'ಬಸವ ಮಂಟಪ' ಪುಸ್ತಕದಲ್ಲಿ ಬಸವಣ್ಣಗೆ ಅವಹೇಳನ: ಎಫ್‌ಐಆರ್ ರದ್ದಿಗೆ ಹೈಕೋರ್ಟ್‌ ಮೆಟ್ಟಿಲೇರಿದ ಲೇಖಕ ರವಿ ಹಂಜಿಗಿಮಠ

ಪುಸ್ತಕವು ಈ ಹಿಂದೆ ಪ್ರಕಟವಾಗಿದ್ದ ಲೇಖನಗಳ ಸಂಕಲನವಾಗಿದ್ದು, ಐತಿಹಾಸಿಕ & ಸಾಹಿತ್ಯಿಕ ಚರ್ಚೆಯ ಭಾಗವಾಗಿ ಮಾಡಿರುವ ವಿಶ್ಲೇಷಣೆ ಅಪರಾಧ ಎಂದು ಪರಿಗಣಿಸಲಾಗದು. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ನೇರ ದಾಳಿ ಎಂದು ರವಿ ವಾದಿಸಿದ್ದಾರೆ.
High Court of Karnataka
High Court of Karnataka
Published on: 

'ಬಸವ ಮಂಟಪ' ಕನ್ನಡ ಪುಸ್ತಕದಲ್ಲಿ 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಆರೋಪದಡಿ ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಲೇಖಕ ಹಾಗೂ ಪತ್ರಕರ್ತ ರವಿ ಹಂಜಿಗಿಮಠ ಅವರು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಹೈಕೋರ್ಟ್ ವಕೀಲೆ ದೀಪಾ ವಿ ಅವರ ಮೂಲಕ ಅರ್ಜಿ ಸಲ್ಲಿಸಿರುವ ಹಂಜಿಗಿಮಠ ಅವರು, ತಮ್ಮ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಮತ್ತು ಅದರ ಮುಂದಿನ ತನಿಖೆಯನ್ನು ರದ್ದುಗೊಳಿಸುವಂತೆ ಕೋರಿದ್ದಾರೆ.

ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅವರು ನೀಡಿದ ದೂರಿನ ಆಧಾರದ ಮೇಲೆ ನವೆಂಬರ್ 19ರಂದು ಹೈಗ್ರೌಂಡ್ಸ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಬಸವಣ್ಣನವರನ್ನು ಕಳ್ಳ ಮತ್ತು ಕೊಲೆಗಾರ ಎಂಬಂತೆ ಚಿತ್ರಿಸುವುದರ ಜತೆಗೆ ಲಿಂಗಾಯತ ಸಮುದಾಯ ಹಾಗೂ ಅದರ ಧಾರ್ಮಿಕ ನಾಯಕರ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಎಂಬುದು ದೂರುದಾರರ ಆರೋಪವಾಗಿದೆ.

ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 192 (ಗಲಭೆ ಉಂಟುಮಾಡುವ ಉದ್ದೇಶದಿಂದ ಪ್ರಚೋದನೆ ನೀಡುವುದು), 196(1) (ವಿವಿಧ ಗುಂಪುಗಳ ನಡುವೆ ದ್ವೇಷ ಅಥವಾ ವೈಷಮ್ಯ ಉತ್ತೇಜಿಸುವುದು), 353(2) (ಸಮುದಾಯಗಳ ನಡುವೆ ದ್ವೇಷ ಅಥವಾ ದ್ವೇಷಭಾವನೆ ಮೂಡಿಸುವ ಉದ್ದೇಶದ ಹೇಳಿಕೆ, ವದಂತಿ ಅಥವಾ ವರದಿ ಪ್ರಕಟಿಸುವುದು) ಹಾಗೂ 299 (ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ದುರುದ್ದೇಶಪೂರಿತ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ನವೆಂಬರ್ 15ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗಿರುವ 'ಬಸವ ಮಂಟಪ' ಪುಸ್ತಕವು ಕನ್ನಡದ ದಿನಪತ್ರಿಕೆ 'ವಿಶ್ವವಾಣಿ'ಯಲ್ಲಿ ಈ ಹಿಂದೆ ಪ್ರಕಟವಾಗಿದ್ದ ಲೇಖನಗಳ ಸಂಕಲನವಾಗಿದೆ. ವೀರಶೈವ ಲಿಂಗಾಯತ ಧರ್ಮದ ಉಗಮ, ಬೆಳವಣಿಗೆ ಮತ್ತು ವಿಕಾಸದ ಕುರಿತು ಪುಸ್ತಕದಲ್ಲಿ ಚರ್ಚಿಸಲಾಗಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.

