ಹೈಕೋರ್ಟ್‌ನ ಡಿಜಿಟಲ್ ಸಹಿ ಹೊಂದಿರುವ ಆದೇಶಗಳಿಗೆ ಭೌತಿಕ ದೃಢೀಕೃತ ಪ್ರತಿ ಕಡ್ಡಾಯವಲ್ಲ: ಹೈಕೋರ್ಟ್ ನಿರ್ದೇಶನ

ಹೈಕೋರ್ಟ್ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿದ ಡಿಜಿಟಲ್ ಸಹಿ ಮತ್ತು ಕ್ಯೂಆರ್ ಕೋಡ್ ಹೊಂದಿರುವ ಆದೇಶಗಳನ್ನು ಸ್ವೀಕರಿಸುವಂತೆ ಸುತ್ತೋಲೆ ಹೊರಡಿಸಿರುವ ರಿಜಿಸ್ಟ್ರಾರ್.‌
High Court of Karnataka
High Court of Karnataka
Published on: 

ಕರ್ನಾಟಕ ಹೈಕೋರ್ಟ್‌ನ ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಲಾದ ಡಿಜಿಟಲ್ ಸಹಿ ಮತ್ತು ಕ್ಯೂಆರ್ ಕೋಡ್ ಹೊಂದಿರುವ ದೈನಂದಿನ ಹಾಗೂ ಅಂತಿಮ ಆದೇಶಗಳು ಮತ್ತು ತೀರ್ಪುಗಳನ್ನು ಪ್ರತ್ಯೇಕ ಭೌತಿಕ ದೃಢೀಕೃತ ಪ್ರತಿಗಾಗಿ (Certified Copy) ಪಟ್ಟುಹಿಡಿಯದೆ ಸ್ವೀಕರಿಸಿ, ಅದರಂತೆ ಕ್ರಮವಹಿಸುವಂತೆ ರಾಜ್ಯದ ಎಲ್ಲಾ ಅಧೀನ ನ್ಯಾಯಾಲಯಗಳು ಮತ್ತು ನ್ಯಾಯಮಂಡಳಿಗಳಿಗೆ ಹೈಕೋರ್ಟ್ ನಿರ್ದೇಶಿಸಿದೆ.

ಈ ಸಂಬಂಧ ಹೈಕೋರ್ಟ್ ನವೆಂಬರ್ 25ರಂದು ಸುತ್ತೋಲೆ ಹೊರಡಿಸಿದ್ದು, ನವೆಂಬರ್ 26ರಿಂದಲೇ ಅದು ಜಾರಿಗೆ ಬಂದಿದೆ.

ಹೈಕೋರ್ಟ್‌ನ ಅಧಿಕೃತ ವೆಬ್‌ಸೈಟ್‌ನಿಂದ ಪಿಡಿಎಫ್ ರೂಪದಲ್ಲಿ ಡೌನ್‌ಲೋಡ್ ಮಾಡಲಾದ ಆದೇಶಗಳು ಮತ್ತು ತೀರ್ಪುಗಳು ಡಿಜಿಟಲ್ ಸಹಿ ಹಾಗೂ ಕ್ಯೂಆರ್ ಕೋಡ್ ಹೊಂದಿದ್ದರೆ, ಅವುಗಳನ್ನು ಅಧೀನ ನ್ಯಾಯಾಲಯಗಳು ಮತ್ತು ನ್ಯಾಯಮಂಡಳಿಗಳು ಮಾನ್ಯವಾಗಿ ಸ್ವೀಕರಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಅಂತಹ ಆದೇಶಗಳ ದೃಢೀಕರಣವನ್ನು ಡಿಜಿಟಲ್ ಸಹಿ, ಕ್ಯೂಆರ್ ಕೋಡ್ ಅಥವಾ ಹೈಕೋರ್ಟ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಒದಗಿಸಿರುವ ಇತರ ಪರಿಶೀಲನಾ ವ್ಯವಸ್ಥೆಗಳ ಮೂಲಕ ಖಚಿತಪಡಿಸಿಕೊಳ್ಳಬಹುದು ಎಂದು ಸುತ್ತೋಲೆ ಸ್ಪಷ್ಟಪಡಿಸಿದೆ.

“ಡಿಜಿಟಲೀಕರಣ ಉಪಕ್ರಮಕ್ಕೆ ಪರಿಣಾಮಕಾರಿಯಾಗಿ ಸಹಕರಿಸಬೇಕು. ವಿದ್ಯುನ್ಮಾನವಾಗಿ ಪರಿಶೀಲಿಸಲು ಸಾಧ್ಯವಿರುವ ಆದೇಶಗಳಿಗೆ ಭೌತಿಕ ದೃಢೀಕರಣವನ್ನು ಒತ್ತಾಯಿಸಬಾರದು” ಎಂದು ಸುತ್ತೋಲೆಯಲ್ಲಿ ನಿರ್ದೇಶಿಸಲಾಗಿದೆ.

ಮುಖ್ಯ ನ್ಯಾಯಮೂರ್ತಿಗಳ ಆದೇಶದ ಮೇರೆಗೆ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಎಂ ಚಂದ್ರಶೇಖರ್ ರೆಡ್ಡಿ ಅವರು ಈ ಸುತ್ತೋಲೆ ಹೊರಡಿಸಿದ್ದಾರೆ.

ರಾಜ್ಯದ ಎಲ್ಲಾ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಘಟಕ ಮುಖ್ಯಸ್ಥರಿಗೆ ಈ ಸುತ್ತೋಲೆಯನ್ನು ರವಾನಿಸಲಾಗಿದೆ.