ಮಣಿಪಾಲ್ ವಾಣಿಜ್ಯ ಚಿಹ್ನೆ ಉಲ್ಲಂಘನೆ: ಸಿವಿಲ್ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಕುರಿತು ಕರ್ನಾಟಕ ಹೈಕೋರ್ಟ್ ಮಾರ್ಗಸೂಚಿ

ವಾಣಿಜ್ಯ ಚಿಹ್ನೆಗೆ ಸಂಬಂಧಿಸಿದಂತೆ ತಾನು ನೀಡಿದ್ದ ತಡೆಯಾಜ್ಞೆ ಆದೇಶ ಉಲ್ಲಂಘಿಸಿದ್ದಕ್ಕಾಗಿ ಟಿ ಸುಧಾಕರ್ ಪೈ ಅವರಿಗೆ ಬೆಂಗಳೂರಿನ ವಾಣಿಜ್ಯ ನ್ಯಾಯಾಲಯ ವಿಧಿಸಿದ್ದ ಸಿವಿಲ್ ಜೈಲು ಶಿಕ್ಷೆಯನ್ನು ಹೈಕೋರ್ಟ್ 15 ದಿನಗಳಿಗೆ ಇಳಿಸಿದೆ.
Karnataka High Court
Karnataka High Court

ಸಿವಿಲ್‌ ಪ್ರಕರಣಗಳಲ್ಲಿ ಸಿವಿಲ್‌ ನ್ಯಾಯಾಲಯದ ಆದೇಶಗಳಿಗೆ ಉದ್ದೇಶಪೂರ್ವಕವಾಗಿ ಅಸಹಕಾರ ತೋರಿದರೆ, ಎಂತಹ ಸನ್ನಿವೇಶಗಳಲ್ಲಿ ಜೈಲು ಶಿಕ್ಷೆ (ಸಿವಿಲ್‌ ಸೆರೆವಾಸ) ವಿಧಿಸಬಹುದು ಎಂಬುದರ ಕುರಿತು ಕರ್ನಾಟಕ ಹೈಕೋರ್ಟ್‌ ಈಚೆಗೆ ವಿವರಣಾತ್ಮಕ ಮಾರ್ಗಸೂಚಿಗಳನ್ನು ನೀಡಿದೆ [ಟಿ ಸುಧಾಕರ ಪೈ ಮತ್ತಿತರರು ಹಾಗೂ ಮಣಿಪಾಲ್‌ ಉನ್ನತ ಶಿಕ್ಷಣ ಅಕಾಡೆಮಿ ಇನ್ನಿತರರ ನಡುವಣ ಪ್ರಕರಣ].

ತಾವು ನೀಡಿದ ಆದೇಶಕ್ಕೆ ಉದ್ದೇಶಪೂರ್ವಕವಾಗಿ ಅಸಹಕಾರ ತೋರಿದಾಗ ಸಿವಿಲ್‌ ಪ್ರಕ್ರಿಯಾ ಸಂಹಿತೆಯ ಆದೇಶ XXXIX, ನಿಯಮ 2ಎ ಅಡಿ ಸಿವಿಲ್‌ ನ್ಯಾಯಾಲಯಗಳು ಪ್ರತಿವಾದಿಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬಹುದು ಅಥವಾ ಸಿವಿಲ್‌ ಜೈಲು ಶಿಕ್ಷೆ ವಿಧಿಸಬಹುದು ಇಲ್ಲವೇ ಎರಡೂ ಶಿಕ್ಷೆಗಳನ್ನು ಒಟ್ಟಿಗೇ ನೀಡಬಹುದು ಎಂದು, ನ್ಯಾಯಮೂರ್ತಿಗಳಾದ ಅಲೋಕ್ ಅರಾಧೆ ಮತ್ತು ಅನಂತ್ ರಾಮನಾಥ್‌ ಹೆಗ್ಡೆ ಅವರಿದ್ದ ಪೀಠ ಕಳೆದ ವಾರ ನೀಡಿದ ತೀರ್ಪಿನಲ್ಲಿ ತಿಳಿಸಿದೆ.

