ಕಾಲ್ತುಳಿತ ಪ್ರಕರಣ: ಪಕ್ಷಕಾರರಿಗೆ ಎಸ್‌ಒಪಿ ನೀಡಿ ಸಲಹೆ ಪಡೆಯಲು ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಿಂದ 11 ಮಂದಿ ಸಾವನ್ನಪ್ಪಿರುವ ದುರ್ಘಟನೆಗೆ ಸಂಬಂಧಿಸಿದಂತೆ ನ್ಯಾಯಾಲಯವು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನಡೆಸಿತು.
ಕಾಲ್ತುಳಿತ ಪ್ರಕರಣ: ಪಕ್ಷಕಾರರಿಗೆ ಎಸ್‌ಒಪಿ ನೀಡಿ ಸಲಹೆ ಪಡೆಯಲು ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ
Published on

ಸಾರ್ವಜನಿಕ ಸಮಾರಂಭಗಳಲ್ಲಿ ಜನಸಂದಣಿ ನಿಯಂತ್ರಿಸುವುದಕ್ಕೆ ಸಂಬಂಧಿಸಿದಂತೆ ಪ್ರಮಾಣಿತ ಕಾರ್ಯಾಚರಣೆ ವಿಧಾನವನ್ನು (ಎಸ್‌ಒಪಿ) ಎಲ್ಲಾ ಪಕ್ಷಕಾರರ ಜೊತೆ ಹಂಚಿಕೊಳ್ಳಲಾಗುವುದು. ಅವರಿಂದ ಸಲಹೆ-ಸೂಚನೆ ಪಡೆದು, ಅದನ್ನು ಅಡಕಗೊಳಿಸಿ ನ್ಯಾಯಾಲಯದ ಮುಂದೆ ಮಂಡಿಸಲಾಗುವುದು ಎಂದು ರಾಜ್ಯ ಸರ್ಕಾರವು ಮಂಗಳವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಿಂದ 11 ಮಂದಿ ಸಾವನ್ನಪ್ಪಿರುವ ದುರ್ಘಟನೆಗೆ ಸಂಬಂಧಿಸಿದಂತೆ ನ್ಯಾಯಾಲಯವು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ವಿಭಾಗೀಯ ಪೀಠ ನಡೆಸಿತು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಎಸ್‌ಒಪಿ ಸಿದ್ಧವಾಗಿದ್ದು, ಅಮಿಕಸ್‌ ಕ್ಯೂರಿ ಎಸ್‌ ಸುಶೀಲಾ ಅವರು ಕೆಲವು ಸಲಹೆಗಳನ್ನು ನೀಡಿದ್ದಾರೆ. ಅವುಗಳನ್ನು ಅಡಕಗೊಳಿಸಲಾಗುವುದು. ಇದರ ಜೊತೆಗೆ ಎಲ್ಲಾ ಪಕ್ಷಕಾರರಿಗೆ ಅದನ್ನು ಹಂಚಲಾಗುವುದು. ಅವರೆಲ್ಲರೂ ನೀಡುವ ಸಲಹೆಗಳನ್ನು ಅದರಲ್ಲಿ ಅಡಕಗೊಳಿಸಿ, ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಗುವುದು” ಎಂದರು.

Also Read
ಕಾಲ್ತುಳಿತ ಪ್ರಕರಣ: ಜನಸಂದಣಿ ನಿಯಂತ್ರಣಕ್ಕೆ ಸರ್ಕಾರ ರೂಪಿಸಿರುವ ಎಸ್‌ಒಪಿ ಮಾಹಿತಿ ಕೇಳಿದ ಹೈಕೋರ್ಟ್‌

ಆಗ ಪೀಠವು “ಎಸ್‌ಒಪಿಗೆ ಸೀಮಿತವಾಗಿ ಪ್ರಕರಣವನ್ನು ನೋಡಲಾಗುವುದು. ಅದನ್ನು ಮೀರುವುದಿಲ್ಲ. ಎಲ್ಲರಿಗೂ ಎಸ್‌ಒಪಿ ಪ್ರತಿಯನ್ನು ಹಂಚಬೇಕು” ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿತು. ಅಲ್ಲದೇ, ಅಡ್ವೊಕೇಟ್‌ ಜನರಲ್‌ ಕೋರಿಕೆಯಂತೆ ಕಾಲಾವಕಾಶ ನೀಡಿ, ವಿಚಾರಣೆಯನ್ನು ಜನವರಿ 20ಕ್ಕೆ ಮುಂದೂಡಿತು.

Kannada Bar & Bench
kannada.barandbench.com