

ಸ್ವಂತ ಮಗಳನ್ನು ತಾಯಿಯೇ ವೇಶ್ಯಾವಾಟಿಕೆ ದಂಧೆಗೆ ದೂಡಿದ ಆರೋಪ ಹಿನ್ನೆಲೆಯಲ್ಲಿ ವೇಶ್ಯಾವಾಟಿಕೆ ಜಾಲದಿಂದ ರಕ್ಷಿಸಲ್ಪಟ್ಟ ಸಂತ್ರಸ್ತೆಯನ್ನು ತಾಯಿಯ ಸುಪರ್ದಿಗೆ ವಹಿಸಲು ನಿರಾಕರಿಸಿದ್ದ ವಿಚಾರಣಾಧೀನ ನ್ಯಾಯಾಲಯದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ಎತ್ತಿಹಿಡಿದಿದೆ.
ವಿಚಾರಣಾಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಅರ್ಜಿ ವಜಾಗೊಳಿಸಿದೆ.
ವ್ಯಾಜ್ಯದ ವಿಷಯವು ಅಪರಾಧದ ಬಗ್ಗೆ ಅಥವಾ ಸರ್ಕಾರ ಸಲ್ಲಿಸಿರುವ ಆರೋಪ ಪಟ್ಟಿಗೆ ಸಂಬಂಧಿಸಿದ್ದಲ್ಲ. ಬದಲಿಗೆ, ಸಂತ್ರಸ್ತೆ ಮತ್ತು ಇತರರ ಹೇಳಿಕೆಗಳು ತಾಯಿಯೇ ತನ್ನ ಮಗಳನ್ನು ವೇಶ್ಯಾವಾಟಿಕೆಗೆ ಒತ್ತಾಯಿಸಿದ್ದಾಳೆ ಎಂಬುದನ್ನು ಮೇಲ್ನೋಟಕ್ಕೆ ಸೂಚಿಸುತ್ತವೆ. ವೇಶ್ಯಾವಾಟಿಕೆ ದಂಧೆಯಿಂದ ಸಂತ್ರಸ್ತೆಯನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಕೇಂದ್ರದ ವಶದಲ್ಲಿರಿಸಿದ್ದರೆ, ತಾಯಿಯೇ ತನ್ನ ಮಗಳನ್ನು ವೇಶ್ಯಾವಾಟಿಕೆಗೆ ಬಳಸಿಕೊಳ್ಳುತ್ತಿದ್ದಾಳೆ ಎಂಬ ಆರೋಪಗಳಿವೆ. ಇಂಥ ಸಂದರ್ಭದಲ್ಲಿ ಮಗುವನ್ನು ತಾಯಿಯ ವಶಕ್ಕೆ ನೀಡಬಾರದು ಎಂಬ ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕರ ವಾದ ಸರಿಯಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಪ್ರಕರಣದ ಆರೋಪ ಪಟ್ಟಿ ಸಲ್ಲಿಸುವಾಗ ತಾಯಿಯ ಹೆಸರನ್ನು ಹೇಗೆ ಕೈಬಿಡಲಾಗಿದೆ ಎಂಬುದು ಅರ್ಥವಾಗದ ವಿಷಯವಾಗಿದೆ. ಮೇಲ್ನೋಟಕ್ಕೆ ಆಕೆ ತನ್ನ ಮಗಳನ್ನು ವೇಶ್ಯಾವಾಟಿಕೆಗೆ ತಳ್ಳಿದ್ದಾಳೆ ಎಂಬ ಬಲವಾದ ಅನುಮಾನವಿದ್ದರೂ ಸಹ, ಆರೋಪ ಪಟ್ಟಿಯಲ್ಲಿ ಆಕೆಯ ಹೆಸರನ್ನು ಪೊಲೀಸರು ಹೇಗೆ ಬಿಡಲು ಸಾಧ್ಯ ಎಂದು ಪ್ರಶ್ನಿಸಿರುವ ನ್ಯಾಯಾಲಯವು ಸಂತ್ರಸ್ತೆಯನ್ನು ಅರ್ಜಿದಾರರ ವಶಕ್ಕೆ ನೀಡುವ ಬದಲು ಆಕೆಗೆ ಸುರಕ್ಷಿತ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದಿದೆ.
