ಐಪಿಎಸ್‌ಯೇತರ ಅಧಿಕಾರಿಗಳಿಗೆ ಎಸ್‌ಪಿ ವೃಂದಕ್ಕೆ ಬಡ್ತಿ: ಎರಡು ತಿಂಗಳಲ್ಲಿ ಕ್ರಮಕೈಗೊಳ್ಳಲು ಸರ್ಕಾರಕ್ಕೆ ನಿರ್ದೇಶನ

ಎಸ್‌ಪಿ ಹುದ್ದೆಗೆ ಬಡ್ತಿ ನೀಡುವ ಸಂಬಂಧ 2025ರ ಆಗಸ್ಟ್ 20ರಂದು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ (ಕೆಎಸ್‌ಎಟಿ) ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ಭಾಗಶಃ ಪುರಸ್ಕರಿಸಿದೆ.
Karnataka High Court, Police
Karnataka High Court, Police
Published on

ರಾಜ್ಯ ಪೊಲೀಸ್‌ ಸೇವೆಯಲ್ಲಿದ್ದ 30 ಐಪಿಎಸ್‌ಯೇತರ (ನಾನ್ ಐಪಿಎಸ್) ಅಧಿಕಾರಿಗಳಿಗೆ ಪೊಲೀಸ್‌ ವರಿಷ್ಠಾಧಿಕಾರಿ (ಎಸ್‌ಪಿ) ವೃಂದಕ್ಕೆ ಬಡ್ತಿ ನೀಡುವ ಕುರಿತು ಎರಡು ತಿಂಗಳೊಳಗೆ ಮರುಪರಿಶೀಲಿಸಿ, ಇಲಾಖಾ ಬಡ್ತಿ ಸಮಿತಿಯ (ಡಿಪಿಸಿ) ಶಿಫಾರಸ್ಸು ಹಾಗೂ ಹುದ್ದೆಗಳ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಈಚೆಗೆ ನಿರ್ದೇಶಿಸಿದೆ.

ಎಸ್‌ಪಿ ಹುದ್ದೆಗೆ ಬಡ್ತಿ ನೀಡುವ ಸಂಬಂಧ 2025ರ ಆಗಸ್ಟ್ 20ರಂದು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ (ಕೆಎಸ್‌ಎಟಿ) ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಸ್ ಜಿ ಪಂಡಿತ್ ಮತ್ತು ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠ ಭಾಗಶಃ ಪುರಸ್ಕರಿಸಿದೆ.

Justices SG Pandit & KV Aravind
Justices SG Pandit & KV Aravind

ಕೆಎಸ್‌ಎಟಿ ಆದೇಶ ಮಾರ್ಪಾಟು ಮಾಡಿರುವ ನ್ಯಾಯಾಲಯವು 2023ರ ನವೆಂಬರ್ 15ರ ಡಿಪಿಸಿ ಶಿಫಾರಸ್ಸು, ಎಸ್‌ಪಿ ಹುದ್ದೆಗಳ ಲಭ್ಯತೆ ಆಧರಿಸಿ ಗೃಹ ಸಚಿವರ ಅನುಮೋದನೆ ಪಡೆದು ಎರಡು ತಿಂಗಳಲ್ಲಿ ಪ್ರತಿವಾದಿ ಅಧಿಕಾರಿಗಳಿಗೆ ಎಸ್‌ಪಿ ಹುದ್ದೆಗೆ ಬಡ್ತಿ ನೀಡುವ ಕುರಿತು ತೀರ್ಮಾನಿಸಬೇಕು ಎಂದು ಆದೇಶಿಸಿದೆ.

ಈ ಪ್ರಕರಣದಲ್ಲಿ ಉನ್ನತೀಕರಿಸಲಾದ ಹುದ್ದೆಗಳು ಕೇವಲ ಎರಡು ವರ್ಷಕ್ಕೆ ಲಭ್ಯವಿವೆ. ಆದರೆ, ಬಡ್ತಿ ಆದೇಶ ಹೊರಡಿಸುವ ದಿನಾಂಕ 2023 ಪರಿಗಣಿಸಿದರೆ ಆ 30 ಹುದ್ದೆಗಳ ಉನ್ನತೀಕರಿಸಿದ ಅವಧಿ ಮುಕ್ತಾಯವಾಗಲಿದೆ. ಆದ್ದರಿಂದ, ಹುದ್ದೆಗಳು ಖಾಲಿ ಇರುವ ಅಂಶವನ್ನು ನ್ಯಾಯಮಂಡಳಿ ಪರಿಗಣಿಸಬೇಕಿತ್ತು. ಆದ್ದರಿಂದ, ನ್ಯಾಯಮಂಡಳಿ ಆದೇಶವನ್ನು ಕೊಂಚ ಮಾರ್ಪಾಡು ಮಾಡಬೇಕಾಗಿದೆ ಎಂದು ಹೆಚ್ಚುವರಿ ಅಡ್ವೊಕೇಟ್ ಜನರಲ್ (ಎಎಜಿ) ಕೋರಿರುವುದು ಸಮಂಜಸವಾಗಿದೆ ಎಂದು ಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ: 2023ರ ನವೆಂಬರ್ 15ರಂದು ನಡೆದ ಇಲಾಖಾ ಬಡ್ತಿ ಸಮಿತಿ ಸಭೆಯು ಡಿಎಸ್‌ಪಿಗಳಾಗಿದ್ದ 30 ಮಂದಿ ಪ್ರತಿವಾದಿ ಅಧಿಕಾರಿಗಳಿಗೆ  ಐಪಿಎಸೇತರ ಎಸ್‌ಪಿ ವೃಂದಕ್ಕೆ (ಸಿವಿಲ್‌) ನೇರವಾಗಿ ಬಡ್ತಿ ನೀಡಲು ತೀರ್ಮಾನಿಸಿತ್ತು. ಆದರೆ, ಸರ್ಕಾರ ಅವರಿಗೆ ಬಡ್ತಿ ನೀಡುವ ಬದಲು ಕೆಸಿಎಸ್‌ಆರ್‌ ನಿಯಮ 32ರಂತೆ  ಪ್ರತಿವಾದಿಗಳಿಗೆ ಎಸ್‌ಪಿಗಳಾಗಿ ಉಸ್ತುವಾರಿ ಹೊಣೆಯನ್ನು ನೀಡಿತ್ತು.

ಡಿಪಿಸಿ ನಿರ್ಧಾರದ ಹೊರತಾಗಿಯೂ ಪ್ರತಿವಾದಿ ಪೊಲೀಸ್‌ ಅಧಿಕಾರಿಗಳಿಗೆ ನೇರ ಬಡ್ತಿಯನ್ನು ನೀಡಿರಲಿಲ್ಲ. ಇದನ್ನು ಪ್ರಶ್ನಿಸಿ ಎ.ವಿ. ಲಕ್ಷ್ಮೀನಾರಾಯಣ, ಸಿ. ಸಿದ್ದರಾಜು ಸೇರಿ 30 ಅಧಿಕಾರಿಗಳು ಕೆಎಸ್‌ಎಟಿ ಮೊರೆ ಹೋಗಿದ್ದರು. ನ್ಯಾಯಮಂಡಳಿ ಅಷ್ಟು ಮಂದಿಗೂ ಎಸ್‌ಪಿ ವೃಂದಕ್ಕೆ ಬಡ್ತಿ ನೀಡುವಂತೆ ಸರ್ಕಾರಕ್ಕೆ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿತ್ತು.

Attachment
PDF
State of Karnataka Vs Lakshminarayana A V & others
Preview
Kannada Bar & Bench
kannada.barandbench.com