ಪತ್ನಿ ಹಾಗೂ ವಿಕಲಚೇತನ ಪುತ್ರನಿಗೆ ಜೀವನಾಂಶ ಪಾವತಿಸುವ ನಿಟ್ಟಿನಲ್ಲಿ ಪತಿಯ ಸ್ಥಿರ ಆಸ್ತಿಯಲ್ಲಿ ಋಣಭಾರ (ಚಾರ್ಚ್ ಆನ್ ಇಮ್ಮೂವಬಲ್ ಪ್ರಾಪರ್ಟಿ) ಸೃಷ್ಟಿಸಲು ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶಿಸಿದೆ.
ತನ್ನ ಹೊಣೆಗಾರಿಕೆ ನಿಭಾಯಿಸುವ ನಿಟ್ಟಿನಲ್ಲಿ ಪತಿಯು ಕಾರ್ಯತತ್ಪರವಾಗಿಲ್ಲ. ಹೀಗಾಗಿ, ಜೀವನಾಂಶ ಪಾವತಿಸುವಂತೆ ಮಾಡಲು ಆಸ್ತಿಯ ಮೇಲೆ ಋಣಭಾರ ಸೃಷ್ಟಿಸುವುದು ಅಗತ್ಯ ಎಂದು ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಮತ್ತು ಅನಂತ ರಾಮನಾಥ್ ಹೆಗ್ಡೆ ಅವರ ನೇತೃತ್ವದ ವಿಭಾಗೀಯ ಪೀಠ ಹೇಳಿದೆ.
“ಮೊದಲನೇ ಪ್ರತಿವಾದಿಯಾದ ಪತಿಯು ತನ್ನ ಕರ್ತವ್ಯದ ಹೊಣೆಗಾರಿಕೆ ನಿಭಾಯಿಸಲು ವಿಫಲವಾಗಿರುವುದರಿಂದ ಫಿರ್ಯಾದಿಗಳಿಗೆ ಜೀವನಾಂಶ ಪಾವತಿಸುವಂತೆ ಮಾಡಲು ಪತಿಯ ಆಸ್ತಿಗೆ ಶುಲ್ಕ ವಿಧಿಸುವುದು ಅಗತ್ಯವಾಗಿದೆ” ಎಂದು ಹೇಳಿದೆ.
2006ರಲ್ಲಿ ಪತ್ನಿ ಮತ್ತು ಆಕೆಯ ಪುತ್ರನಿಗೆ ಕ್ರಮವಾಗಿ ಮಾಸಿಕ ₹2,000 ಮತ್ತು ₹1,000 ಪಾವತಿಸಲು ನ್ಯಾಯಾಲಯ ಆದೇಶಿಸಿತ್ತು. ವರ್ಷದ ಬಳಿಕ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಜೀವನಾಂಶ ಹೆಚ್ಚಿಸುವಂತೆ ಪತ್ನಿ ಮತ್ತು ಪುತ್ರ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಅರ್ಜಿದಾರರ ₹5,000 ಬೇಡಿಕೆಗೆ ಬದಲಾಗಿ ಕೌಟುಂಬಿಕ ನ್ಯಾಯಾಲಯವು ಜೀವನಾಂಶವನ್ನು ಮಾಸಿಕ ₹3,000 ಕ್ಕೆ ಹೆಚ್ಚಳ ಮಾಡಿತ್ತು. ಇದನ್ನು ಪ್ರಶ್ನಿಸಿ ಪತ್ನಿ ಮತ್ತು ಪುತ್ರ ಹೈಕೋರ್ಟ್ ಕದತಟ್ಟಿದ್ದರು.
ಜೀವನಾಂಶ ಒಂದೇ ಆದಾಯದ ಮೂಲವಾಗಿದ್ದು, ಪತಿಯು ಹಿಂದಿನ ಬಾಕಿಯನ್ನೂ ಪಾವತಿಸಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಅಲ್ಲದೇ, ಪತಿಗೆ ಸ್ಥಿರಾಸ್ತಿ ಇದ್ದು, ಅವರು ಮಾಸಿಕ ₹5,000 ಜೀವನಾಂಶ ಪಾವತಿಸಲು ಶಕ್ತರಾಗಿದ್ದಾರೆ ಎಂಧು ಪೀಠಕ್ಕೆ ತಿಳಿಸಿದ್ದರು.
2006ರಲ್ಲಿ ಮೊದಲ ಬಾರಿಗೆ ಜೀವನಾಂಶ ಆದೇಶ ಮಾಡಲಾಗಿದೆ. ಅಲ್ಲಿಂದ ಇಲ್ಲಿಯವರೆಗೆ ಗಣನೀಯವಾಗಿ ಜೀವನವೆಚ್ಚ ಹೆಚ್ಚಳವಾಗಿದೆ. ಪುತ್ರ ವಯಸ್ಕನಾಗಿದ್ದರೂ ವಿಕಲಚೇತನನಾಗಿದ್ದಾನೆ ಎಂದು ನ್ಯಾಯಾಲಯ ಹೇಳಿದೆ.
