ಸಾಮಾಜಿಕ ಅಂತರ ಉಲ್ಲಂಘನೆ: ಟ್ರಾಕ್ಟರ್ ರ‍್ಯಾಲಿ ಆಯೋಜಕರ ವಿರುದ್ಧ ಕೈಗೊಂಡ ಕ್ರಮಗಳ ವಿವರ ಕೇಳಿದ ಕರ್ನಾಟಕ ಹೈಕೋರ್ಟ್

ಕೋವಿಡ್ ನಿರ್ವಹಣೆಯ ರಾಷ್ಟ್ರೀಯ ಮಾರ್ಗಸೂಚಿಗಳನ್ನು ಕರ್ನಾಟಕ ಅನುಸರಿಸುತ್ತಿಲ್ಲ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
ಸಾಮಾಜಿಕ ಅಂತರ ಉಲ್ಲಂಘನೆ: ಟ್ರಾಕ್ಟರ್ ರ‍್ಯಾಲಿ ಆಯೋಜಕರ ವಿರುದ್ಧ ಕೈಗೊಂಡ ಕ್ರಮಗಳ ವಿವರ ಕೇಳಿದ ಕರ್ನಾಟಕ ಹೈಕೋರ್ಟ್

ಜನವರಿ 26ರಂದು ಬೆಂಗಳೂರಿನಲ್ಲಿ ಆಯೋಜಿಸಿದ್ದ ರೈತರ ಟ್ರ್ಯಾಕ್ಟರ್ ರ‍್ಯಾಲಿಯ ಸಂಘಟಕರು ಮತ್ತು ಭಾಗವಹಿಸಿದವರ ವಿರುದ್ಧ ವಿಪತ್ತು ನಿರ್ವಹಣಾ ಕಾಯಿದೆಯಡಿ ಕೈಗೊಂಡ ಕ್ರಮಗಳ ಬಗ್ಗೆ ವಿವರಣೆ ನೀಡುವಂತೆ ಕರ್ನಾಟಕ ಹೈಕೋರ್ಟ್ ಸೋಮವಾರ ಸೂಚಿಸಿದೆ. ಕೃಷಿ ಕಾಯಿದೆಗಳ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿ ಗಣರಾಜ್ಯೋತ್ಸವ ದಿನದ ಮೆರವಣಿಗೆಯ ನಂತರ ನಡೆದ ಟ್ರ್ಯಾಕ್ಟರ್ ರ‍್ಯಾಲಿಯಲ್ಲಿ ರಾಜ್ಯದ ರೈತರು ಭಾಗವಹಿಸಿದ್ದರು. ಜನವರಿ 26ರಂದು ನಡೆದ ರ‍್ಯಾಲಿಯಲ್ಲಿ ಸಂಘಟಕರು ಮತ್ತು ಭಾಗವಹಿಸಿದವರ ವಿರುದ್ಧ ಕೈಗೊಂಡ ಕ್ರಮಗಳ ಕುರಿತು ಹೆಚ್ಚುವರಿ ಸರ್ಕಾರಿ ವಕೀಲರು ಜ್ಞಾಪಕ ಪತ್ರ ಸಲ್ಲಿಸಬೇಕೆಂದು ನ್ಯಾಯಾಲಯ ಸೋಮವಾರ ಆದೇಶಿಸಿದೆ.

ಕೇಂದ್ರ ಗೃಹ ಸಚಿವಾಲಯದ (ಎಂಎಚ್‌ಎ) ಮಾರ್ಗಸೂಚಿಗಳ ಭಾಗವಾಗಿರುವ ಕೋವಿಡ್ -19 ನಿರ್ವಹಣೆಯ ರಾಷ್ಟ್ರೀಯ ನಿರ್ದೇಶನಗಳನ್ನು ರಾಜ್ಯದಲ್ಲಿ ಪಾಲಿಸುತ್ತಿಲ್ಲ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಎಸ್ ಎಸ್ ಮಗದುಮ್ ಅವರಿದ್ದ ನ್ಯಾಯಪೀಠ ಈ ಆದೇಶ ಜಾರಿ ಮಾಡಿದೆ.

ರ‍್ಯಾಲಿಯಲ್ಲಿ ಸುಮಾರು 25 ಸಾವಿರ ಮಂದಿ ಭಾಗವಹಿಸಿದ್ದು, ಸಾಮಾಜಿಕ ಅಂತರ ಮತ್ತು ಮುಖಗವಸು ಧರಿಸುವುದಕ್ಕೆ ಸಂಬಂಧಿಸಿದ ಸರ್ಕಾರದ ನಿರ್ದೇಶನಗಳನ್ನು ಪಾಲಿಸಿರಲಿಲ್ಲ ಎಂದು ವಕೀಲ ಜಿ ಆರ್ ಮೋಹನ್ ನ್ಯಾಯಾಲಯಕ್ಕೆ ತಿಳಿಸಿದರು. ನಿರ್ದೇಶನ ಪಾಲಿಸುವಲ್ಲಿ ವಿಫಲರಾದ 98 ಸಭಿಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರ ಪೀಠಕ್ಕೆ ತಿಳಿಸಿದೆ.

ಕಳೆದ ವರ್ಷ, ಬಿಜೆಪಿ, ಸಿಪಿಐ, ಜೆಡಿ (ಎಸ್), ಸಿಪಿಐ (ಎಂ), ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಕನ್ನಡ ಚಳವಳಿ ವಾಟಾಳ್‌ ಪಕ್ಷಗಳಿಗೆ ನ್ಯಾಯಾಲಯ ನೋಟಿಸ್ ನೀಡಿತ್ತು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಯಾವುದೇ ನಿಯಮ ಪಾಲಿಸದೇ ರಾಜಕೀಯ ಪಕ್ಷಗಳು ಅನೇಕ ರ‍್ಯಾಲಿ ನಡೆಸಿದ್ದವು. ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ರಾಜಕೀಯ ಪಕ್ಷಗಳು ಇನ್ನೂ ನ್ಯಾಯಾಲಯಕ್ಕೆ ಹಾಜರಾಗಿಲ್ಲ ಎಂದು ಪೀಠ ಸೋಮವಾರ ತಿಳಿಸಿದೆ. ಆ ಪಕ್ಷಗಳು ಕೂಡ ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ನ್ಯಾಯಾಲಯ ನಿರ್ದೇಶಿಸಿದ್ದು ತಪ್ಪಿದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

Related Stories

No stories found.
Kannada Bar & Bench
kannada.barandbench.com