ಕರ್ನಾಟಕ ಉಚ್ಚ ನ್ಯಾಯಾಲಯ (ತಿದ್ದುಪಡಿ) ವಿಧೇಯಕ, ಕರ್ನಾಟಕ ಸಿವಿಲ್ ನ್ಯಾಯಾಲಯಗಳ (ತಿದ್ದುಪಡಿ) ವಿಧೇಯಕಗಳನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ಅವರು ಮಂಗಳವಾರ ವಿಧಾನಸಭೆಯಲ್ಲಿ ಮಂಡಿಸಿದ್ದಾರೆ.
ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ಎರಡನೇ ತಿದ್ದುಪಡಿ) ವಿಧೇಯಕವನ್ನು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ವಿಧಾನಸಭೆಯಲ್ಲಿ ಮಂಡಿಸಿದ್ದಾರೆ.
ಕರ್ನಾಟಕ ಉಚ್ಚ ನ್ಯಾಯಾಲಯ (ತಿದ್ದುಪಡಿ) ವಿಧೇಯಕ: ತ್ವರಿತ ವಿಲೇವಾರಿ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಕರ್ನಾಟಕ ಕಾನೂನು ಆಯೋಗವು 2023ರ ಅಕ್ಟೋಬರ್ 3ರಂದು ಉಚ್ಚ ನ್ಯಾಯಾಲಯ ಅಧಿನಿಯಮ 1961ಕ್ಕೆ ಕೆಲವು ತಿದ್ದುಪಡಿಗಳನ್ನ ಮಾಡಲು ಶಿಫಾರಸ್ಸು ಮಾಡಿದೆ. ಆದ್ದರಿಂದ ಮೊದಲನೇ ಅಪೀಲು ಮತ್ತು ಎರಡನೇ ಅಪೀಲು ಎಂಬ ಪದಗಳನ್ನು ಪುನಾ ಪರಿಭಾಷಿಸಲು ಮತ್ತು ಕೆಲವು ತತ್ವರಿಣಾಮದ ತಿದ್ದುಪಡಿಗಳನ್ನು ತರಲು ಉಚ್ಚ ನ್ಯಾಯಾಲಯ ಅಧಿನಿಯಮ 1961ಕ್ಕೆ ತಿದ್ದುಪಡಿ ಮಾಡುವುದು ಅಗತ್ಯ ಎಂದು ಪರಿಗಣಿಸಲಾಗಿದೆ.
ಮೊದಲನೇ ಅಪೀಲು: 15 ಲಕ್ಷ ರೂಪಾಯಿ ಅಥವಾ ಅದಕ್ಕೂ ಹೆಚ್ಚಿನ ಮೌಲ್ಯದ ವಿಷಯದ ಸಂಬಂಧದಲ್ಲಿನ ದಾವೆ ಅಥವಾ ಇತರೆ ವ್ಯವಹಾರಗಳಲ್ಲಿ ಹೊರಡಿಸಲಾದ ಡಿಕ್ರಿ ಅಥವಾ ಆದೇಶದ ವಿರುದ್ಧ ಎಲ್ಲಾ ಮೊದಲನೆಯ ಅಪೀಲುಗಳನ್ನು ಉಚ್ಚ ನ್ಯಾಯಾಲಯದ ಇಬ್ಬರಿಗಿಂತ ಕಡಿಮೆ ಇಲ್ಲದ ನ್ಯಾಯಾಧೀಶರುಗಳನ್ನು ಒಳಗೊಂಡ ಪೀಠವು ವಿಚಾರಣೆ ನಡೆಸಬೇಕು. ಇತರೆ ಮೊದಲನೆಯ ಅಪೀಲುಗಳನ್ನು ಹೈಕೋರ್ಟ್‌ನ ಏಕಸದಸ್ಯ ಪೀಠ ವಿಚಾರಣೆ ನಡೆಸಬೇಕು.
ಮರಣದಂಡನೆ ಅಥವಾ ಕಾರವಾಸ ಶಿಕ್ಷೆ ನೀಡಿದ ತೀರ್ಪುಗಳ ವಿರುದ್ಧ ಮತ್ತು ಮರಣದಂಡನೆ ಅಥವಾ ಆಜೀವ ಕಾರಾವಾಸದಿಂದ ಶಿಕ್ಷಿಸಬಹುದಾದ ಅಪರಾಧಗಳ ಮೊಕದ್ದಮೆಗಳಲ್ಲಿ ಖುಲಾಸೆ ಮಾಡಿರುವ ತೀರ್ಪುಗಳ ವಿರುದ್ಧದ ಎಲ್ಲಾ ಕ್ರಿಮಿನಲ್ ಅಪೀಲುಗಳನ್ನು ಉಚ್ಚ ನ್ಯಾಯಾಲಯದ ಇಬ್ಬರು ನ್ಯಾಯಾಧೀಶರಿಗಿಂತ ಕಡಿಮೆ ಇಲ್ಲದ ನ್ಯಾಯಾಧೀಶರನ್ನು ಒಳಗೊಂಡ ಒಂದು ಪೀಠ ವಿಚಾರಣೆ ನಡೆಸಬೇಕು. ಇತರೆ ಕ್ರಿಮಿನಲ್ ಅಪೀಲುಗಳನ್ನು ಹೈಕೋರ್ಟ್‌ನ ಏಕಸದಸ್ಯ ಪೀಠ ವಿಚಾರಣೆ ನಡೆಸಬೇಕು.