ಪತಿಗೆ ಆಸ್ತಿ ಇದೆ ಎಂಬುದನ್ನು ತೋರಿಸಲು ಮೇಲ್ಮನವಿದಾರರು ಅಗತ್ಯ ದಾಖಲೆಗಳನ್ನು ಸಲ್ಲಿಸಿಲ್ಲದ ಕಾರಣಕ್ಕಾಗಿ ಕೌಟುಂಬಿಕ ನ್ಯಾಯಾಲಯವು ಮೇಲ್ಮನವಿದಾರರ ಮನವಿಯನ್ನು ಭಾಗಶಃ ತಿರಸ್ಕರಿಸಬಾರದಿತ್ತು ಎಂದು ಪೀಠ ಹೇಳಿದೆ.
ಪತಿಯು ಸ್ಥಿರಾಸ್ತಿ ಹೊಂದಿರುವ ದಾಖಲೆಗಳನ್ನು ಪರಿಶೀಲಿಸಿದ ಹೈಕೋರ್ಟ್, ಪತ್ನಿ ಮತ್ತು ಪುತ್ರ ಮಾಸಿಕ ತಲಾ ₹5,000 ಜೀವನಾಂಶಕ್ಕೆ ಅರ್ಹರಾಗಿದ್ದಾರೆ ಎಂದು ಎಂದು ಹೇಳಿದೆ.
ಅಲ್ಲದೇ, ಕೌಟುಂಬಿಕ ನ್ಯಾಯಾಲಯವು ದಾವೆ ಹೂಡಿದಾಗಿನಿಂದ ಜೀವನಾಂಶ ಪಾವತಿಸಲು ಆದೇಶಿಸಿಲ್ಲ. ಇದಕ್ಕೆ ಯಾವುದೇ ಸಮರ್ಥನೆಯನ್ನೂ ನೀಡಿಲ್ಲ. ಹೀಗಾಗಿ, ಜೀವನಾಂಶ ಹೆಚ್ಚಳ ಕೋರಿ ಸಲ್ಲಿಸಿರುವ ದಿನಾಂಕದಿಂದ ಜೀವನಾಂಶ ಪಾವತಿಸಬೇಕು ಎಂದು ಹೈಕೋರ್ಟ್ ಹೇಳಿದೆ.
ಪ್ರತಿವಾದಿಯಾಗಿರುವ ಪತಿಯು ಬಾಕಿ ಉಳಿದಿರುವ ಜೀವನಾಂಶ ವೆಚ್ಚವನ್ನು ಪಾವತಿಸದೇ ಇರುವುದರಿಂದ ಆತನ ಆಸ್ತಿಯ ಮೇಲೆ ಋಣಭಾರ ಸೃಷ್ಟಿಸುವ ಮೂಲಕ ಜೀವನಾಂಶ ಪಡೆಯಲು ಆದೇಶಿಸಿದೆ.
ಆಸ್ತಿ ವರ್ಗಾವಣೆ ಕಾಯಿದೆ ಸೆಕ್ಷನ್ 39ರ ಅಡಿ ಜೀವನಾಂಶದ ಹಿಂದಿನ ಬಾಕಿಯನ್ನು ಆಸ್ತಿಯ ಮೇಲೆ ಋಣಭಾರ ಸೃಷ್ಟಿಸುವ ಮೂಲಕ ಪಡೆಯಬಹುದು ಎಂದು ಆದೇಶಿಸಿದೆ.
“ಮೊದಲನೇ ಪ್ರತಿವಾದಿಯಾದ ಪತಿಯ ಹೆಸರಿನಲ್ಲಿ ಆಸ್ತಿ ಇದೆ… ಇದಲ್ಲದೆ ಪ್ರತಿವಾದಿಯ ಇನ್ನಾವುದೇ ಆಸ್ತಿಯ ವಿವರವನ್ನು ಫಿರ್ಯಾದಿಯು ನೀಡಿದರೆ ಅದರ ಮೇಲೆಯೂ ಈ ನ್ಯಾಯಾಲಯ ಆದೇಶಿಸಿದ ಜೀವನಾಂಶದ ಋಣಭಾರ ಸೃಷ್ಟಿಯಾಗುತ್ತದೆ” ಎಂದು ನ್ಯಾಯಾಲಯ ಹೇಳಿದ್ದು, ಪತ್ನಿ ಮತ್ತು ಪುತ್ರ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದೆ.
ಮೇಲ್ಮನವಿದಾರರಾದ ತಾಯಿ ಮತ್ತು ಮಗನ ಪರವಾಗಿ ವಕೀಲ ಎಸ್ ಎನ್ ಸಮೀರ್ ವಾದಿಸಿದ್ದರು.