ಗುಜರಾತ್ ಹೈಕೋರ್ಟ್ ಬಳಿಕ ವಿಚಾರಣೆಯನ್ನು ಪ್ರಾಯೋಗಿಕವಾಗಿ ನೇರ ಪ್ರಸಾರ ಮಾಡಿದ ದೇಶದ ಎರಡನೇ ಉಚ್ಚ ನ್ಯಾಯಾಲಯವಾಗಿ ಕರ್ನಾಟಕ ಹೈಕೋರ್ಟ್ ಸೋಮವಾರ ಗುರುತಿಸಿಕೊಂಡಿತು.
ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯ ಪೀಠ ನಡೆಸಿದ ವಿಚಾರಣೆಯೊಂದನ್ನು ಹೈಕೋರ್ಟ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಾಯೋಗಿಕ ಆಧಾರದ ಮೇಲೆ ನೇರ ಪ್ರಸಾರ ಮಾಡಲಾಯಿತು.
ಸೋಮವಾರದ ನೇರ ಪ್ರಸಾರ ಯಶಸ್ವಿಯಾದರೆ ಶೀಘ್ರವೇ ಹೈಕೋರ್ಟ್ ಇತರ ವಿಚಾರಣೆಗಳ ನೇರ ಪ್ರಸಾರ ಕುರಿತು ನಿರ್ಧಾರ ಕೈಗೊಳ್ಳಲಿದೆ ಎಂದು ಮೂಲಗಳು ʼಬಾರ್ ಮತ್ತು ಬೆಂಚ್ʼಗೆ ತಿಳಿಸಿವೆ.
ಬೈತಕೊಲ್ ಬಂದರು ನಿರಾಶ್ರಿತರ ಯಾಂತ್ರೀಕೃತ ದೋಣಿ ಮೀನುಗಾರರ ಸಹಕಾರ ಸಂಘ ನಿಯಮಿತ ಮತ್ತು ಉತ್ತರ ಕನ್ನಡ ಜಿಲ್ಲಾ ಮೀನುಗಾರರ ಸಂಘ ಸಲ್ಲಿಸಿದ್ದ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ನೇರ ಪ್ರಸಾರ ಮಾಡಲಾಯಿತು.
ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲ್ಲೂಕಿನ ಬೈತಕೊಲ್ ಗ್ರಾಮದಲ್ಲಿ ವಾಣಿಜ್ಯ ಕಾರವಾರ ಬಂದರಿನ ಪ್ರಸ್ತಾವಿತ ಎರಡನೇ ಹಂತದ ಅಭಿವೃದ್ಧಿಗೆ ಅನುಮೋದನೆ ನೀಡುವಲ್ಲಿ ಪರಿಸರ ಪರಿಣಾಮ ಮತ್ತು ಪರಿಸರ ಕಾನೂನುಗಳ ಉಲ್ಲಂಘನೆಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳು ಇವೆ ಎಂದು ಅಹವಾಲು ಸಲ್ಲಿಸಲಾಗಿತ್ತು.
ಮಧ್ಯಾಹ್ನ ಪ್ರಕರಣಗಳ ವಿಚಾರಣೆಯನ್ನು ಕೈಗೆತ್ತಿಕೊಂಡ ಪೀಠ ಮೌಖಿಕವಾಗಿ ಹೀಗೆ ಹೇಳಿತು: "ಇಂದು, ನಾವು ಎರಡು ಅರ್ಜಿಗಳ ನೇರ ವಿಚಾರಣೆ ನಡೆಸುತ್ತಿದ್ದೇವೆ… ಪ್ರಾಯೋಗಿಕವಾಗಿ ಇದನ್ನು ಕೈಗೆತ್ತಿಕೊಂಡಿದ್ದೇವೆ. ಇದನ್ನು ವಕೀಲ ಸಮುದಾಯದ ಗಮನಕ್ಕೆ ತರುವುದು ನಮ್ಮ ಕರ್ತವ್ಯ."
ವಿಚಾರಣೆಯನ್ನು ಇಲ್ಲಿ ವೀಕ್ಷಿಸಬಹುದು.