ವಕೀಲರ ಹತ್ಯೆ ಪ್ರಕರಣ: ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲು ಹೈಕೋರ್ಟ್ ನಿರ್ದೇಶನ

“ವಕೀಲರ ಮೇಲಿನ ದಾಳಿ, ಅದರಲ್ಲೂ ಜೀವಹಾನಿಗೆ ಕಾರಣವಾಗುವ ದಾಳಿಯನ್ನು ಪ್ರತ್ಯೇಕ ಘಟನೆಯಾಗಿ ಪರಿಗಣಿಸಲಾಗದು. ಏಕೆಂದರೆ ಅದು ವಕೀಲರ ಸ್ವಾತಂತ್ರ್ಯ ಮತ್ತು ನ್ಯಾಯದ ಆಡಳಿತದ ಮೇಲೆಯೂ ಪರಿಣಾಮ ಬೀರುತ್ತದೆ” ಎಂದು ಪೀಠ ಹೇಳಿದೆ.
Lawyers
Lawyers
Published on: 

ರಾಜ್ಯದಾದ್ಯಂತ ವಕೀಲರ ಮೇಲೆ ಹೆಚ್ಚುತ್ತಿರುವ ಹಲ್ಲೆ, ಬೆದರಿಕೆ, ಹಿಂಸಾಚಾರ ಹಾಗೂ ಹತ್ಯೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್, ವಕೀಲರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವ ಸಂಬಂಧ ಮಂಗಳವಾರ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ದಾಖಲಿಸಲು ಆದೇಶಿಸಿದೆ.

ವಕೀಲರ ಸಂಘ ಬೆಂಗಳೂರು (ಎಎಬಿ) ಮತ್ತು ಕರ್ನಾಟಕ ರಾಜ್ಯ ವಕೀಲರ ಪರಿಷತ್ತು (ಕೆಎಸ್‌ಬಿಸಿ) ಸಲ್ಲಿಸಿದ್ದ ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿ ಕೆ ಸಿಂಗ್ ಮತ್ತು ಎಚ್ ಶಾಂತಿ ಭೂಷಣ್ ಅವರ ವಿಭಾಗೀಯ ಪೀಠವು ಹೈಕೋರ್ಟ್‌ ರಿಜಿಸ್ಟ್ರಿಗೆ ಪಿಐಎಲ್ ದಾಖಲಿಸುವಂತೆ ನಿರ್ದೇಶಿಸಿತು.

Justice D K Singh & Justice H Shanti Bhushan
Justice D K Singh & Justice H Shanti Bhushan

ವಕೀಲರಾದ ಶ್ರೀರಾಮ್ ವಿ ಮತ್ತು ಮಂಜುನಾಥ್ ಅವರ ಇತ್ತೀಚಿನ ಹತ್ಯೆ ಹಾಗೂ ಹಿರಿಯ ವಕೀಲ ವೆಂಕಟರಾಮಣಪ್ಪ ಸಣ್ಣಕ್ಕಿ ಅವರ ಮೇಲೆ ನಡೆದಿರುವ ಹತ್ಯೆಯ ಯತ್ನದ ಘಟನೆಗಳನ್ನು ಸಂಘಟನೆಗಳು ನ್ಯಾಯಾಲಯದ ಗಮನಕ್ಕೆ ತಂದಿದ್ದವು.

“ವಕೀಲರ ಮೇಲಿನ ದಾಳಿ, ಅದರಲ್ಲೂ ಜೀವಹಾನಿಗೆ ಕಾರಣವಾಗುವ ದಾಳಿಯನ್ನು ಪ್ರತ್ಯೇಕ ಘಟನೆಯಾಗಿ ಪರಿಗಣಿಸಲಾಗದು. ಏಕೆಂದರೆ ಅದು ವಕೀಲರ ಸ್ವಾತಂತ್ರ್ಯ ಮತ್ತು ನ್ಯಾಯದ ಆಡಳಿತದ ಮೇಲೆಯೂ ಪರಿಣಾಮ ಬೀರುತ್ತದೆ” ಎಂದು ಪೀಠ ಹೇಳಿದೆ.