ಸಿವಿಲ್ ನ್ಯಾಯಾಲಯ ಸಿವಿಲ್ ಜೈಲು ಶಿಕ್ಷೆಗೆ ಆದೇಶಿಸಿದ್ದಾಗ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಜೊತೆಗೆ ಅದನ್ನು ಮಾರಾಟ ಮಾಡುವ ಆದೇಶ ವಿಧಿಸುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

"ಸಿವಿಲ್‌ ಜೈಲು ಶಿಕ್ಷೆಗೆ ಆದೇಶಿಸುವಾಗ, ನ್ಯಾಯಾಲಯ ಸಂವಿಧಾನದ 21ನೇ ವಿಧಿಯಡಿ ಒದಗಿಸಲಾದ ಮೂಲಭೂತ ಹಕ್ಕನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಆದರೂ, ಸಿವಿಲ್ ಜೈಲು ಶಿಕ್ಷೆ ತಳ್ಳಿಹಾಕಬೇಕು ಎಂದು ಇದರ ಅರ್ಥವಲ್ಲ. ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಮತ್ತು ಮಾರಾಟ ಮಾಡುವ ಆಯ್ಕೆಯನ್ನು ಪೂರ್ಣಗೊಳಿಸಿದ ನಂತರವೇ ಈ ಆದೇಶ ನೀಡಬಹುದು”ಎಂದು ನ್ಯಾಯಾಲಯ ಹೇಳಿದೆ.

ಮಣಿಪಾಲ್ ಸಮೂಹದ ಎರಡು ಘಟಕಗಳು ಹೂಡಿದ್ದ ವಾಣಿಜ್ಯ ಚಿಹ್ನೆ ಉಲ್ಲಂಘನೆ ಪ್ರಕರಣದ ವಿಚಾರಣೆ ವೇಳೆ ಪೀಠ ಈ ವಿಚಾರ ತಿಳಿಸಿತು.  

ಸಿವಿಲ್ ಜೈಲು ಶಿಕ್ಷೆಯ ಆದೇಶವನ್ನು "ಸಹಜವಾಗಿ" ಅಂಗೀಕರಿಸಬಾರದು ಎಂದು ಕೂಡ ವಿವರಿಸಿದ ನ್ಯಾಯಾಲಯ ಸಿವಿಲ್ ಜೈಲು ಶಿಕ್ಷೆಯ ಆದೇಶವನ್ನು ನೀಡಬೇಕೆ ಎಂದು ನಿರ್ಧರಿಸುವಾಗ ನ್ಯಾಯಾಲಯಗಳು ಪರಿಶೀಲಿಸಬೇಕಾದ ಮಾನದಂಡಗಳನ ಪಟ್ಟಿಯನ್ನು ಅದು ನೀಡಿದೆ:

  1. ಅಸಹಕಾರ ಅಥವಾ ಉಲ್ಲಂಘನೆಯ ಸ್ವರೂಪ/ಗುರುತ್ವ ಮತ್ತು ಉಲ್ಲಂಘನೆಯ ವಿಧಾನ;

  2. ಅಸಹಕಾರ ಅಥವಾ ಉಲ್ಲಂಘನೆಯ ಕಾರಣದಿಂದಾಗಿ ಪಕ್ಷಕಾರರಿಗೆ ಉಂಟಾದ ನಷ್ಟ;

  3. ಹಾನಿಯನ್ನು ಒಂದಲ್ಲಾ ಒಂದು ರೀತಿಯಲ್ಲಿ ಸರಿಪಡಿಸಬಹುದೇ ಅಥವಾ ಅದು ಸಾಧ್ಯವೇ ಇಲ್ಲವೇ

  4. ಉಲ್ಲಂಘನೆ ಅಥವಾ ಅಸಹಕಾರ ನಡೆದ ಸಂದರ್ಭಗಳು;

  5. ಉಲ್ಲಂಘನೆ ಅಥವಾ ಅಸಹಕಾರವು ಒಂದು ಪ್ರತ್ಯೇಕ ನಡೆಯೇ ಅಥವಾ ನಿರಂತರ ಕ್ರಿಯೆಯೇ;

