ನಿಧಿ ದುರುಪಯೋಗ: ಅಜೀಂ ಪ್ರೇಮ್‌ಜಿ ಮತ್ತಿತರರ ವಿರುದ್ಧ ಕ್ರಿಮಿನಲ್‌ ಕ್ರಮ ಕೋರಿದ್ದ ಮನವಿ ವಜಾಗೊಳಿಸಿದ ಹೈಕೋರ್ಟ್‌
Karnataka High Court and Azim Premji

ನಿಧಿ ದುರುಪಯೋಗ: ಅಜೀಂ ಪ್ರೇಮ್‌ಜಿ ಮತ್ತಿತರರ ವಿರುದ್ಧ ಕ್ರಿಮಿನಲ್‌ ಕ್ರಮ ಕೋರಿದ್ದ ಮನವಿ ವಜಾಗೊಳಿಸಿದ ಹೈಕೋರ್ಟ್‌

ಆರ್‌ಬಿಐ ಕಾಯಿದೆಯಡಿ ನೋಂದಣಿ ಮಾಡದೆ ಪ್ರೇಮ್‌ಜಿ ಮತ್ತು ಇತರರು ವಿವಿಧ ಕಂಪನಿಗಳ ನಿರ್ದೇಶಕರಾಗಿದ್ದುಕೊಂಡು ಕೆಲ ಕಂಪನಿಗಳಲ್ಲಿ ಬ್ಯಾಂಕೇತರ ಹಣಕಾಸು ವ್ಯವಹಾರವನ್ನು ನಡೆಸುತ್ತಿದ್ದಾರೆ ಎಂದು ಅರ್ಜಿದಾರರ ದೂರಿದ್ದರು.

ವಿಪ್ರೊ ಸಂಸ್ಥಾಪಕ ಅಜೀಂ ಪ್ರೇಮ್‌ಜಿ ಮತ್ತಿತರರ ವಿರುದ್ಧ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಕಾಯಿದೆ ಅಡಿ ಹಣಕಾಸು ನಿಧಿ ದುರುಪಯೋಗ ಮಾಡಿಕೊಂಡ ಆರೋಪದಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಕೋರಿದ್ದ ಮನವಿಯನ್ನು ಈಚೆಗೆ ಕರ್ನಾಟಕ ಹೈಕೋರ್ಟ್‌ ವಜಾಗೊಳಿಸಿದೆ.

ಪ್ರೇಮ್‌ಜಿ ವಿರುದ್ಧದ ದೂರನ್ನು ವಜಾಗೊಳಿಸಿದ್ದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸರ್ಕಾರೇತರ ಸಂಸ್ಥೆಯಾದ ಇಂಡಿಯಾ ಅವೇಕ್‌ ಫಾರ್‌ ಟ್ರಾನ್ಸ್‌ಪೆರೆನ್ಸಿಯು ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿತ್ತು.

“ರಿಟ್‌ ಮನವಿ ಸಲ್ಲಿಸುವ ಮೂಲಕ ಕಾನೂನು ಪ್ರಕ್ರಿಯೆ ಮತ್ತು ನ್ಯಾಯಾಲಯವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ಸ್ಪಷ್ಟ ಅಭಿಪ್ರಾಯವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಮನವಿಯು ಅಸಮರ್ಥನೀಯ. 2017ರ ಸೆಪ್ಟೆಂಬರ್‌ 5ರಂದು ಹೊರಡಿಸಲಾಗದ ಆದೇಶದಲ್ಲಿ ಆರ್‌ಬಿಐ ಅರ್ಜಿದಾರರ ಅಹವಾಲನ್ನು ಪರಿಗಣಿಸಿದೆ. ಅದಾಗ್ಯೂ, ಅರ್ಜಿದಾರರಿಗೆ ಆದೇಶದ ಸಂಬಂಧ ಅಹವಾಲುಗಳಿದ್ದರೆ ಮ್ಯಾಜಿಸ್ಟ್ರೇಟ್‌ ಎದುರು ಖಾಸಗಿ ದೂರು ಅಥವಾ ನ್ಯಾಯಾಲಯದ ಮುಂದೆ ರಿಟ್‌ ಮನವಿಯ ಹೊರತಾಗಿ ಅಗತ್ಯ ಕ್ರಮಕೈಗೊಳ್ಳಬಹುದಾಗಿದೆ” ಎಂದು ಹೈಕೋರ್ಟ್‌ ಹೇಳಿದೆ.

