ವೃತ್ತಿ ದುರ್ನಡತೆ ಪ್ರಕರಣ: ಬೇಷರತ್‌ ಕ್ಷಮೆಯಾಚಿಸಿದ ವಕೀಲ; ಶಿಸ್ತು ಪ್ರಕ್ರಿಯೆ ಕೈಬಿಟ್ಟ ಕರ್ನಾಟಕ ಹೈಕೋರ್ಟ್‌

ಸಂಜಯ್‌ ಅವರನ್ನು ವಕೀಲಿಕೆ ಮುಂದುವರಿಸುವುದಕ್ಕೆ ನಿರ್ಬಂಧ ವಿಧಿಸುತ್ತೇವೆ. ನಿಮ್ಮ ಗೌನ್‌ ತೆಗೆಯುವಂತೆ ಮಾಡುತ್ತೇವೆ. ಇಂಥ ವಕೀಲರನ್ನು ನನ್ನ ವೃತ್ತಿ ಬದುಕಿನಲ್ಲೇ ನಾನು ನೋಡಿರಲಿಲ್ಲ ಎಂದು ಸಿಜೆ ಕೆಂಡಾಮಂಡಲವಾಗಿದ್ದ ವಿಡಿಯೊ ವೈರಲ್‌ ಆಗಿತ್ತು.
Karnataka High Court and Chief Justice Ritu Raj Awasthi
Karnataka High Court and Chief Justice Ritu Raj Awasthi
Published on

ಕೆಲ ದಿನಗಳ ಹಿಂದೆ ವಾಣಿಜ್ಯ ಮೇಲ್ಮನವಿಯೊಂದನ್ನು ಹೈಕೋರ್ಟ್‌ ವಜಾ ಮಾಡಿರುವುದನ್ನು ಪೀಠದ ಗಮನಕ್ಕೆ ತರದೆ ಅಂಥದ್ದೇ ಮನವಿ ದಾಖಲಿಸಿ ವಾದ ಮಂಡಿಸಿದ್ದ ವಕೀಲರೊಬ್ಬರನ್ನು ವೃತ್ತಿ ದುರ್ನಡತೆ ಆರೋಪಕ್ಕೆ ಗುರಿಪಡಿಸಿ, ಶೋಕಾಸ್‌ ನೋಟಿಸ್‌ ನೀಡಿ, ಶಿಸ್ತು ಕ್ರಮಕ್ಕೆ ಮುಂದಾಗಿದ್ದ ಕರ್ನಾಟಕ ಹೈಕೋರ್ಟ್‌ ಆರೋಪಿತ ವಕೀಲರ ಬೇಷರತ್‌ ಕ್ಷಮೆಯನ್ನು ಅಂತಿಮವಾಗಿ ಒಪ್ಪಿ ಪ್ರಕರಣಕ್ಕೆ ಅಂತ್ಯ ಹಾಡಿದೆ. ವೃತ್ತಿ ದುರ್ನಡತೆ ತೋರಿದ್ದ ಯುವ ವಕೀಲರೊಬ್ಬರನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರು ಹಿಗ್ಗಾಮಗ್ಗಾ ತರಾಟೆಗೆ ತೆಗೆದುಕೊಂಡಿದ್ದ ಮಾರ್ಚ್‌ 3ರ ವಿಚಾರಣೆಯ ವಿಡಿಯೊ ವೈರಲ್‌ ಆಗಿತ್ತು.

ವಿಚಾರಣಾಧೀನ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ವಾಣಿಜ್ಯ ಮೇಲ್ಮನವಿ (ಕಮರ್ಷಿಯಲ್‌ ಅಪೀಲ್) ಸಲ್ಲಿಸಿದ್ದ ವಕೀಲ ಜಿ ಸಂಜಯ್‌ ಅವರ ವಿರುದ್ಧ ಯಾವುದೇ ಕ್ರಮಕೈಗೊಳ್ಳುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ನೇತೃತ್ವದ ವಿಭಾಗೀಯ ಪೀಠವು ಮಾರ್ಚ್‌ 4ರ ತೀರ್ಪಿನಲ್ಲಿ ಹೇಳಿದೆ.

