ಕೋವಿಡ್ ಮೂರನೇ ಅಲೆಯಿಂದ ನ್ಯಾಯಾಲಯಗಳು ಸ್ಥಗಿತಗೊಳ್ಳದಂತೆ ಕ್ರಮವಹಿಸಿ: ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಓಕಾ

ಯುವ ವಕೀಲರ ಮೇಲೆ ಕೋವಿಡ್ ಆರ್ಥಿಕವಾಗಿ ಹೆಚ್ಚು ಪ್ರಭಾವ ಬೀರಿದೆ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ತಿಳಿಸಿದರು.
ಕೋವಿಡ್ ಮೂರನೇ ಅಲೆಯಿಂದ ನ್ಯಾಯಾಲಯಗಳು ಸ್ಥಗಿತಗೊಳ್ಳದಂತೆ ಕ್ರಮವಹಿಸಿ: ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಓಕಾ
Justice AS Oka

ದೊಡ್ಡ ಪ್ರಮಾಣದಲ್ಲಿ ಪ್ರಕರಣಗಳು ಬಾಕಿ ಉಳಿದಿರುವುದರಿಂದ ಕೋವಿಡ್‌ ಸಾಂಕ್ರಾಮಿಕದಿಂದಾಗಿ ಮತ್ತೊಮ್ಮೆ ನ್ಯಾಯಾಲಯಗಳು ಸ್ಥಗಿತಗೊಳ್ಳಬಾರದು ಎಂದು ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ತಿಳಿಸಿದರು. ಸಾಂಕ್ರಾಮಿಕದ ಕಾರಣದಿಂದಾಗಿ ನ್ಯಾಯಾಂಗ 2020 ಮತ್ತು 2021ರಲ್ಲಿ ತೊಂದರೆ ಅನುಭವಿಸಿತು ಎಂದು ಅವರು ಹೇಳಿದರು.

ಬೀದರ್ ಜಿಲ್ಲೆಯಲ್ಲಿ ನ್ಯಾಯಾಂಗ ಅಧಿಕಾರಿಗಳಿಗಾಗಿ ನಿರ್ಮಿಸಲಾದ ವಸತಿ ಸಮುಚ್ಛಯ ಮತ್ತು ವಕೀಲರ ಚೇಂಬರ್‌ಗಳನ್ನು ಗುರುವಾರ ಆನ್‌ಲೈನ್‌ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

“ನ್ಯಾಯಾಂಗವು ಕೋವಿಡ್‌ನಿಂದಾಗಿ 2020 ಮತ್ತು 2021ರಲ್ಲಿ ತೊಂದರೆ ಅನುಭವಿಸಿದೆ. ಲಾಕ್‌ಡೌನ್‌ ಮತ್ತು ಕೋವಿಡ್ ಹರಡುವಿಕೆಯಿಂದ ಸೃಷ್ಟಿಯಾದ ಸನ್ನಿವೇಶದಿಂದಾಗಿ ಹೆಚ್ಚಿನ ಸಂಖ್ಯೆಯ ಕೆಲಸದ ದಿನಗಳು ಕಳೆದುಹೋಗಿವೆ. ದೊಡ್ಡ ಮಟ್ಟದಲ್ಲಿ (ಪ್ರಕರಣಗಳು) ಬಾಕಿಯಾಗಿರುವುದನ್ನು ಗಮನಿಸಿದರೆ ಮೂರನೇ ಬಾರಿ ನ್ಯಾಯಾಲಯಗಳು ಮುಚ್ಚಬಾರದು” ಎಂದು ನ್ಯಾ. ಓಕಾ ಅಭಿಪ್ರಾಯಪಟ್ಟರು.

ನ್ಯಾಯಾಲಯಗಳು ಇನ್ನೊಮ್ಮೆ ಸ್ಥಗಿತಗೊಳ್ಳುವುದನ್ನು ತಪ್ಪಿಸಲು ಜನ ಲಸಿಕೆ ಪಡೆಯಬೇಕು, ಮುಖಗವಸುಗಳನ್ನು ಧರಿಸಬೇಕು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಅವರು ಹೇಳಿದರು.

