ಕಾನೂನುಬಾಹಿರ ಚಟುವಟಿಕೆಗಳ (ನಿಯಂತ್ರಣ) ಕಾಯಿದೆ-1967 (ಯುಎಪಿಎ) ಅಡಿ ದಾಖಲಾಗುವ ದೂರುಗಳ ವಿಚಾರಣೆ ನಡೆಸಲು ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯಗಳಿಗೆ ನ್ಯಾಯಿಕ ಅಧಿಕಾರಿಗಳನ್ನು ನೇಮಿಸುವ ಸಂಬಂಧ ತುರ್ತು ಕ್ರಮಕೈಗೊಳ್ಳುವಂತೆ ರಿಜಿಸ್ಟ್ರಿಗೆ ಕರ್ನಾಟಕ ಹೈಕೋರ್ಟ್ ಸೂಚಿಸಿದೆ. ಹೀಗೆ ಮಾಡಿದರೆ ಬೆಂಗಳೂರು ಜಿಲ್ಲಾ ನ್ಯಾಯಾಲಯದಲ್ಲಿ ಯುಎಪಿಎ ಅಡಿ ಬಾಕಿ ಇರುವ ಐವತ್ತಾರು ಬಾಕಿ ಪ್ರಕರಣಗಳನ್ನು ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಬಹುದಾಗಿದೆ ಎಂದು ನ್ಯಾಯಾಲಯ ಹೇಳಿದೆ.
ನಾಲ್ಕು ನ್ಯಾಯಾಲಯಗಳು ಯುಎಪಿಎ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದು, ಈ ಪೈಕಿ ಇಬ್ಬರು ನ್ಯಾಯಾಧೀಶರ ಹುದ್ದೆ ಖಾಲಿ ಇವೆ. ಇವುಗಳ ಉಸ್ತುವಾರಿಯನ್ನು ಇತರೆ ನ್ಯಾಯಿಕ ಅಧಿಕಾರಿಗಳಿಗೆ ನೀಡಲಾಗಿದೆ ಎಂಬ ರಿಜಿಸ್ಟ್ರಾರ್ ಜನರಲ್ ಸಲ್ಲಿಸಿದ ಮಾಹಿತಿಯನ್ನು ಒಳಗೊಂಡ ವರದಿಯನ್ನು ಪರಿಶೀಲಿಸಿದ ಬಳಿಕ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠ ಆದೇಶ ಹೊರಡಿಸಿದೆ.
ನ್ಯಾಯಿಕ ಅಧಿಕಾರಿಗಳನ್ನು ನೇಮಿಸುವ ಪ್ರಕ್ರಿಯೆ ಪರಿಗಣನೆಯಲ್ಲಿದೆ. ಇದೇ ವೇಳೆ, ಬೆಂಗಳೂರು ನಗರ ಜಿಲ್ಲೆಯಲ್ಲಿ ಬಾಕಿ ಇರುವ 56 ಪ್ರಕರಣಗಳನ್ನು ಕೇವಲ 23 ಬಾಕಿ ಪ್ರಕರಣಗಳನ್ನು ಹೊಂದಿರುವ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸುವುದು ಸೂಕ್ತವಾಗಿದೆ ಎಂದು ರಿಜಿಸ್ಟ್ರಾರ್ ಜನರಲ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.
“ಮೇಲೆ ಹೇಳಲಾದ ಸಲಹೆಯನ್ನು ಜಾರಿಗೊಳಿಸಬೇಕಾದರೆ ವಿಶೇಷ ನ್ಯಾಯಾಲಯಗಳಿಗೆ ನ್ಯಾಯಿಕ ಅಧಿಕಾರಿಗಳನ್ನು ನೇಮಿಸುವ ಸಂಬಂಧ ತುರ್ತು ಕ್ರಮಕೈಗೊಳ್ಳಬೇಕಿದೆ” ಎಂದು ಪೀಠ ಆದೇಶಿಸಿತು. ಈ ಹಿನ್ನೆಲೆಯಲ್ಲಿ ಈ ಆದೇಶವನ್ನು ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರಿಗೆ ರವಾನಿಸಬೇಕು ಎಂದು ಸೂಚಿಸಿತು.
ರಾಜ್ಯದಲ್ಲಿ ಹೆಚ್ಚುವರಿ ಯುಎಪಿಎ ನ್ಯಾಯಾಲಯಗಳನ್ನು ಆರಂಭಿಸುವಂತೆ ಕೋರಿ ವಸೀಮುದ್ದೀನ್ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ಜು ಪೀಠ ನಡೆಸಿತು. ವಾರದಲ್ಲಿ ಒಮ್ಮೆ ಮಾತ್ರ ವಿಚಾರಣೆ ನಡೆಸುವ 34ನೇ ಹೆಚ್ಚುವರಿ ನಗರ ಸಿವಿಲ್ ನ್ಯಾಯಾಲಯದಲ್ಲಿ ಹಲವು ಯುಎಪಿಎ ಪ್ರಕರಣಗಳು ಬಾಕಿ ಉಳಿದಿವೆ ಎಂದು ಅರ್ಜಿದಾರರು ಹೇಳಿದ್ದರು. ಒಂದೊಮ್ಮೆ ವಾರಕ್ಕೆ ಒಮ್ಮೆ ವಿಚಾರಣೆ ನಡೆಸಿದರೂ ಯುಎಪಿಎ ಪ್ರಕರಣಗಳ ವಿಚಾರಣೆ ಪೂರ್ಣಗೊಳಿಸಲು ಹಲವು ವರ್ಷಗಳೇ ಬೇಕಾಗುತ್ತವೆ ಎಂದು ಅವರು ತಿಳಿಸಿದ್ದರು.
ಯುಎಪಿಎ ಅಡಿ ದಾಖಲಿಸಲಾಗಿರುವ ಪ್ರಕರಣಗಳ ವಿಚಾರಣೆಯು ಸೆಷನ್ಸ್ ನ್ಯಾಯಾಲಯಗಳಲ್ಲಿ ಯಾವ ಹಂತದಲ್ಲಿದೆ ಎಂಬ ಮಾಹಿತಿ ಒದಗಿಸುವಂತೆ ರಿಜಿಸ್ಟ್ರಾರ್ ಜನರಲ್‌ಗೆ ನ್ಯಾಯಾಲಯ ಈ ಹಿಂದೆ ನಿರ್ದೇಶಿಸಿತ್ತು.
ಪ್ರಕರಣದ ವಿಚಾರಣೆಯನ್ನು ಮಾರ್ಚ್ 24ಕ್ಕೆ ಮುಂದೂಡಲಾಗಿದೆ.