ಮಾಜಿ ಅಧ್ಯಕ್ಷರ ವಿರುದ್ಧದ ದೂರು ಮುಕ್ತಾಯದ ಪ್ರಮಾಣೀಕೃತ ಗೊತ್ತುವಳಿ ಕೋರಿಕೆ: ಕೆಎಸ್‌ಬಿಸಿಗೆ ಹೈಕೋರ್ಟ್‌ ನೋಟಿಸ್‌

ಹಿರಿಯ ವಕೀಲ ಕೆ ಬಿ ನಾಯ್ಕ್‌ ಅವರ ವಿರುದ್ಧದ ದೂರನ್ನು ಶಿಸ್ತುಪಾಲನಾ ಸಮಿತಿಗೆ ಪರಿಶೀಲಿಸಲು ಆದೇಶಿಸದೇ ಹಿಂದೆ ಸರಿಯುವ ಮೂಲಕ ಕೆಎಸ್‌ಬಿಸಿಯು ಸ್ವೇಚ್ಛೆಯಿಂದ ನಡೆದುಕೊಂಡಿದೆ ಎಂದು ಆಕ್ಷೇಪ.
KSBC
KSBC
Published on

ಕರ್ನಾಟಕ ರಾಜ್ಯ ವಕೀಲರ ಪರಿಷತ್‌ (ಕೆಎಸ್‌ಬಿಸಿ) ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಕೆ ಬಿ ನಾಯ್ಕ್‌ ಅವರ ವಿರುದ್ದದ ದುರ್ನಡತೆಗೆ ಸಂಬಂಧಿತ ದೂರನ್ನು ಕೈಬಿಟ್ಟಿರುವುದರ ಕುರಿತಾದ ಪ್ರಮಾಣೀಕೃತ ಗೊತ್ತುವಳಿ ನೀಡುವಂತೆ ಕೋರಿರುವ ಅರ್ಜಿಗೆ ಸಂಬಂಧಿಸಿದಂತೆ ಕೆಎಸ್‌ಬಿಸಿಗೆ ಕರ್ನಾಟಕ ಹೈಕೋರ್ಟ್‌ ಈಚೆಗೆ ನೋಟಿಸ್‌ ಜಾರಿ ಮಾಡಿದೆ.

ಬೆಳಗಾವಿಯ ವಕೀಲ ಬಸವರಾಜ್‌ ಮುರಗೇಶ್‌ ಜರಳಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್‌ ಅವರ ನೇತೃತ್ವದ ಪೀಠವು ನಡೆಸಿದ್ದು, ಕೆಎಸ್‌ಬಿಸಿ ಪರ ವಕೀಲ ಜಿ ನಟರಾಜ್‌ ಅವರಿಗೆ ನೋಟಿಸ್‌ ಸ್ವೀಕರಿಸಲು ಕೋರಿದೆ. ಅಲ್ಲದೇ, ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಲಾಗಿದೆ ಎಂದು ಆಗಸ್ಟ್‌ 25ರ ಆದೇಶದಲ್ಲಿ ಉಲ್ಲೇಖಿಸಿದೆ.

