

“ಕಾನೂನು ತರ್ಕಬದ್ಧವಾಗಿರಬೇಕು ನಿಜ. ಆದರೆ, ಅದು ಎಂದಿಗೂ ಸಂವೇದನಾರಹಿತವಾಗಿ ಮತ್ತು ಮಾನವೀಯತೆಯನ್ನು ಕಳೆದುಕೊಂಡು ನಡೆಯಬಾರದು” ಎಂದು ವ್ಯಾಖ್ಯಾನಿಸಿರುವ ಕರ್ನಾಟಕ ಹೈಕೋರ್ಟ್ನ ಧಾರವಾಡ ಪೀಠವು ಪೊಲೀಸ್ ಕಾನ್ಸ್ಟೆಬಲ್ ಹುದ್ದೆಗೆ ಆಯ್ಕೆಯಾಗಿ ನೇಮಕಾತಿ ಆದೇಶ ಪಡೆಯುವ ಮುನ್ನ ರಸ್ತೆ ಅಪಘಾತದಲ್ಲಿ ಕಾಲು ಕಳೆದುಕೊಂಡ ಯುವಕನಿಗೆ ಪರ್ಯಾಯ ಉದ್ಯೋಗ ಕಲ್ಪಿಸುವಂತೆ ರಾಜ್ಯ ಪೊಲೀಸ್ ಇಲಾಖೆಗೆ ಆದೇಶಿಸಿದೆ.
ಅಪಘಾತದಲ್ಲಿ ಬಲಗಾಲಿನ ಅರ್ಧಭಾಗ ಕಳೆದುಕೊಂಡಿರುವ ಶಿವಕುಮಾರ್ ಹಿರೇಮಠ ಅವರನ್ನು ಪೊಲೀಸ್ ಇಲಾಖೆಯ ಜೂನಿಯರ್ ಡೇಟಾ ಎಂಟ್ರಿ ಆಪರೇಟರ್, ದ್ವಿತೀಯ ದರ್ಜೆ ಸಹಾಯಕ, ಸಹಾಯಕ ಬರಹಗಾರ ಅಥವಾ ಇವುಗಳಿಗೆ ಸಮಾನವಾದ ಯಾವುದೇ ಸೂಕ್ತ ಹುದ್ದೆಗೆ ಎಂಟು ವಾರಗಳಲ್ಲಿ ಪರಿಗಣಿಸುವಂತೆ ನ್ಯಾಯಮೂರ್ತಿಗಳಾದ ಎಂ ನಾಗಪ್ರಸನ್ನ ಮತ್ತು ಹೇಮಾ ಕುಲಕರ್ಣಿ ಅವರ ವಿಭಾಗೀಯ ಪೀಠ ನಿರ್ದೇಶಿಸಿದೆ.
ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯ (ಕೆಎಟಿ) ಆದೇಶ ಪ್ರಶ್ನಿಸಿ ಇಳಕಲ್ ತಾಲ್ಲೂಕಿನ ಹೆರೂರು ಗ್ರಾಮದ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ಪೀಠ ಈ ಆದೇಶ ನೀಡಿದೆ.
“ಯಶಸ್ಸಿನ ಫಲವನ್ನು ಅನುಭವಿಸಬೇಕಿದ್ದ ಅರ್ಜಿದಾರರಿಗೆ ಸರ್ಕಾರದ ಆಡಳಿತಾತ್ಮಕ ನಿಷ್ಕ್ರಿಯತೆ ಅಡ್ಡಿಯಾಗಿದೆ. ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗುವ ಅವಕಾಶ ಪಡೆಯುವ ಮುನ್ನವೇ ದುರದೃಷ್ಟ ಅವರ ಬದುಕಿನಲ್ಲಿ ರಕ್ಕಸನಂತೆ ಎರಗಿ ಕಾಲನ್ನೇ ಕಸಿದುಕೊಂಡಿದೆ” ಎಂದು ಪೀಠ ವಿಷಾದಿಸಿದೆ.
