೆಕ್ಟರ್, ಸಬ್ ಇನ್‌ಸ್ಪೆಕ್ಟರ್ ಮತ್ತು ಇತರೆ ಅಧಿಕಾರಿಗಳ ವಿರುದ್ಧ ನಿರ್ದಿಷ್ಟ ಆರೋಪ ಮಾಡಿದಾಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯು ನ್ಯಾಯಯುತವಾಗಿ ತನಿಖೆ ನಡೆಸುವ ದೃಷ್ಟಿಯಿಂದ ತನಿಖಾಧಿಕಾರಿಯನ್ನು ಬದಲಿಸಬೇಕಿತ್ತು. ಆದರೆ, ಅದನ್ನು ಮಾಡಲಾಗಿಲ್ಲ” ಎಂದಿದೆ.
ದೂರುದಾರ ಮಹಿಳೆಯ ನಡತೆ ಸರಿ ಇಲ್ಲ ಎಂದರೂ ಪೊಲೀಸ್ ಅಧಿಕಾರಿಯು ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುವಂತಿಲ್ಲ ಎಂದಿರುವ ನ್ಯಾಯಾಲಯವು “ಇಡೀ ಪೊಲೀಸ್ ವ್ಯವಸ್ಥೆಯು ಸಂತ್ರಸ್ತೆಯ ನಡತೆ ಸರಿ ಇಲ್ಲ ಎಂಬ ತೀರ್ಮಾನಕ್ಕೆ ಬಂದಿದೆ. ಒಂದು ಕ್ಷಣ ಸಂತ್ರಸ್ತೆಯ ನಡತೆ ಸರಿ ಇಲ್ಲ ಎಂದೇ ಒಪ್ಪಿಕೊಂಡರೂ ಜನರ ರಕ್ಷಣೆಯ ಹೊಣೆ ಹೊತ್ತ ವ್ಯಕ್ತಿ ತನ್ನ ಅಧಿಕಾರ ದುರ್ಬಳಕೆ ಮಾಡಿಕೊಳ್ಳಬಹುದೇ” ಎಂದು ಪ್ರಶ್ನಿಸಿದೆ.
ಅಧಿಕಾರಿಯನ್ನು ಅಮಾನತು ಮಾಡುವುದರಿಂದ ತನಿಖೆ ನ್ಯಾಯಯುತವಾಗಿ ನಡೆಯುತ್ತದೆ ಎಂಬ ಖಾತರಿ ಇಲ್ಲ. ವಿಚಾರಣಾಧೀನ ನ್ಯಾಯಾಲಯದ ಮುಂದೆ ಆರೋಪಿತರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಯುವಾಗ ಪೊಲೀಸ್ ಅಧಿಕಾರಿಗಳು ದಾಖಲೆಗಳನ್ನು ಸಲ್ಲಿಸಿದೆ ಮುಚ್ಚಿ ಹಾಕಿದ್ದಾರೆ ಎಂದಿದೆ. “ಆರೋಪಿಯ ವಿರುದ್ಧ ಮೇಲ್ನೋಟಕ್ಕೆ ಕಾಣುವಂಥ ಯಾವುದೇ ದಾಖಲೆಗಳು ಇಲ್ಲ ಎಂದು ವಿಚಾರಣಾಧೀನ ನ್ಯಾಯಾಲಯದ ನ್ಯಾಯಾಧೀಶರು ನಿರೀಕ್ಷಣಾ ಜಾಮೀನು ನೀಡಲು ನಿರ್ಧರಿಸಿದ್ದಾರೆ. ಸಂತ್ರಸ್ತೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾಳೆ ಎಂಬುದಕ್ಕೆ ಸಂಬಂಧಿಸಿದಂತೆ ಅಗತ್ಯ ದಾಖಲೆಯನ್ನು ನ್ಯಾಯಾಲಯದ ಮುಂದಿಡದಿರುವ ಮೂಲಕ ಪೊಲೀಸರು ಎಲ್ಲವನ್ನೂ ಮುಚ್ಚಿ ಹಾಕಿದ್ದಾರೆ” ಎಂದು ನ್ಯಾ. ಸಂದೇಶ್ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ, ನಿರೀಕ್ಷಣಾ ಅರ್ಜಿಯನ್ನು ತಿರಸ್ಕರಿಸಿದಿದ್ದಲ್ಲಿ ಆರೋಪಿಯು ಸಾಕ್ಷ್ಯ ನಾಶಮಾಡುವ ಶಂಕೆಯನ್ನು ನ್ಯಾಯಾಲಯವು ವ್ಯಕ್ತಪಡಿಸಿತು. ಮುಂದುವರೆದು ಆರೋಪಿ ಅಧಿಕಾರಿಗೆ ನೀಡಿದ್ದ ನಿರೀಕ್ಷಣಾ ಜಾಮೀನನ್ನು ರದ್ದುಪಡಿಸಿತು.