ಹಿರಿಯ ವಕೀಲ ಕೆ ಬಿ ನಾಯ್ಕ್‌ ಅವರ ವಿರುದ್ಧದ ದೂರನ್ನು ಶಿಸ್ತುಪಾಲನಾ ಸಮಿತಿಗೆ ಪರಿಶೀಲಿಸಲು ಆದೇಶಿಸದೇ ಹಿಂದೆ ಸರಿಯುವ ಮೂಲಕ ಕೆಎಸ್‌ಬಿಸಿಯು ಸ್ವೇಚ್ಛೆಯಿಂದ ನಡೆದುಕೊಂಡಿದೆ. ವಕೀಲರ ಕಾಯಿದೆಯ ಅನ್ವಯ ಕಾನೂನು ವೃತ್ತಿಯ ಪ್ರಾಮಾಣಿಕತೆ ಮತ್ತು ಉದಾತ್ತತೆಯನ್ನು ಎತ್ತಿ ಹಿಡಿಯುವುದು ಕೆಎಸ್‌ಬಿಸಿ ಕರ್ತವ್ಯವಾಗಿದೆ. ಹಲವು ಕೋರಿಕೆ ಸಲ್ಲಿಸಿದರೂ ಕೆಎಸ್‌ಬಿಸಿಯು ಪ್ರಮಾಣೀಕೃತ ಪ್ರತಿಯನ್ನು ಅರ್ಜಿದಾರರಿಗೆ ನೀಡಿಲ್ಲ. ಇದು ಆಕ್ಷೇಪಾರ್ಹ ನಡೆಯಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಪ್ರಕರಣದ ಹಿನ್ನೆಲೆ: ಕೆಎಸ್‌ಬಿಸಿಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಕೆ ಬಿ ನಾಯ್ಕ್‌ ಅವರು ನಕಲಿ ಜಿಪಿಎ (ಜನರಲ್‌ ಪವರ್‌ ಆಫ್‌ ಅಟಾರ್ನಿ - ಸಾಮಾನ್ಯ ಮುಖ್ತ್ಯಾರನಾಮೆ) ಸೃಷ್ಟಿಸಿ ಬೆಳಗಾವಿಯ ಸವದತ್ತಿ ತಾಲ್ಲೂಕಿನ ಕಾಗದಾಳ್‌ ಗ್ರಾಮದ ಬಸವರೆಡ್ಡಿ ವೆಂಕರೆಡ್ಡಿ ಚುಳಕಿ ಅವರಿಗೆ ಸೇರಿದ ಜಮೀನಿನ ಕ್ರಯ ಮಾಡಿದ್ದಾರೆ. ಆ ಮೂಲಕ ವೃತ್ತಿ ದುರ್ನಡತೆ ತೋರಿದ್ದು, ಅವರ ವಿರುದ್ಧ ಸ್ವಯಂಪ್ರೇರಿತ ಕ್ರಮಕೈಗೊಳ್ಳಬೇಕು ಎಂದು ಕೋರಿ ಚುಳಕಿ ಅವರ ವಕೀಲರಾದ ಬಸವರಾಜ್‌ ಮುರಗೇಶ್‌ ಜರಳಿ ಅವರು ಕೆಎಸ್‌ಬಿಸಿಗೆ ದೂರು ನೀಡಿದ್ದರು.

ನಕಲಿ ಜಿಪಿಎ ಸೃಷ್ಟಿಸಿ, ಕ್ರಯ ಮಾಡಲಾಗಿದೆ ಎಂದು ಅಧೀನ ನ್ಯಾಯಾಲಯ ಹೇಳಿದ್ದರೂ ಕೆಎಸ್‌ಬಿಸಿ ಅಥವಾ ಭಾರತೀಯ ವಕೀಲರ ಪರಿಷತ್‌ (ಬಿಸಿಐ) ನಾಯ್ಕ್‌ ಅವರ ವಿರುದ್ಧ ಕ್ರಮಕೈಗೊಂಡಿಲ್ಲ ಎಂದು ದೂರಿನಲ್ಲಿ ವಿವರಿಸಲಾಗಿದೆ.