ನ್ಯಾಯಾಲಯವು ಮತ್ತಷ್ಟು ಮಾನವೀಯ ನೆಲೆಯಲ್ಲಿ ಪ್ರತಿಕ್ರಿಯಿಸಿದ್ದು, “ನ್ಯಾಯಾಲಯ ಅಪಘಾತವನ್ನು ತಡೆಯಲು ಸಾಧ್ಯವಿಲ್ಲ. ಕಾನೂನು ಕಳೆದುಕೊಂಡ ಕಾಲನ್ನು ಪುನರ್ಸ್ಥಾಪಿಸಲು ಸಾಧ್ಯವಿಲ್ಲ. ಆದರೆ, ಕಾನೂನಿಗೆ ಅನುಗುಣವಾಗಿ ಬದುಕಿಗೊಂದು ಅವಕಾಶ ಕಲ್ಪಿಸಲು ಸಂವಿಧಾನದಲ್ಲಿ ಖಂಡಿತವಾಗಿಯೂ ಬೆಳಕಿನ ಕಿಂಡಿಗಳಿವೆ” ಎಂದು ಹೇಳಿದೆ.
ಪ್ರಕರಣದ ಅಸಾಧಾರಣ ಸನ್ನಿವೇಶಗಳನ್ನು ಪರಿಗಣಿಸಿದ ಪೀಠವು ಕಾನೂನಿನ ನಿಯಮಗಳನ್ನು ಯಾಂತ್ರಿಕವಾಗಿ ಅನ್ವಯಿಸುವುದರಿಂದ ಅರ್ಜಿದಾರರಿಗೆ ಉಂಟಾಗಿರುವ ಅನ್ಯಾಯವನ್ನು ಕಡೆಗಣಿಸಲಾಗದು ಎಂದು ಅಭಿಪ್ರಾಯಪಟ್ಟಿದೆ.
“ಪ್ರಸ್ತುತ ಪ್ರಕರಣವು ಅಸಾಧಾರಣ ಸಂಗತಿಗಳನ್ನು ಒಳಗೊಂಡ ದುರದೃಷ್ಟಕರ ಸನ್ನಿವೇಶಗಳಿಗೆ ಸಾಕ್ಷಿಯಾಗಿದೆ. ಇಂತಹ ಸಂದರ್ಭಗಳಲ್ಲಿ ನ್ಯಾಯವನ್ನು ಸದಾಕಾಲ ನಿಯಮಗಳ ಧೃತರಾಷ್ಟ್ರಾಲಿಂಗನದಲ್ಲೇ ಇರಿಸಿ ನೋಡಲು ಸಾಧ್ಯವಿಲ್ಲ. ಕೆಲವೊಮ್ಮೆ ಅನ್ವಯಿಸಬಹುದಾದ ಇಂತಹ ಬಿಗಿಯುಪ್ಪುಗೆಯನ್ನು ನ್ಯಾಯಯುತವಾಗಿಯೇ ಸಡಿಲಗೊಳಿಸಬೇಕಾಗುತ್ತದೆ” ಎಂದು ಪೀಠ ಹೇಳಿದೆ.
ಸಾಂವಿಧಾನಿಕ ನ್ಯಾಯಾಲಯವಾಗಿ ಇಂತಹ ಪ್ರಕರಣಗಳಲ್ಲಿ ನತದೃಷ್ಟರಿಗೆ ನ್ಯಾಯ ಒದಗಿಸುವ ಧೈರ್ಯ ಮತ್ತು ಸಂಯಮವನ್ನು ಹೈಕೋರ್ಟ್ ಪ್ರದರ್ಶಿಸಬೇಕಾಗುತ್ತದೆ ಎಂದು ಹೇಳಿದ ನ್ಯಾಯಮೂರ್ತಿಗಳು, ರಿಟ್ ನ್ಯಾಯವ್ಯಾಪ್ತಿಯಲ್ಲಿನ ಅಧಿಕಾರ ಚಲಾಯಿಸಿ ಅರ್ಜಿದಾರರಿಗೆ ಪರ್ಯಾಯ ಉದ್ಯೋಗ ಕಲ್ಪಿಸಲು ನಿರ್ದೇಶಿಸಿದ್ದಾರೆ.
ತೀರ್ಪು ಪ್ರಕಟಿಸುವ ದಿನ ಶಿವಕುಮಾರ್ ಅವರು ಊರುಗೋಲಿನ ಸಹಾಯದಿಂದ ನ್ಯಾಯಾಲಯಕ್ಕೆ ಹಾಜರಾಗಿದ್ದರು. ನ್ಯಾಯಮೂರ್ತಿಗಳು ತೀರ್ಪು ಪ್ರಕಟಿಸುತ್ತಿದ್ದಂತೆಯೇ ಅವರು ಧನ್ಯತೆಯ ಭಾವದಿಂದ ಪೀಠಕ್ಕೆ ಕೈಮುಗಿದು, ಕಣ್ಣೀರಿನಿಂದ ಕೋರ್ಟ್ ಹಾಲ್ನಿಂದ ನಿರ್ಗಮಿಸಿದರು.
