ʼಪಾಕಿಸ್ತಾನ್‌.. ಪಾಕಿಸ್ತಾನ್‌ʼ ಘೋಷಣೆ ಆರೋಪದ ಮೇಲೆ ಮುಸ್ಲಿಮ್‌ ವ್ಯಕ್ತಿ ಗುಂಪು ಹತ್ಯೆ: ಆರೋಪಿಗೆ ಜಾಮೀನು

"ಯುಡಿಆರ್‌ಗೆ ಸಂಬಂಧಿಸಿದಂತೆ ಪೊಲೀಸರು ಬಿ ರಿಪೋರ್ಟ್‌ ಸಲ್ಲಿಸಿದ್ದಾರೆ. ಯುಡಿಆರ್‌ಗೆ ಬಿ ರಿಪೋರ್ಟ್‌ ಸಲ್ಲಿಸಬಹುದೇ?" ಎಂದು ಸರ್ಕಾರವನ್ನು ಪ್ರಶ್ನಿಸಿದ ನ್ಯಾಯಾಲಯ.
Mob lynching
Mob lynching
Published on

ಮಂಗಳೂರಿನಲ್ಲಿ ಕ್ರಿಕೆಟ್‌ ಪಂದ್ಯದ ವೇಳೆ "ಪಾಕಿಸ್ತಾನ್‌ ಪಾಕಿಸ್ತಾನ್‌" ಎಂದು ಕೂಗಿಕೊಂಡು ಮೈದಾನದ ಒಳಗೆ ನುಗ್ಗಿದ ಆರೋಪದ ಮೇಲೆ ಮುಸ್ಲಿಮ್ ವ್ಯಕ್ತಿಯ ಗುಂಪು ಹತ್ಯೆ ಪ್ರಕರಣದಲ್ಲಿನ ಮೂರನೇ ಆರೋಪಿಗೆ ಕರ್ನಾಟಕ ಹೈಕೋರ್ಟ್‌ ಗುರುವಾರ ಜಾಮೀನು ಮಂಜೂರು ಮಾಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ವಾಮಂಜೂರು-ತಿರುವೈಲ್‌ನ ಮಂಜ ಅಲಿಯಾಸ್‌ ಮಂಜುನಾಥ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ರಜಾಕಾಲೀನ ಏಕಸದಸ್ಯ ಪೀಠ ಪುರಸ್ಕರಿಸಿದೆ.

Justice V Srishananda
Justice V Srishananda

“ಕೃತ್ಯದಲ್ಲಿ ಯಾವುದೇ ಮಾರಕಾಸ್ತ್ರಗಳನ್ನು ಬಳಕೆ ಮಾಡಲಾಗಿಲ್ಲ ಮತ್ತು ಇದು ಪೂರ್ವನಿಯೋಜಿತ ಕೃತ್ಯವಲ್ಲ. ಘಟನೆಯು ಕ್ಷಣಮಾತ್ರದಲ್ಲಿ ನಡೆದಿದೆ. ಸಾವನ್ನಪ್ಪಿದ ಮೊಹಮ್ಮದ್‌ ಅಶ್ರಫ್‌ ಅವರ ಗಾಯಗೊಂಡ ಅಂಗಾಂಗಗಳಿಗೆ ಖಾರದ ಪುಡಿ ಹಾಕಲಾಗಿದೆ ಎಂಬುದಕ್ಕೆ ಮರಣೋತ್ತರ ವರದಿ ಅಥವಾ ತನಿಖೆಯ ಮಹಜರ್‌ ವೇಳೆ ಸ್ಥಳದಲ್ಲಿ ಖಾರದಪುಡಿ ಪತ್ತೆಯಾಗಿಲ್ಲ” ಎಂದು ಪೀಠ ಹೇಳಿದೆ.

ಒಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಎಫ್‌ಐಆರ್‌ ದಾಖಲಿಸಿರುವುದಕ್ಕೆ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿರುವ ನ್ಯಾಯಾಲಯವು “ಮೂಲ ಯುಡಿಆರ್‌ ಆಧರಿಸಿ ವಿಚಾರಣೆ ಮುಂದುವರಿಸಲು ಪೊಲೀಸರು ಮ್ಯಾಜಿಸ್ಟ್ರೇಟ್‌ ಅನುಮತಿ ಪಡೆಯಬಹುದಿತ್ತು. ಒಂದೇ ಪ್ರಕರಣಕ್ಕೆ ಎರಡು ಎಫ್‌ಐಆರ್‌ ದಾಖಲಿಸುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ” ಎಂದು ಕಿಡಿಕಾರಿದೆ.

ಅಲ್ಲದೇ, 2025ರ ಏಪ್ರಿಲ್‌ 29ರಿಂದ ಮಂಜುನಾಥ್‌ ಕಸ್ಟಡಿಯಲ್ಲಿದ್ದು, ಆರೋಪ ಪಟ್ಟಿಯಲ್ಲಿ 216 ಸಾಕ್ಷಿಗಳನ್ನು ಉಲ್ಲೇಖಿಸಲಾಗಿದೆ. ಹೀಗಾಗಿ, ಅರ್ಜಿದಾರ ಜೈಲಿನಲ್ಲಿ ಮುಂದುವರಿಯುವುದು ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್‌ ಆತನಿಗೆ ಜಾಮೀನು ಮಂಜೂರು ಮಾಡಿದೆ.

ಮಂಜುನಾಥ್‌ ಒಂದು ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್‌, ಇಬ್ಬರ ಭದ್ರತೆ ಒದಗಿಸಬೇಕು. ವಿಚಾರಣೆಯ ಎಲ್ಲಾ ದಿನ ಸಕ್ಷಮ ನ್ಯಾಯಾಲಯಕ್ಕೆ ಹಾಜರಾಗಬೇಕು, ಪ್ರಾಸಿಕ್ಯೂಷನ್‌ ಸಾಕ್ಷಿ ತಿರುಚುವಂತಿಲ್ಲ. ಅನುಮತಿಯಲ್ಲದೇ ದಕ್ಷಿಣ ಕನ್ನಡ ತೊರೆಯುವಂತಿಲ್ಲ ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.

"ಪಾಕಿಸ್ತಾನ್‌… ಪಾಕಿಸ್ತಾನ್‌…" ಎಂದು ಘೋಷಣೆ ಹಾಕುತ್ತಾ ಕ್ರಿಕೆಟ್‌ ಮೈದಾನಕ್ಕೆ ನುಗ್ಗಿದ ಅಶ್ರಫ್‌ ಮೇಲೆ ಹಲ್ಲೆ ನಡೆಸಲು ಮಂಜುನಾಥ್‌ ಉಳಿದವರಿಗೆ ಕರೆ ನೀಡಿದ್ದ ಮತ್ತು ಅಶ್ರಫ್‌ನ ಗಾಯವಾದ ಅಂಗಾಂಗಳು ಮತ್ತು ಗುಪ್ತಾಂಗಕ್ಕೆ ಖಾರದಪುಡಿ ಹಾಕಿದ್ದ ಎಂದು ಆರೋಪಿಸಲಾಗಿದೆ.

