ಪರಿಶಿಷ್ಟ ಜಾತಿ, ಪಂಗಡ ಮೀಸಲಾತಿ ಹೆಚ್ಚಳ: ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ ಹೈಕೋರ್ಟ್‌

ಎಸ್‌ಸಿಗೆ ಶೇ.15 ರಿಂದ ಶೇ.17ಕ್ಕೆ & ಎಸ್‌ಟಿಗೆ ಶೇ. 3ರಿಂದ ಶೇ.7ಕ್ಕೆ ಮೀಸಲಾತಿ ಹೆಚ್ಚಳ ಮಾಡಲಾಗಿದೆ. ಒಬಿಸಿಗೆ ಈಗಾಗಲೇ ಶೇ. 32ರಷ್ಟು ಮೀಸಲಾತಿ ಇದೆ. ಸರ್ಕಾರದ ಹೊಸ ನಿರ್ಧಾರದಿಂದ ಶೇ. 50ರಷ್ಟು ಮಿತಿ ಮೀರಿದಂತಾಗಿದೆ ಎಂಬುದು ಆಕ್ಷೇಪ.
High Court of Karnataka
High Court of Karnataka
Published on

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಶಿಕ್ಷಣ ಮತ್ತು ನೇಮಕಾತಿಗಳಲ್ಲಿ ಮೀಸಲಾತಿ) ಕಾಯಿದೆ 2023ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌ ಗುರುವಾರ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದ್ದು, ಆಕ್ಷೇಪಣೆ ಸಲ್ಲಿಸಲು ಆದೇಶಿಸಿದೆ.

ಬೆಂಗಳೂರಿನಲ್ಲಿ ಕಾನೂನು ಪದವಿ ಅಧ್ಯಯನ ಮಾಡುತ್ತಿರುವ ಕಲಬುರ್ಗಿ ಮೂಲದ ಮಹೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರು, ಮೀಸಲಾತಿ ಹೆಚ್ಚಳ ಮಾಡಿರುವ ಕ್ರಮ ಸಂವಿಧಾನದ 14, 15 ಮತ್ತು 16ರ ವಿಧಿ ಉಲ್ಲಂಘಿಸಿದಂತಾಗಿದೆ. ಅಲ್ಲದೇ, ಇಂದಿರಾ ಸಾಹ್ನಿ ಪ್ರಕರಣದಲ್ಲಿ ಶೇ. 50ರಷ್ಟು ಮೀಸಲಾತಿ ಮೀರಬಾರದು ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೆ ವಿರುದ್ಧವಾಗಿದೆ. ಆದರೂ ನಿಯಮಬಾಹಿರವಾಗಿ ಪರಿಶಿಷ್ಟ ಜಾತಿಯವರಿಗೆ ಶೇ. 15 ರಿಂದ ಶೇ. 17ಕ್ಕೆ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ. 3ರಿಂದ ಶೇ. 7ಕ್ಕೆ ಮೀಸಲಾತಿ ಹೆಚ್ಚಳ ಮಾಡಲಾಗಿದೆ. ಈಗಾಗಲೇ ಹಿಂದುಳಿದ ವರ್ಗಗಳಿಗೆ ಶೇ. 32ರಷ್ಟು ಮೀಸಲಾತಿ ಇದೆ. ಸರ್ಕಾರದ ಹೊಸ ನಿರ್ಧಾರದಿಂದ ಶೇ. 50ರಷ್ಟು ಮಿತಿ ಮೀರಿದಂತಾಗಿದೆ. ಇದರಿಂದ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲಂಘಿಸಿದಂತಾಗಿದೆ. ಹೀಗಾಗಿ, ಮೀಸಲಾತಿ ಹೆಚ್ಚಳ ಕ್ರಮವು ಸಂವಿಧಾನ ಬಾಹಿರ ಎಂದು ಘೋಷಿಸಬೇಕು ಎಂದು ಕೋರಿದರು.

ಮುಂದುವರಿದು, ಕೇಂದ್ರ ಸರ್ಕಾರದ ಸಾರ್ವಜನಿಕ ಉದ್ದಿಮೆಗಳು ಸೇರಿದಂತೆ ದೇಶದ ಎಲ್ಲಾ ರಾಜ್ಯಗಳಲ್ಲಿ ಸುಮಾರು 60 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿ ಇವೆ.  ಕೇಂದ್ರ ಸರ್ಕಾರ ಒಂದರಲ್ಲಿ 30.7 ಲಕ್ಷ, ಕರ್ನಾಟಕದಲ್ಲಿ 2.3 ಲಕ್ಷ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಮೀಸಲಿಡಲಾಗಿದೆ ಅಂತಹ ಹುದ್ದೆಗಳನ್ನು ಏಕೆ ಭರ್ತಿ ಮಾಡಲಾಗಿಲ್ಲ ಎಂಬುದಕ್ಕೆ ಸರ್ಕಾರಗಳಿಂದ ಯಾವುದೇ ಸ್ಪಷ್ಟನೆ ಇಲ್ಲ. ಮೀಸಲು ಹೆಚ್ಚಿಸಿರುವುದಕ್ಕೆ ತರ್ಕ ಬದ್ಧ ವಿವರಣೆ ನೀಡಲಾಗಿಲ್ಲ ಎಂದು ಆಕ್ಷೇಪಿಸಿದ್ದಾರೆ.

Kannada Bar & Bench
kannada.barandbench.com