ನೀಟ್‌ ಪಿಜಿ ಪರೀಕ್ಷೆ ಮುಂದೂಡಿಕೆ: ಕೇಂದ್ರದ ನಿಲುವು ಪ್ರಶ್ನಿಸಿದ್ದ ಅರ್ಜಿ ಕರ್ನಾಟಕ ಹೈಕೋರ್ಟ್‌ನಲ್ಲಿ ವಜಾ

ಕೋವಿಡ್‌ ಹಿನ್ನೆಲೆಯಲ್ಲಿ ವ್ಯಾಪಕ ಚರ್ಚೆ ನಡೆಸಿದ ಬಳಿಕ ಪರೀಕ್ಷೆ ಮುಂದೂಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.
NEET and Karnataka HC
NEET and Karnataka HC

ಪ್ರಸಕ್ತ ವರ್ಷದ ಏಪ್ರಿಲ್‌ 8ಕ್ಕೆ ನಿಗದಿಯಾಗಿದ್ದ ಸ್ನಾತಕೋತ್ತರ ಪದವಿಯ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (ನೀಟ್‌) ಕೋವಿಡ್‌ ಹಿನ್ನೆಲೆಯಲ್ಲಿ ನಾಲ್ಕು ತಿಂಗಳ ಕಾಲ ಮುಂದೂಡಿರುವ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿಯನ್ನು ಕರ್ನಾಟಕ ಹೈಕೋರ್ಟ್‌ ವಜಾ ಮಾಡಿದೆ.

ನೀಟ್‌ ಪರೀಕ್ಷೆಯನ್ನು ಮುಂದೂಡಿರುವ ಕೇಂದ್ರ ಸರ್ಕಾರದ ನೀತಿಯ ನಿರ್ಧಾರದಲ್ಲಿ ತಪ್ಪು ಹುಡುಕುವುದು ಸರಿಯಲ್ಲ ಎಂದು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಹಂಚಾಟೆ ಸಂಜೀವ್‌ಕುಮಾರ್‌ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

“ನೀಟ್‌ ಪರೀಕ್ಷೆಯನ್ನು ಆಗಸ್ಟ್‌ 31ರ ಬಳಿಕ ನಡೆಸುವ ಕೇಂದ್ರ ಸರ್ಕಾರದ ನಿರ್ಧಾರದಲ್ಲಿ ತಪ್ಪು ಹುಡುಕುವುದು ಸರಿಯಲ್ಲ ಎಂಬುದು ನಮ್ಮ ಅಭಿಪ್ರಾಯ. ತಜ್ಞರ ಸಲಹೆ ಆಧರಿಸಿ ನಿರ್ಧಾರ ಕೈಗೊಂಡಿರುವ ಸಾಧ್ಯತೆ ಇದ್ದು, ಎರಡನೇ ಪ್ರತಿವಾದಿಯಾದ ಇಲಾಖೆಯು ಎಚ್ಚರಿಕೆ ವಹಿಸಿದೆ” ಎಂದು ನ್ಯಾಯಾಲಯ ಹೇಳಿದೆ.

“ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಪ್ರಸಕ್ತ ವರ್ಷದ ಮೊದಲಾರ್ಧದಲ್ಲಿ ಕೋವಿಡ್‌ ಸಾಂಕ್ರಾಮಿಕತೆ ಹೆಚ್ಚು ತೀವ್ರವಾಗಿದೆ ಎಂಬುದನ್ನು ಗಮನಿಸಬೇಕು. ಎರಡನೇ ಅಲೆ ಎಂದು ಬಿಂಬಿತವಾಗಿರುವ ಸಾಂಕ್ರಾಮಿಕತೆಯು ಎಲ್ಲಾ ಸಮುದಾಯದವರಿಗೆ ಸಮಸ್ಯೆ ಉಂಟು ಮಾಡಿದ್ದು, ಮಾರ್ಚ್‌,‌ ಏಪ್ರಿಲ್‌ ಮತ್ತು ಮೇ ಅವಧಿಯಲ್ಲಿ ಕೊರೊನಾ ಪ್ರಕರಣಗಳು ಗಣನೀಯವಾಗಿ ಹೆಚ್ಚಾಗಿವೆ. ಕೊರೊನಾ ಸೋಂಕು ಮತ್ತು ಅದರಿಂದ ಸಾವಿನ ಪ್ರಕರಣಗಳು ತುತ್ತ ತುದಿಗೇರಿರುವುದು ಮತ್ತು ರೋಗದಿಂದ ಗುಣಮುಖವಾದ ನಂತರವೂ ಜನರಲ್ಲಿ ಸಾಕಷ್ಟು ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದ್ದ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಆಗಸ್ಟ್‌ 31ರ ನಂತರ ಪರೀಕ್ಷೆ ನಡೆಸುವ ನಿರ್ಧಾರ ಪ್ರಕಟಿಸಿದೆ” ಎಂದು ಆದೇಶದಲ್ಲಿ ಹೇಳಿದೆ.