  6. ಈ ಹಿಂದೆಯೂ ಉಲ್ಲಂಘನೆ ಅಥವಾ ಅಸಹಕಾರದ ಪ್ರಕರಣಗಳು ನಡೆದಿದ್ದರೆ, ನ್ಯಾಯಾಲಯದ ಆದೇಶದ ಉಲ್ಲಂಘನೆ ಅಥವಾ ಅವಿಧೇಯತೆಯ ಬಗ್ಗೆ ಈ ಮೊದಲೂ ತಪ್ಪಿತಸ್ಥನಾಗಿದ್ದರೆ;

  7. ಸಿವಿಲ್ ಜೈಲು ಶಿಕ್ಷೆಯ ಆದೇಶವನ್ನು ರವಾನಿಸುವ ಮೂಲಕ ಸಂದೇಶವನ್ನು ಕಳುಹಿಸಬೇಕಾದ ಸಂದರ್ಭವನ್ನು ಪ್ರಕರಣ ಸೃಷ್ಟಿಸಿದೆಯೇ ಆ ಉದ್ದೇಶಪೂರ್ವಕ ಉಲ್ಲಂಘನೆ ಅಥವಾ ನ್ಯಾಯಾಲಯದ ಆದೇಶಕ್ಕೆ ತೋರಿದ ಅಸಹಕಾರವನ್ನು ಗಂಭೀರವಾಗಿ ಪರಿಗಣಿಸಬಹುದೇ;

  8. ಮತ್ತಷ್ಟು ಉಲ್ಲಂಘನೆ ತಡೆಗಟ್ಟಲು ಸಿವಿಲ್‌ ಸೆರೆವಾಸ ಪರಿಣಾಮಕಾರಿ ಮಾರ್ಗವಾಗಿದೆಯೇ;

  9. ಆದೇಶ ಉಲ್ಲಂಘಿಸಿದವರು ಕ್ಷಮೆಯಾಚಿಸಿದ್ದರೆ ಕ್ಷಮಾಪಣೆ ಅಫಿಡವಿಟ್‌ನಲ್ಲಿ ಬಳಸಲಾದ ಭಾಷೆಯ ಧೋರಣೆ;

  10. ಆದೇಶಕ್ಕೆ ತೋರಿದ ಅಸಹಕಾರ ಅಥವಾ ಅದರ ಉಲ್ಲಂಘನೆಯನ್ನು ರದ್ದುಗೊಳಿಸುವಂತಹ ಯಾವುದಾದರೂ ಅನುಪಾಲನೆ ನಡೆದಿದ್ದರೆ;

  11. ಒಂದು ಮಟ್ಟಿಗೆ, ಉಲ್ಲಂಘಿಸಿದವರ ಶೈಕ್ಷಣಿಕ ಅರ್ಹತೆಗಳು/ ಸ್ಥಾನಮಾನ ಮತ್ತು ಅವರು ಮಾಡಿದ ಕೃತ್ಯಗಳು ನ್ಯಾಯಾಲಯದ ಆದೇಶವನ್ನು ಅಪಹಾಸ್ಯ ಮಾಡುವಂತಿವೆಯೇ

ಆಸ್ತಿ ಮುಟ್ಟುಗೋಲು ಆದೇಶಕ್ಕೆ ಮೊದಲು ಅಥವಾ ಅಪರಾಧಿಯ ಸಿವಿಲ್ ಜೈಲುವಾಸಕ್ಕೆ ಸೂಚಿಸುವ ಮೊದಲು ಮೇಲಿನ ಎಲ್ಲಾ ಮಾನದಂಡಗಳನ್ನು  ಪಾಲಿಸಬೇಕಾದ ಅಗತ್ಯವಿಲ್ಲ ಎಂತಲೂ ನ್ಯಾಯಾಲಯ ತಿಳಿಸಿದೆ.

ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿದರೆ ಯಾವುದೇ ಪರಿಣಾಮ ಬೀರದು ಎಂದು ಯಾರೂ ಅಂದುಕೊಳ್ಳಬಾರದು ಎಂಬ ಕಾರಣಕ್ಕೆ ಸಿವಿಲ್ ಜೈಲುವಾಸಕ್ಕೆ ಆದೇಶಿಸಲಾಗುತ್ತದೆ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಕಾನೂನು ಆಳ್ವಿಕೆಯನ್ನು, ನ್ಯಾಯಾಲಯದ ಘನತೆಯನ್ನು ಹಾಗೂ ನ್ಯಾಯಾಲಯದ ಆದೇಶದ ವಿಶ್ವಾಸಾರ್ಹತೆಯನ್ನು ಖಾತ್ರಿಪಡಿಸುವಲ್ಲಿ ಸಿವಿಲ್ ಜೈಲು ಶಿಕ್ಷೆ ವಿಧಿಸುವ ನಿಯಮಾವಳಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪೀಠ ಒತ್ತಿ ಹೇಳಿದೆ.

"ನ್ಯಾಯಾಲಯದ ಆದೇಶವನ್ನು ಗೌರವ ಮತ್ತು ಕರ್ತವ್ಯದ ಪ್ರಜ್ಞೆಯಿಂದ ಮಾತ್ರವಲ್ಲದೆ ಜವಾಬ್ದಾರಿಯ ಕಾರಣಕ್ಕೂ ಪಾಲಿಸಬೇಕೆ ವಿನಾ ಅಧೀನತೆಯ ಭಾವನೆಯಿಂದಲ್ಲ" ಎಂದು ನ್ಯಾಯಾಲಯ ವಿವರಿಸಿದೆ.

ವಾಣಿಜ್ಯ ಚಿಹ್ನೆ ಉಲ್ಲಂಘನೆಗಾಗಿ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ ಟ್ರಸ್ಟ್) ಮತ್ತು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಡೀಮ್ಡ್ ಯೂನಿವರ್ಸಿಟಿ)  2019ರಲ್ಲಿ ಸಿವಿಲ್ ಮೊಕದ್ದಮೆ ಹೂಡಿದ್ದವು. ಮಾಹೆ ಟ್ರಸ್ಟ್ ಮತ್ತು ಮಣಿಪಾಲ್ ಅಕಾಡೆಮಿ ಪರವಾಗಿ ವಾಣಿಜ್ಯ ನ್ಯಾಯಾಲಯ 2019ರಲ್ಲಿ ಮಧ್ಯಂತರ ತಡೆಯಾಜ್ಞೆ ನೀಡಿತ್ತು.

ಬೆಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಮಣಿಪಾಲ್ ಅಕಾಡೆಮಿ ಆಫ್ ಹೆಲ್ತ್ ಅಂಡ್ ಸೈನ್ಸ್ (ಇವರು ಮಾಹೆ ಎಂಬ ಸಂಕ್ಷಿಪ್ತಾಕ್ಷರವನ್ನೂ ಬಳಸಿದ್ದಾರೆ) ಮತ್ತು ಮಣಿಪಾಲ್ ಇಂಟರ್‌ನ್ಯಾಷನಲ್‌ ಸ್ಕೂಲ್ ಹೆಸರುಗಳನ್ನು ಬಳಸುವ ವ್ಯಕ್ತಿಗಳ ವಿರುದ್ಧ ತೀರ್ಪು ನೀಡಿದ ಬಳಿಕ  ಮಧ್ಯಂತರ ತಡೆಯಾಜ್ಞೆಯನ್ನು 2022ರಲ್ಲಿ ಶಾಶ್ವತಗೊಳಿಸಲಾಯಿತು.

ನಂತರ, ತಡೆಯಾಜ್ಞೆ ಆದೇಶಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ್ದಕ್ಕಾಗಿ ನ್ಯಾಯಾಲಯ ಶಾಲೆಯ ಅಧ್ಯಕ್ಷರಾದ ಟಿ ಸುಧಾಕರ ಪೈ ದೋಷಿ ಎಂದು ಘೋಷಿಸಿತು. ಅವರಿಗೆ ಮೂರು ತಿಂಗಳ ಜೈಲು ಶಿಕ್ಷೆ ಹಾಗೂ ಶಾಲೆಯ ಸಿಇಒ ಮತ್ತು ಅಧ್ಯಕ್ಷರಿಗೆ ಒಂದು ತಿಂಗಳ ಸೆರೆವಾಸದ ಶಿಕ್ಷೆ ವಿಧಿಸಿತು. ಇದಲ್ಲದೆ, ವಾಣಿಜ್ಯ ನ್ಯಾಯಾಲಯ ಕಕ್ಷಿದಾರರಿಗೆ ದಂಡ ಪಾವತಿಸುವಂತೆಯೂ ಆದೇಶಿಸಿತು.

