ಬಂಡೀಪುರ, ನಾಗರಹೊಳೆಯಲ್ಲಿ ಸಫಾರಿಗೆ ನಿಷೇಧ ಹೇರಲು ಹೈಕೋರ್ಟ್‌ ನಕಾರ; ಅಫಿಡವಿಟ್‌ ಸಲ್ಲಿಸಲು ಸರ್ಕಾರಕ್ಕೆ ನಿರ್ದೇಶನ

“ಕೋರ್, ಬಫರ್ & ಪ್ರವಾಸೋದ್ಯಮ ವಲಯಗಳ ಗಡಿರೇಖೆ, ಸಫಾರಿಗಳನ್ನು ನಡೆಸುತ್ತಿರುವ ನಿಖರವಾದ ಸ್ಥಳಗಳು ಮತ್ತು ಈ ವಲಯಗಳನ್ನು ಸೂಚಿಸುವ ನಕ್ಷೆಗಳನ್ನು ಸ್ಪಷ್ಟಪಡಿಸುವ ವಿವರವಾದ ಅಫಿಡವಿಟ್ ಸಲ್ಲಿಸಬೇಕು” ಎಂದು ಸರ್ಕಾರಕ್ಕೆ ನಿರ್ದೇಶಿಸಿದ ಹೈಕೋರ್ಟ್‌.
ಬಂಡೀಪುರ, ನಾಗರಹೊಳೆಯಲ್ಲಿ ಸಫಾರಿಗೆ ನಿಷೇಧ ಹೇರಲು ಹೈಕೋರ್ಟ್‌ ನಕಾರ; ಅಫಿಡವಿಟ್‌ ಸಲ್ಲಿಸಲು ಸರ್ಕಾರಕ್ಕೆ ನಿರ್ದೇಶನ
Published on

ರಾಜ್ಯದಲ್ಲಿ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿಗೆ ನಿಷೇಧ ಹೇರಲು ಕರ್ನಾಟಕ ಹೈಕೋರ್ಟ್‌ ಬುಧವಾರ ನಿರಾಕರಿಸಿತು. ಬದಲಿಗೆ ಸಫಾರಿಗೆ ಸಂಬಂಧಿಸಿದಂತೆ ವಿಸ್ತೃತವಾದ ಅಫಿಡವಿಟ್‌ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತು.

ಮೈಸೂರಿನ ವಿ ರವಿಕುಮಾರ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ವಿಭಾಗೀಯ ಪೀಠವು “ಕೋರ್, ಬಫರ್ ಮತ್ತು ಪ್ರವಾಸೋದ್ಯಮ ವಲಯಗಳ ಗಡಿರೇಖೆ, ಸಫಾರಿಗಳನ್ನು ನಡೆಸುತ್ತಿರುವ ನಿಖರವಾದ ಸ್ಥಳಗಳು ಮತ್ತು ಈ ವಲಯಗಳನ್ನು ಸೂಚಿಸುವ ನಕ್ಷೆಗಳನ್ನು ಸ್ಪಷ್ಟಪಡಿಸುವ ವಿವರವಾದ ಅಫಿಡವಿಟ್ ಸಲ್ಲಿಸಬೇಕು” ಎಂದು ಸರ್ಕಾರಕ್ಕೆ ಆದೇಶಿಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ಅರ್ಜಿದಾರರ ಪರ ವಕೀಲರು “ಸಫಾರಿ ನಿಷೇಧಿಸಲ್ಪಟ್ಟಿರುವ, ಹುಲಿಗಳು ನೆಲೆಸಿರುವ ಪ್ರಮುಖ ಸ್ಥಳಗಳಲ್ಲಿ ಸಫಾರಿ ನಡೆಸಲಾಗುತ್ತಿದೆ. ರಾಜಕೀಯ ಮತ್ತು ವಾಣಿಜ್ಯ ಹಿತಾಸಕ್ತಿ ಹೊಂದಿರುವವರ ಒತ್ತಡಕ್ಕೆ ಮಣಿದು ಸಫಾರಿ ಪುನಾರಂಭಿಸಲಾಗಿದೆ. ಸಫಾರಿ ಚಟುವಟಿಕೆ ಮುಂದುವರಿಸುವುದರಿಂದ ಮಾನವ-ವನ್ಯಜೀವಿಗಳ ಸಂಘರ್ಷ ವ್ಯಾಪಕವಾಗಲಿದೆ” ಎಂದರು.