ವಕೀಲರು ನ್ಯಾಯಾಲಯದ ಅಧಿಕಾರಿಗಳು ಹಾಗೂ ನ್ಯಾಯದಾನ ಪ್ರಕ್ರಿಯೆಯ ಪಾಲುದಾರರಾಗಿದ್ದು, ಅವರ ಸುರಕ್ಷತೆ, ಘನತೆ ಮತ್ತು ವೃತ್ತಿಪರ ಸ್ವಾತಂತ್ರ್ಯ ಅತ್ಯಂತ ಮಹತ್ವದ್ದಾಗಿದೆ ಎಂದು ಪೀಠ ಒತ್ತಿಹೇಳಿದೆ.

ದೈಹಿಕ ಹಾನಿ, ಬೆದರಿಕೆ ಅಥವಾ ಪ್ರಚೋದನೆ ಭೀತಿಯಿಲ್ಲದೆ ವಕೀಲರು ತಮ್ಮ ಕಕ್ಷಿದಾರರನ್ನು ನಿರ್ಭೀತಿಯಿಂದ ಪ್ರತಿನಿಧಿಸುವಂತಿರಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ವಕೀಲರ ರಕ್ಷಣೆ ಮತ್ತು ಕಲ್ಯಾಣಕ್ಕೆ ಸಂಬಂಧಿಸಿದ ಪ್ರಸ್ತುತ ಕಾನೂನು ಚೌಕಟ್ಟನ್ನು, ಅದರಲ್ಲೂ ವಕೀಲರ ರಕ್ಷಣಾ ಕಾಯಿದೆಯನ್ನು ಬಲಪಡಿಸುವ ಅಗತ್ಯವನ್ನು ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ಈ ಸಂಬಂಧ ಕಾನೂನು ಮತ್ತು ಆಡಳಿತಾತ್ಮಕವಾಗಿ ಕೈಗೊಳ್ಳಲು ಉದ್ದೇಶಿಸಿರುವ ಕ್ರಮಗಳ ಕುರಿತು ಸರ್ಕಾರ ತನ್ನ ಪ್ರತಿಕ್ರಿಯೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸೂಚಿಸಿದೆ.

ವಕೀಲರ ಮೇಲೆ ಹೆಚ್ಚುತ್ತಿರುವ ಬೆದರಿಕೆ, ಹಲ್ಲೆ ಮತ್ತು ಹಿಂಸಾಚಾರದ ಘಟನೆಗಳನ್ನು ಗಮನಿಸಿದರೆ, ಈಗಿರುವ ಕಾನೂನುಗಳು ಅವರಿಗೆ ಸಮರ್ಪಕ ರಕ್ಷಣೆ ಒದಗಿಸುತ್ತಿವೆಯೇ ಎಂಬುದನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಪೀಠ ಹೇಳಿದೆ.

“ವಕೀಲರ ಸಂಘ ವ್ಯಕ್ತಪಡಿಸಿರುವ ಕಳವಳಗಳಿಗೆ ಕೇವಲ ಭರವಸೆಗಳನ್ನು ನೀಡುವ ಮೂಲಕ ಪರಿಹಾರ ಕಂಡುಕೊಳ್ಳಲಾಗದು. ಪರಿಣಾಮಕಾರಿ ಅನುಷ್ಠಾನ ವ್ಯವಸ್ಥೆಯೊಂದಿಗೆ ಸೂಕ್ತ ಕಾನೂನು ಮತ್ತು ಆಡಳಿತಾತ್ಮಕ ಕ್ರಮಗಳ ಅಗತ್ಯವಿದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಖಾಸಗಿ ವ್ಯಕ್ತಿಗಳ ನಡುವಿನ ಸಿವಿಲ್ ವಿವಾದಗಳನ್ನು ಪೊಲೀಸ್ ಠಾಣೆಗಳಲ್ಲಿ ವಿಚಾರಣೆ ನಡೆಸಿ ಇತ್ಯರ್ಥಪಡಿಸುವ ಮೂಲಕ ಕೆಲವು ಪೊಲೀಸ್ ಠಾಣೆಗಳು ಸಮಾನಾಂತರ ನ್ಯಾಯಾಲಯಗಳಂತೆ ಕಾರ್ಯನಿರ್ವಹಿಸುತ್ತಿವೆ ಎಂಬ ಆರೋಪಗಳನ್ನೂ ಹೈಕೋರ್ಟ್ ಗಮನಕ್ಕೆ ತೆಗೆದುಕೊಂಡಿದೆ.

