

ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನಮಂತ್ರಿ ಮತ್ತು ರಾಜ್ಯಪಾಲರು ಭಾಗವಹಿಸುವ ಕಾರ್ಯಕ್ರಮ ಹೊರತುಪಡಿಸಿ ರಾಜ್ಯ ಸರ್ಕಾರದ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಎರಡು ಚರಣಗಳನ್ನು ಮಾತ್ರ ಹಾಡುವುದನ್ನು ಕಡ್ಡಾಯಗೊಳಿಸಿ 2026ರ ಸೆಪ್ಟೆಂಬರ್ 8ರಂದು ಸರ್ಕಾರ ಹೊರಡಿಸಿರುವ ಆದೇಶ ರದ್ದು ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಮುಂದೂಡಿದೆ.
ವಕೀಲ ಗಿರೀಶ್ ಭಾರದ್ವಾಜ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಮತ್ತು ಟಿ ಪಿ ವಿವೇಕಾನಂದ ಅವರ ವಿಭಾಗೀಯ ಪೀಠ ನಡೆಸಿತು.
ವಂದೇ ಮಾತರಂ ಸಂಪೂರ್ಣ ಗೀತೆ ಹಾಡುವ ಸಂಬಂಧಿತ ಕಾಯಿದೆ ಹಾಗೂ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಈ ಅರ್ಜಿಯ ವಿಚಾರಣೆಯನ್ನು ಎರಡು ವಾರ ಮುಂದೂಡಿ, ಸರ್ವೋಚ್ಚ ನ್ಯಾಯಾಲಯ ಆದೇಶಿಸಿದೆ. ಸುಪ್ರೀಂ ಕೋರ್ಟ್ ಆದೇಶಕ್ಕಾಗಿ ಕಾದು, ವಿಚಾರಣೆಯನ್ನು ಹೈಕೋರ್ಟ್ ಅಕ್ಟೋಬರ್ 15ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ, ಅರ್ಜಿದಾರರ ಪರ ವಕೀಲ ಅನಗದ್ ಕಾಮತ್ ಅವರು “ಎರಡು ಚರಣ ಮಾತ್ರ ಹಾಡಬೇಕು ಎಂದು ರಾಜ್ಯ ಸಂಪುಟದ ನಿರ್ಧಾರ ಆಧರಿಸಿ ಸರ್ಕಾರ ಆದೇಶ ಮಾಡಿದೆ. ಆದರೆ, ಸಂಪುಟದ ನಿರ್ಧಾರಕ್ಕೆ ಯಾವುದೇ ಪ್ರಸ್ತಾವವು ಸಂಬಂಧಿತ ಇಲಾಖೆಯಿಂದ ಸಲ್ಲಿಕೆಯಾಗಿರಲಿಲ್ಲ. ಕಾನೂನು ಸಲಹೆ ಪಡೆಯದೇ 32ಕ್ಕೂ ಹೆಚ್ಚು ಸಚಿವರು ಸಂಪುಟದಲ್ಲಿ ನಿರ್ಧಾರ ಮಾಡಿದ್ದಾರೆ. ಆದರೆ, ಇದಕ್ಕೆ ಅವಕಾಶವಿಲ್ಲ. ಹೀಗಾಗಿ, ಸರ್ಕಾರದ ಆದೇಶಕ್ಕೆ ತಡೆ ನೀಡಬೇಕು” ಎಂದರು.
ಅಡ್ವೋಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ “ಸಂವಿಧಾನದ ವಿಧಿ 51ಎ ಪ್ರಕಾರ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯ ಗೌರವದ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸುತ್ತದೆ. ಆದರೆ 'ರಾಷ್ಟ್ರೀಯ ಗೀತೆ'ಗೆ ಸಂಬಂಧಿಸಿದಂತೆ ಯಾವುದೇ ಪ್ರತ್ಯೇಕ ಶಾಸನಬದ್ಧ ವಿಧಿವಿಧಾನಗಳಿಲ್ಲ. ಕೇಂದ್ರ ಗೃಹ ಸಚಿವಾಲಯದ ಸುತ್ತೋಲೆಯಲ್ಲೇ ಗೀತೆಯನ್ನು ಇತರ ಸಂದರ್ಭಗಳಲ್ಲಿ ಹಾಡಬಹುದು ಎಂದು ಹೇಳಲಾಗಿದೆಯೇ ಹೊರತು, ಎಲ್ಲರೂ ಕಡ್ಡಾಯವಾಗಿ ಹಾಡಲೇಬೇಕು ಎಂದಿಲ್ಲ. ಆದ್ದರಿಂದ ರಾಜ್ಯ ಸರ್ಕಾರವು ಕೇವಲ ಮೊದಲ ಎರಡು ಚರಣಗಳನ್ನು ನಿಗದಿಪಡಿಸಿರುವುದು ನಿಯಮಬಾಹಿರವಲ್ಲ” ಎಂದರು.
