

ಸೊಸೆಗೆ ಪದೇಪದೇ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಜೈಲು ಪಾಲಾಗಿದ್ದ 75 ವರ್ಷದ ವ್ಯಕ್ತಿಗೆ ಕರ್ನಾಟಕ ಹೈಕೋರ್ಟ್‌ಗೆ ಈಚೆಗೆ ಜಾಮೀನು ಮಂಜೂರು ಮಾಡಿದೆ. ಜಾಮೀನು ಮಂಜೂರು ಮಾಡುವುದಕ್ಕೆ ಯಾವುದೇ ಆಕ್ಷೇಪವಿಲ್ಲ ಎಂದ ಸೊಸೆ ಹೇಳಿರುವುದನ್ನು ನ್ಯಾಯಾಲಯ ಪರಿಗಣಿಸಿದೆ.
ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರ ಏಕಸದಸ್ಯ ಪೀಠವು ಸಂಧಾನದ ಮೂಲಕ ವಿವಾದವನ್ನು ಬಗೆಹರಿಸಿಕೊಳ್ಳಲಾಗಿದೆ ಎಂದು ಸೊಸೆ ಹೇಳಿರುವುದನ್ನು ದಾಖಲಿಸಿಕೊಂಡಿತು.
ಪದೇಪದೇ ಲೈಂಗಿಕ ಕಿರುಕುಳ, ಮಾನಸಿಕ ಹಿಂಸೆ ನೀಡಿದ ಆರೋಪದ ಮೇಲೆ ಬೆಂಗಳೂರಿನ ಪೂರ್ವ ಮಹಿಳಾ ಠಾಣೆಯಲ್ಲಿ ಬಿಎನ್‌ಎಸ್ ಸೆಕ್ಷನ್‌ಗಳಾದ 64(2)(f) ಮತ್ತು 64(2)(m) 75 ಮತ್ತು 76, 85, 115(2), ಮತ್ತು 352(2)ರ ಅಡಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಮಾವ ಜಾಮೀನು ಕೋರಿದ್ದರು.
ಮಗ ಮತ್ತು ಸೊಸೆಯ ನಡುವಿನ ಕಲಹದಲ್ಲಿ ತಮ್ಮನ್ನು ತಪ್ಪಾಗಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಯಾವಾಗ ಲೈಂಗಿಕ ಕಿರುಕುಳ ನೀಡಲಾಗಿದೆ, ಸಮಯ ಅಥವಾ ಸಾಕ್ಷಿಯನ್ನು ನೀಡಲಾಗಿಲ್ಲ ಎಂದು ವಾದಿಸಿದ್ದರು.
ಇದನ್ನು ಆಲಿಸಿದ ಪೀಠವು ಅರ್ಜಿದಾರರು ಒಂಟು ತಿಂಗಳಿಂದ ಜೈಲಿನಲ್ಲಿದ್ದು, ಹಿರಿಯ ನಾಗರಿಕರಾಗಿದ್ದಾರೆ. ವೈಯಕ್ತಿಕವಾಗಿ ನ್ಯಾಯಾಲಯದ ಮುಂದೆ ಹಾಜರಾದ ಸೊಸೆಯು, ಜಾಮೀನು ನೀಡುವುದಕ್ಕೆ ತಮ್ಮ ವಿರೋಧವಿಲ್ಲ ಎಂದು ಹೇಳಿದ್ದಾರೆ ಎಂದು ನ್ಯಾಯಾಲಯ ದಾಖಲಿಸಿದೆ.
ಈ ಹಿನ್ನೆಲೆಯಲ್ಲಿ ₹1 ಲಕ್ಷ ವೈಯಕ್ತಿಕ ಬಾಂಡ್, ಇಬ್ಬರ ಭದ್ರತೆ, ವಿಚಾರಣಾಧೀನ ನ್ಯಾಯಾಲಯದ ಮುಂದೆ ನಿರಂತರವಾಗಿ ಹಾಜರಾಗಬೇಕು ಮತ್ತು ಪ್ರಾಸಿಕ್ಯೂಷನ್ ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು ಎಂಬ ಷರತ್ತುಗಳನ್ನು ವಿಧಿಸಿ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.