ಸಹಯೋಗ್‌ ಪೋರ್ಟಲ್‌ನಿಂದ ನಿರ್ಬಂಧ ವ್ಯವಸ್ಥೆ: ಎಕ್ಸ್‌ ಕಾರ್ಪ್‌ಗೆ ಮಧ್ಯಂತರ ಪರಿಹಾರ ನಿರಾಕರಿಸಿದ ಹೈಕೋರ್ಟ್‌

ಸಹಯೋಗ್ ಪೋರ್ಟಲ್ ಒಂದು ವೇದಿಕೆಯಾಗಿದ್ದು, ಇದು ಸರ್ಕಾರಿ ಸಂಸ್ಥೆಗಳು ಎಕ್ಸ್‌ನಂಥ ಅಂತರ್ಜಾಲ ಮಧ್ಯವರ್ತಿಗಳಿಗೆ ವಿಷಯ ನಿರ್ಬಂಧಿಸುವ ಆದೇಶಗಳನ್ನು ನೀಡಲು ಅನುವು ಮಾಡಿಕೊಡುತ್ತದೆ.
Karnataka High Court, X
Karnataka High Court, X
Published on

ಭಾರತದ ಕಾನೂನನ್ನು ಪಾಲಿಸಲು ಬದ್ಧವಾಗಿರುವುದಾಗಿ ಪ್ರಮುಖ ಸಾಮಾಜಿಕ ಮಾಧ್ಯಮ ಎಕ್ಸ್‌ ಕಾರ್ಪ್‌ ಗುರುವಾರ ವಾದಿಸಿದೆ. ಆದರೆ, ಕೇಂದ್ರ ಸರ್ಕಾರ ರೂಪಿಸಿರುವ ವಿಷಯ ನಿರ್ಬಂಧ ವ್ಯವಸ್ಥೆ ಸಹಯೋಗ್‌ ಪೋರ್ಟಲ್‌ನಲ್ಲಿ ಕಾನೂನು ದೋಷಗಳಿವೆ ಎಂದು ಅದು ಅಕ್ಷೇಪಿಸಿದೆ.

ಮಾಹಿತಿ ನಿರ್ಬಂಧ ಮಾಡುವುದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ಸಂಸ್ಥೆಗಳಿಗೆ ಆದೇಶಿಸಲು ಕೇಂದ್ರ ಸರ್ಕಾರವು ಸಹಯೋಗ್‌ ಪೋರ್ಟಲ್‌ ಆರಂಭಿಸಿರುವುದನ್ನು ಹಾಗೂ ಅದನ್ನು ಬಳಸುತ್ತಿರುವುದನ್ನು ಪ್ರಶ್ನಿಸಿ ಎಕ್ಸ್‌ ಕಾರ್ಪ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

ಎಕ್ಸ್‌ ಕಾರ್ಪ್‌ ಬಲವಂತದ ಕ್ರಮದ ಬಗ್ಗೆ ಆತಂಕಗೊಳ್ಳಲು ಯಾವುದೇ ಸಕಾರಣವಿಲ್ಲ ಎಂಬ ಕೇಂದ್ರದ ವಾದವನ್ನು ಆಲಿಸಿದ ನಂತರ ಹೈಕೋರ್ಟ್‌ ಎಕ್ಸ್‌ ಕಾರ್ಪ್‌ಗೆ ಯಾವುದೇ ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿತು.

ಒಂದೊಮ್ಮೆ ಯಾವುದೇ ತೆರನಾದ ಬಲವಂತದ ಕ್ರಮಕೈಗೊಳ್ಳುವುದು ಕಂಡುಬಂದರೆ ನ್ಯಾಯಾಲಯದ ಕದತಟ್ಟಲು ಎಕ್ಸ್‌ ಕಾರ್ಪ್‌ ಸ್ವತಂತ್ರವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಈ ನೆಲೆಯಲ್ಲಿ ಸದ್ಯದ ಹಂತದಲ್ಲಿ ಮಧ್ಯಂತರ ಪರಿಹಾರದ ಅಗತ್ಯವಿಲ್ಲ ಎಂದು ಅಂತಿಮ ವಿಚಾರಣೆಗಾಗಿ ಪ್ರಕರಣವನ್ನು ಮಾರ್ಚ್‌ 24ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ, ಎಕ್ಸ್‌ ಕಾರ್ಪ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ ಜಿ ರಾಘವನ್‌ ಅವರು “ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 69ಎ ಅಡಿ ಅನುಗುಣವಾಗಿ ನಿರ್ಬಂಧ ಆದೇಶ ಮಾಡದಿದ್ದರೆ ಎಕ್ಸ್‌ ಕಾರ್ಪ್‌ ವಿರುದ್ಧ ಯಾವುದೇ ಬಲವಂತದ ಕ್ರಮಕೈಗೊಳ್ಳದಂತೆ ಕೇಂದ್ರ ಸರ್ಕಾರಕ್ಕೆ ಆದೇಶಿಸಬೇಕು. ಸೆಕ್ಷನ್‌ 79(3)(b) ಅಡಿ ನಿರ್ಬಂಧ ಆದೇಶ ಮಾಡಲಾಗದು” ಎಂದು ವಾದಿಸಿದರು.

ನಿರ್ಬಂಧ ಆದೇಶಗಳಿಗೆ ಸಂಬಂಧಿಸಿದಂತೆ ಸೆಕ್ಷನ್‌ 69ಎ ಸಿಂಧುತ್ವವನ್ನು ಶ್ರೇಯಾ ಸಿಂಘಾಲ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಎತ್ತಿಹಿಡಿಯಲು ಏಕೈಕ ಕಾರಣವೆಂದರೆ ಅದರಲ್ಲಿ ರಕ್ಷಣಾ ಕ್ರಮಗಳಿರುವುದಾಗಿದೆ. ಆದರೆ, ಸೆಕ್ಷನ್‌ 79(3)(b) ಅಡಿ ನಿರ್ಬಂಧ ಆದೇಶ ಮಾಡಿದಾಗ ಇಂತಹ ರಕ್ಷಣಾ ಕ್ರಮಗಳಿಗೆ ತಿಲಾಂಜಲಿ ನೀಡಲಾಗುತ್ತದೆ ಎಂದು ಅವರು ಆಕ್ಷೆಪಿಸಿದರು.

ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಮತ್ತು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅರವಿಂದ್‌ ಕಾಮತ್‌ ವಾದಿಸಿದರು.

Kannada Bar & Bench
kannada.barandbench.com