“ಆದೇಶದಲ್ಲಿ ವಂದೇ ಮಾತರಂ ಗೀತೆಯನ್ನು ಇತರ ಸಂದರ್ಭಗಳಲ್ಲಿ ಹಾಡಬಹುದು ಎಂದು ಉಲ್ಲೇಖಿಸಲಾಗಿದೆ. ಇದರರ್ಥ ಗೀತೆಯನ್ನು ಕಡ್ಡಾಯವಾಗಿ ಹಾಡಲೇಬೇಕು ಅಥವಾ ಮೌನವಾಗಿ ನಿಲ್ಲಬೇಕು ಎಂಬುದೇ ಹೊರತು, ಎಷ್ಟು ಚರಣಗಳನ್ನು ಹಾಡಬೇಕು ಎಂದಲ್ಲ. ಅಲ್ಲದೆ, ಅರ್ಜಿದಾರರು ಸೆಪ್ಟೆಂಬರ್ 14ರ ಸರ್ಕಾರಿ ರಜಾದಿನದಂದು ಮನವಿ ಸಲ್ಲಿಸಿ, ತಕ್ಷಣವೇ ಮರುದಿನ (ಸೆಪ್ಟೆಂಬರ್ 15) ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಸರ್ಕಾರಕ್ಕೆ ಪರಿಶೀಲಿಸಲು ಸಮಯವನ್ನೇ ನೀಡದೆ ಅವಸರದಲ್ಲಿ ಅರ್ಜಿ ಸಲ್ಲಿಸಿದ್ದಾರೆ” ಎಂದು ವಾದಿಸಿದರು.
ಕೇಂದ್ರ ಸರ್ಕಾರ ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಅರವಿಂದ್ ಕಾಮತ್ ಅವರು “ರಾಷ್ಟ್ರೀಯ ಗೌರವಕ್ಕೆ ಅಪಮಾನ ತಡೆ (ತಿದ್ದುಪಡಿ) ಕಾಯಿದೆಯ ಸೆಕ್ಷನ್ 3ಕ್ಕೆ ತಿದ್ದುಪಡಿ ತರಲಾಗಿದ್ದು, ರಾಷ್ಟ್ರಗೀತೆಯ ಜೊತೆಗೆ ವಂದೇ ಮಾತರಂ ಗೀತೆಯನ್ನು ಸೇರಿಸಲಾಗಿದೆ. ರಾಷ್ಟ್ರೀಯ ಗೀತೆಯ ಗಾಯನಕ್ಕೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುವುದು ಅಥವಾ ಗಾಯನ ನಡೆಯುವ ಸಭೆಯಲ್ಲಿ ಗೊಂದಲ ಉಂಟುಮಾಡುವುದು ಅಪರಾಧವಾಗಿದೆ. ರಾಷ್ಟ್ರೀಯ ಗೀತೆಯ ಅಧಿಕೃತ ಆವೃತ್ತಿ ಯಾವುದು ಎಂಬುದನ್ನು ನಿರ್ಧರಿಸುವ ಸಂಪೂರ್ಣ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ಕೇಂದ್ರ ಸರ್ಕಾರದ ಆಜ್ಞೆಯ ಪ್ರಕಾರ 'ವಂದೇ ಮಾತರಂ' ಗೀತೆಯು ಸಂಪೂರ್ಣ ಆರು ಚರಣಗಳನ್ನು ಹಾಡಬೇಕಾಗಿದೆ” ಎಂದರು.
“ಸಂವಿಧಾನದ 256 ಮತ್ತು 257(1) ರ ಅಡಿಯಲ್ಲಿ ಕೇಂದ್ರ ಸರ್ಕಾರವು ನೀಡುವ ನಿರ್ದೇಶನ ಹಾಗೂ ಕಾಯಿದೆಗಳಿಗೆ ಬದ್ಧವಾಗಿ ನಡೆದುಕೊಳ್ಳುವುದು ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದೆ. ಕೇಂದ್ರದ ಗೃಹ ಸಚಿವಾಲಯ ಹೊರಡಿಸಿರುವ ಸುತ್ತೋಲೆಯು ಕೇವಲ 'ಮಾಹಿತಿ'ಗಾಗಿ ಅಲ್ಲ, ಬದಲಾಗಿ 'ಕಡ್ಡಾಯ ಪಾಲನೆ'ಗಾಗಿ ನೀಡಲಾಗಿದೆ. ಕೇಂದ್ರದ ಆದೇಶದ ಪ್ರಕಾರ, ಗೀತೆಯನ್ನು ಕಡ್ಡಾಯವಾಗಿ ಹಾಡಬೇಕಾದ 5 ಪ್ರಮುಖ ಸಂದರ್ಭಗಳನ್ನು ಗುರುತಿಸಲಾಗಿದೆ. ಸಾಮೂಹಿಕ ಗಾಯನ ಸೇರಿದಂತೆ ಇತರ ಸಂದರ್ಭಗಳಲ್ಲಿ ಹಾಡುವುದಾದರೆ, ಅದು ಕೇಂದ್ರ ನಿಗದಿಪಡಿಸಿದ ಪೂರ್ಣ 6 ಚರಣಗಳ ಅಧಿಕೃತ ಆವೃತ್ತಿಯಲ್ಲೇ ಇರಬೇಕು” ಎಂದರು.
ಎಲ್ಲರ ವಾದ ಆಲಿಸಿದ ಪೀಠವು ವಿಚಾರಣೆಯನ್ನು ಅಕ್ಟೋಬರ್ 15ಕ್ಕೆ ಮುಂದೂಡಿತು.