ಎರಡನೇ ಅಪೀಲುಗಳು: ಎಲ್ಲಾ ಎರಡನೇಯ ಅಪೀಲುಗಳನ್ನು ಹೈಕೋರ್ಟ್‌ನ ಏಕಸದಸ್ಯ ಪೀಠವು ವಿಚಾರಣೆ ಮಾಡಬೇಕು ಮತ್ತು ಇತ್ಯರ್ಥಪಡಿಸಬೇಕು.
ಮೊಕದ್ದಮೆಯು ಕಾನೂನಿನ ಗಮನಾರ್ಹ ಪ್ರಶ್ನೆ ಒಳಗೊಂಡಿದೆ ಅಥವಾ ನ್ಯಾಯೋದ್ದೇಶದ ದೃಷ್ಟಿಯಿಂದ ಆ ಮೊಕದ್ದಮೆಯು ನ್ಯಾಯಾಧೀಶರುಗಳ ಪೀಠದಿಂದ ವಿಚಾರಣೆಯಾಗಬೇಕು ಮತ್ತು ಇತ್ಯರ್ಥವಾಗಬೇಕು ಎಂಬ ಬಗ್ಗೆ ತಮಗೆ ಮನದಟ್ಟಾದರೆ ಆ ಎರಡನೇ ಅಪೀಲನ್ನು ಅಂಥ ಪೀಠಕ್ಕೆ ವಿಚಾರಣೆಗಾಗಿ ಮತ್ತು ಇತ್ಯರ್ಥಕ್ಕಾಗಿ ಕಳುಹಿಸಬಹುದು.
ಕರ್ನಾಟಕ ಸಿವಿಲ್ ನ್ಯಾಯಾಲಯಗಳ (ತಿದ್ದುಪಡಿ) ವಿಧೇಯಕ: ಕಾನೂನು ಆಯೋಗವು ಸಿವಿಲ್ ನ್ಯಾಯಾಲಯಗಳ ಅಧಿನಯಮ 1964ರ ಅಧಿನಿಯಮ 21ಕ್ಕೆ ತಿದ್ದುಪಡಿಗಳನ್ನು ಶಿಫಾರಸ್ಸು ಮಾಡಿದೆ. ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದ ಆರ್ಥಿಕ ಅಧಿಕಾರ ವ್ಯಾಪ್ತಿ ಹೆಚ್ಚಿಸಲು ಮತ್ತು ಹೈಕೋರ್ಟ್‌ನಲ್ಲಿ ಅಧಿಕ ಬಾಕಿ ಇರುವ ಪ್ರಕರಣಗಳ ಹೊರೆಯನ್ನು ಇಳಿಸುವು ಉದ್ದೇಶದಿಂದ ಈ ವಿಧೇಯಕ ತರಲಾಗಿದೆ.
ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ಎರಡನೇ ತಿದ್ದುಪಡಿ) ವಿಧೇಯಕ: ಮೋಟಾರು ವಾಹನಗಳ (ತಿದ್ದುಪಡಿ) ಅಧಿನಿಯಮ 2019ರಲ್ಲಿ ಅಳವಡಿಸಲಾದ ವಾಹನ ಎಂಬ ಪದಗಳನ್ನು ಪರಿಭಾಷಿಸುವ ಮೂಲಕ ಭಾರತ ಸರ್ಕಾರವು ಮಾಡಿದ ತಿದ್ದುಪಡಿಯನ್ನು ಜಾರಿಗೊಳಿಸಲು ಹಾಗೂ ತೆರಿಗೆಯನ್ನು ಸಂಗ್ರಹಿಸಲು ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ 1957 ಅನ್ನು ತಿದ್ದುಪಡಿ ಮಾಡುವುದು.
ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ಅಧಿನಿಯಮ 2023 ಜಾರಿಯಾಗದಿರುವುದರಿಂದ ಸದರಿ ಅಧಿನಿಯಮ ನಿರಸನಗೊಳಿಸುವುದು ಅವಶ್ಯ ಎಂದು ಈ ವಿಧೇಯಕ ತರಲಾಗಿದೆ.