CT Ravi, Anantkumar Hegde
CT Ravi, Anantkumar Hegde

ಟಿಪ್ಪು ಜಯಂತಿ ವಿವಾದ‌: ‌ಹೆಗ್ಡೆ, ರವಿ ವಿರುದ್ಧದ ದೂರನ್ನು ಮರುಪರಿಗಣಿಸಲು ಅಧೀನ ನ್ಯಾಯಾಲಯಕ್ಕೆ ಹೈಕೋರ್ಟ್ ಸೂಚನೆ

ರಾಜ್ಯ ಸರ್ಕಾರವು 2017ರಲ್ಲಿ ಆಚರಿಸಲು ಉದ್ದೇಶಿಸಿದ್ದ ಟಿಪ್ಪು ಜಯಂತಿಗೆ ಬಹಿಷ್ಕಾರ ಹಾಕುವಂತೆ ಇಬ್ಬರೂ ನಾಯಕರು ವಿವಾದಾತ್ಮಕ ಟ್ವೀಟ್‌ ಮಾಡಿದ್ದಕ್ಕೆ ಸಂಬಂಧಿಸಿದ ದೂರು ಇದಾಗಿದೆ.
Published on

ಟಿಪ್ಪು ಜಯಂತಿಗೆ ಬಹಿಷ್ಕಾರಕ್ಕೆ ಹಾಕುವುದಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರಾದ ಕೇಂದ್ರದ ಮಾಜಿ ಸಚಿವ ಅನಂತ್‌ಕುಮಾರ್‌ ಹೆಗ್ಡೆ ಮತ್ತು ರಾಜ್ಯದ ಮಾಜಿ ಸಚಿವ ಸಿ ಟಿ ರವಿ ಅವರು ಮಾಡಿದ್ದ ವಿವಾದಾತ್ಮಕ ಟ್ವೀಟ್‌ಗಳಿಗೆ ಸಂಬಂಧಿಸಿದ ದೂರನ್ನು ವಜಾಗೊಳಿಸಿದ್ದ ಅಧೀನ ನ್ಯಾಯಾಲಯದ ಆದೇಶವನ್ನು ವಜಾಗೊಳಿಸಿರುವ ಕರ್ನಾಟಕ ಹೈಕೋರ್ಟ್‌ ಉಭಯ ನಾಯಕರ ವಿರುದ್ಧದ ದೂರುಗಳನ್ನು ಈಚೆಗೆ ಕೆಳಹಂತದ ನ್ಯಾಯಾಲಯಕ್ಕೆ ರವಾನಿಸಿದ್ದು, ಕಾನೂನಿನ ಪ್ರಕಾರ ಇತ್ಯರ್ಥ ಮಾಡುವಂತೆ ನಿರ್ದೇಶಿಸಿದೆ. ಚುನಾಯಿತರಾದ ಇಬ್ಬರೂ ನಾಯಕರ ವಿರುದ್ಧ ವಿಚಾರಣೆ ಮುಂದುವರೆಸಲು ಅನುಮತಿಯ ಅಗತ್ಯವಿದೆ ಎಂದು ಹಿಂದೆ ಅಧೀನ ನ್ಯಾಯಾಲಯವು ದೂರನ್ನು ವಜಾಗೊಳಿಸಿತ್ತು.

