ಪತ್ನಿಯ ವಿರುದ್ಧ ಪತಿಯ ವ್ಯಭಿಚಾರದ ಆರೋಪಗಳು ಮಾನಸಿಕ ಕ್ರೌರ್ಯಕ್ಕೆ ಸಮ: ಕರ್ನಾಟಕ ಹೈಕೋರ್ಟ್

ವ್ಯಭಿಚಾರದ ಆಧಾರರಹಿತ ಆರೋಪ ಮಾಡುವ ಮೂಲಕ ಪತಿಯೇ ತನ್ನ ಹೆಂಡತಿಗೆ ಮಾನಸಿಕ ಕ್ರೌರ್ಯ ಉಂಟುಮಾಡಿದ್ದಾನೆ ಎಂದಿರುವ ನ್ಯಾಯಾಲಯವು ಕೌಟುಂಬಿಕ ನ್ಯಾಯಾಲಯವು ನೀಡಿರುವ ವಿಚ್ಛೇದನ ಆದೇಶವನ್ನು ರದ್ದುಗೊಳಿಸಿ, ಪತಿಗೆ 10,000 ರೂಪಾಯಿ ದಂಡ ವಿಧಿಸಿತು.
Karnataka High Court
Karnataka High Court

ಪತ್ನಿ ವ್ಯಭಿಚಾರಿ ಎಂದು ಆರೋಪಿಸಿ, ಮಗುವಿನ ಪಿತೃತ್ವದ ಬಗ್ಗೆ ಅನುಮಾನ ವ್ಯಕ್ತಪಡಿಸಿ ವಿಚ್ಛೇದನ ಕೋರಿದ್ದ ಪತಿಯ ನಡೆ ಮಾನಸಿಕ ಕ್ರೌರ್ಯಕ್ಕೆ ಸಮನಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ವಿಚ್ಛೇದನ ಪ್ರಕರಣವೊಂದರ ವಿಚಾರಣೆ ವೇಳೆ ಹೇಳಿದೆ.

ನ್ಯಾಯಮೂರ್ತಿಗಳಾದ ಕೆ ಎಸ್ ಮುದಗಲ್ ಮತ್ತು ಕೆ ವಿ ಅರವಿಂದ್ ಅವರ ನೇತೃತ್ವದ ವಿಭಾಗೀಯ ಪೀಠವು ಇಂತಹ ನಡವಳಿಕೆಯು ಪತ್ನಿಯು ತನ್ನ ಪತಿಯಿಂದ ದೂರವಿರಲು ಸಾಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.

"ಹೆಂಡತಿಯ ವ್ಯಭಿಚಾರಕ್ಕೆ ಸಂಬಂಧಿಸಿದಂತೆ ಪತಿಯು ಆಧಾರರಹಿತ ಆರೋಪಗಳನ್ನು ಮಾಡುವುದು, ಹೆಂಡತಿಯ ನಡತೆಯ ಬಗ್ಗೆ ಶಂಕಿಸುವುದು, ಮಗುವಿನ ಪಿತೃತ್ವದ ಬಗ್ಗೆ ಅನುಮಾನಿಸುವುದು, ಹೆಂಡತಿ ಮತ್ತು ಮಗನನ್ನು ಡಿಎನ್ಎ ಪರೀಕ್ಷೆಗೆ ಒಳಗಾಗುವಂತೆ ಒತ್ತಾಯಿಸುವುದು ಪತ್ನಿಗೆ ಮಾನಸಿಕ ಕ್ರೌರ್ಯ ನೀಡುವುದಕ್ಕೆ ಸಮನಾಗಿರುತ್ತದೆ" ಎಂದು ನ್ಯಾಯಾಲಯ ಹೇಳಿದೆ.

ವ್ಯಕ್ತಿಯೊಬ್ಬರಿಗೆ ವಿಚಾರಣಾಧೀನ ನ್ಯಾಯಾಲಯವು 2011ರಲ್ಲಿ ನೀಡಿದ್ದ ವಿಚ್ಛೇದನ ಆದೇಶವನ್ನು ಹೈಕೋರ್ಟ್‌ ಬದಿಗೆ ಸರಿಸಿದೆ. ದಂಪತಿಯು ಮೇ 19ರಂದು ವಿವಾಹವಾಗಿದ್ದರು. 2003ರಲ್ಲಿ, ಪತಿ ತಮ್ಮ ಮದುವೆ ರದ್ದುಗೊಳಿಸುವಂತೆ ಕೋರಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು.