ಪ್ರಕರಣದ ಹಿನ್ನೆಲೆ: ಶಿವಕುಮಾರ್ ಅವರು 2019ರ ಸಿವಿಲ್ ಪೊಲೀಸ್ ಕಾನ್ಸ್ಟೆಬಲ್ ನೇಮಕಾತಿ ಪ್ರಕ್ರಿಯೆಯಲ್ಲಿ ಅರ್ಹತೆ ಪಡೆದಿದ್ದರು. ಆದರೆ, ಅವರು ಪೂರ್ಣಗೊಳಿಸಿದ್ದ ಮೂರು ವರ್ಷದ ಡಿಪ್ಲೊಮಾ ಕೋರ್ಸ್ ಪಿಯು ವಿದ್ಯಾರ್ಹತೆಗೆ ಸಮಾನವೇ ಎಂಬ ಗೊಂದಲದ ಹಿನ್ನೆಲೆಯಲ್ಲಿ ಸರ್ಕಾರ ನೇಮಕಾತಿ ಆದೇಶ ನೀಡದೆ ವಿಳಂಬ ಮಾಡಿತ್ತು.
ಇದನ್ನು ಪ್ರಶ್ನಿಸಿ ಅವರು ಕೆಎಟಿ ಮೊರೆ ಹೋಗಿದ್ದರು. ಅರ್ಜಿದಾರರನ್ನು ಸಿವಿಲ್ ಪೊಲೀಸ್ ಕಾನ್ಸ್ಟೆಬಲ್ ಹುದ್ದೆಗೆ ನೇಮಕ ಮಾಡುವಂತೆ ಕೆಎಟಿ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತ್ತು. ಆದಾಗ್ಯೂ, ಸರ್ಕಾರ ಒಂದು ವರ್ಷಕ್ಕೂ ಹೆಚ್ಚು ಕಾಲ ಆದೇಶವನ್ನು ಅನುಪಾಲನೆ ಮಾಡಿರಲಿಲ್ಲ.
ಕೊನೆಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ ನಂತರ 2025ರ ಜನವರಿ 1ರಂದು ಶಿವಕುಮಾರ್ಗೆ ನೇಮಕಾತಿ ಆದೇಶ ನೀಡಲಾಗಿತ್ತು. ಆದರೆ, ಅದಕ್ಕೂ ಮುನ್ನವೇ ಅಂದರೆ 2024ರ ನವೆಂಬರ್ 30ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಅವರು ಬಲಗಾಲಿನ ಅರ್ಧಭಾಗ ಕಳೆದುಕೊಂಡಿದ್ದರು.
ಹೀಗಾಗಿ, ದೈಹಿಕ ಅಸಾಮರ್ಥ್ಯದ ಹಿನ್ನೆಲೆಯಲ್ಲಿ ನಿಯಮಾನುಸಾರ ಪೊಲೀಸ್ ಕಾನ್ಸ್ಟೆಬಲ್ ಹುದ್ದೆಗೆ ನೇಮಕಾತಿ ಆದೇಶವನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಇಲಾಖೆ ಹಿಂಬರಹ ನೀಡಿತ್ತು. ಇದನ್ನು ಪ್ರಶ್ನಿಸಿ ಅವರು ಮತ್ತೊಮ್ಮೆ ಕೆಎಟಿ ಮೊರೆ ಹೋಗಿದ್ದರು. ಆದರೆ, ಕೆಎಟಿ ಅವರ ಮನವಿಯನ್ನು ತಿರಸ್ಕರಿಸಿತ್ತು. ಇದರಿಂದ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿದಾರರ ಪರ ವಕೀಲರಾದ ಆದಿತ್ಯ ಆರ್. ಚಕ್ರಗಿರಿ ಮತ್ತು ಸುರೇಶ್ ಎಸ್. ಭಟ್ ವಾದ ಮಂಡಿಸಿದ್ದರು.