ಸ್ಯಾನಿಟರಿ ಪ್ಯಾಡ್‌ ಮೇಲೆ ರಾಹುಲ್‌ ಚಿತ್ರ ಇರುವ ವಿಡಿಯೋ: ರತನ್ ರಂಜನ್ ವಿರುದ್ಧ ಬಲವಂತದ ಕ್ರಮಕೈಗೊಳ್ಳದಂತೆ ನಿರ್ದೇಶನ

“ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ತಡೆಯೊಡ್ಡುವ ವಿಚಾರದಲ್ಲಿ ನಾನು ಕೊನೆಯ ವ್ಯಕ್ತಿಯಾಗಿರುತ್ತೇನೆ” ಎಂದು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರು ಹಿರಿಯ ವಕೀಲ ಅರುಣ್‌ ಶ್ಯಾಮ್‌ ಅವರನ್ನು ಕುರಿತು ಹೇಳಿದರು.
Karnataka HC & Rahul Gandhi
Karnataka HC & Rahul Gandhi
Published on

ಮುಂಬರುವ ಬಿಹಾರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ‘ಪ್ರಿಯದರ್ಶಿನಿ ಉಡಾನ್ ಯೋಜನೆ’ ಅಡಿ ಹೆಣ್ಣು ಮಕ್ಕಳಿಗೆ ಹಂಚಲಾಗುತ್ತಿರುವ ಸ್ಯಾನಿಟರಿ ಪ್ಯಾಡ್‌ನ ಬಾಕ್ಸ್‌ಗಳ ಮೇಲೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಫೋಟೊ ಹಾಕಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿಬಿಟ್ಟ (ವೈರಲ್) ಆರೋಪದಲ್ಲಿ ಬಿಹಾರ ಮೂಲದ ರತನ್ ರಂಜನ್ ಹಾಗೂ ಅರುಣ್ ಕುಮಾರ್ ಕೋಶಿಲ್ ವಿರುದ್ಧ ತಕ್ಷಣ ಬಲವಂತದ ಕ್ರಮ ಕೈಗೊಳ್ಳದಂತೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ನಿರ್ದೇಶಿಸಿದೆ.

ಯುವ ಕಾಂಗ್ರೆಸ್ ಕಾರ್ಯಕರ್ತೆ ಪ್ರಿಯಾಂಕಾ ದೇವಿ ಬೆಂಗಳೂರಿನ ಹೈಗ್ರೌಂಡ್ಸ್‌ ಠಾಣೆಯಲ್ಲಿ ದಾಖಲಿಸಿರುವ ಪ್ರಕರಣ ರದ್ದುಪಡಿಸುವಂತೆ ಕೋರಿ ರತನ್ ರಂಜನ್ ಹಾಗೂ ಅರುಣ್ ಕುಮಾರ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ಆರ್ ಕೃಷ್ಣಕುಮಾರ್ ಅವರ ಏಕಸದಸ್ಯ ಪೀಠ ನಡೆಸಿತು.

ರಾಹುಲ್ ಗಾಂಧಿ ಚಿತ್ರವನ್ನು ತಿರುಚಿ ಸ್ಯಾನಿಟರಿ ಪ್ಯಾಡ್‌ಗಳಲ್ಲಿ ಅಳವಡಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇದೆಲ್ಲ ಯಾಕೆ ಮಾಡ್ತೀರಾ ಎಂದು ಅರ್ಜಿದಾರರ ಪರ ಹಿರಿಯ ವಕೀಲ ಅರುಣ್‌ ಶ್ಯಾಮ್‌ ಅವರನ್ನು ಪೀಠ ಪ್ರಶ್ನಿಸಿತು. ಅದಕ್ಕೆ ಅರುಣ್ ಶ್ಯಾಮ್ ಅವರು “ಫೋಟೊಗಳನ್ನು ಹಾಕಿರುವುದು ಅವರ ಪಕ್ಷದವರೇ, ನಾವು ಮಾಡಿದ್ದಲ್ಲ” ಎಂದರು. ಆಗ ಪೀಠವು “ಅವರ ಪಕ್ಷದವರು ಮಾಡಲಿ ಬಿಡಿ, ನಿಮಗೆ ಯಾಕೆ ಬೇಕಿತ್ತು” ಎಂದು ಪೀಠ ಮರುಪ್ರಶ್ನೆ ಹಾಕಿತು.

“ಕಾಂಗ್ರೆಸ್‌ ಪಕ್ಷದವರು ಹಾಕಿರುವ ಫೋಟೊಗಳನ್ನು ಅರ್ಜಿದಾರರು ಹಂಚಿಕೊಂಡಿದ್ದಾರಷ್ಟೇ? ಇದು ತಪ್ಪು ಎಂದಾದರೆ ಆ ಪಕ್ಷದವರು ಮಾಡಿದ್ದೂ ತಪ್ಪು ಎಂದಾಗುತ್ತದೆ. ಇಷ್ಟೂ ಮಾಡಬಾರದು ಎಂದರೆ, ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಏನಾಗಬೇಕು” ಎಂದು ವಕೀಲರು ಸಮರ್ಥನೆ ನೀಡಿದರು.

“ಅನುಕಂಪದ ಆಧಾರದಲ್ಲಿ ಮತ ಪಡೆಯಲು ಹೀಗೆ ಮಾಡಲಾಗುತ್ತಿದೆ ಎಂದು ಹಾಸ್ಯಗಾರರು ಹೇಳಿದ್ದಾರಷ್ಟೆ” ಎಂದರು.

ಆಗ ಪೀಠವು “ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ತಡೆಯೊಡ್ಡುವ ವಿಚಾರದಲ್ಲಿ ನಾನು ಕೊನೆಯ ವ್ಯಕ್ತಿಯಾಗಿರುತ್ತೇನೆ. ಕೆಲವು ವಿಚಾರಗಳು ಅದರ ಪರಿಣಾಮ ಹೊಂದಿವೆ” ಎಂದರು.

ಆಗ ಶ್ಯಾಮ್‌ ಅವರು “ಸ್ಯಾನಿಟರಿ ಪ್ಯಾಡ್‌ ಮೇಲೆ ರಾಜಕೀಯ ಪಕ್ಷದ ನಾಯಕರ ಚಿತ್ರವನ್ನು ಹಾಕಿ, ಅವರೇಕೆ ಹಂಚಿಕೆ ಮಾಡಬೇಕು” ಎಂದು ಮತ್ತೊಮ್ಮೆ ಸಮರ್ಥನೆಗೆ ಇಳಿದರು.

ಅಂತಿಮವಾಗಿ ಪೀಠವು, ಸರ್ಕಾರ ಮತ್ತು ದೂರುದಾರರಿಗೆ ನೋಟಿಸ್ ಜಾರಿಗೊಳಿಸಿ, ಅರ್ಜಿದಾರರ ವಿರುದ್ಧ ಮುಂದಿನ ವಿಚಾರಣೆ ತನಕ ಬಲವಂತದ ಕ್ರಮ ಜರುಗಿಸಬಾರದು ಎಂದು ನಿರ್ದೇಶನ ನೀಡಿ ವಿಚಾರಣೆಯನ್ನು ಮುಂದೂಡಿತು. 

Kannada Bar & Bench
kannada.barandbench.com