ವಿದೇಶದಲ್ಲಿದ್ದುಕೊಂಡು ಮತದಾನ ಮಾಡಲು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಹೈಕೋರ್ಟ್‌

ಮತದಾನದ ಹಕ್ಕು ಮೂಲಭೂತ ಹಕ್ಕಲ್ಲ. ಕಾನೂನಿನಲ್ಲಿ ಅದಕ್ಕೆ ಅವಕಾಶ ಕಲ್ಪಿಸದಿರುವಾಗ ಮತದಾನದ ಹಕ್ಕನ್ನು ಕೋರಲಾಗದು ಎಂಬ ಭಾರತೀಯ ಚುನಾವಣಾ ಆಯೋಗದ ವಾದವನ್ನು ನ್ಯಾಯಾಲಯ ಪುರಸ್ಕರಿಸಿತು.
Karnataka HC Justices Krishna S Dixit and Vijaykumar A. Patil
Karnataka HC Justices Krishna S Dixit and Vijaykumar A. Patil

ಕರ್ನಾಟಕದಲ್ಲಿ ಮೇ 10ರಂದು ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ತಾವು ನೆಲೆಸಿರುವ ದೇಶದಿಂದ ಅನಿವಾಸಿ ಭಾರತೀಯರಿಗೆ ಮತದಾನ ಮಾಡಲು ಅನುವು ಮಾಡಿಕೊಡಬೇಕು ಎಂದು ಕೋರಿ ಅನಿವಾಸಿ ಭಾರತೀಯರೊಬ್ಬರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮಂಗಳವಾರ ಕರ್ನಾಟಕ ಹೈಕೋರ್ಟ್‌ ವಜಾ ಮಾಡಿದೆ.

ಸಾಗರೋತ್ತರ ಕನ್ನಡಿಗರು ಸಂಸ್ಥೆಯ ಜಂಟಿ ಕಾರ್ಯದರ್ಶಿಯಾಗಿರುವ ಇಂಗ್ಲೆಂಡ್‌ನಲ್ಲಿರುವ ಮೈಸೂರಿನವರಾದ ಎಂ ರವಿ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ವಿಚಾರಣೆಗೆ ಅರ್ಹವಾಗಿಲ್ಲ ಎಂದು ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌. ದೀಕ್ಷಿತ್‌ ಮತ್ತು ವಿಜಯಕುಮಾರ್‌ ಎ. ಪಾಟೀಲ್‌ ಅವರ ನೇತೃತ್ವದ ರಜಾಕಾಲೀನ ವಿಭಾಗೀಯ ಪೀಠವು ವಜಾ ಮಾಡಿತು.

ಮತದಾನದ ಹಕ್ಕು ಮೂಲಭೂತ ಹಕ್ಕಲ್ಲ. ಕಾನೂನಿನಲ್ಲಿ ಅದಕ್ಕೆ ಅವಕಾಶ ಕಲ್ಪಿಸದಿರುವಾಗ ಮತದಾನದ ಹಕ್ಕನ್ನು ಕೋರಲಾಗದು ಎಂಬ ಭಾರತೀಯ ಚುನಾವಣಾ ಆಯೋಗದ ವಾದವನ್ನು ನ್ಯಾಯಾಲಯ ಪುರಸ್ಕರಿಸಿತು.

ಅನಿವಾಸಿ ಭಾರತೀಯ ಸಮುದಾಯದಲ್ಲಿನ ಕನ್ನಡಿಗರು ಮತ್ತು ಸಂಬಂಧಿತ ಸಂಸ್ಥೆಗಳನ್ನು ಒಂದು ವೇದಿಕೆಗೆ ತಂದು ಅವರ ಸಮಸ್ಯೆಗಳನ್ನು ಚರ್ಚಿಸಿ, ಪರಿಹಾರ ಪಡೆಯುವ ಉದ್ದೇಶದಿಂದ ಕೋವಿಡ್‌ ಸಂದರ್ಭದಲ್ಲಿ ಸಾಗರೋತ್ತರ ಕನ್ನಡಿಗರು ಸಂಸ್ಥೆ ಆರಂಭಿಸಲಾಗಿದೆ. ವಿಶ್ವದಾದ್ಯಂತ ಇರುವ ಕನ್ನಡಿಗರನ್ನು ಪ್ರತಿನಿಧಿಸುವ ಉದ್ದೇಶದಿಂದ ಕಮ್ಯೂನಿಟಿ ಇಂಟ್ರೆಸ್ಟ್‌ ಕಂಪೆನಿ ಅಡಿ ಇಂಗ್ಲೆಂಡ್‌ನಲ್ಲಿ ಸಾಗರೋತ್ತರ ಕನ್ನಡಿಗರು ಸಂಸ್ಥೆಯನ್ನು ನೋಂದಾಯಿಸಲಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ವಿದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಗಳಲ್ಲಿ ಮತದಾನದ ಬೂತ್‌ ತೆರೆಯುವ ಮೂಲಕ ಅಥವಾ ಅಂಚೆ ಮೂಲಕ ಮತದಾನ ಮಾಡಲು ಅನುವು ಮಾಡುವ ಮೂಲಕ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗೆ ಕೋರಿರುವುದಾಗಿ ಅನಿವಾಸಿ ಭಾರತೀಯರಾಗಿರುವ 2009ರಿಂದ ನೋಂದಾಯಿತ ನರ್ಸ್‌ ಆಗಿ ಕೆಲಸ ಮಾಡುತ್ತಿರುವ ರವಿ ಅವರು ಮನವಿಯಲ್ಲಿ ವಿವರಿಸಿದ್ದಾರೆ.

ತಾನು ಭಾರತೀಯ ಚುನಾವಣಾ ಆಯೋಗವು ನೀಡಿರುವ ಮತದಾರರ ಗುರುತಿನ ಚೀಟಿ ಹೊಂದಿದ್ದು, ವಿಶ್ವದಾದ್ಯಂತ ಕೆಲಸ ಮಾಡುತ್ತಿರುವ 60 ಲಕ್ಷ ಭಾರತೀಯರು ಅರ್ಹ ಮತದಾರರಾಗಿದ್ದಾರೆ. ಹಲವರು ಕುಟುಂಬದ ಜೊತೆ ನೆಲೆಸಿದ್ದು, ಮತ್ತಷ್ಟು ಜನರು ವಿಶ್ವದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಪಿಲಿಫೀನ್ಸ್ ಅಥವಾ ಇಟಲಿಯಲ್ಲಿ ನೆಲೆಸಿರುವ ಭಾರತೀಯ ಸಹೋದ್ಯೋಗಿಗಳು ತಾಯ್ನಾಡಿನಲ್ಲಿ ಚುನಾವಣೆ ನಡೆಯುವ ಸಂದರ್ಭದಲ್ಲಿ ಅಲ್ಲಿರುವ ಭಾರತದ ರಾಯಭಾರ ಕಚೇರಿಗೆ ತೆರಳಿ ಮತದಾನ ಮಾಡಲು ಅವಕಾಶ ನೀಡಬೇಕುಕ. ಹೀಗಾಗಿ, ತಾವು ನೆಲೆಸಿರುವ ರಾಷ್ಟ್ರಗಳಲ್ಲಿದ್ದುಕೊಂಡು ತಾಯ್ನಾಡಿನ ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶ ಮಾಡಿಕೊಡಲು ಭಾರತೀಯ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದ್ದರು. ಇದನ್ನು ನ್ಯಾಯಾಲಯ ವಜಾ ಮಾಡಿದೆ.

Related Stories

No stories found.
Kannada Bar & Bench
kannada.barandbench.com