ಅತ್ಯಾಚಾರ ಸಂತ್ರಸ್ತೆಯ ಪರೀಕ್ಷೆ: ಮಹಿಳಾ ವೈದ್ಯರೇ ನಡೆಸಲು ಬಿಎನ್‌ಎಸ್‌ಎಸ್‌ ತಿದ್ದುಪಡಿಗೆ ಕೇಂದ್ರಕ್ಕೆ ನಿರ್ದೇಶನ

ಸಿಆರ್‌ಪಿಸಿಯಲ್ಲಿನ ಅಸಮಂಜಸತೆ ಗುರುತಿಸದೇ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಸಂತ್ರಸ್ತರ ವೈದ್ಯಕೀಯ ಪರೀಕ್ಷೆಗೆ ಸಂಬಂಧಿಸಿದ ಸಿಆರ್‌ಪಿಸಿ ನಿಬಂಧನೆಯನ್ನು ಅಕ್ಷರಶಃ ಬಿಎನ್‌ಎಸ್‌ಎಸ್‌ಗೆ ನಕಲು ಮಾಡಲಾಗಿದೆ ಎಂದು ಹೇಳಲಾಗಿದೆ.
Bharatiya Nyaya Sanhita, 2023
Bharatiya Nyaya Sanhita, 2023
Published on

ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯಕ್ಕೆ ತುತ್ತಾದ ವಯಸ್ಕ ಸಂತ್ರಸ್ತೆಯರ ಖಾಸಗಿತನದ ಹಕ್ಕನ್ನು ರಕ್ಷಿಸುವ ನಿಟ್ಟಿನಲ್ಲಿ ಅವರ ಆರೋಗ್ಯವನ್ನು ಮಹಿಳಾ ವೈದ್ಯರು ತಪಾಸಣೆ ನಡೆಸುವಂತೆ ಈಚೆಗೆ ಜಾರಿಗೊಳಿಸಿರುವ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಗೆ (ಬಿಎನ್‌ಎಸ್‌ಎಸ್‌) ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಈಚೆಗೆ ನಿರ್ದೇಶಿಸಿದೆ.

ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಬಿಹಾರ ಮೂಲದ ಅಜಯ್‌ ಕುಮಾರ್‌ ಬೆಹೆರಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಎಂ ಜಿ ಉಮಾ ಅವರ ಏಕಸದಸ್ಯ ಪೀಠ ಈಚೆಗೆ ತಿರಸ್ಕರಿಸಿದೆ.

ಬಿಎನ್‌ಎಸ್‌ಎಸ್‌ನ ಸೆಕ್ಷನ್‌ 184ಕ್ಕೆ ಸೂಕ್ತ ತಿದ್ದುಪಡಿ ಮಾಡುವವರೆಗೆ ಅತ್ಯಾಚಾರ ಸಂತ್ರಸ್ತೆಯರ ವೈದ್ಯಕೀಯ ಪರೀಕ್ಷೆಯನ್ನು ನೋಂದಾಯಿತ ಮಹಿಳಾ ವೈದ್ಯಾಧಿಕಾರಿ ಮಾಡುವುದನ್ನು ಖಾತರಿಪರಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನ್ಯಾಯಾಲಯ ನಿರ್ದೇಶಿಸಿದೆ.

ಬಿಎನ್‌ಎಸ್‌ಎಸ್‌ ಸೆಕ್ಷನ್‌ 184 ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ವಯಸ್ಕ ಮಹಿಳೆಯರ ವೈದ್ಯಕೀಯ ಪರೀಕ್ಷೆಗೆ ಸಂಬಂಧಿಸಿದ್ದು, ಈಗ ಹಿಂಪಡೆಯಲಾಗಿರುವ ಸಿಆರ್‌ಪಿಸಿಯ 164ಎ ಅನ್ನು ಅಕ್ಷರಶಃ ನಕಲು ಮಾಡಲಾಗಿದೆ ಎಂದು ಪೀಠ ಹೇಳಿದೆ. ಹೊಸ ಮತ್ತು ಹಳೆಯ ಎರಡೂ ಸೆಕ್ಷನ್‌ಗಳಲ್ಲಿ ಸಂತ್ರಸ್ತೆಯ ಪರೀಕ್ಷೆಯನ್ನು ಮಹಿಳೆ ಅಥವಾ ಪುರುಷ ವೈದ್ಯಾಧಿಕಾರಿ ಮಾಡಬೇಕು ಎಂದು ಹೇಳಲಾಗಿದೆ ಎಂದು ನ್ಯಾಯಾಲಯ ವಿವರಿಸಿದೆ.