2006ರಲ್ಲಿ ಚುಳಕಿ ಮತ್ತು ಕುಟುಂಬ ಸದಸ್ಯರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿತ್ತು. ಇದನ್ನು ನಡೆಸಲು ಕೆ ಬಿ ನಾಯ್ಕ್‌ ಅವರಿಗೆ ಪ್ರಕರಣ ವಹಿಸಲಾಗಿತ್ತು. ಬೆಳಗಾವಿಯ ಫಾಸ್ಟ್‌ ಟ್ರ್ಯಾಕ್‌ ನ್ಯಾಯಾಲಯವು ತೀರ್ಪು ಪ್ರಕಟಿಸುವವರೆಗೂ ಆರೋಪಿಗಳು ಜೈಲಿನಲ್ಲಿದ್ದರು. ಬಂಧನ ಅವಧಿಯಲ್ಲಿ ವಕೀಲ ನಾಯ್ಕ್‌ ಅವರು ಜೈಲಿಗೆ ಭೇಟಿ ನೀಡಿ ಆರೋಪಿಗಳಿಂದ ಕೆಲವು ಪತ್ರಗಳಿಗೆ ಸಹಿ ಮಾಡಿಸಿಕೊಂಡಿದ್ದರು. ಇದಕ್ಕೆ ಸಂಬಂಧಿಸಿದಂತೆ 2008ರ ಮಾರ್ಚ್‌ 28ರಂದು ಸೆಷನ್ಸ್‌ ನ್ಯಾಯಾಲಯದ ತೀರ್ಪನ್ನು ಲಗತ್ತಿಸಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಜೈಲಿನಿಂದ ಬಿಡುಗಡೆಯಾಗಿ ಬಂದ ಬಳಿಕ ಬಸವರಡ್ಡಿ ಚುಳಕಿ ಅವರು ತಮ್ಮ ಜಮೀನಿಗೆ ಭೇಟಿ ನೀಡಿದ್ದು, ಅದನ್ನು ಮೂರನೇ ವ್ಯಕ್ತಿ ಉಳುಮೆ ಮಾಡುತ್ತಿದ್ದರು. ಈ ಸಂಬಂಧ ವಿಚಾರಿಸಲಾಗಿ ವಕೀಲ ಕೆ ಬಿ ನಾಯ್ಕ್‌ ಅವರು ಜನರಲ್‌ ಪವರ್‌ ಆಫ್‌ ಅಟಾರ್ನಿ ಪಡೆದುಕೊಂಡು, ಚುಳಕಿ ಅವರಿಗೆ ತಿಳಿಯದಂತೆ ಆಸ್ತಿಯನ್ನು ಮಾರಾಟ ಮಾಡಿದ್ದಾರೆ ಎಂಬ ವಿಚಾರ ತಿಳಿದಿತ್ತು. ಹೀಗಾಗಿ, ಕಾನೂನುಬಾಹಿರವಾಗಿ ಕ್ರಯ ಮಾಡಲಾಗಿರುವುದನ್ನು ವಜಾ ಮಾಡುವಂತೆ ಕೋರಿ ಚುಳಕಿ ಅವರು ಸವದತ್ತಿ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರ ಮುಂದೆ ದಾವೆ ಹೂಡಿದ್ದರು. ಇದನ್ನು ನ್ಯಾಯಾಲಯ ಎತ್ತಿ ಹಿಡಿದಿತ್ತು. ಈ ಆದೇಶವನ್ನು ಜಗದೀಶ್‌ ಕೃಷ್ಣಪ್ಪ ಹಣಸಿ ಅವರು ಮೇಲಿನ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು, ಸದರಿ ನ್ಯಾಯಾಲಯವು ಪ್ರಕರಣವನ್ನು ಮತ್ತೆ ಅಧೀನ ನ್ಯಾಯಾಲಯಕ್ಕೆ ನಿರ್ಧರಿಸಲು ವರ್ಗಾಯಿಸಿತ್ತು. ಇಲ್ಲಿ ಕೆ ಬಿ ನಾಯ್ಕ್‌ ಅವರನ್ನು ನಾಲ್ಕನೇ ಪ್ರತಿವಾದಿಯಾಗಿಸಿ, ಅವರು ಎಸಗಿದ್ದ ಕೃತ್ಯಗಳನ್ನು ಪೀಠದ ಗಮನಕ್ಕೆ ತರಲಾಗಿತ್ತು. ಇದನ್ನು ಪರಿಗಣಿಸಿದ್ದ ನ್ಯಾಯಾಲಯವು 2019ರ ಏಪ್ರಿಲ್‌ 26ರಂದು ಚುಳಕಿ ಅವರ ಪರವಾಗಿ ಆದೇಶ ಮಾಡಿತ್ತು ಎಂದು ದೂರಿನಲ್ಲಿ ವಿವರಿಸಲಾಗಿದೆ.

ಇದರಿಂದ ಕೆ ಬಿ ನಾಯ್ಕ್‌ ಅವರು ತಮ್ಮ ಕಕ್ಷಿದಾರರಿಗೆ (ಚುಳಕಿ) ವಂಚಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಇದು ವಕೀಲರ ಕಡೆಯಿಂದ ಸ್ಪಷ್ಟ ದುರ್ನಡತೆಯಾಗಿದೆ. ವಕೀಲ ನಾಯ್ಕ್‌ ಅವರು ದುಷ್ಕೃತ್ಯದಲ್ಲಿ ಭಾಗಿಯಾಗಿದ್ದರೂ ಪ್ರಭಾವಿಯಾಗಿರುವುದರಿಂದ ನಾಯ್ಕ್‌ ಅವರಿಗೆ ಹೆದರಿ ಅವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವ ಬದಲು ಅವರನ್ನೇ ಕೆಎಸ್‌ಬಿಸಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು 2021ರ ಸೆಪ್ಟೆಂಬರ್‌ 28ರಂದು ಕೆಎಸ್‌ಬಿಸಿಗೆ ಬರೆದಿರುವ ಪತ್ರದಲ್ಲಿ ಬಸವರಾಜ ಮುರಗೇಶ್‌ ಜರಳಿ ವಿವರಿಸಿದ್ದಾರೆ. ಈ ಕುರಿತು ಕ್ರಮವಾಗದಿದ್ದಾಗಿ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

Kannada Bar & Bench
kannada.barandbench.com