ಆದೇಶವನ್ನು ಕಕ್ಷಿದಾರರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದರು. ನ್ಯಾಯಾಲಯದ ಆದೇಶದ ಉದ್ದೇಶಪೂರ್ವಕ ಅಸಹಕಾರಕ್ಕಾಗಿ ಶಿಕ್ಷೆ ಎತ್ತಿಹಿಡಿದ ಹೈಕೋರ್ಟ್‌ ವಾಣಿಜ್ಯ ನ್ಯಾಯಾಲಯ ವಿಧಿಸಿದ ಸಿವಿಲ್ ಜೈಲು ಶಿಕ್ಷೆಯನ್ನು ಮಾರ್ಪಡು ಮಾಡಿದೆ.

ಶಾಲೆಯ ಅಧ್ಯಕ್ಷ ಪೈ ಅವರಿಗೆ ವಿಧಿಸಲಾಗಿದ್ದ ಮೂರು ತಿಂಗಳ ಶಿಕ್ಷೆಯನ್ನು ಹದಿನೈದು ದಿನಗಳಿಗೆ ಇಳಿಸಲಾಗಿದ್ದು ಇನ್ನಿಬ್ಬರಿಗೆ ವಿಧಿಸಲಾಗಿದ್ದ ಒಂದು ತಿಂಗಳ ಜೈಲು ಶಿಕ್ಷೆಯನ್ನು ರದ್ದುಗೊಳಿಸಲಾಗಿದೆ.

ಆದೇಶ ಪಾಲಿಸಲು ಕಕ್ಷಿದಾರರ ಆಸ್ತಿ ಮುಟ್ಟುಗೋಲು ಹಾಕಿದ ಬಳಿಕ ಕೆಲ ಕಾಲದವರೆಗೆ ಕಾಯದೆ ತಕ್ಷಣವೇ ದಂಡ ಪಾವತಿಸಲು ಆದೇಶಿಸುವ ಮೂಲಕ ವಾಣಿಜ್ಯ ನ್ಯಾಯಾಲಯ ಎಡವಿದೆ ಎಂದು ಕೂಡ ಹೈಕೋರ್ಟ್‌ ವಿವರಿಸಿದೆ.  

ಕಕ್ಷಿದಾರರ ಆಸ್ತಿಯನ್ನು ಆರು ತಿಂಗಳ ಕಾಲ ಮುಟ್ಟುಗೋಲು ಹಾಕಿಕೊಳ್ಳುವಂತೆ ನ್ಯಾಯಾಲಯ ಆದೇಶ ನೀಡಿದೆ. ಆರು ತಿಂಗಳ ನಂತರವೂ ನ್ಯಾಯಾಲಯದ ಆದೇಶ  ಉಲ್ಲಂಘಿಸುವುದನ್ನು ಮುಂದುವರಿಸಿದರೆ ಮುಟ್ಟುಗೋಲು ಹಾಕಿಕೊಂಡ ಆಸ್ತಿ ಮಾರಿ ಮಣಿಪಾಲ್ ಸಮೂಹಕ್ಕೆ ಪರಿಹಾರ ಪಾವತಿಸಬಹುದು ಎಂದು ನ್ಯಾಯಾಲಯ ತಿಳಿಸಿದೆ.

ಶಾಲೆಯ ಅಧ್ಯಕ್ಷರು ₹ 1 ಲಕ್ಷ ಮತ್ತು ಉಳಿದ ತಪ್ಪಿತಸ್ಥ ಕಕ್ಷಿದಾರರು ತಲಾ ₹ 50,000 ಪರಿಹಾರ ಪಾವತಿಸಬೇಕು ಎಂದು ನ್ಯಾಯಾಲಯದ ಆದೇಶದಲ್ಲಿ ತಿಳಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com