ಪುಸ್ತಕ ಸಿದ್ಧಪಡಿಸುವಾಗ ಮೈಸೂರು ಗೆಜೆಟಿಯರ್, ಬಸವ ಪುರಾಣ ಸೇರಿದಂತೆ ವಿವಿಧ ಐತಿಹಾಸಿಕ ದಾಖಲೆಗಳು ಹಾಗೂ ಸಂಶೋಧನಾ ಕೃತಿಗಳನ್ನು ಆಧರಿಸಲಾಗಿದೆ. ಪಾಲ್ಕುರಿಕೆ ಸೋಮನಾಥ, ಭೀಮಕವಿ ಮತ್ತು ಡಾ. ಎಂ ಎಂ  ಕಲಬುರ್ಗಿ ಅವರ ಕೃತಿಗಳನ್ನೂ ಉಲ್ಲೇಖಿಸಲಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ನವೆಂಬರ್ 13ರಂದು ವಿಶ್ವವಾಣಿ ಟಿವಿಗೆ ನೀಡಿದ್ದ ಸಂದರ್ಶನದಲ್ಲಿ ಪುಸ್ತಕ ಬರೆಯಲು ಕಾರಣ, ಅದರಲ್ಲಿ ಬಳಸಿರುವ ಆಕರಗಳು ಮತ್ತು ಬಸವಣ್ಣನವರ ವಚನಗಳಲ್ಲಿನ ನೈತಿಕ ಬೋಧನೆಗಳ ಕುರಿತು ಚರ್ಚಿಸಿದ್ದಾಗಿ ಅರ್ಜಿದಾರರು ವಾದಿಸಿದ್ದಾರೆ.

ವಿಶೇಷವಾಗಿ 'ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ' ಎಂಬ ವಚನದ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಐತಿಹಾಸಿಕ ನಿರೂಪಣೆಗಳಲ್ಲಿನ ಕೆಲವು ಅಂಶಗಳನ್ನು ವಿಶ್ಲೇಷಿಸಿದ್ದಾಗಿ ತಿಳಿಸಿದ್ದಾರೆ.

ಆದರೆ, ಬಸವಣ್ಣನವರನ್ನು ಕಳ್ಳ ಅಥವಾ ಕೊಲೆಗಾರ ಎಂದು ಬಿಂಬಿಸುವ ಉದ್ದೇಶ ತಮಗಿರಲಿಲ್ಲ. ವಚನಗಳ ಐತಿಹಾಸಿಕ ಹಿನ್ನೆಲೆ ಮತ್ತು ಅವುಗಳ ಅರ್ಥವಿವರಣೆಗೆ ಸಂಬಂಧಿಸಿದ ಶೈಕ್ಷಣಿಕ ಚರ್ಚೆಯ ಭಾಗವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾಗಿ ಅರ್ಜಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ತಮ್ಮ ವಿರುದ್ಧದ ಎಫ್‌ಐಆರ್ ಕಾನೂನು ಪ್ರಕ್ರಿಯೆಯ ದುರುಪಯೋಗವಾಗಿದ್ದು, ಸಂವಿಧಾನದ 19(1)(ಎ) ವಿಧಿಯಡಿ ಖಾತರಿಪಡಿಸಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಎಂದು ಅವರು ವಾದಿಸಿದ್ದಾರೆ.

