ಕಡತಗಳ ಚಲನವಲನ ಪತ್ತೆಗೆ ಆರ್‌ಎಫ್‌ಐಡಿ ಆಧಾರಿತ ವ್ಯವಸ್ಥೆ ಜಾರಿಗೆ ತಂದ ಕರ್ನಾಟಕ ಹೈಕೋರ್ಟ್

ಪ್ರತಿ ಹಂತದಲ್ಲೂ ಕಡತಗಳ ಸ್ವೀಕೃತಿ ಮತ್ತು ರವಾನೆಯನ್ನು ಸ್ಕ್ಯಾನ್ ಮಾಡಿ ದಾಖಲಿಸಲು ಸಿಬ್ಬಂದಿಗೆ ಸೂಚನೆ. ವಿಭಾಗಾಧಿಕಾರಿಗಳು ವಾರಕ್ಕೊಮ್ಮೆ ಅನುಪಾಲನಾ ವರದಿ ಸಲ್ಲಿಸುವುದು ಕಡ್ಡಾಯ.
Karnataka High Court
Karnataka High Court
Published on: 

ಕರ್ನಾಟಕ ಹೈಕೋರ್ಟ್‌ನ ವಿವಿಧ ವಿಭಾಗಗಳಲ್ಲಿ ಪ್ರಕರಣಗಳ ಕಡತಗಳ ಚಲನವಲನವನ್ನು ಪತ್ತೆಹಚ್ಚಲು ಹಾಗೂ ಅವುಗಳ ವಿಲೇವಾರಿಯಲ್ಲಿನ ವಿಳಂಬವನ್ನು ಗುರುತಿಸಲು ಆರ್‌ಎಫ್‌ಐಡಿ (Radio Frequency Identification) ಆಧಾರಿತ ಕಡತ ಪತ್ತೆ ಘಟಕವನ್ನು ಜಾರಿಗೆ ತರಲಾಗಿದೆ.

ಈ ಸಂಬಂಧ ನವೆಂಬರ್ 24ರಂದು ಸುತ್ತೋಲೆ ಹೊರಡಿಸಿರುವ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಎಂ ಚಂದ್ರಶೇಖರ ರೆಡ್ಡಿ ಅವರು, ನವೆಂಬರ್ 26ರಿಂದಲೇ ಎಲ್ಲ ವಿಭಾಗಗಳಲ್ಲಿ ಈ ವ್ಯವಸ್ಥೆಯನ್ನು ಕಡ್ಡಾಯವಾಗಿ ಜಾರಿಗೊಳಿಸುವಂತೆ ನಿರ್ದೇಶಿಸಿದ್ದಾರೆ.

ಹೈಕೋರ್ಟ್‌ನಲ್ಲಿ ಪ್ರಕರಣಗಳ ಕಡತಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಣಗೊಳಿಸುವ ಪ್ರಕ್ರಿಯೆಯ ಭಾಗವಾಗಿ ಈ ವ್ಯವಸ್ಥೆಯನ್ನು ರೂಪಿಸಲಾಗಿದೆ. ಜೂನ್ 2026ರಿಂದ ಹೊಸದಾಗಿ ದಾಖಲಾದ ಪ್ರಕರಣಗಳ ವಿವರಗಳನ್ನು ದಾಖಲಿಸಿ, ಕಡತಗಳಿಗೆ ಆರ್‌ಎಫ್‌ಐಡಿ ಟ್ಯಾಗ್ ಅಳವಡಿಸಲಾಗುತ್ತಿದೆ. ಅದಕ್ಕೂ ಮುನ್ನ ದಾಖಲಾದ ಪ್ರಕರಣಗಳ ಕಡತಗಳನ್ನು ವಿಚಾರಣೆಗೆ ಪಟ್ಟಿ ಮಾಡುವ ಸಂದರ್ಭದಲ್ಲಿಯೂ ಆರ್‌ಎಫ್‌ಐಡಿ ಟ್ಯಾಗ್ ಅಳವಡಿಸಲಾಗುತ್ತಿದೆ.

ಹೈಕೋರ್ಟ್‌ನ ಎಂಜಿನಿಯರ್‌ಗಳು ಅಭಿವೃದ್ಧಿಪಡಿಸಿರುವ ವೆಬ್ ಆಧಾರಿತ ಕಡತ ಪತ್ತೆ ಘಟಕವು ಆರ್‌ಎಫ್‌ಐಡಿ ಟ್ಯಾಗ್‌ಗಳ ಮೂಲಕ ಕಡತಗಳ ವಿವರ ಮತ್ತು ಅವುಗಳ ಚಲನವಲನವನ್ನು ದಾಖಲಿಸಲಿದೆ. ಕಡತಗಳು ಯಾವ ವಿಭಾಗದಲ್ಲಿವೆ ಎಂಬುದನ್ನು ಪತ್ತೆಹಚ್ಚುವುದರ ಜೊತೆಗೆ, ಪ್ರತಿ ವಿಭಾಗ ಹಾಗೂ ಸಿಬ್ಬಂದಿ ಕಡತಗಳ ವಿಲೇವಾರಿಗೆ ತೆಗೆದುಕೊಳ್ಳುವ ಸಮಯವನ್ನೂ ಈ ವ್ಯವಸ್ಥೆಯ ಮೂಲಕ ಮೇಲ್ವಿಚಾರಣೆ ಮಾಡಬಹುದಾಗಿದೆ.

ಹೊಸ ಸೂಚನೆಗಳ ಪ್ರಕಾರ, ಪ್ರತಿಯೊಬ್ಬ ಸಿಬ್ಬಂದಿಯೂ ತಮ್ಮದೇ ಲಾಗಿನ್ ಐಡಿ ಬಳಸಿ ಘಟಕಕ್ಕೆ ಪ್ರವೇಶಿಸಬೇಕು. ತಮಗೆ ಕಡತ ಸ್ವೀಕೃತವಾದ ತಕ್ಷಣ ಹಾಗೂ ಅದನ್ನು ಮುಂದಿನ ವಿಭಾಗಕ್ಕೆ ರವಾನಿಸುವ ಮೊದಲು ಆರ್‌ಎಫ್‌ಐಡಿ ಟ್ಯಾಗ್ ಸ್ಕ್ಯಾನ್ ಮಾಡಬೇಕು. ನಂತರದ ಪ್ರತಿ ಹಂತದಲ್ಲೂ ಕಡತ ಸ್ವೀಕರಿಸುವಾಗ ಮತ್ತು ರವಾನಿಸುವಾಗ ಸ್ಕ್ಯಾನ್ ಮಾಡುವುದು ಕಡ್ಡಾಯವಾಗಿದೆ.

ತಾವು ನಿರ್ವಹಿಸುವ ಪ್ರತಿಯೊಂದು ಕಡತದ ಸ್ವೀಕೃತಿ ಮತ್ತು ರವಾನೆ ವಿವರಗಳು ವ್ಯವಸ್ಥೆಯಲ್ಲಿ ಸರಿಯಾಗಿ ದಾಖಲಾಗಿರುವುದನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿಯನ್ನು ಸಂಬಂಧಪಟ್ಟ ಸಿಬ್ಬಂದಿಗೆ ವಹಿಸಲಾಗಿದೆ.

ಒಂದು ವೇಳೆ ಸ್ಕ್ಯಾನ್ ಮಾಡಲು ತಪ್ಪಿದರೆ, ತಕ್ಷಣವೇ ವಿಭಾಗಾಧಿಕಾರಿಗಳಿಗೆ ಮಾಹಿತಿ ನೀಡಿ ಅಗತ್ಯ ದಾಖಲೆ ನಮೂದಿಸುವಂತೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ. ಕಡತಕ್ಕೆ ಆರ್‌ಎಫ್‌ಐಡಿ ಟ್ಯಾಗ್ ಇಲ್ಲದಿದ್ದರೆ ಅಥವಾ ರೀಡರ್, ಟ್ಯಾಗ್ ಹಾಗೂ ಘಟಕದಲ್ಲಿ ತಾಂತ್ರಿಕ ಸಮಸ್ಯೆ ಎದುರಾದರೆ ಅದನ್ನೂ ತಕ್ಷಣ ವಿಭಾಗಾಧಿಕಾರಿಗಳ ಗಮನಕ್ಕೆ ತರಬೇಕು.