ಆಸ್ತಿ, ಸ್ವಾಧೀನ, ಒಪ್ಪಂದದ ಬಾಧ್ಯತೆಗಳು ಅಥವಾ ಇತರ ಸಿವಿಲ್ ಹಕ್ಕುಗಳಿಗೆ ಸಂಬಂಧಿಸಿದ ವಿವಾದಗಳನ್ನು ಇತ್ಯರ್ಥಪಡಿಸುವ ವೇದಿಕೆಯಾಗಿ ಪೊಲೀಸ್ ಠಾಣೆಗಳನ್ನು ಪರಿವರ್ತಿಸಬಾರದು ಎಂದು ನ್ಯಾಯಾಲಯ ಹೇಳಿದೆ.

“ಸಿವಿಲ್ ಹಕ್ಕುಗಳನ್ನು ನಿರ್ಣಯಿಸುವ ಅಥವಾ ಆಸ್ತಿ, ಸ್ವಾಧೀನ, ಒಪ್ಪಂದದ ಬಾಧ್ಯತೆಗಳು ಹಾಗೂ ಇತರ ಸಿವಿಲ್ ಹಕ್ಕುಗಳಿಗೆ ಸಂಬಂಧಿಸಿದ ವಿವಾದಗಳನ್ನು ಇತ್ಯರ್ಥಪಡಿಸುವ ವೇದಿಕೆಯಾಗಿ ಪೊಲೀಸ್ ಠಾಣೆಯನ್ನು ಪರಿವರ್ತಿಸಬಾರದು” ಎಂದು ವಿಭಾಗೀಯ ಪೀಠ ಸ್ಪಷ್ಟಪಡಿಸಿದೆ.

ಕ್ರಿಮಿನಲ್ ಅಪರಾಧ ನಡೆದಿರುವುದು ಕಂಡುಬಂದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದನ್ನು ಹೊರತುಪಡಿಸಿ, ಸಿವಿಲ್ ವಿವಾದಗಳನ್ನು ಪೊಲೀಸ್ ಠಾಣೆಗಳು ವಿಚಾರಣೆ ನಡೆಸಿ ಇತ್ಯರ್ಥಪಡಿಸದಂತೆ ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ಎಲ್ಲಾ ಠಾಣೆಗಳಿಗೆ ನಿರ್ದಿಷ್ಟ ಸೂಚನೆ ನೀಡಬೇಕು ಎಂದು ನಿರ್ದೇಶಿಸಿದೆ.

ಈ ಸೂಚನೆಗಳು ಮತ್ತು ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು (ಎಸ್‌ಒಪಿ) ಉಲ್ಲಂಘಿಸುವ ಪೊಲೀಸ್ ಅಧಿಕಾರಿಗಳ ವಿರುದ್ಧ ಸೂಕ್ತ ಮೇಲ್ವಿಚಾರಣೆ ಮತ್ತು ಹೊಣೆಗಾರಿಕೆ ನಿಗದಿಪಡಿಸುವ ಅಗತ್ಯವನ್ನೂ ನ್ಯಾಯಾಲಯ ಒತ್ತಿಹೇಳಿದೆ.

