ಪವರ್ ಟಿವಿ ಮುಖ್ಯಸ್ಥ ರಾಕೇಶ್ ಶೆಟ್ಟಿ ಅವರಿಗೆ ಕರ್ನಾಟಕ ಹೈಕೋರ್ಟ್ ಗುರುವಾರ ಬೆಳಿಗ್ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ನ್ಯಾಯಮೂರ್ತಿ ಬಿ ಎ ಪಾಟೀಲ್ ಅವರಿದ್ದ ಏಕ ಸದಸ್ಯ ಪೀಠ ʼಇಬ್ಬರ ಜಾಮೀನುದಾರರ ಸಹಿಯೊಂದಿಗೆ ರೂ 2 ಲಕ್ಷ ಮೊತ್ತದ ವೈಯಕ್ತಿಕ ಬಾಂಡ್ ಸಲ್ಲಿಸಲು ಸೂಚಿಸಿದ್ದು ತನಿಖಾಧಿಕಾರಿ ಎದುರು ಶರಣಾಗಲು 20 ದಿನಗಳ ಕಾಲಾವಕಾಶ ನೀಡಿದೆ. ತನಿಖೆಗೆ ಸಹಕರಿಸಲು ಮತ್ತು ಸಾಕ್ಷ್ಯ ನಾಶಪಡಿಸದೇ ಇರಲು ಕೂಡ ಆರೋಪಿಗೆ ಸೂಚಿಸಲಾಗಿದೆ.
ಅರ್ಜಿದಾರರ ಪರವಾಗಿ ವಕೀಲ ರವಿಕುಮಾರ್ ಮತ್ತು ಮಾಜಿ ಅಡ್ವೊಕೇಟ್ ಜನರಲ್ ಎ ಎಸ್ ಪೊನ್ನಣ್ಣ ವಾದ ಮಂಡಿಸಿದರು. ದೂರುದಾರ ಚಂದ್ರಕಾಂತ್ ರಾಮಲಿಂಗಂ ಪರವಾಗಿ ಹಿರಿಯ ವಕೀಲ ಸಿ ವಿ ನಾಗೇಶ್ ವಕಾಲತ್ತು ವಹಿಸಿದ್ದರು .
ಟೆಂಡರ್ ಕೊಡಿಸುವ ಆಮಿಷವೊಡ್ಡಿ ಹಣ ಸುಲಿಗೆ ಮಾಡಿ ವಂಚಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪದ ಮೇಲೆ ರಾಕೇಶ್ ಶೆಟ್ಟಿ ಹಾಗೂ ಇತರರ ವಿರುದ್ಧ ಕೆ ಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ರಾಮಲಿಂಗಂ ಕನ್ಸ್ಟ್ರಕ್ಷನ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಚಂದ್ರಕಾಂತ್ ರಾಮಲಿಂಗಂ ಅವರು ದೂರು ನೀಡಿದ್ದರು. ಇದರ ಬೆನ್ನಲ್ಲೇ ಸಿಸಿಬಿ ಪೊಲೀಸರು ರಾಕೇಶ್ ಮನೆ ಮೇಲೆ ದಾಳಿ ನಡೆಸಿದ್ದರು. ಅಲ್ಲದೆ ಸೆ. 28ರ ರಾತ್ರಿ ಪವರ್ ಟಿವಿ ಸ್ಟುಡಿಯೋ ಮೇಲೆ ದಾಳಿ ನಡೆಸಿ ವಾಹಿನಿಯ ಪ್ರಸಾರ ಸ್ಥಗಿತಗೊಳಿಸಲಾಗಿತ್ತು. ಪ್ರಕರಣ ರಾಜಕೀಯ ಕೆಸರೆರಚಾಟಕ್ಕೂ ಇಂಬು ನೀಡಿತ್ತು.
ವಿಚಾರಣೆ ವೇಳೆ ಅರ್ಜಿದಾರರು ಇದೊಂದು ರಾಜಕೀಯ ಸೇಡಿನ ಕ್ರಮ. ಜೊತೆಗೆ ಮಾಧ್ಯಮದ ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಮೂಗು ತೂರಿಸುವ ಉದ್ದೇಶದಿಂದ ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವ ರಾಜ್ಯ ಸರ್ಕಾರದ ಕ್ರಮ ಎಂದು ಪ್ರತಿಪಾದಿಸಿದರು.