“ಮೇಲ್ಮನವಿದಾರರನ್ನು ಪ್ರತಿನಿಧಿಸಿದ್ದ ವಕೀಲ ಜಿ ಸಂಜಯ್‌ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡು ಅಫಿಡವಿಟ್‌ ಸಲ್ಲಿಸಿದ್ದಾರೆ. ಅದರಲ್ಲಿ ಇದೇ ಮೊದಲ ಬಾರಿಗೆ ಇಂಥ ಪ್ರಮಾದ ಎಸಗಿದ್ದು, ಈ ಘಟನೆಯಿಂದ ಪಾಠ ಕಲಿತಿದ್ದೇನೆ. ಮುಂದೆಂದೂ ಈ ರೀತಿಯ ಪರಿಸ್ಥಿತಿ ನಿರ್ಮಾಣಕ್ಕೆ ಕಾರಣವಾಗುವುದಿಲ್ಲ ಎಂದು ಹೇಳಿ ಬೇಷರತ್‌ ಕ್ಷಮೆ ಕೋರಿದ್ದಾರೆ. ಹೀಗಾಗಿ, ವಕೀಲ ಸಂಜಯ್‌ ಇನ್ನೂ ಯುವಕರಾಗಿದ್ದು, ಮೇಲ್ಮನವಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಡಿ ಆರ್‌ ರವಿಶಂಕರ್‌ ಅವರು ಮುಂದೆ ಈ ರೀತಿ ಆಗದಂತೆ ಎಚ್ಚರವಹಿಸುವ ಭರವಸೆ ನೀಡಿರುವುದನ್ನು ಪರಿಗಣಿಸಿ, ಸಂಜಯ್‌ ಅವರು ಮುಂದೆ ಎಚ್ಚರದಿಂದ ಇರಬೇಕು ಮತ್ತು ಈ ತರಹದ ತಪ್ಪುಗಳನ್ನು ಮಾಡಬಾರದು ಎಂದು ಎಚ್ಚರಿಸಿ ಅವರ ವಿರುದ್ಧ ಯಾವುದೇ ಕ್ರಮಕೈಗೊಳ್ಳುವುದಿಲ್ಲ” ಎಂದು ಪೀಠವು ತೀರ್ಪಿನಲ್ಲಿ ಹೇಳಿದೆ.

ಸಂಜಯ್‌ ಅವರು ಬೇಷರತ್‌ ಕ್ಷಮೆ ಸಲ್ಲಿಸುವಾಗ ಹಿರಿಯ ವಕೀಲ ಡಿ ಆರ್‌ ರವಿಶಂಕರ್‌ ಅವರ ಜೊತೆಗೆ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರೂ ಹಾಜರಾಗಿದ್ದರು. ಪ್ರತಿವಾದಿ ಪರ ವಕೀಲ ಎಸ್‌ ರಾಮು ಇದ್ದರು.

ಪ್ರಕರಣದ ವಿವರ

ಮಾರ್ಚ್‌ 3ರಂದು ಸಲ್ಲಿಸಿದ್ದ ಮೇಲ್ಮನವಿಗಳಲ್ಲಿ ಉಲ್ಲೇಖಿಸಿದ್ದ ವಾಸ್ತವಿಕ ಅಂಶಗಳು ಮತ್ತು ಪರಿಸ್ಥಿತಿಯನ್ನೇ ಆಧರಿಸಿ ಕೆಲವು ದಿನಗಳ ಹಿಂದೆ ಇದೇ ಪೀಠವು ಮನವಿಗಳನ್ನು ವಜಾ ಮಾಡಿತ್ತು ಎಂಬುದನ್ನು ಪೀಠದ ಗಮನಕ್ಕೆ ತರದೇ ವಕೀಲ ಸಂಜಯ್‌ ಅವರು ಅಪ್ರಾಮಾಣಿಕವಾಗಿ ನಡೆದುಕೊಂಡಿದ್ದಾರೆ. ಈ ಮೂಲಕ ನ್ಯಾಯಾಲಯದ ದಿಕ್ಕು ತಪ್ಪಿಸಲು ಯತ್ನಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿಯ ಪೀಠದಲ್ಲೇ ಇಂಥ ಕೆಲಸಗಳು ನಡೆದರೆ ಬೇರೆ ಪೀಠದ ಮುಂದೆ ಸಂಜಯ್‌ ಅವರು ಹೇಗೆ ನಡೆದುಕೊಂಡಿರಬೇಕು ಎಂದು ಸಿಜೆ ಆಕ್ಷೇಪಿಸಿದ್ದರು.

