ಭಾರತೀಯ ದಂಪತಿಯಿಂದ ಉಗಾಂಡ ಮಗುವಿನ ದತ್ತು: ಮಾನ್ಯತೆಗೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಹೇಗ್‌ ದತ್ತು ಒಪ್ಪಂದಕ್ಕೆ ಉಗಾಂಡ ಸಹಿ ಹಾಕದಿರುವುದು ಭಾರತೀಯ ದಂಪತಿಯ ಮಗುವಿನ ಹಕ್ಕು ಕಸಿಯಲು ಕಾರಣವಾಗದು ಎಂದು ನ್ಯಾಯಾಲಯ ಹೇಳಿದೆ.
Karnataka High Court
Karnataka High Court

ಉಗಾಂಡ ದೇಶವು ಹೇಗ್‌ ದತ್ತು ಒಪ್ಪಂದಕ್ಕೆ ಸಹಿ ಹಾಕದ ಹೊರತಾಗಿಯೂ ಭಾರತೀಯ ದಂಪತಿ ಉಗಾಂಡದ ಮಗುವನ್ನು ದತ್ತು ಪಡೆದಿರುವುದನ್ನು ಮಾನ್ಯಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಈಚೆಗೆ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ.

ಹೇಗ್‌ ದತ್ತು ಒಪ್ಪಂದಕ್ಕೆ ಉಗಾಂಡ ಸಹಿ ಹಾಕದಿರುವುದು ಭಾರತೀಯ ದಂಪತಿಯ ಮಗುವಿನ ಹಕ್ಕು ಕಸಿಯಲು ಕಾರಣವಾಗಬಾರದು ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ಹೇಳಿದೆ.

“ಹಿಂದೂ ದತ್ತು ಮತ್ತು ನಿರ್ವಹಣಾ ಕಾಯಿದೆ ಅಡಿ ದತ್ತು ಪ್ರಕ್ರಿಯೆ ನಡೆಯದೇ ಇದ್ದರೂ ಹಾಗೂ ಹೇಗ್‌ ಒಪ್ಪಂದಕ್ಕೆ ಸಹಿ ಹಾಕದೇ ಇದ್ದರೂ ದತ್ತು ತೆಗೆದುಕೊಳ್ಳಲಾಗಿದೆ. ಹೀಗಾಗಿ, ದತ್ತು ತೆಗೆದುಕೊಂಡಿರುವ ಭಾರತೀಯ ದಂಪತಿಯ ಮಗುವಿನ ಹಕ್ಕುಗಳನ್ನು ಅತಂತ್ರಗೊಳಿಸಲಾಗದು” ಎಂದು ನ್ಯಾಯಾಲಯ ಹೇಳಿದೆ.

ಕೀನ್ಯಾಕ್ಕೆ ತಮ್ಮ ವಾಸಸ್ಥಳ ಬದಲಿಸುವುದಕ್ಕೂ ಮುನ್ನ ಉಗಾಂಡದಲ್ಲಿ ನೆಲೆಸಿದ್ದ ಭಾರತೀಯ ದಂಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು. ಉಗಾಂಡದಲ್ಲಿದ್ದಾಗ ಭಾರತೀಯ ದಂಪತಿ ಮಗುವನ್ನು ದತ್ತು ಪಡೆದಿದ್ದರು. ಈ ಸಂಬಂಧ ಉಗಾಂಡದ ನ್ಯಾಯಾಲಯವು ಮಗುವನ್ನು ಭಾರತೀಯ ದಂಪತಿ ದತ್ತು ಪಡೆದಿದ್ದು, ಮಗುವಿನ ಮೇಲಿನ ಹಕ್ಕನ್ನು ಖಾತರಿಪಡಿಸಿತ್ತು. ಇದನ್ನು ಔಪಚಾರಿಕಗೊಳಿಸುವ ನಿಟ್ಟಿನಲ್ಲಿ ಭಾರತೀಯ ದಂಪತಿಯು ಕೇಂದ್ರೀಯ ದತ್ತು ಸಂಪನ್ಮೂಲ ಪ್ರಾಧಿಕಾರಕ್ಕೆ (ಸಿಎಆರ್‌ಎ) ಮನವಿ ಸಲ್ಲಿಸಿತ್ತು. ಇದಕ್ಕೆ ಸಿಎಆರ್‌ಎಯಿಂದ ಸ್ಪಂದನೆ ದೊರೆಯಿದ್ದಾಗ ದಂಪತಿಯು ಹೈಕೋರ್ಟ್‌ ಮೇಟ್ಟಿಲೇರಿದ್ದರು. ಈಗ ಹೈಕೋರ್ಟ್‌ ಅರ್ಜಿಯನ್ನು ಪುರಸ್ಕರಿಸಿದೆ.

Related Stories

No stories found.
Kannada Bar & Bench
kannada.barandbench.com