ಅಲ್ಲದೆ, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 299ರಡಿ ಅಪರಾಧವಾಗಬೇಕಾದರೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಸ್ಪಷ್ಟ ದುರುದ್ದೇಶ ಇರಬೇಕು. ಕೇವಲ ಐತಿಹಾಸಿಕ ಅಥವಾ ಸಾಹಿತ್ಯಿಕ ವಿಮರ್ಶೆಯನ್ನು ಈ ಅಪರಾಧದ ವ್ಯಾಪ್ತಿಗೆ ತರಲಾಗದು ಎಂದು ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ.

ಅದೇ ರೀತಿ, ವಿವಿಧ ಸಮುದಾಯಗಳ ನಡುವೆ ದ್ವೇಷ ಅಥವಾ ವೈಷಮ್ಯ ಉತ್ತೇಜಿಸುವ ಉದ್ದೇಶವಿಲ್ಲದಿರುವುದರಿಂದ ಸೆಕ್ಷನ್ 196(1)ರ ಅಂಶಗಳು ಅನ್ವಯಿಸುವುದಿಲ್ಲ. ಗಲಭೆಗೆ ಪ್ರಚೋದನೆ ನೀಡುವ ಅಥವಾ ಹಿಂಸಾಚಾರಕ್ಕೆ ಪ್ರೇರೇಪಿಸುವ ಉದ್ದೇಶವೂ ಇರಲಿಲ್ಲ ಎಂದು ವಾದಿಸಿದ್ದಾರೆ.

ಪುಸ್ತಕದ ಸಂಪೂರ್ಣ ವಿಷಯ ಅಥವಾ ಸಂದರ್ಶನವನ್ನು ಪರಿಶೀಲಿಸದೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಅಲ್ಲದೆ, ಪುಸ್ತಕದ ಪ್ರಕಟಣೆ ಮತ್ತು ಪ್ರಸಾರವನ್ನು ತಡೆಯುವ ಉದ್ದೇಶದಿಂದ ದೂರು ನೀಡಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಇದಲ್ಲದೆ, ನವೆಂಬರ್ 21ರಂದು ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲುಕ್‌ಔಟ್ ಸುತ್ತೋಲೆಯ ಆಧಾರದ ಮೇಲೆ ವಲಸೆ ಅಧಿಕಾರಿಗಳು ತಮ್ಮನ್ನು ತಡೆದು, ಬಳಿಕ ಪೊಲೀಸರು ವಶಕ್ಕೆ ಪಡೆದಿದ್ದರು. ನಂತರ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 35(3)ರ ಅಡಿಯಲ್ಲಿ ನೋಟಿಸ್ ನೀಡಲಾಗಿತ್ತು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಬಸವ ಸಮಿತಿಗೆ ಮಂಜೂರಾಗಿದ್ದ ಸರ್ಕಾರಿ ಆಸ್ತಿಯ ದುರುಪಯೋಗದ ಕುರಿತು ಈ ಹಿಂದೆ ತಾವು ಲೇಖನ ಬರೆದಿದ್ದರಿಂದ ದೂರುದಾರರು ವೈಯಕ್ತಿಕ ದ್ವೇಷದಿಂದ ದೂರು ನೀಡಿದ್ದಾರೆ ಎಂದೂ ಹಂಜಿಗಿಮಠ ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಎಫ್‌ಐಆರ್, ದೂರು ಹಾಗೂ ಅದರ ಆಧಾರದ ಮೇಲೆ ನಡೆಯುತ್ತಿರುವ ಮುಂದಿನ ಕ್ರಿಮಿನಲ್ ಪ್ರಕ್ರಿಯೆಗಳನ್ನು ರದ್ದುಗೊಳಿಸುವಂತೆ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.