ತಮ್ಮ ವೃತ್ತಿಪರ ಕರ್ತವ್ಯಗಳ ನಿರ್ವಹಣೆಗಾಗಿ ಪೊಲೀಸ್ ಠಾಣೆಗಳಿಗೆ ಭೇಟಿ ನೀಡುವ ವಕೀಲರನ್ನು ಗೌರವಿಸುವ ಮತ್ತು ಅವರೊಂದಿಗೆ ನಡೆದುಕೊಳ್ಳುವ ರೀತಿಯನ್ನು ನಿರ್ದಿಷ್ಟಪಡಿಸುವ ಏಕರೂಪದ ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್‌ಒಪಿ) ರೂಪಿಸಬೇಕು ಎಂದು ಹೈಕೋರ್ಟ್ ಹೇಳಿದೆ.

“ಕನಿಷ್ಠ ಪಕ್ಷ, ತಮ್ಮ ವೃತ್ತಿಪರ ಕರ್ತವ್ಯಗಳ ನಿರ್ವಹಣೆಯಲ್ಲಿ ಪೊಲೀಸ್ ಠಾಣೆಗೆ ಭೇಟಿ ನೀಡುವ ವಕೀಲರಿಗೆ ಸೂಕ್ತ ಗೌರವ, ಘನತೆ ಮತ್ತು ಕನಿಷ್ಠ ವೃತ್ತಿಪರ ಸೌಜನ್ಯವನ್ನು ನೀಡಬೇಕು” ಎಂದು ಪೀಠ ಹೇಳಿದೆ.

ಇದು ವಕೀಲರಿಗೆ ಯಾವುದೇ ವಿಶೇಷ ಸವಲತ್ತು ನೀಡುವ ಉದ್ದೇಶ ಹೊಂದಿಲ್ಲ. ಬದಲಿಗೆ ಸಾರ್ವಜನಿಕ ಸೇವಕರು ಸರಿಯಾದ ನಡವಳಿಕೆ ಪ್ರದರ್ಶಿಸಿ ವೃತ್ತಿಪರ ಸೌಜನ್ಯ ತೋರುವುದನ್ನು ಖಚಿತಪಡಿಸುವುದಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಇದಲ್ಲದೆ, ಪೊಲೀಸ್ ಅಧಿಕಾರಿಗಳ ವಿರುದ್ಧ ವಕೀಲರು ಸಲ್ಲಿಸುವ ದೂರುಗಳನ್ನು ಸ್ವೀಕರಿಸುವ ಮತ್ತು ಪರಿಶೀಲಿಸುವ ಕುರಿತು ಪ್ರತ್ಯೇಕ ಎಸ್‌ಒಪಿ ರೂಪಿಸಬೇಕು. ಅಂತಹ ದೂರುಗಳನ್ನು ಸ್ವೀಕರಿಸಿದ ಬಗ್ಗೆ ದೃಢೀಕರಣ ನೀಡಬೇಕು, ಸಮಂಜಸ ಅವಧಿಯಲ್ಲಿ ಪರಿಶೀಲಿಸಬೇಕು ಮತ್ತು ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದೆ.

ಕರ್ನಾಟಕದಲ್ಲಿ ವರದಿಯಾಗಿರುವ ಪ್ರತಿಯೊಬ್ಬ ವಕೀಲರ ಹತ್ಯೆ ಪ್ರಕರಣದ ತನಿಖೆಯ ವಿವರಗಳನ್ನು ಪ್ರಕರಣವಾರು ಸಲ್ಲಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಹೈಕೋರ್ಟ್ ನಿರ್ದೇಶಿಸಿದೆ.