ಅಲ್ಲದೆ, ಆರ್‌ಬಿಐ ಅರ್ಜಿದಾರರು ಪ್ರತಿವಾದಿಗಳಾದ ಪ್ರೆಮ್‌ಜಿ ಮತ್ತಿತರ ವಿರುದ್ಧದ ದೂರುಗಳನ್ನು ಸ್ಪಷ್ಟವಾಗಿ ತಿರಸ್ಕರಿಸಿದೆ ಎನ್ನುವುದನ್ನು ನ್ಯಾಯಾಲಯವು ಪರಿಗಣಿಸಿತು. ಈ ಸಂಬಂಧ ಬ್ಯಾಂಕುಗಳ ನಿಯಂತ್ರಣ ಸಂಸ್ಥೆಯಾದ ಆರ್‌ಬಿಐ ಸೆಪ್ಟೆಂಬರ್ 5, 2017ರಲ್ಲಿ ವಿಸ್ತೃತ ಆದೇಶವನ್ನು ನೀಡಿರುವುದನ್ನು ಗಮನಿಸಿತು.

ಆರ್‌ಬಿಐ ಕಾಯಿದೆಯಡಿ ನೋಂದಣಿ ಮಾಡದೆ ಪ್ರೇಮ್‌ಜಿ ಮತ್ತು ಇತರರು ವಿವಿಧ ಕಂಪನಿಗಳ ನಿರ್ದೇಶಕರಾಗಿದ್ದುಕೊಂಡು ಮೆಸರ್ಸ್ ಪ್ರೇಜಿಮ್ ಇನ್ವೆಸ್ಟ್‌ಮೆಂಟ್‌ ಅಂಡ್‌ ಟ್ರೇಡಿಂಗ್ ಕಂಪೆನಿ ಪ್ರೈವೇಟ್‌ ಲಿ., ಮೆಸರ್ಸ್ ತಾರಿಷ್ ಇನ್ವೆಸ್ಟ್‌ಮೆಂಟ್ ಅಂಡ್‌ ಟ್ರೇಡಿಂಗ್ ಕಂಪೆನಿ ಪ್ರೈವೇಟ್‌ ಲಿ., ಮೆಸರ್ಸ್ ಹಾಷಮ್ ಇನ್ವೆಸ್ಟ್‌ಮೆಂಟ್ಸ್ ಅಂಡ್‌ ಟ್ರೇಡಿಂಗ್‌ ಕಂಪೆನಿ ಪ್ರೈವೇಟ್‌ ಲಿ., ಗಳಲ್ಲಿ ಬ್ಯಾಂಕೇತರ ಹಣಕಾಸು ವ್ಯವಹಾರವನ್ನು ನಡೆಸುತ್ತಿದ್ದಾರೆ. ಈ ಮೂಲಕ ಆರ್‌ಬಿಐ ಕಾಯಿದೆಯ ಸೆಕ್ಷನ್‌ 45IA ಅಡಿ ಅಪರಾಧ ಎಸಗಿದ್ದಾರೆ ಎಂದು ಅರ್ಜಿದಾರರು ದೂರಿದ್ದಾರೆ.

Karnataka High Court and Azim Premji
ಪಿಎಂ ಕೇರ್ಸ್‌ನಿಂದ ಎನ್‌ಡಿಆರ್‌ಎಫ್ ಗೆ ಹಣ ವರ್ಗಾವಣೆ ಕೋರಿದ್ದ ಅರ್ಜಿಯ ತೀರ್ಪು ಮರುಪರಿಶೀಲನೆಗೆ ಸುಪ್ರೀಂನಲ್ಲಿ ಮನವಿ

ಸೆಕ್ಷನ್‌ 45IA ಅಡಿ ನೋಂದಣಿ ಮಾಡಿಸುವುದು ಕಡ್ಡಾಯಾವಾಗಿದೆ. ತಪ್ಪಿದಲ್ಲಿ ಸೆಕ್ಷನ್‌ 58B(4A) ಅಡಿ ಐದು ವರ್ಷ ಸಜೆ ಮತ್ತು ಐದು ಲಕ್ಷ ರೂಪಾಯಿವರೆಗೆ ದಂಡ ವಿಧಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಅಜೀಂ ಪ್ರೇಮ್‌ಜಿ ಮತ್ತಿತರರನ್ನು ಆರ್‌ಬಿಐ ಕಾಯಿದೆಯ ಸಂಬಂಧಿತ ನಿಬಂಧನೆಗಳ ಅಡಿ ವಿಚಾರಣೆಗೆ ಒಳಪಡಿಸಬೇಕು ಎಂದು ಮನವಿದಾರರು ಕೋರಿದ್ದರು.

ಮನವಿದಾರರು ದೆಹಲಿ ಹೈಕೋರ್ಟ್‌ ಮುಂದೆಯೂ ಇದೇ ಪರಿಹಾರವನ್ನು ಕೋರಿ ಖಾಸಗಿ ದೂರನ್ನು ಸಲ್ಲಿಸಿರುವುದನ್ನು ಹಾಗೂ ಈ ಹಿಂದೆ ಪಿಐಎಲ್‌ ಮೂಲಕ ಇದೇ ದೂರನ್ನು ಸಲ್ಲಿಸಿ ಆ ದೂರು ತಿರಸ್ಕೃತವಾಗಿದ್ದನ್ನೂ ಸಹ ನ್ಯಾಯಾಲಯವು ಗಮನಿಸಿತು. ಅರ್ಜಿದಾರರು ಕುಶಲತೆಯಿಂದ ಒಂದೇ ರೀತಿಯ ಪರಿಹಾರವನ್ನು ವಿವಿಧ ಅರ್ಜಿಗಳ ಮೂಲಕ ಕೋರಿದ್ದಾರೆ ಎನ್ನುವುದನ್ನು ನ್ಯಾಯಾಲಯವು ಗಮನಿಸಿತು. ಇದೇ ನ್ಯಾಯಾಲಯದಲ್ಲಿಯೇ, ಇದೇ ಪರಿಹಾರ ಕೋರಿರುವ ಪಿಐಎಲ್‌ ತಿರಸ್ಕೃತವಾಗಿರುವುದರಿಂದ, ಅರ್ಜಿದಾರರು ಮತ್ತೆ ಅದೇ ಅಂಶವನ್ನು ವಾದಮಂಡನೆಗೆ ಬಳಸಲಾಗದು ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿತು. "ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ದೂರು ವಜಾಗೊಂಡ ಮೇಲೆ ಅರ್ಜಿದಾರರು ತಮ್ಮ ಅದೃಷ್ಟವನ್ನು ಪಿಐಎಲ್‌ ಮೂಲಕ ಪರಿಶೀಲಿಸಲು ಮುಂದಾಗಿ ಅದರಲ್ಲಿಯೂ ತಿರಸ್ಕೃತಗೊಂಡಿದ್ದಾರೆ," ಎಂದು ನ್ಯಾಯಾಲಯವು ಹೇಳಿತು.

ಇದಕ್ಕೂ ಮುನ್ನ, ಅಜೀಂ ಪ್ರೇಮ್‌ಜಿ ಪರ ಹಿರಿಯ ವಕೀಲ ಎಸ್‌ ಗಣೇಶ್‌ ವಾದಿಸಿ ಅರ್ಜಿದಾರರು ಹೈಕೋರ್ಟ್‌ನಲ್ಲಿ ಮತ್ತೊಂದು ಪಿಐಎಲ್‌ ದಾಖಲಿಸಿದ್ದು, ಅದರಲ್ಲಿ ಆರ್‌ಬಿಐ ಗವರ್ನರ್‌ ಮತ್ತು ಇತರರನ್ನು ಪ್ರತಿವಾದಿಗಳನ್ನಾಗಿಸಲಾಗಿದೆ. ಆ ಮನವಿಯಲ್ಲೂ ಆರ್‌ಬಿಐ ಕಾಯಿದೆ ಉಲ್ಲಂಘಿಸಲಾಗಿದೆ ಎಂದು ಆರೋಪಿಸಲಾಗಿದ್ದು, ಅದೂ ಕೂಡ ವಜಾಗೊಂಡಿದೆ. ಈ ಮನವಿಯು ನಿರ್ವಹಣೆಗೆ ಸೂಕ್ತವಲ್ಲ ಎಂದಿದ್ದರು. ವಕೀಲ ಸಂದೀಪ್‌ ಹುಲಿಗೋಳ ಅವರು ನೆರವಾಗಿದ್ದರು. ಇದೇ ತೆರನಾದ ಮನವಿಯನ್ನು ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಿರುವುದರಿಂದ ಇದನ್ನು ವಜಾಗೊಳಿಸಬೇಕು ಎಂದು ಆರ್‌ಬಿಐ ಪರ ಹಿರಿಯ ವಕೀಲ ಆರ್‌ವಿಎಸ್‌ ನಾಯಕ್‌ ಮನವಿ ಮಾಡಿದರು. ವಕೀಲ ವಿ ವಿ ಗಿರಿ ನೆರವಾಗಿದ್ದರು.

No stories found.
Kannada Bar & Bench
kannada.barandbench.com