2013ರ ಮಲ ಹೊರುವ ವೃತ್ತಿ ನಿಷೇಧ ಕಾಯಿದೆ ಜಾರಿ: ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ ಕರ್ನಾಟಕ ಹೈಕೋರ್ಟ್

ಕಾಯಿದೆಯಡಿ ಶಿಕ್ಷಾರ್ಹ ಅಪರಾಧಗಳ ವಿರುದ್ಧ ದಾಖಲಿಸಲಾದ ಎಫ್‌ಐಆರ್‌ಗಳ ಸಂಖ್ಯೆ, ಸಲ್ಲಿಸಲಾದ ಆರೋಪಪಟ್ಟಿಗಳ ವಿವರ, ಬಾಕಿ ಇರುವ ಪ್ರಕರಣಗಳು, ಶಿಕ್ಷೆ ವಿಧಿಸಲಾಗಿರುವ ಪ್ರಕರಣಗಳ ವಿವರಗಳನ್ನು ದಾಖಲೆಯಲ್ಲಿ ನೀಡತಕ್ಕದ್ದು ಎಂದು ಪೀಠ ತಿಳಿಸಿದೆ.
Manual Scavenging, Karnataka High Court
Manual Scavenging, Karnataka High CourtFirstpost
Published on

ಮಲ ಹೊರುವ ಪದ್ದತಿಯನ್ನು ಅತ್ಯಂತ ʼಅಮಾನವೀಯʼ ಎಂದು ಬಣ್ಣಿಸಿರುವ ಕರ್ನಾಟಕ ಹೈಕೋರ್ಟ್‌ 2013ರ ಮಲ ಹೊರುವ ವೃತ್ತಿ ನಿಷೇಧ ಮತ್ತು ಪುನರ್ವಸತಿ ಕಾಯಿದೆಯ ಜಾರಿಗಾಗಿ ರಾಜ್ಯ ಸರ್ಕಾರಕ್ಕೆ ವಿವಿಧ ನಿರ್ದೇಶನಗಳನ್ನು ನೀಡಿದೆ. ʼದೇಶದ ಸಂವಿಧಾನ ಯಾವುದೇ ಬಗೆಯ ಮಲ ಹೊರುವ ಪದ್ದತಿಗೆ ಅನುಮತಿ ನೀಡುವುದಿಲ್ಲ. ಈ ಕಾರ್ಯಕ್ಕೆ ಯಾರಾದರೂ ಒತ್ತಾಯಿಸಿದರೆ ಅದು ಸಂವಿಧಾನದ 21ನೇ ಪರಿಚ್ಛೇದದ ಅಡಿ ದೊರೆತಿರುವ ಮೂಲಭೂತ ಹಕ್ಕಿನ ಸಂಪೂರ್ಣ ಉಲ್ಲಂಘನೆಯಾಗಲಿದೆʼ ಎಂದು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಮತ್ತು ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.

ರಾಜ್ಯಸರ್ಕಾರಕ್ಕೆ ನ್ಯಾಯಾಲಯ ನೀಡಿರುವ ನಿರ್ದೇಶನಗಳು ಇಂತಿವೆ:

  • ಕಾಯಿದೆಯಡಿ ಶಿಕ್ಷಾರ್ಹ ಅಪರಾಧಗಳ ವಿರುದ್ಧ ದಾಖಲಿಸಲಾದ ಎಫ್‌ಐಆರ್‌ಗಳ ಸಂಖ್ಯೆ, ಸಲ್ಲಿಸಲಾದ ಆರೋಪಪಟ್ಟಿಗಳ ವಿವರ, ಬಾಕಿ ಇರುವ ಪ್ರಕರಣಗಳು, ಶಿಕ್ಷೆ ವಿಧಿಸಲಾಗಿರುವ ಪ್ರಕರಣಗಳ ವಿವರಗಳನ್ನು ದಾಖಲೆಯಲ್ಲಿ ನೀಡತಕ್ಕದ್ದು.

