ಕರ್ನಾಟಕ ಹೈಕೋರ್ಟ್‌ನಿಂದ ನೂತನ ಎಸ್‌ಒಪಿ ಪ್ರಕಟ; ಆನ್‌ಲೈನ್‌ ವಿಧಾನಕ್ಕೆ ಆದ್ಯತೆ ನೀಡಲು ವಕೀಲರಿಗೆ ಸಲಹೆ

ನೂತನ ಪ್ರಮಾಣಿತ ಕಾರ್ಯಾಚರಣಾ ವಿಧಾನದ (ಎಸ್‌ಒಪಿ) ಅನ್ವಯ ಹೈಕೋರ್ಟ್‌ನ ಎಲ್ಲ ಪೀಠಗಳೂ ಹೈಬ್ರಿಡ್ ವಿಧಾನವನ್ನು ವಿಚಾರಣೆಗೆ ಅನುಸರಿಸಲಿವೆ. ವಕೀಲರು ಭೌತಿಕ ಅಥವಾ ಆನ್‌ಲೈನ್‌ ವಿಧಾನದ ನಡುವೆ ಆಯ್ಕೆ ಮಾಡಿಕೊಳ್ಳಬೇಕಿದೆ.
Karnataka HC
Karnataka HC

ಕರ್ನಾಟಕ ಹೈಕೋರ್ಟ್‌ನ ಕಲಾಪಗಳು ನವೆಂಬರ್‌ 8ರಿಂದ ಅರಂಭಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರಿನ ಪ್ರಧಾನ ಪೀಠ ಮತ್ತು ಧಾರವಾಡ ಹಾಗೂ ಕಲ್ಬುರ್ಗಿ ಪೀಠಗಳಿಗೆ ಅನ್ವಯಿಸುವಂತೆ ನೂತನ ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು (ಎಸ್‌ಒಪಿ) ಹೊರಡಿಸಲಾಗಿದೆ.

ನೂತನ ಎಸ್‌ಒಪಿ ಅನ್ವಯ, ಎಲ್ಲ ಪೀಠಗಳು ಹೈಬ್ರಿಡ್‌‌ ವಿಧಾನದಲ್ಲಿ ಕಲಾಪ ನಡೆಸಲಿದ್ದು, ವಕೀಲರು ಭೌತಿಕ ಅಥವಾ ಆನ್‌ಲೈನ್‌ ವಿಧಾನದ ನಡುವೆ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಆದರೆ, ಆನ್‌ಲೈನ್‌ ವಿಧಾನಕ್ಕೆ ಆದ್ಯತೆ ನೀಡುವಂತೆ ವಕೀಲ ಸಮುದಾಯಕ್ಕೆ ಹೈಕೋರ್ಟ್‌ ಮನವಿ ಮಾಡಿದೆ.

ಎಲ್ಲ ಹೈಕೋರ್ಟ್‌ ಪೀಠಗಳು ಪ್ರಕರಣಗಳನ್ನು ಎರಡೂ ಅವಧಿಯಲ್ಲಿ ಭೌತಿಕವಾಗಿ ಹಾಗೂ ಆನ್‌ಲೈನ್‌ ಮೂಲಕ ಹೈಬ್ರಿಡ್‌ ವಿಧಾನದಲ್ಲಿ ಆಲಿಸಲಿವೆ. ವಕೀಲರು ಆನ್‌ಲೈನ್ ವಿಧಾನಕ್ಕೆ ಆದ್ಯತೆ ನೀಡಲು ಮನವಿ ಮಾಡಲಾಗಿದೆ ಎಂದು ಎಸ್‌ಒಪಿಯಲ್ಲಿ ತಿಳಿಸಲಾಗಿದೆ.

ಇದಲ್ಲದೆ ಕೋರ್ಟ್‌ ಪ್ರವೇಶಕ್ಕೆ ಹಾಗೂ ಕೋರ್ಟ್‌ ಆವರಣದಲ್ಲಿ ಅನುಸರಿಸಬೇಕಾದ ಕೋವಿಡ್‌ ನಿಯಮಾವಳಿಗಳನ್ನು ಪ್ರಮುಖವಾಗಿ ಎಸ್‌ಒಪಿಯಲ್ಲಿ ಉಲ್ಲೇಖಿಸಲಾಗಿದೆ.

ಕೋರ್ಟ್‌ ಅವರಣವನ್ನು ಪ್ರವೇಶಿಸುವ ವಕೀಲರು, ವೈಯಕ್ತಿಕ ಪಕ್ಷಕಾರರು, ಸಿಬ್ಬಂದಿಗಳು ಮತ್ತು ವ್ಯಾಜ್ಯಕಾರರು ಎರಡು ಮುಖಗವಸುಗಳನ್ನು ಧರಿಸಬೇಕು, ಅದರಲ್ಲಿ ಒಂದು ಎನ್‌95 ಮಾಸ್ಕ್‌ ಆಗಿರುವುದು ಕಡ್ಡಾಯ ಎಂದು ಎಸ್‌ಒಪಿಯಲ್ಲಿ ಹೇಳಲಾಗಿದೆ.