ರಾಜ್ಯದ ಪೊಲೀಸ್ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕರು (ಡಿಜಿ ಮತ್ತು ಐಜಿಪಿ) ಪರಿಶೀಲಿಸಿ ದೃಢೀಕರಿಸಿದ ಸಮಗ್ರ ವರದಿಯಲ್ಲಿ ಈ ಕೆಳಗಿನ ವಿವರಗಳಿರಬೇಕು ಎಂದು ಸೂಚಿಸಲಾಗಿದೆ:

ಹತ್ಯೆಯಾದ ವಕೀಲರ ಹೆಸರು; ಘಟನೆ ನಡೆದ ದಿನಾಂಕ ಮತ್ತು ಸ್ಥಳ; ಸಂಬಂಧಪಟ್ಟ ಪೊಲೀಸ್ ಠಾಣೆ ಮತ್ತು ಅಪರಾಧ ಸಂಖ್ಯೆ; ದಾಖಲಿಸಿರುವ ಪ್ರಕರಣದ ಸೆಕ್ಷನ್‌ಗಳು; ಎಫ್‌ಐಆರ್ ದಾಖಲಿಸಿದ ದಿನಾಂಕ; ಆರೋಪಿಗಳ ಹೆಸರು ಮತ್ತು ಬಂಧನದ ವಿವರ; ತನಿಖೆಯಲ್ಲಿ ಸಂಗ್ರಹಿಸಿರುವ ಸಾಕ್ಷ್ಯಾಧಾರಗಳು; ತನಿಖೆಯ ಪ್ರಸ್ತುತ ಹಂತ.

ತನಿಖೆ ಪೂರ್ಣಗೊಂಡು ಆರೋಪಪಟ್ಟಿ ಸಲ್ಲಿಸಲಾಗಿದೆಯೇ ಎಂಬುದನ್ನೂ ವರದಿಯಲ್ಲಿ ತಿಳಿಸಬೇಕು. ತನಿಖೆ ಬಾಕಿ ಇರುವ ಪ್ರಕರಣಗಳಲ್ಲಿ ವಿಳಂಬಕ್ಕೆ ಕಾರಣ, ಈವರೆಗೆ ಕೈಗೊಂಡಿರುವ ಕ್ರಮಗಳು ಹಾಗೂ ಮುಂದಿನ ತನಿಖೆಯ ರೂಪುರೇಷೆಗಳನ್ನು ವಿವರಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

ಇತ್ತೀಚಿನ ವಕೀಲರ ಹತ್ಯೆ ಪ್ರಕರಣಗಳ ತನಿಖೆಗೆ ಸಂಬಂಧಿಸಿದಂತೆ ದಾಖಲಿಸಿರುವ ಎಫ್‌ಐಆರ್‌ಗಳು, ಬಂಧನಗಳು, ಸಂಗ್ರಹಿಸಿರುವ ಸಾಕ್ಷ್ಯಗಳು ಮತ್ತು ಮುಂದಿನ ಕ್ರಮಗಳ ಕುರಿತು ಸ್ಥಿತಿಗತಿ ವರದಿ ಸಲ್ಲಿಸುವಂತೆ ಅಡ್ವೊಕೇಟ್ ಜನರಲ್ ಅವರಿಗೆ ನ್ಯಾಯಾಲಯ ಮನವಿ ಮಾಡಿದೆ.

ರಾಜ್ಯ ಸರ್ಕಾರ, ಪೊಲೀಸ್ ಅಧಿಕಾರಿಗಳು, ಭಾರತೀಯ ವಕೀಲರ ಪರಿಷತ್ತು (ಬಿಸಿಐ), ಕರ್ನಾಟಕ ರಾಜ್ಯ ವಕೀಲರ ಪರಿಷತ್ತು (ಕೆಎಸ್‌ಬಿಸಿ) ಮತ್ತು ವಕೀಲರ ಸಂಘ ಬೆಂಗಳೂರು (ಎಎಬಿ) ಸೇರಿದಂತೆ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ.

ಪ್ರಕರಣದ ಮುಂದಿನ ವಿಚಾರಣೆಯನ್ನು ಡಿಸೆಂಬರ್ 8ಕ್ಕೆ ಮುಂದೂಡಲಾಗಿದೆ.