ಬಿಎನ್‌ಎಸ್‌ಎಸ್‌ ಮತ್ತು ಸಿಆರ್‌ಪಿಸಿಯ ಎರಡೂ ಸೆಕ್ಷನ್‌ಗಳು ಪೋಕ್ಸೊ ಕಾಯಿದೆಯ ನಿಬಂಧನೆಗಳಿಗೆ ವಿರುದ್ಧವಾಗಿದೆ. ಪೋಕ್ಸೊ ಕಾಯಿದೆಯಲ್ಲಿ ಅಪ್ರಾಪ್ತ ಸಂತ್ರಸ್ತೆಯರ ವೈದ್ಯಕೀಯ ಪರೀಕ್ಷೆಯನ್ನು ಮಹಿಳಾ ವೈದ್ಯಾಧಿಕಾರಿ ಮಾತ್ರ ಮಾಡಬೇಕು ಎಂದು ಹೇಳಲಾಗಿದೆ. ಅಂತೆಯೇ, ಸಿಆರ್‌ಪಿಸಿ ಮತ್ತು ಬಿಎನ್‌ಎಸ್‌ಎಸ್‌ ಸೆಕ್ಷನ್‌ಗಳಾದ 53 ಮತ್ತು 51ರಲ್ಲಿ ಮಹಿಳಾ ಆರೋಪಿಗಳನ್ನು ಮಹಿಳಾ ಅಧಿಕಾರಿ ಅಥವಾ ಕನಿಷ್ಠ ಮಹಿಳಾ ವೈದ್ಯಾಧಿಕಾರಿಯ ಉಸ್ತುವಾರಿಯಲ್ಲಿ ಮಾತ್ರ ಪರೀಕ್ಷೆಗೆ ಒಳಪಡಿಸಬೇಕು ಎಂದು ಹೇಳಲಾಗಿದೆ ಎಂದು ನ್ಯಾಯಾಲಯ ಹೇಳಿದೆ.

“ಅಂತೆಯೇ, ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯನ್ನು ಮಹಿಳಾ ವೈದ್ಯ ಸಿಬ್ಬಂದಿ ಅಥವಾ ಅವರ ಉಸ್ತುವಾರಿಯಲ್ಲಿ ಪರೀಕ್ಷೆಗೆ ಒಳಪಪಡಿಸಬಾರದು. ಇಂಥ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯರು ಏಕೆ ಪುರುಷ ವೈದ್ಯಾಧಿಕಾರಿಗಳಿಂದ ದೈಹಿಕ ಪರೀಕ್ಷೆಗೆ ಒಳಗಾಗುವ ಮೂಲಕ ಮುಜುಗರ ಅನುಭವಿಸಬೇಕು ಎಂಬುದಕ್ಕೆ ಯಾವುದೇ ಕಾರಣಗಳಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ಮುಂದುವರಿದು ನ್ಯಾಯಾಲಯವು ಆರೋಪಿಯ ಹಕ್ಕುಗಳನ್ನು ಕಾನೂನು ರಕ್ಷಿಸುತಿದ್ದು, ಸಂತ್ರಸ್ತರ ಹಕ್ಕು ರಕ್ಷಿಸುವಲ್ಲಿ ವಿಫಲವಾಗಿದೆ. ಇದರಿಂದ ಸಾಮಾನ್ಯ ಜನರ ಮನಸ್ಸಿನಲ್ಲಿ ಆರೋಪಿಗಳ ಹಕ್ಕಿನ ಬಗ್ಗೆ ವ್ಯವಸ್ಥೆ ಹೆಚ್ಚು ಉತ್ಸುಕವಾಗಿದ್ದು, ಸಂತ್ರಸ್ತರ ಬಗ್ಗೆ ಅದೇ ನಿಲುವು ಹೊಂದಿಲ್ಲ ಎಂಬ ಭಾವನೆ ಉಂಟು ಮಾಡಬಹುದು ಎಂದು ಬೇಸರಿಸಿದೆ.

ಈ ನೆಲೆಯಲ್ಲಿ ಪರಿಸ್ಥಿತಿಯ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಕ್ಷಣ ಗಮನಹರಿಸಬೇಕು. ಬಿಎನ್‌ಎಸ್‌ಎಸ್‌ನ ಸೆಕ್ಷನ್‌ 184ಕ್ಕೆ ತಿದ್ದುಪಡಿ ತರಲು ಸಲಹೆ ಮಾಡಬೇಕು ಎಂದು ಪೀಠ ಹೇಳಿದೆ.

ಹಾಲಿ ಪ್ರಕರಣದಲ್ಲಿ ಸಂತ್ರಸ್ತೆಯನ್ನು ಎರಡು ಆಸ್ಪತ್ರೆಗಳಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಮೊದಲಿಗೆ ಖಾಸಗಿ ಆಸ್ಪತ್ರೆಯಲ್ಲಿ ಪುರುಷ ವೈದ್ಯಾಧಿಕಾರಿ ಆರು ಗಂಟೆ ಸಂತ್ರಸ್ತೆಯ ದೈಹಿಕ ಪರೀಕ್ಷೆ ನಡೆಸಿದ್ದಾರೆ. ಅದಾಗ್ಯೂ, ಅವರು ಪ್ರಾಥಮಿಕ ವೈದ್ಯಕೀಯ ಪರಿಶೀಲನಾ ವರದಿ ನೀಡಲು ವಿಫಲರಾಗಿದ್ದಾರೆ ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.

ಅರ್ಜಿದಾರನ ಪರವಾಗಿ ವಕೀಲ ಎನ್‌ ಎನ್‌ ಅಭಿಷೇಕ್‌ ಮತ್ತು ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎ ಬೆಳ್ಳಿಯಪ್ಪ ಮತ್ತು ಸರ್ಕಾರಿ ಪ್ಲೀಡರ್‌ ಕೆ ಪಿ ಯಶೋಧಾ ವಾದಿಸಿದ್ದರು.

Attachment
PDF
Ajay kumar Behera Vs State of Karnataka.pdf
Preview
Kannada Bar & Bench
kannada.barandbench.com