ಪತ್ನಿ ತಿಂಗಳಿಗೆ ಕನಿಷ್ಠ ಹದಿನೈದು ದಿನ ತನ್ನ ಹೆತ್ತವರೊಂದಿಗೆ ವಾಸಿಸುತ್ತಾಳೆ ಮತ್ತು ಆಗಾಗ್ಗೆ ತನ್ನೊಂದಿಗೆ ಜಗಳವಾಡುತ್ತಿದ್ದಳು ಎಂದು ಪತಿ ಆರೋಪಿಸಿದ್ದರು. ಹೆಂಡತಿ ವ್ಯಭಿಚಾರ ಮತ್ತು 'ಮಾಟಮಂತ್ರ' ಮಾಡಿದ್ದಾಳೆ ಎಂದು ಶಂಕಿಸಿದ್ದರು. ಕೌಟುಂಬಿಕ ನ್ಯಾಯಾಲಯವು ಪತಿಯ ವ್ಯಭಿಚಾರದ ಆರೋಪಗಳನ್ನು ತಿರಸ್ಕರಿಸಿದರೂ, ಕ್ರೌರ್ಯದ ಆಧಾರದ ಮೇಲೆ ಪತಿಯ ವಿಚ್ಛೇದನ ಅರ್ಜಿ ಮಾನ್ಯ ಮಾಡಿತ್ತು.

ವಿಚ್ಛೇದನದ ಈ ಆದೇಶವನ್ನು ಪತ್ನಿ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಪತಿಯ ದೈಹಿಕ ಸ್ಥಿತಿಯನ್ನು ದುರ್ಬಲಗೊಳಿಸಲು ಔಷಧಿಗಳನ್ನು ನೀಡಲಾಗಿದೆ ಎಂಬ ಆರೋಪವನ್ನು ಕುಟುಂಬ ನ್ಯಾಯಾಲಯವು ಯಾವುದೇ ರಕ್ತ ಪರೀಕ್ಷೆ ಅಥವಾ ವಿಧಿವಿಜ್ಞಾನ ಪುರಾವೆಗಳಿಲ್ಲದೆ ಒಪ್ಪಿಕೊಂಡಿದೆ. ಮಾಟಮಂತ್ರ ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲ ಎಂದು ಎಂದು ಪತ್ನಿಯ ಪರ ವಕೀಲರು ವಾದಿಸಿದ್ದರು.

ಹದಿನೈದು ದಿನಗಳ ಕಾಲ ತನ್ನ ಹೆತ್ತವರ ಮನೆಯಲ್ಲಿ ಉಳಿದಿದ್ದ ಆರೋಪವನ್ನು ಪತ್ನಿ ನಿರಾಕರಿಸಿದ್ದಾರೆ ಎಂದು ಹೈಕೋರ್ಟ್‌ ಹೇಳಿದೆ. ಈ ವಿಷಯದಲ್ಲಿ ಪತಿಯ ಆರೋಪಗ ಸಾಬೀತುಪಡಿಸಲು ಆಕೆಯ ಪಾಟೀಸವಾಲಿನ ಸಂದರ್ಭದಲ್ಲಿ ಯಾವುದೇ ವಿಚಾರ ಬಹಿರಂಗವಾಗಿಲ್ಲ ಎಂದು ನ್ಯಾಯಾಲಯ ದಾಖಲಿಸಿದೆ.

ಪತ್ನಿ ಮೂರು ತಿಂಗಳಿಗೊಮ್ಮೆ ತನ್ನ ಹೆತ್ತವರ ಮನೆಗೆ ಭೇಟಿ ನೀಡುತ್ತಿದ್ದಳು ಎಂದು ಪತಿಯೇ ಒಪ್ಪಿಕೊಂಡಿರುವುದನ್ನು ಉಲ್ಲೇಖಿಸಿರುವ ನ್ಯಾಯಾಲಯವು "ವಿವಾಹಿತ ಮಹಿಳೆ ಮೂರು ತಿಂಗಳಿಗೊಮ್ಮೆ ತನ್ನ ಹೆತ್ತವರ ಮನೆಗೆ ಭೇಟಿ ನೀಡಿ ತನ್ನ ಹೆತ್ತವರು, ಒಡಹುಟ್ಟಿದವರು ಮತ್ತು ಇತರ ಕುಟುಂಬ ಸದಸ್ಯರ ಯೋಗಕ್ಷೇಮವನ್ನು ವಿಚಾರಿಸುವುದು ಸಹಜ. ಇದು ಎಲ್ಲಾ ಕುಟುಂಬಗಳಲ್ಲಿ ಸಾಮಾನ್ಯ ಅಭ್ಯಾಸ" ಎಂದಿದೆ.