“ನೀವು ವಕೀಲರು, ನಾವು ಎಲ್ಲವನ್ನೂ ನೆನಪಿನಲ್ಲಿ ಇಟ್ಟುಕೊಳ್ಳಬೇಕೆ… ಅವರು (ಸಂಜಯ್‌) ವಕೀಲಿಕೆ ಮುಂದುವರಿಸುವುದಕ್ಕೆ ನಿರ್ಬಂಧ ವಿಧಿಸುತ್ತೇವೆ. ನಿಮ್ಮ ಗೌನ್‌ ತೆಗೆಯುವಂತೆ ಮಾಡುತ್ತೇವೆ. ಇಂಥ ವಕೀಲರನ್ನು ನನ್ನ ವೃತ್ತಿ ಬದುಕಿನಲ್ಲೇ ನಾನು ನೋಡಿರಲಿಲ್ಲ. ಕರ್ನಾಟಕ ಹೈಕೋರ್ಟ್‌ನಲ್ಲಿ ಇಂಥ ಪರಿಸ್ಥಿತಿ ನನಗೆ ಎದುರಾಗುತ್ತದೆ ಎಂದು ನಾನು ಎಂದೂ ಎಣಿಸಿರಲಿಲ್ಲ” ಎಂದು ಮುಖ್ಯ ನ್ಯಾಯಮೂರ್ತಿ ತೀವ್ರ ಬೇಸರ ವ್ಯಕ್ತಪಡಿಸಿದ್ದರು.

Also Read
ಪಚ್ಚನಾಡಿ ಘನತ್ಯಾಜ್ಯ ವಿಲೇವಾರಿ ಕಾಮಗಾರಿಗೆ ಸಿಎಂ ಅನುಮೋದನೆ; ಪ್ರಗತಿ ವರದಿ ಸಲ್ಲಿಸಲು ಪಾಲಿಕೆಗೆ ಹೈಕೋರ್ಟ್‌ ಸೂಚನೆ

ಅಲ್ಲದೇ, ನಿಮ್ಮ ನಡತೆಯ ಬಗ್ಗೆ ವಿವರಿಸಿ, ನಿಮ್ಮ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲು ಏಕೆ ಈ ಪ್ರಕರಣವನ್ನು ಕರ್ನಾಟಕ ರಾಜ್ಯ ವಕೀಲರ ಪರಿಷತ್‌ಗೆ (ಕೆಎಸ್‌ಬಿಸಿ) ಕಳುಹಿಸಬಾರದು ಎಂಬುದಕ್ಕೆ ಉತ್ತರಿಸುವಂತೆ ಸಂಜಯ್‌ ಅವರಿಗೆ ಪೀಠವು ಷೋಕಾಸ್‌ ನೋಟಿಸ್ ಜಾರಿ ಮಾಡಿತ್ತು.

ಪ್ರಕರಣದ ಹಿನ್ನೆಲೆ: ಮಧ್ಯಸ್ಥಿಕೆ ಮತ್ತು ಸಂಧಾನ ಕಾಯಿದೆಯಡಿ ಮಧ್ಯಸ್ಥಿಕೆದಾರರು ನೀಡಿದ್ದ ಆದೇಶವನ್ನು ಪ್ರಶ್ನಿಸಿ ಹೆಚ್ಚುವರಿ ಸಿಟಿ ಸಿವಿಲ್‌ ನ್ಯಾಯಾಲಯದಲ್ಲಿ ಅರ್ಜಿದಾರರು ಮನವಿ ಸಲ್ಲಿಸಿದ್ದರು. ಅಲ್ಲಿ ನೀಡಿದ್ದ ಆದೇಶದ ವಿರುದ್ಧ ವಾಣಿಜ್ಯ ಮೇಲ್ಮನವಿಯನ್ನು ಸಲ್ಲಿಸಲಾಗಿತ್ತು. ಇದಕ್ಕೆ ಮಧ್ಯಸ್ಥಿಕೆ ಮತ್ತು ಸಂಧಾನ ಕಾಯಿದೆಯ ಸೆಕ್ಷನ್‌ 34ಯಲ್ಲಿ ಅವಕಾಶವಿಲ್ಲ ಎಂದು ಪೀಠವು ಮನವಿ ವಜಾ ಮಾಡಿತ್ತು.

Attachment
PDF
M Venkatesh v. The Commissioner, BBMP.pdf
Preview
Kannada Bar & Bench
kannada.barandbench.com