ಮಾನವ ಕಳ್ಳ ಸಾಗಣೆ ಪ್ರಕರಣಗಳಲ್ಲಿ ರಕ್ಷಿಸಲ್ಪಟ್ಟ ವ್ಯಕ್ತಿಗಳನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದಾಗ, ಅನೈತಿಕ ಸಾಗಣೆ (ತಡೆ) ಕಾಯಿದೆ ಸೆಕ್ಷನ್ 17(2)ರ ಅಡಿಯಲ್ಲಿ ವಿಚಾರಣೆ ನಡೆಸಲು ಅವಕಾಶವಿದೆ. ರಕ್ಷಿಸಲ್ಪಟ್ಟ ವ್ಯಕ್ತಿಯ ವಯಸ್ಸು, ನಡತೆ, ಹಿನ್ನೆಲೆ ಮತ್ತು ಆ ವ್ಯಕ್ತಿಯ ಪಾಲನೆಯನ್ನು ವಹಿಸಿಕೊಳ್ಳಲು ಅವರ ಪೋಷಕರು, ಪೋಷಕರು ಅಥವಾ ಪತಿ ಸೂಕ್ತವೇ ಎಂಬುದನ್ನು ಮ್ಯಾಜಿಸ್ಟ್ರೇಟ್ ವಿಚಾರಣೆ ನಡೆಸಬೇಕಾಗುತ್ತದೆ. ರಕ್ಷಿಸಲ್ಪಟ್ಟ ವ್ಯಕ್ತಿಯನ್ನು ಅವರ ಪೋಷಕರು, ಪತಿ ಅಥವಾ ಪೋಷಕರಿಗೆ ಒಪ್ಪಿಸುವ ಆದೇಶವನ್ನು ಹೊರಡಿಸುವ ಮೊದಲು ಮ್ಯಾಜಿಸ್ಟ್ರೇಟ್ ವಿಚಾರಣೆ ನಡೆಸುವುದನ್ನು ಸೆಕ್ಷನ್ 17ಎ ಕಡ್ಡಾಯಗೊಳಿಸುತ್ತದೆ ಎಂದು ಹೈಕೋರ್ಟ್ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ದೆಹಲಿ ಮತ್ತು ಬಾಂಬೆ ಹೈಕೋರ್ಟ್‌ಗಳ ತೀರ್ಪುಗಳನ್ನು ಉಲ್ಲೇಖಿಸಿರುವ ನ್ಯಾಯಾಲಯ, ರಕ್ಷಿಸಲ್ಪಟ್ಟ ವ್ಯಕ್ತಿಗಳನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದಾಗ, ಮ್ಯಾಜಿಸ್ಟ್ರೇಟ್ ಅವರು ಸೆಕ್ಷನ್ 17(2)ರ ಅಡಿಯಲ್ಲಿ ಮೊದಲ ಬಾರಿಗೆ ಹಾಜರುಪಡಿಸಿದಾಗಲೇ ಅವರ ವಯಸ್ಸನ್ನು ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ಆ ವ್ಯಕ್ತಿ 18 ವರ್ಷದೊಳಗಿನವರಾಗಿದ್ದು, ಕಾನೂನಿನ ಸಂಘರ್ಷಕ್ಕೊಳಪಟ್ಟ ಬಾಲಾಪರಾಧಿಯಾಗಿದ್ದರೆ ಬಾಲನ್ಯಾಯ ಮಂಡಳಿಗೆ ಅಥವಾ ಆ ವ್ಯಕ್ತಿಯು ಆರೈಕೆ ಮತ್ತು ರಕ್ಷಣೆಯ ಅಗತ್ಯವಿರುವ ಮಗುವಾಗಿದ್ದರೆ ಮಕ್ಕಳ ಕಲ್ಯಾಣ ಸಮಿತಿಗೆ ಪ್ರಕರಣವನ್ನು ವರ್ಗಾಯಿಸಬೇಕು ಎಂದು ಹೇಳಿದೆ.
ಮೇಲಿನ ತೀರ್ಪುಗಳ ಆಧಾರದಲ್ಲಿ, ತನ್ನ ಮಗಳನ್ನೇ ವೇಶ್ಯಾವಾಟಿಕೆ ದಂದೆಯಲ್ಲಿ ಬಳಸಿಕೊಳ್ಳುತ್ತಿದ್ದಾಳೆ ಎಂದು ಆರೋಪಿಸಲಾದ ತಾಯಿಗೆ ಮಗುವನ್ನು ಹಸ್ತಾಂತರಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಯಾವುದೇ ವಿಚಾರಣಾ ಅರ್ಹತೆ (ಮೆರಿಟ್) ಹೊಂದಿರದ ಕಾರಣ ಅರ್ಜಿ ವಜಾಗೊಳಿಸಲಾಗುತ್ತಿದೆ ಎಂದು ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರ ಮಹಿಳೆ ಸಂತ್ರಸ್ತೆಯ ತಾಯಿಯಾಗಿದ್ದು, ವೇಶ್ಯಾವಾಟಿಕೆ ನಡೆಯುತ್ತಿದ್ದ ಲಾಡ್ಜ್ ಒಂದರಿಂದ ಸಂತ್ರಸ್ತೆಯನ್ನು ರಕ್ಷಿಸಲಾಗಿತ್ತು. ಸರ್ಕಾರ ಆಕೆಯನ್ನು ಮಕ್ಕಳ ಕಲ್ಯಾಣ ಕೇಂದ್ರದಲ್ಲಿ ಇರಿಸಿತ್ತು. ಈ ಮಧ್ಯೆ, ಮಗಳಿಗೆ 18 ವರ್ಷ ತುಂಬಿರುವುದರಿಂದ ಆಕೆಯನ್ನು ತನ್ನ ಸುಪರ್ದಿಗೆ ವಹಿಸುವಂತೆ ಕೋರಿ ಆಕೆಯ ತಾಯಿ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. 18 ವರ್ಷ ತುಂಬಿದವರನ್ನು ಮಕ್ಕಳ ಕಲ್ಯಾಣ ಕೇಂದ್ರದಲ್ಲಿ ಇರಿಸಲು ಸಾಧ್ಯವಿಲ್ಲ. ಆದ್ದರಿಂದ, ಮಗಳನ್ನು ತನ್ನ ವಶಕ್ಕೆ ಒಪ್ಪಿಸಬೇಕು ಎಂಬುದು ತಾಯಿಯ ವಾದವಾಗಿತ್ತು. ಆದರೆ, ತಾಯಿಯೇ ತನ್ನ ಮಗಳನ್ನು ವೇಶ್ಯಾವಾಟಿಕೆಗೆ ಒತ್ತಾಯಿಸಿದ್ದಳು ಎಂಬ ಆರೋಪದ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಾಲಯ ಆಕೆಯ ಅರ್ಜಿ ತಿರಸ್ಕರಿಸಿತ್ತು. ಇದರಿಂದ, ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು.