ಸಿಸಿಐ ಆದೇಶ ಪ್ರಶ್ನಿಸಿ ಸ್ವಿಗ್ಗಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸುವ ಸಾಧ್ಯತೆ ಖಚಿತವಿಲ್ಲ ಎಂದ ಹೈಕೋರ್ಟ್‌

ಸಿಸಿಐನ ಮಹಾನಿರ್ದೇಶಕರಿಗೆ ನೀಡಿದ್ದ ಗೌಪ್ಯ ಮಾಹಿತಿಯನ್ನು ಸರ್ಕಾರದ ಸಂಸ್ಥೆಯು ರೆಸ್ಟರಂಟ್‌ ಒಕ್ಕೂಟಕ್ಕೆ ನೀಡುವ ನಿರ್ಧಾರ ಪ್ರಶ್ನಿಸಿ ಸ್ವಿಗ್ಗಿಯು ಹೈಕೋರ್ಟ್‌ನಲ್ಲಿ ದಾವೆ ಹೂಡಿದೆ.
Swiggy, Competition Commission of India and Karnataka HC
Swiggy, Competition Commission of India and Karnataka HC

ರೆಸ್ಟರಂಟ್‌ ಒಕ್ಕೂಟಕ್ಕೆ ಗೌಪ್ಯ ಮಾಹಿತಿ ಹಂಚುವ ಸಂಬಂಧ ಆಹಾರ ಪೂರೈಕೆ ಅಪ್ಲಿಕೇಶನ್‌ ಸ್ವಿಗ್ಗಿಗೆ ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ನಿರ್ದೇಶಿಸಿರುವುದನ್ನು ಪ್ರಶ್ನಿಸಿ ಸ್ವಿಗ್ಗಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸುವ ವ್ಯಾಪ್ತಿ ತನಗಿದೆಯೇ ಎಂಬ ಅನುಮಾನ ಈಗಲೂ ಇದೆ ಎಂದು ಕರ್ನಾಟಕ ಹೈಕೋರ್ಟ್‌ ಗುರುವಾರ ಹೇಳಿದೆ.

ಸ್ವಿಗ್ಗಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ಜಿ ಎಸ್‌ ಕಮಲ್‌ ನೇತೃತ್ವದ ರಜಾಕಾಲೀನ ಏಕಸದಸ್ಯ ಪೀಠ ಇಂದು ನಡೆಸಿತು. ವಿಚಾರಣೆಯ ವೇಳೆ ಪೀಠವು ಮೇ 21ರಂದು ವ್ಯಾಪ್ತಿ ವಿಚಾರದ ಕುರಿತು ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನು ಇಂದೂ ವ್ಯಕ್ತಪಡಿಸಿತು.

ಸಿಸಿಐ ಪ್ರಕ್ರಿಯೆ ದೆಹಲಿಯಲ್ಲಿ ನಡೆಯುತ್ತಿರುವುದರಿಂದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್‌ ವಿಚಾರಣೆ ನಡೆಸಬಹುದೇ ಎಂಬ ಸಂಶಯವನ್ನು ಹಿಂದಿನ ವಿಚಾರಣೆ ವೇಳೆ ವ್ಯಕ್ತಪಡಿಸಿತ್ತು.

ಸ್ವಿಗ್ಗಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಜನ್‌ ಪೂವಯ್ಯ ಅವರು ಗೂಗಲ್‌ ವರ್ಸಸ್‌ ಸಿಸಿಐ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳನ್ನು ಉಲ್ಲೇಖಿಸಿ ದೇಶಾದ್ಯಂತ ಪರಿಣಾಮ ಉಂಟು ಮಾಡಬಹುದಾದ ಪ್ರಕರಣಗಳನ್ನು ಹೈಕೋರ್ಟ್‌ ನಡೆಸಬಹುದು. ಇದರಲ್ಲಿ ಭಾಗಶಃ ವ್ಯಾಜ್ಯ ಕಾರಣವಿದ್ದರೂ ಅದನ್ನು ಈ ನ್ಯಾಯಾಲಯ ಆಲಿಸಬಹುದು ಎಂದರು.

ಇದಕ್ಕೆ ನ್ಯಾ. ಕಮಲ್‌ ಅವರು ಸ್ವಿಗ್ಗಿಯ ಕೋರಿಕೆಯಲ್ಲಿ ವ್ಯಾಜ್ಯ ಕಾರಣದ ಒಂದು ಭಾಗವು ಕರ್ನಾಟಕದಲ್ಲಿಯೇ ಉದ್ಭವಿಸಿದೆಯೇ ಎಂಬ ಈ ನಿರ್ಣಾಯಕ ಅಂಶವು ಸ್ಪಷ್ಟವಾಗಿಲ್ಲ ಎಂದರು.

“ಸಿಸಿಐ ಆದೇಶವನ್ನು ಕರ್ನಾಟಕದಲ್ಲಿ ಪಡೆದಿರುವುದನ್ನು ಹೊರತುಪಡಿಸಿ ಯಾವ ವ್ಯಾಜ್ಯ ಕಾರಣವು ಕರ್ನಾಟಕದಲ್ಲಿ ಸೃಷ್ಟಿಯಾಗಿದೆ ಎಂಬ ವಿಚಾರ ತಿಳಿಸಿ” ಎಂದು ಪ್ರಶ್ನಿಸಿದರು.

ಇದಕ್ಕೆ ಪೂವಯ್ಯ ಅವರು “ಕೋರಿಕೆಯ ಇನ್ನಷ್ಟು ಸ್ಪಷ್ಟವಾಗಿ ರೂಪಿಸಬಹುದಿತ್ತು. ಈ ಹಿನ್ನೆಲೆಯಲ್ಲಿ ವ್ಯಾಪ್ತಿಯ ವಿಚಾರವನ್ನು ಸ್ಪಷ್ಟಪಡಿಸಿ ಹೆಚ್ಚುವರಿ ಅಫಿಡವಿಟ್‌ ಸಲ್ಲಿಸಲು ಕಾಲಾವಕಾಶ ನೀಡಬೇಕು” ಎಂದು ಮನವಿ ಮಾಡಿದರು.

“ನಮಗೆ ದೇಶಾದ್ಯಂತ ಗುತ್ತಿಗೆಗಳು ಇವೆ… ಸ್ವಿಗ್ಗಿ ಮತ್ತು ಜೊಮ್ಯಾಟೊ ವಿರುದ್ಧ ಸಿಸಿಐ ತನಿಖೆ ನಡೆಸುತ್ತಿದೆ. ದಕ್ಷಿಣ ಭಾರತದಲ್ಲಿ ಸ್ವಿಗ್ಗಿ ಪ್ರಮುಖವಾಗಿದ್ದು, ಜೊಮ್ಯಾಟೊ ಉತ್ತರ ಭಾರತದಲ್ಲಿ ಪ್ರಭಾವಿಯಾಗಿದೆ. ಅರ್ಜಿಯಲ್ಲಿ 81ನೇ ಪ್ಯಾರಾವನ್ನು ಮತ್ತಷ್ಟು ಸ್ಫುಟವಾಗಿ ರೂಪಿಸಬಹುದಿತ್ತು” ಎಂದರು.

ಆಗ ಪೀಠವು “ತೀರ್ಪುಗಳನ್ನು ನೋಡಿದರೆ ಅವುಗಳಲ್ಲಿ ವ್ಯಾಜ್ಯ ಕಾರಣದ ವಿಚಾರ ಪ್ರಧಾನವಾಗಿದೆ. ಇದನ್ನು ಅರ್ಜಿಯಲ್ಲಿ ಮುಖ್ಯವಾಗಿ ಹೆಕ್ಕಬೇಕು. ನೀವು ಅಫಿಡವಿಟ್‌ ಸಲ್ಲಿಸುತ್ತೇನೆ ಎಂಬ ವಿಚಾರಕ್ಕೆ ಒಳಪಟ್ಟು, ನ್ಯಾಯಾಲಯವು ಸಂತುಷ್ಟವಾಗಿಲ್ಲ” ಎಂದರು.

ಇದಕ್ಕೆ ಪೂವಯ್ಯ ಅವರು ಪ್ರಕರಣವು ದೂರಗಾಮಿ ಪರಿಣಾಮ ಹೊಂದಿದ್ದು ಅಫಿಡವಿಟ್‌ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಸಿಸಿಐ ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎನ್‌ ವೆಂಕಟರಾಮನ್‌ ಅವರು “ಯಾವುದೇ ಅಫಿಡವಿಟ್‌ ಪ್ರಕರಣವನ್ನು ಸುಧಾರಿಸುವುದಿಲ್ಲ. ಇದನ್ನು ಕರ್ನಾಟಕದಲ್ಲಿ ಏಕೆ ನಡೆಸಬೇಕು? ಇದು ಇಡೀ ದೇಶಕ್ಕೆ ಅನ್ವಯಿಸುವುದರಿಂದ ಚೆನ್ನೈ, ತೆಲಂಗಾಣ ಅಥವಾ ಪಶ್ಚಿಮ ಬಂಗಾಳದಲ್ಲಿ ಏಕೆ ನಡೆ

ಸಬಾರದು? ನಮ್ಮ ಇಚ್ಛೆ ಬಂದಂತೆ ಆಯ್ಕೆ ಮಾಡಿಕೊಳ್ಳಲಾಗದು” ಎಂದು ಕರ್ನಾಟಕದಲ್ಲಿ ಪ್ರಕರಣ ವಿಚಾರಣೆ ನಡೆಸಲಾಗದು ಎಂದರು.

ಅಂತಿಮವಾಗಿ ಪೀಠವು ಮೇ 28ರಂದು ವಿಚಾರಣೆ ನಡೆಸುವುದಾಗಿ ತಿಳಿಸಿದ್ದು, ಹೆಚ್ಚುವರಿ ಅಫಿಡವಿಟ್‌ ಸಲ್ಲಿಸಲು ಸ್ವಿಗ್ಗಿಗೆ ಅನುಮತಿಸಿತು.

Kannada Bar & Bench
kannada.barandbench.com