ವಿಭಾಗಾಧಿಕಾರಿಗಳು ಕಡತಗಳ ಸ್ವೀಕೃತಿ ಮತ್ತು ರವಾನೆ ವಿವರಗಳು ವ್ಯವಸ್ಥೆಯಲ್ಲಿ ಸರಿಯಾಗಿ ದಾಖಲಾಗುತ್ತಿವೆಯೇ ಎಂಬುದನ್ನು ನಿಯಮಿತವಾಗಿ ಪರಿಶೀಲಿಸಬೇಕು. ಸ್ಕ್ಯಾನ್ ತಪ್ಪಿರುವುದು, ವಿಳಂಬ ಅಥವಾ ಇತರ ಸಮಸ್ಯೆಗಳು ಕಂಡುಬಂದರೆ ಕೂಡಲೇ ಪರಿಹರಿಸಬೇಕು.

ಇದಲ್ಲದೆ, ಪ್ರತಿ ವಿಭಾಗಾಧಿಕಾರಿಯೂ ವ್ಯವಸ್ಥೆಯ ಬಳಕೆ, ಸ್ಕ್ಯಾನ್ ತಪ್ಪಿರುವ ಪ್ರಕರಣಗಳು, ಆರ್‌ಎಫ್‌ಐಡಿ ಟ್ಯಾಗ್ ಇಲ್ಲದ ಕಡತಗಳು, ತಾಂತ್ರಿಕ ಸಮಸ್ಯೆಗಳು ಹಾಗೂ ಅವುಗಳನ್ನು ಪರಿಹರಿಸಲು ಕೈಗೊಂಡ ಕ್ರಮಗಳ ವಿವರ ಒಳಗೊಂಡ ಸಾಪ್ತಾಹಿಕ ಅನುಪಾಲನಾ ವರದಿಯನ್ನು ರಿಜಿಸ್ಟ್ರಾರ್ (ನ್ಯಾಯಾಂಗ) ಅವರಿಗೆ ಸಲ್ಲಿಸಬೇಕು. ಈ ವರದಿಗಳನ್ನು ರಿಜಿಸ್ಟ್ರಾರ್ (ಕಂಪ್ಯೂಟರ್ಸ್) ಅವರಿಗೆ ಕಳುಹಿಸಿ ಮೇಲ್ವಿಚಾರಣೆ ನಡೆಸಲಾಗುತ್ತದೆ.

ರಿಜಿಸ್ಟ್ರಾರ್ (ನ್ಯಾಯಾಂಗ) ಅವರು ಅನುಪಾಲನಾ ವರದಿಗಳನ್ನು ಪರಿಶೀಲಿಸಿ, ಎಲ್ಲ ವಿಭಾಗಗಳಲ್ಲಿನ ವ್ಯವಸ್ಥೆಯ ಅನುಷ್ಠಾನದ ಮೇಲ್ವಿಚಾರಣೆ ನಡೆಸಬೇಕು. ಅನುಷ್ಠಾನದಲ್ಲಿನ ತೊಂದರೆಗಳು ಅಥವಾ ಪದೇಪದೇ ಕಂಡುಬರುವ ಸೂಚನೆ ಉಲ್ಲಂಘನೆಗಳನ್ನು ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಮುಖ್ಯ ನ್ಯಾಯಮೂರ್ತಿಗಳ ಆದೇಶದ ಮೇರೆಗೆ ರಿಜಿಸ್ಟ್ರಾರ್ ಜನರಲ್ ಸುತ್ತೋಲೆ ಹೊರಡಿಸಿದ್ದಾರೆ.