ಈ ಹಂತದಲ್ಲಿ ಪೀಠವು “ನಿರ್ಣಾಯಕ ಹುಲಿ ಆವಾಸಸ್ಥಾನವು ಯಾವಾಗಲೂ ಕೋರ್ ವಲಯಕ್ಕೆ ಸಮಾನಾರ್ಥಕವಲ್ಲ ಮತ್ತು ಸರಿಯಾದ ವರ್ಗೀಕರಣವನ್ನು ಪರಿಶೀಲಿಸಬೇಕು. ಹುಲಿ ಸಂರಕ್ಷಿತ ಪ್ರದೇಶಗಳು ಸಾಮಾನ್ಯವಾಗಿ ಕೋರ್, ಬಫರ್ ಮತ್ತು ಪ್ರವಾಸೋದ್ಯಮ ವಲಯಗಳನ್ನು ಒಳಗೊಂಡಿರುತ್ತವೆ, ಸಫಾರಿಯನ್ನು ಸಾಮಾನ್ಯವಾಗಿ ಬಫರ್ ಅಥವಾ ಗೊತ್ತುಪಡಿಸಿದ ಪ್ರವಾಸೋದ್ಯಮ ವಲಯಗಳಲ್ಲಿ ಮಾತ್ರ ಅನುಮತಿಸಲಾಗುತ್ತದೆ, ಕಟ್ಟುನಿಟ್ಟಾಗಿ ಸಂರಕ್ಷಿತ ಕೋರ್ ಪ್ರದೇಶಗಳಲ್ಲಿ ಅಲ್ಲ” ಎಂದಿತು.

“ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ, ಬಫರ್ ವಲಯಗಳೊಳಗಿನ ಅರಣ್ಯೇತರ ಅಥವಾ ಅವನತಿ ಹೊಂದಿದ ಭೂಮಿಯಲ್ಲಿ ಸಫಾರಿಗಳನ್ನು ನಡೆಸಬೇಕು, ನಿರ್ಣಾಯಕ ಆವಾಸಸ್ಥಾನಗಳು ಮತ್ತು ಹುಲಿ ಕಾರಿಡಾರ್‌ಗಳನ್ನು ತಪ್ಪಿಸಬೇಕು” ಎಂದು ನ್ಯಾಯಾಲಯ ಹೇಳಿತು.

ಸಫಾರಿ ಚಟುವಟಿಕೆಗಳು ಸ್ಥಾಪಿತ ಸಂರಕ್ಷಣಾ ಮಾನದಂಡಗಳನ್ನು ಉಲ್ಲಂಘಿಸುವುದರಿಂದ ಪ್ರಮುಖ ಹುಲಿ ಆವಾಸ ಸ್ಥಾನಗಳಲ್ಲಿ ಹುಲಿ ಸಫಾರಿಗಳನ್ನು ಶಾಶ್ವತವಾಗಿ ನಿಷೇಧಿಸಬೇಕು. ಭಾರತದಲ್ಲಿ ಅರಣ್ಯ ರಕ್ಷಣೆ ಮತ್ತು ವನ್ಯಜೀವಿ ನಿರ್ವಹಣೆಗೆ ಸಂಬಂಧಿಸಿದ ಟಿ ಎನ್ ಗೋದವರ್ಮನ್ ತಿರುಮುಲ್ಪಾಡ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಆದೇಶವನ್ನು ಪಾಲಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಕಳೆದ ವರ್ಷದ ಅಕ್ಟೋಬರ್-ನವೆಂಬರ್‌ನಲ್ಲಿ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಮಾನವ-ವನ್ಯಜೀವಿ ಸಂಘರ್ಷ ವ್ಯಾಪಕವಾಗಿ, ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದರು. ಇದರಿಂದ ಸಾರ್ವಜನಿಕವಾಗಿ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರವು ಮೂರು ತಿಂಗಳಿಗೂ ಅಧಿಕ ಕಾಲ ಸಫಾರಿಗೆ ನಿಷೇಧ ಹೇರಿತು. ಈಚೆಗೆ ಫೆಬ್ರವರಿಯಲ್ಲಿ ತಾಂತ್ರಿಕ ಸಮಿತಿಯ ಶಿಫಾರಸ್ಸುಗಳ ಆಧಾರದ ಮೇಲೆ ಶೇ. 50ರಷ್ಟು ಸಫಾರಿಗೆ ಸರ್ಕಾರ ಅನುಮತಿಸಿದೆ.

Kannada Bar & Bench
kannada.barandbench.com