“ಇದು ನೀಟ್‌ ಪರೀಕ್ಷೆಯನ್ನು ರದ್ದುಪಡಿಸುವುದಲ್ಲ. ಬದಲಿಗೆ ಏಪ್ರಿಲ್‌ನಿಂದ ಆಗಸ್ಟ್‌ 31ರ ವರೆಗೆ ಮುಂದೂಡಿರುವ ಪ್ರಕರಣವಾಗಿದೆ. ಕೋವಿಡ್‌ ಎರಡನೇ ಅಲೆಯ ಹಿನ್ನೆಲೆಯಲ್ಲಿ ಪರೀಕ್ಷೆ ಮುಂದೂಡಲಾಗಿದ್ದು, ವೈದ್ಯಕೀಯ ಸೌಲಭ್ಯಗಳನ್ನು ನಿರ್ವಹಿಸಲು ಮತ್ತು ಸೋಂಕಿತರ ಶುಶ್ರೂಷೆ ಮಾಡುವ ಉದ್ದೇಶಕ್ಕಾಗಿ ವೈದ್ಯರನ್ನು ಕರ್ತವ್ಯಕ್ಕಾಗಿ ಬಳಸಿಕೊಳ್ಳಲಾಗಿದೆ” ಎಂದಿದೆ.

Also Read
ನೀಟ್‌, ಜೆಇಇ ಮುಂದೂಡುವುದಿಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

“ಕೋವಿಡ್‌ ಅಷ್ಟೇನು ಗಂಭೀರವಾದ ಸಮಸ್ಯೆ ಉಂಟು ಮಾಡದ ಹಿನ್ನೆಲೆಯಲ್ಲಿ ಕಳೆದ ವರ್ಷ ಸುಪ್ರೀಂಕೋರ್ಟ್‌ ನೀಟ್‌ ಪರೀಕ್ಷೆಯನ್ನು ಮುಂದೂಡಲು ನಿರಾಕರಿಸಿತ್ತು. ಎರಡನೇ ಅಲೆಯ ವೇಳೆ ನೀಟ್‌ ಆಕಾಂಕ್ಷಿಗಳು ಸೇರಿದಂತೆ ವೈದ್ಯರನ್ನು ಕರ್ತವ್ಯ ನಿಭಾಯಿಸುವಂತೆ ಕೋರಿರಲಿಲ್ಲ. ಆದರೆ,‌ ಪ್ರಸಕ್ತ ವರ್ಷದ ಏಪ್ರಿಲ್-ಜುಲೈ ಅವಧಿಯಲ್ಲಿ ಸೇವೆ ಸಲ್ಲಿಸಿರುವ ವೈದ್ಯರು ಪರೀಕ್ಷೆ ಸಿದ್ಧತೆ ನಡೆಸಲು ಕಾಲಾವಕಾಶ ಬೇಕಿದೆ. ಹೀಗಾಗಿ, ಆಗಸ್ಟ್‌ 31ರ ವರೆಗೆ ನೀಟ್‌ ಮುಂದೂಡಲಾಗಿದೆ” ಎಂದು ನ್ಯಾಯಾಲಯ ಹೇಳಿದೆ.

ನೀಟ್‌ ಪರೀಕ್ಷೆ ಮುಂದೂಡಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ದಿವಂಗತ ಜಿ ಬಿ ಕುಲಕರ್ಣಿ ಸ್ಮಾರಕ ಕಾನೂನು ಟ್ರಸ್ಟ್‌ ಅಧ್ಯಕ್ಷ ಡಾ. ವಿನೋದ್‌ ಕುಲಕರ್ಣಿ ಪ್ರಶ್ನಿಸಿದ್ದರು. ಪರೀಕ್ಷೆ ಮುಂದೂಡಿರುವುದರಿಂದ ಸ್ನಾತಕೋತ್ತರ ಪದವಿ ಆಕಾಂಕ್ಷಿಗಳು ಒತ್ತಡ, ಆತಂಕ ಮತ್ತು ಖಿನ್ನತೆಗೆ ಒಳಗಾಗಿದ್ದಾರೆ. ಸಾಂಕ್ರಾಮಿಕತೆಯ ನಡುವೆ ಎಲ್ಲಾ ಪರೀಕ್ಷೆಗಳನ್ನು ನಡೆಸುತ್ತಿರುವುದರಿಂದ ನೀಟ್‌ ಪರೀಕ್ಷೆ ಮುಂದೂಡುವುದರಲ್ಲಿ ಅರ್ಥವಿಲ್ಲ ಎಂದು ವಾದಿಸಿದ್ದರು.

Related Stories

No stories found.
Kannada Bar & Bench
kannada.barandbench.com