ವಿಚಾರಣೆಯ ಒಂದು ಹಂತದಲ್ಲಿ ಪೀಠವು “ಅಶ್ರಫ್‌ನನ್ನು ದ್ವೇಷದಿಂದ ಕೊಲೆ ಮಾಡಲಾಗಿಲ್ಲ. ಮೈದಾನದ ಬಳಿಗೆ ಆತ ಬರದಿದ್ದರೆ ಆತ ಬದುಕುಳಿಯುತ್ತಿದ್ದ, ಮನೆಯಲ್ಲೇ ಇದ್ದರೆ ಜೀವಂತವಾಗಿರುತ್ತಿದ್ದ. ಸಾವನ್ನಪ್ಪಿದ ಅಶ್ರಫ್‌ ಮತ್ತು ಆರೋಪಿಗಳ ನಡುವೆ ಯಾವುದೇ ಶತ್ರುತ್ವ ಇರಲಿಲ್ಲ. ಮೈದಾನದ ಬಳಿಗೆ ಬಂದು ಘೋಷಣೆ ಹಾಕಿ, ಶಾಂತವಾಗಿ ನಡೆಯುತ್ತಿದ್ದ ಕ್ರಿಕೆಟ್‌ ಆಟಕ್ಕೆ ಅಡ್ಡಿಪಡಿಸಿದ್ದನು. ಆತ ಮನೆಯಲ್ಲಿದ್ದರೆ ಏನೂ ಆಗುತ್ತಿರಲಿಲ್ಲ” ಎಂದಿತು.

“ಕೃತ್ಯ ನಡೆದ ಸ್ಥಳದಲ್ಲಿ ಖಾರದಪುಡಿ ಪತ್ಯೆಯಾಗಿಲ್ಲ. ಗಾಯಗಳಿಗೆ ಸಂಬಂಧಿಸಿದ ಪ್ರಮಾಣಪತ್ರದಲ್ಲಿ ಖಾರದಪುಡಿ ಪತ್ತೆಯಾಗಿಲ್ಲ. ಮಹಜರ್‌ ವೇಳೆ ಏನೂ ಪತ್ತೆಯಾಗಿಲ್ಲ ಮತ್ತು ಜಫ್ತಿಯಾಗಿಲ್ಲ” ಎಂದೂ ನ್ಯಾಯಾಲಯ ಹೇಳಿದೆ.

“ಅರ್ಜಿದಾರನೇ ಮೊದಲಿಗೆ ಯುಡಿಆರ್‌ ಮಾಡಿಸಿದ್ದಾನೆ. ಅದಾಗ್ಯೂ, ಮಂಗಳೂರು ಗ್ರಾಮಾಂತರ ಪೊಲೀಸರು ಹೇಗೆ ಎರಡನೇ ಎಫ್‌ಐಆರ್‌ ದಾಖಲಿಸಿದರು. ರಾಜ್ಯ ಸರ್ಕಾರ ಗಂಭೀರ ಪ್ರಮಾದ ಎಸಗಿದೆ. ಇದು ಪ್ರಕರಣ-ಪ್ರತ್ಯಾರೋಪದ ಪ್ರಕರಣವಾಗಿದೆ. ಯುಡಿಆರ್‌ಗೆ ಸಂಬಂಧಿಸಿದಂತೆ ಪೊಲೀಸರು ಬಿ ರಿಪೋರ್ಟ್‌ ಸಲ್ಲಿಸಿದ್ದಾರೆ. ಯುಡಿಆರ್‌ಗೆ ಬಿ ರಿಪೋರ್ಟ್‌ ಸಲ್ಲಿಸಬಹುದೇ?” ಎಂದು ಪ್ರಶ್ನಿಸಿತು.

ಅರ್ಜಿದಾರರ ಪರ ಹಿರಿಯ ವಕೀಲ ಎಂ ಅರುಣ್‌ ಶ್ಯಾಮ್‌ ಅವರು “ಅಶ್ರಫ್‌ ಗಾಯಗಳಿಗೆ ಖಾರದಪುಡಿ ಹಾಕಲಾಗಿದೆ ಎಂಬುದುಕ್ಕೆ ಯಾವುದೇ ದಾಖಲೆಗಳು ಇಲ್ಲ. ಪ್ರಕರಣದ ಎಲ್ಲಾ ಆರೋಪಿಗಳಿಗೆ ಜಾಮೀನು ದೊರೆತಿರುವುದರಿಂದ ಇವರಿಗೂ ಜಾಮೀನು ಮಂಜೂರು ಮಾಡಬೇಕು. ಪೆಹಲ್ಗಾಮ್‌ ದಾಳಿ ನಡೆದ ಸಂದರ್ಭದಲ್ಲಿ ಅಶ್ರಫ್‌ ಪಾಕಿಸ್ತಾನ್‌ ಘೋಷಣೆ ಹಾಕಿರುವುದರಿಂದ ಆರೋಪಿಗಳು ಪ್ರಚೋದನೆಗೆ ಒಳಗಾಗಿದ್ದಾರೆ. ಇದು ಪೂರ್ವನಿರ್ಧರಿತ ಕೃತ್ಯವಲ್ಲ” ಎಂದರು.