  • ಖುಲಾಸೆಗೆ ಕಾರಣವಾದ ಪ್ರಕರಣಗಳ ವಿವರವನ್ನು ದಾಖಲೆಯಲ್ಲಿ ನೀಡಬೇಕು.

  • ಜಿಲ್ಲಾ ಮಟ್ಟದ ಸಮೀಕ್ಷಾ ಸಮಿತಿಗಳು ಮಲ ಹೊರುವ ಪದ್ದತಿ ಕುರಿತಂತೆ ಸಮೀಕ್ಷೆ ನಡೆಸಿವೆಯೇ ಮತ್ತು ಆಯಾ ಜಿಲ್ಲೆಗಳಲ್ಲಿ ಮಲ ಹೊರುವವರ ಪಟ್ಟಿಯನ್ನು ಸಮಿತಿಗಳು ಪ್ರಕಟಿಸಿವೆಯೇ ಎಂಬುದನ್ನು ಅರಿಯಲು ಜಿಲ್ಲೆಗಳಿಂದ ದತ್ತಾಂಶ ಸಂಗ್ರಹಿಸಬೇಕು.

  • ರಾಜ್ಯ ಮಟ್ಟದ ಸಮೀಕ್ಷಾ ಸಮಿತಿಗಳ ರಚನೆಗೆ ಸಂಬಂಧಿಸಿದಂತೆ ಅಗತ್ಯ ವಿವರಗಳ ಸಂಗ್ರಹ ಮತ್ತು ಸಮಿತಿ ಎಷ್ಟು ಸಭೆಗಳನ್ನು ನಡೆಸಿದೆ ಎಂಬುದರ ಕುರಿತು ವಿವರಗಳನ್ನು ದಾಖಲಿಸತಕ್ಕದ್ದು.

  • ರಾಜ್ಯಾದ್ಯಂತ ಇರುವ ಮಲದ ಗುಂಡಿಗಳ ಸಮೀಕ್ಷೆ ಮತ್ತು ಪರಿವರ್ತನೆ ಮಾಡಲಾದ ಅಥವಾ ಕೆಡವಿರುವ ಮಲದ ಗುಂಡಿಗಳ ಮಾಹಿತಿ ನೀಡುವುದು.

ಇದಲ್ಲದೆ ಮಲ ಹೊರುವವರ ಜಿಲ್ಲಾವಾರು, ರಾಜ್ಯವಾರು ಮಾಹಿತಿಯನ್ನೊಳಗೊಂಡ ಅಂತಿಮ ವರದಿ, ನಿಯಮಗಳ ಕಟ್ಟುನಿಟ್ಟಿನ ಜಾರಿಗೆ ಸ್ಥಳೀಯ ಅಧಿಕಾರಿಗಳಿಗೆ ನಿರ್ದೇಶನ, ಬಯಲು ಮಲವಿಸರ್ಜನೆ ವಿರುದ್ಧ ಜಾಗೃತಿ, ಮಲಹೊರುವವರ ಪುನರ್ವಸತಿಗೆ ಕೈಗೊಂಡ ಯೋಜನೆಗಳು, ಇತ್ಯಾದಿ ಅಂಶಗಳ ಸಂಬಂಧ ಸರ್ಕಾರಕ್ಕೆ ಸೂಚನೆಗಳನ್ನು ನೀಡಲಾಗಿದೆ.

ಮಲಹೊರುವಿಕೆಯನ್ನು ರಾಜ್ಯದಲ್ಲಿ ಸಂಪೂರ್ಣವಾಗಿ ನಿಷೇಧಿಸುವಂತೆ ಕೋರಿ ದಾಖಲಾಗಿರುವ ಎರಡು ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯವು ನಡೆಸುತ್ತಿದೆ. ಪ್ರಕರಣದ ಮುಂದಿನ ವಿಚಾರಣೆ ಫೆ. 21ಕ್ಕೆ ನಿಗದಿಯಾಗಿದೆ.

Kannada Bar & Bench
kannada.barandbench.com