ಕೋರ್ಟ್‌ ಹಾಲ್‌ಗಳಲ್ಲಿ, ವಕೀಲರ ಪರಿಷತ್ತಿನ ಆವರಣಗಳಲ್ಲಿ, ಕಚೇರಿಗಳಲ್ಲಿ, ಕೋರ್ಟ್‌ ಆವರಣದಲ್ಲಿ ಮಾಸ್ಕ್‌ಗಳನ್ನು ಹಾಕಿಕೊಳ್ಳುವುದು ಕಡ್ಡಾಯ. ಯಾರಾದರೂ ಮಾಸ್ಕ್‌ ಧರಿಸದೆ ಇದ್ದರೆ ಅವರು ಕೋರ್ಟ್‌ ಆವರಣದಿಂದ ತಕ್ಷಣವೇ ಹೊರನಡೆಯಬೇಕು ಎಂದು ಎಸ್‌ಒಪಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

ಹೈಕೋರ್ಟ್‌ ಸಿಬ್ಬಂದಿಯು ಸದಾಕಾಲ ಕೈಗವಸು ಧರಿಸಬೇಕು ಹಾಗೂ ಇದಾಗಲೇ ಆರೋಗ್ಯ ಮಾರ್ಗದರ್ಶಿಯಲ್ಲಿ ಸೂಚಿಸಿದಂತೆ, ವೆಬ್‌ಸೈಟ್‌ಗಳಲ್ಲಿ ತೋರಿಸಲಾಗಿರುವಂತೆ ಸ್ಯಾನಿಟೈಸರ್‌ ಬಳಸಬೇಕು.

ಬೆಂಗಳೂರಿನ ಹೈಕೋರ್ಟ್‌ ಪ್ರಧಾನ ಪೀಠದಲ್ಲಿ ತತ್ಕಾಲೀನವಾಗಿ ವಕೀಲರಿಗೆ ಕೋರ್ಟ್‌ ಹಾಲ್‌ ಸಂಖ್ಯೆ 22 ಹಾಗೂ 39ರಲ್ಲಿ ಸೂಚಿಸಿರುವಂತೆ ಪ್ರವೇಶವನ್ನು ಕಲ್ಪಿಸಲಾಗಿದೆ. ಅದರೆ, ಗೇಟ್‌ ನಂ. 3 ರಿಂದ ಕೋರ್ಟ್‌ ಆವರಣಕ್ಕೆ ವಕೀಲರ ವಾಹನಗಳಿಗೆ ಪ್ರವೇಶವನ್ನಾಗಲಿ, ಪ್ರಧಾನ ಪೀಠದ ಕಟ್ಟಡದ ಪೂರ್ವಕ್ಕೆ ಪಾರ್ಕಿಂಗ್‌ ಸ್ಥಳಾವಕಾಶವನ್ನಾಗಲಿ ವಕೀಲರಿಗೆ ನಿಷೇಧಿಸಲಾಗಿದೆ. ಹೈಕೋರ್ಟ್‌ ಸಿಬ್ಬಂದಿಗಳ ವಾಹನಗಳಿಗೆ ಮಾತ್ರವೇ ಪ್ರವೇಶ ಕಲ್ಪಿಸಲಾಗಿದೆ.

ಐದು ಅವಧಿಗೆ ಪ್ರಕರಣಗಳನ್ನು ಪಟ್ಟಿ ಮಾಡುವ ಅಭ್ಯಾಸವನ್ನು ನಿಲ್ಲಿಸಲಾಗಿದ್ದು, ಬೆಳಗ್ಗೆ 10:30ಕ್ಕೆ ನ್ಯಾಯಾಲಯದ ಕಲಾಪಗಳು ಆರಂಭಗೊಳ್ಳುವುದನ್ನು ಸೂಚಿಸುವ ಒಂದೇ ಅವಧಿಯ ಪ್ರಕರಣ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.

ಹೆಚ್ಚಿನ ವಿವರಗಳಿಗೆ ಕೆಳಗೆ ಲಗತ್ತಿಸಲಾಗಿರುವ ಪ್ರಮಾಣಿತ ಕಾರ್ಯಾಚಾರಣಾ ವಿಧಾನದ ಪ್ರತಿಯನ್ನು ಗಮನಿಸಬಹುದು.

Attachment
PDF
Karnataka_SOP.pdf
Preview

Related Stories

No stories found.
Kannada Bar & Bench
kannada.barandbench.com