" ಮೂರು ವಿಷಯಗಳಾದ (1) ಲಸಿಕೆ ಪಡೆಯುವಿಕೆ (2) ಮುಖಗವಸುಗಳ ನಿರಂತರ ಬಳಕೆ ಹಾಗೂ (3) ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಮೂರನೇ ಬಾರಿ ನ್ಯಾಯಾಲಯಗಳು ಸ್ಥಗಿತಗೊಳ್ಳುವುದನ್ನು ತಪ್ಪಿಸಬಹುದು. ನ್ಯಾಯಾಲಯಗಳನ್ನು ಮುಚ್ಚುವುದರಿಂದಾಗಿ ಪ್ರಕರಣಗಳು ಬಾಕಿ ಉಳಿದರೆ ದಾವೆ ಹೂಡುವವರ ಮೇಲೆ ಮಾತ್ರವಲ್ಲದೆ ವಕೀಲ ಸಮುದಾಯದ ಮೇಲೂ ಸಾಕಷ್ಟು ಪರಿಣಾಮ ಬೀರುತ್ತದೆ” ಎಂದರು.

Also Read
ವಿಡಿಯೊ ಕಾನ್ಫರೆನ್ಸ್‌ ವಿಚಾರಣೆ ವೇಳೆ ತುಂಬಾ ಎಚ್ಚರ ವಹಿಸುತ್ತೇವೆ: ಕರ್ನಾಟಕ ಹೈಕೋರ್ಟ್‌

ಯುವ ವಕೀಲರ ಮೇಲೆ ಕೋವಿಡ್‌ ಆರ್ಥಿಕವಾಗಿ ಹೆಚ್ಚು ಪ್ರಭಾವ ಬೀರಿದೆ ಎಂದು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ಗಮನ ಸೆಳೆದರು. “ವಕೀಲ ಸಮುದಾಯದ ಯುವ ಸದಸ್ಯರು ನಿಜವಾದ ಬಲಿಪಶುಗಳು. ಲಾಕ್‌ಡೌನ್‌ ಕಾರಣದಿಂದಾಗಿ ಅವರ ಆದಾಯ ಸಂಪೂರ್ಣ ನಿಂತುಹೋಯಿತು” ಎಂದ ಅವರು, ಕೋವಿಡ್‌ ಮತ್ತೊಮ್ಮೆ ಹರಡಲು ನ್ಯಾಯಾಂಗ ಮತ್ತು ವಕೀಲ ಸಮುದಾಯದ ಕೊಡುಗೆ ಇರದಂತೆ ನೋಡಿಕೊಳ್ಳಬೇಕು ಎಂಬುದಾಗಿ ತಿಳಿಸಿದರು.

“ನ್ಯಾಯಸ್ಥಾನದ ಕಾರಣಕ್ಕಾಗಿ ಮಾತ್ರವಲ್ಲದೆ ವಕೀಲ ಸಮುದಾಯದ ಅನುಕೂಲಕ್ಕಾಗಿ, ನ್ಯಾಯಾಲಯದ ಕಾರ್ಯ ಆರಂಭಿಸುವ ಮೂಲಕ ಕೋವಿಡ್‌ಗೆ ಕೊಡುಗೆ ನೀಡುವುದಿಲ್ಲ ಎಂಬುದನ್ನು ನಾವು ಖಚಿತಪಡಿಸಿಕೊಳ್ಳಬೇಕು. ಕೋವಿಡ್‌ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಮತ್ತು ಮೂರನೇ ಅಲೆಯಿಂದಾಗಿ ನ್ಯಾಯಾಲಯಗಳು ಮುಚ್ಚದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ” ಎಂದು ಅವರು ಕಿವಿಮಾತು ಹೇಳಿದರು.

ಗರಿಷ್ಠ ಸಂಖ್ಯೆಯ ಪ್ರಕರಣಗಳನ್ನು ವಿಲೇವಾರಿ ಮಾಡಲು ನ್ಯಾಯಾಂಗ ಮತ್ತು ಆಡಳಿತದೊಂದಿಗೆ ಸಹಕರಿಸುವಂತೆ ನ್ಯಾ. ಓಕಾ ಅವರು ವಕೀಲ ಸಮುದಾಯದ ಎಲ್ಲಾ ಸದಸ್ಯರಿಗೆ ಮನವಿ ಮಾಡಿದರು. ಆಧುನಿಕ ಸೌಲಭ್ಯಗಳ ಲಭ್ಯತೆಯಿಂದಾಗಿ, ವಕೀಲ ಸಮುದಾಯದ ಕಿರಿಯ ಸದಸ್ಯರು ತಮ್ಮ ಪ್ರಕರಣಗಳನ್ನು ಉತ್ತಮ ರೀತಿಯಲ್ಲಿ ಪ್ರಸ್ತುತಪಡಿಸುತ್ತಾರೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

No stories found.
Kannada Bar & Bench
kannada.barandbench.com