ಹೆಚ್ಚಿವರಿ ವಿಶೇಷ ಸರ್ಕಾರಿ ಅಭಿಯೋಜಕಿ ರಶ್ಮಿ ಜಾಧವ್‌ ಅವರು “ಮಂಜುನಾಥ್‌ ವಿರುದ್ಧದ ಆರೋಪಗಳು ಭಿನ್ನವಾಗಿದ್ದು, ಇಂಥ ಪ್ರಕರಣಗಳಲ್ಲಿ ಜಾಮೀನು ನೀಡುವುದರಿಂದ ಗುಂಪು ಹತ್ಯೆ ಪ್ರಕರಣ ಬೆಂಬಲಿಸಿದಂತಾಗಲಿದೆ” ಎಂದರು.

Also Read
ಮಂಗಳೂರು ಗುಂಪು ಹತ್ಯೆ ಪ್ರಕರಣ: ಮತ್ತೊಬ್ಬ ಆರೋಪಿಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್‌

ದೂರುದಾರರ ಪರ ವಕೀಲೆ ಮೃದುಲಾ ಅವರು “ಸುಳ್ಳು ದೂರು ದಾಖಲಿಸುವ ಮೂಲಕ ಮಂಜುನಾಥ್‌ ತನಿಖೆಯ ಹಾದಿ ತಪ್ಪಿಸಲು ಪ್ರಯತ್ನಿಸಿದ್ದನು. ಹೀಗಾಗಿ, ಇತರೆ ಆರೋಪಿಗಳನ್ನು ನೋಡುವ ದೃಷ್ಟಿಯಲ್ಲಿ ಈತನನ್ನು ನೋಡಲಾಗದು” ಎಂದರು.

2025ರ ಏಪ್ರಿಲ್‌ 27ರಂದು ಮಂಗಳೂರಿನ ಹೊರಹೊಲಯದ ಕುಡುಪು ಕ್ರಿಕೆಟ್‌ ಮೈದಾನದಲ್ಲಿ ಪಂದ್ಯ ನಡೆಯುತ್ತಿದ್ದ ವೇಳೆ ಕೇರಳದ ವಯನಾಡ್‌ ಮೂಲದ 35 ವರ್ಷದ ಮೊಹಮ್ಮದ್‌ ಅಶ್ರಫ್‌ ರೈಲು ಸಂಚಿರಿಸುವ ಕಡೆಯಿಂದ ಪಾಕಿಸ್ತಾನ್‌ ಪಾಕಿಸ್ತಾನ್‌ ಎಂದು ಘೋಷಣೆ ಹಾಕಿ ನುಗ್ಗಿದ್ದು, ಇದರಿಂದ ಪ್ರಚೋದನೆಗೆ ಒಳಗಾದ ಆಟಗಾರರು ಮತ್ತು ಪಂದ್ಯ ನೋಡುತ್ತಿದ್ದರು ಆತನ ಮೇಲೆ ಹಲ್ಲೆ ನಡೆಸಿದ್ದರು. ಒಟ್ಟಾರೆ ಮೊದಲಿಗೆ 19 ಆರೋಪಿಗಳ ವಿರುದ್ಧ ಮಂಗಳೂರು ಗ್ರಾಮೀಣ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಒಟ್ಟಾರೆ 21 ಆರೋಪಿಗಳ ವಿರುದ್ಧ ಪೊಲೀಸರು ಸಕ್ಷಮ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ.

Kannada Bar & Bench
kannada.barandbench.com