“ಪ್ರಕರಣದ ವಿಷಯಕ್ಕೆ ಸಂಬಂಧಿಸಿದಂತೆ ವಿಚಾರ ಮಾಡುವಲ್ಲಿ ಮ್ಯಾಜಿಸ್ಟ್ರೇಟ್‌ ವಿಫಲರಾಗಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 196(1) ಮತ್ತು (1-ಎ) ಅನ್ನು ತಪ್ಪಾಗಿ ಅರ್ಥೈಸುವ ಮೂಲಕ ಆಕ್ಷೇಪಾರ್ಹ ಆದೇಶ ಹೊರಡಿಸಿದ್ದಾರೆ. ಕಾನೂನಿನ ಪ್ರಕಾರ ಹೊಸದಾಗಿ ದೂರನ್ನು ಪರಿಗಣಿಸುವಂತೆ ನ್ಯಾಯಿಕವ್ಯಾಪ್ತಿ ಹೊಂದಿರುವ ನ್ಯಾಯಾಲಯಕ್ಕೆ ಪ್ರಕರಣವನ್ನು ರವಾನಿಸಲಾಗಿದೆ” ಎಂದು ನ್ಯಾಯಮೂರ್ತಿ ಜಾನ್‌ ಮೈಕೆಲ್‌ ಕುನ್ಹಾ ಅವರಿದ್ದ ಏಕಸದಸ್ಯ ಪೀಠವು ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರವು 2017ರಲ್ಲಿ ಆಚರಿಸಲು ಉದ್ದೇಶಿಸಿದ್ದ ಟಿಪ್ಪು ಜಯಂತಿಗೆ ಬಹಿಷ್ಕಾರ ಹಾಕುವಂತೆ ಇಬ್ಬರೂ ನಾಯಕರು ವಿವಾದಾತ್ಮಕ ಟ್ವೀಟ್‌ ಮಾಡಿದ್ದಕ್ಕೆ ಸಂಬಂಧಿಸಿದ ದೂರು ಇದಾಗಿದೆ. ಆರ್‌ಟಿಐ ಕಾರ್ಯಕರ್ತ ಎ ಆಲಂ ಪಾಷಾ ಅವರು ಉಭಯ ನಾಯಕರ ವಿರುದ್ಧ ಖಾಸಗಿ ದೂರು ದಾಖಲಿಸಿದ್ದರು. ತಮ್ಮ ಆರೋಪಗಳಿಗೆ ಪೂರಕವಾಗಿ 2017ರ ಅಕ್ಟೋಬರ್‌ 22ರಲ್ಲಿ ಕಟುವಾದ ಪದಗಳನ್ನು ಬಳಸಿದ್ದ ಟ್ವೀಟ್‌ಗಳನ್ನು ಉಲ್ಲೇಖಿಸಿದ್ದ ಮಾಧ್ಯಮ ವರದಿಗಳನ್ನು ಸಲ್ಲಿಸಿದ್ದರು. ಉಭಯ ನಾಯಕರು ಬಳಸಿರುವ ಪದಗಳು ಎರಡು ಧರ್ಮಗಳ ನಡುವೆ ದ್ವೇಷ ಬಿತ್ತುವ ಅಂಶಗಳನ್ನು ಹೊಂದಿದ್ದು, ಭಾರತೀಯ ದಂಡ ಸಂಹಿತೆಯ ವಿವಿಧ ನಿಬಂಧನೆಯ ಅಡಿ ಅಪರಾಧಗಳಾಗಿವೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಆದೇಶಿಸುವಂತೆ ಕೋರಿದ್ದರು.

Also Read
ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ವಿಚಾರಣೆಗೆ ಮತ್ತೊಂದು ನ್ಯಾಯಾಲಯ ಸ್ಥಾಪಿಸಲು ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ

ಸರ್ಕಾರದ ಸಕ್ಷಮ ಪ್ರಾಧಿಕಾರವು ಉಭಯ ನಾಯಕರ ವಿರುದ್ಧ ತನಿಖೆ ನಡೆಸಲು ಅನುಮತಿ ನೀಡಿಲ್ಲ ಎಂದು 2017ರ ನವೆಂಬರ್‌ 4ರಂದು ಬೆಂಗಳೂರಿನ ಹತ್ತನೇ ಎಸಿಎಂಎಂ ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿತ್ತು. ಈ ಸಂದರ್ಭದಲ್ಲಿ ಅನಂತ್‌ಕುಮಾರ್‌ ಹೆಗ್ಡೆ ಕೇಂದ್ರದಲ್ಲಿ ಸಚಿವರಾಗಿದ್ದರು. ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ಪಾಷಾ ಅವರು ತಾನು ತನಿಖೆಗೆ ಆದೇಶಿಸುವಂತೆ ಕೋರಿದ್ದು, ಇದನ್ನು ಅರ್ಥ ಮಾಡಿಕೊಳ್ಳಲು ಮ್ಯಾಜಿಸ್ಟ್ರೇಟ್‌ ವಿಫಲರಾಗಿದ್ದಾರೆ ಎಂದಿದ್ದರು.

ತನಿಖೆ ಪೂರ್ಣಗೊಂಡ ಬಳಿಕ ಮ್ಯಾಜಿಸ್ಟ್ರೇಟ್‌/ನ್ಯಾಯಾಲಯ ಅದನ್ನು ಪರಿಗಣಿಸುವ ಸಂದರ್ಭದಲ್ಲಿ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯುವ ವಿಚಾರ ಮುನ್ನಲೆಗೆ ಬರುತ್ತದೆ ಎಂದಿರುವ ಹೈಕೋರ್ಟ್‌ ಅರ್ಜಿ ವಿಚಾರಣೆಗೆ ಸೂಚಿಸಿದೆ. ಇದಕ್ಕಾಗಿ ಹೈಕೋರ್ಟ್‌ ಹಲವು ಸುಪ್ರೀಂ ಕೋರ್ಟ್‌ ತೀರ್ಪುಗಳನ್ನು ಉಲೇಖಿಸಿದೆ.

Kannada Bar & Bench
kannada.barandbench.com