ವರದಕ್ಷಿಣೆಗಾಗಿ ಬೇಡಿಕೆಗಳನ್ನು ಇಡಲಾಗಿದೆ ಎಂಬ ಪತ್ನಿಯ ವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು "ಅರ್ಜಿದಾರರು ವರದಕ್ಷಿಣೆಗಾಗಿ ಮಾಡಿದ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು, ಪ್ರತಿವಾದಿಯು ಮೂರು ತಿಂಗಳಿಗೊಮ್ಮೆ ತನ್ನ ಹೆತ್ತವರ ಮನೆಗೆ ಭೇಟಿ ನೀಡುವುದನ್ನು ತಪ್ಪೆಂದು ಹೇಳಲಾಗದು" ಎಂದಿದೆ.

ಮಾಟಮಂತ್ರ ಮತ್ತು ಮಾದಕವಸ್ತುಗಳ ನಿರ್ವಹಣೆಯ ಆರೋಪಗಳಿಗೆ ಯಾವುದೇ ಆಧಾರವಿಲ್ಲ ಎಂದು ನ್ಯಾಯಾಲಯ ಹೇಳಿದೆ. ವ್ಯಭಿಚಾರದ ಬಗ್ಗೆ ಪತಿಯು ಆಧಾರರಹಿತ ಆರೋಪ ಮಾಡಿದ್ದಾನೆ ಮತ್ತು ಅದು ಮಾನಸಿಕ ಕ್ರೌರ್ಯಕ್ಕೆ ಸಮ ಎಂದು ತೀರ್ಮಾನಿಸಿದ ನ್ಯಾಯಾಲಯವು, ತನ್ನ ತಪ್ಪಿನ ಲಾಭವನ್ನು ಪಡೆಯಲು ಅವನಿಗೆ ಅನುಮತಿಸಲಾಗದು ಎಂದಿದೆ.

ಪತಿಯ ಎಲ್ಲಾ ಆರೋಪಗಳು ಕೇವಲ ಆರೋಪಗಳು ಎಂದು ನ್ಯಾಯಾಲಯವು ಹೇಳಿದ್ದು, ಪತಿಯು ಕ್ರೌರ್ಯ ಎಂದು ಆರೋಪಿಸಿದ ನಡವಳಿಕೆಯು ತನ್ನ ಹೆಂಡತಿಯೊಂದಿಗೆ ವಾಸಿಸುವುದು ಹಾನಿಕಾರಕ ಎಂಬ ಯಾವುದೇ ಸಮಂಜಸವಾದ ಆತಂಕವನ್ನು ಉಂಟುಮಾಡುವುದಿಲ್ಲ ಎಂದು ನ್ಯಾಯಾಲಯ ತೀರ್ಮಾನಿಸಿತು. "ಕ್ರೌರ್ಯವನ್ನು ಆರೋಪಿಸುವ ಸಂಗಾತಿಯು ಅದನ್ನು ಸಾಬೀತುಪಡಿಸದ ಹೊರತು, ವಿಚ್ಛೇದನವನ್ನು ನೀಡಲು ಕಾರಣವಾಗದು" ಎಂದು ನ್ಯಾಯಾಲಯ ಹೇಳಿದೆ.

"ದಾಖಲೆಯಲ್ಲಿರುವ ಪುರಾವೆಗಳ ಒಟ್ಟಾರೆ ಆಧಾರದಲ್ಲಿ ಹೇಳುವುದಾದರೆ ಪತಿ ತನ್ನ ಹೆಂಡತಿಗೆ ಮಾನಸಿಕ ಕ್ರೌರ್ಯ ಉಂಟುಮಾಡಿದ್ದಾರೆ ಮತ್ತು ಕಾನೂನಿನ ಪ್ರಕ್ರಿಯೆ ದುರುಪಯೋಗಪಡಿಸಿಕೊಳ್ಳುವ ಮೂಲಕ ಕ್ರೌರ್ಯವನ್ನು ಆರೋಪಿಸಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ನಾವು ಭಾವಿಸುತ್ತೇವೆ. ಆದ್ದರಿಂದ ಅವರ ನಡವಳಿಕೆಗೆ ಭಾರಿ ದಂಡ ವಿಧಿಸಬೇಕಿದೆ" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಪತ್ನಿ ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಿತು.

ಈ ನೆಲೆಯಲ್ಲಿ ಅಧೀನ ನ್ಯಾಯಾಲಯ ಮಾಡಿದ್ದ ವಿಚ್ಛೇದನ ಆದೇಶ ಬದಿಗೆ ಸರಿಸಿದ ಹೈಕೋರ್ಟ್‌ ಪತಿಗೆ ₹ 10,000 ದಂಡ ವಿಧಿಸಿತು.

Kannada Bar & Bench
kannada.barandbench.com