ಪರೀಕ್ಷೆ ಬರೆಯಲು ವಿದ್ಯಾರ್ಥಿಗೆ ಅನುಮತಿ: ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿದ್ದ ಮೇಲ್ಮನವಿ ಹಿಂಪಡೆದ ಎನ್‌ಎಲ್‌ಎಸ್‌ಐಯು

ಮೂರು ವಿಷಯಗಳ ಕುರಿತಂತೆ ವಿದ್ಯಾರ್ಥಿಯು ಕೃತಿಚೌರ್ಯ ಮಾಡಿದ ಪ್ರಾಜೆಕ್ಟ್‌ ಕೆಲಸದ ಹಿನ್ನೆಲೆಯಲ್ಲಿ ಅವರಿಗೆ ಕಡಿಮೆ ಅಂಕಗಳನ್ನು ನೀಡಿ ಮೂರನೇ ವರ್ಷದ ಅದೇ ಕೋರ್ಸ್‌ನಲ್ಲಿ ಅವರನ್ನು ಉಳಿಸಲಾಗಿತ್ತು.
ಪರೀಕ್ಷೆ ಬರೆಯಲು ವಿದ್ಯಾರ್ಥಿಗೆ ಅನುಮತಿ: ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿದ್ದ ಮೇಲ್ಮನವಿ ಹಿಂಪಡೆದ ಎನ್‌ಎಲ್‌ಎಸ್‌ಐಯು
NLSIU

ಶೈಕ್ಷಣಿಕ ವರ್ಷದ ಅಂತಿಮ ಪರೀಕ್ಷೆಗಳನ್ನು ಬರೆಯಲು ವಿದ್ಯಾರ್ಥಿಗೆ ಅನುಮತಿಸಿ ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠ ಹೊರಡಿಸಿದ್ದ ಎರಡು ಆದೇಶಗಳನ್ನು ವಿಭಾಗೀಯ ಪೀಠದ ಮುಂದೆ ಪ್ರಶ್ನಿಸಿದ್ದ ಮೇಲ್ಮನವಿಯನ್ನು ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯು (ಎನ್‌ಎಲ್‌ಎಸ್‌ಐಯು) ಮಂಗಳವಾರ ಹಿಂಪಡೆದಿದೆ.

ಸಂಧಾನದ ಮೂಲಕ ಪ್ರತಿವಾದಿ ವಿದ್ಯಾರ್ಥಿ ಮತ್ತು ಮೇಲ್ಮನವಿದಾರ ವಿಶ್ವವಿದ್ಯಾಲಯದ ನಡುವೆ ಸಮಸ್ಯೆಯನ್ನು ಆಂತರಿಕವಾಗಿ ಬಗೆಹರಿಸಿಕೊಳ್ಳಲಾಗಿದೆ ಎಂದು ಎನ್‌ಎಲ್‌ಎಸ್‌ಐಯು ಪರ ವಕೀಲ ಆದಿತ್ಯ ನಾರಾಯಣನ್‌ ಅವರು ನ್ಯಾಯಮೂರ್ತಿಗಳಾದ ಸತೀಶ್‌ ಚಂದ್ರ ಶರ್ಮಾ ಮತ್ತು ಸಚಿನ್‌ ಶಂಕರ್‌ ಮಗದುಮ್‌ ಅವರಿದ್ದ ವಿಭಾಗೀಯ ಪೀಠಕ್ಕೆ ವಿವರಿಸಿದರು. ಹೀಗಾಗಿ, ಮನವಿ ಹಿಂಪಡೆಯಲು ಎನ್‌ಎಲ್‌ಎಸ್‌ಐಯುಗೆ ನ್ಯಾಯಾಲಯ ಅನುಮತಿಸಿತು.

2017- 18ರಲ್ಲಿ ಪ್ರತಿವಾದಿ ವಿದ್ಯಾರ್ಥಿಯು ಐದು ವರ್ಷಗಳ ಬಿಎ ಎಲ್‌ಎಲ್‌ಬಿಗೆ (ಆನರ್ಸ್‌) ಪ್ರವೇಶ ಪಡೆದಿದ್ದು, 2019-20ರಲ್ಲಿ ವಿದ್ಯಾರ್ಥಿಗೆ ಅರ್ಥಶಾಸ್ತ್ರ- IIನಲ್ಲಿ ಎಫ್‌ ಗ್ರೇಡ್‌ ನೀಡಿ ಮೂರನೇ ವರ್ಷಕ್ಕೆ ಪಾಸು ಮಾಡಲಾಗಿತ್ತು. 2019-20ನೇ ಶೈಕ್ಷಣಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ನಾಗರಿಕ ಪ್ರಕ್ರಿಯಾ ಸಂಹಿತೆ, ಕ್ರಿಮಿನಲ್‌ ಕಾನೂನು, ವಾಣಿಜ್ಯ ಒಪ್ಪಂದ ವಿಷಯಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿ ಸಲ್ಲಿಸಿದ್ದ ಪ್ರಾಜೆಕ್ಟ್‌ನಲ್ಲಿ ವ್ಯಾಪಕವಾಗಿ ಕೃತಿಚೌರ್ಯ ನಡೆಸಿರುವುದು ಪತ್ತೆಯಾಗಿತ್ತು. ಹೀಗಾಗಿ, ಆತನಿಗೆ ಪ್ರಾಜೆಕ್ಟ್‌ ಮತ್ತು ವೈವಾದಲ್ಲಿ ನಿರ್ದಿಷ್ಟ ವಿಷಯಗಳಿಗೆ ಸಂಬಂಧಿಸಿದಂತೆ ಶೂನ್ಯ ಅಂಕ ನೀಡಲಾಗಿತ್ತು ಎಂದು ಎನ್‌ಎಲ್‌ಎಸ್‌ಐಯು ಮನವಿಯಲ್ಲಿ ಹೇಳಿತ್ತು.

ಈ ಮಧ್ಯೆ, ವಿದ್ಯಾರ್ಥಿಯು ಅಂತಿಮ ಮತ್ತು ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣವಾಗಲು ಅಗತ್ಯವಾದ ಅಂಕಗಳನ್ನು ಪಡೆದಿರಲಿಲ್ಲ. ಹೀಗಾಗಿ, ಅವರಿಗೆ ಮೇಲೆ ಹೇಳಲಾದ ಕೋರ್ಸ್‌ನಲ್ಲಿ ಎಫ್‌ ಗ್ರೇಡ್‌ ನೀಡಲಾಗಿತ್ತು.

ಈ ಮಧ್ಯೆ, ಎನ್‌ಎಲ್‌ಎಸ್‌ಐಯು ಶೈಕ್ಷಣಿಕ ಮತ್ತು ಶಿಕ್ಷಣ ನಿಯಮ (ಎಇಆರ್‌) 2020 ಅನ್ನು ಜಾರಿಗೊಳಿಸಿತ್ತು. ಎಇಆರ್‌ 2020ರ ಅನ್ವಯದಿಂದ ವಿದ್ಯಾರ್ಥಿಗಳಿಗೆ ಯಾವುದೇ ಪೂರ್ವಾಗ್ರಹ ಉಂಟಾಗದಂತೆ ನೋಡಿಕೊಳ್ಳಲು ನಿಬಂಧನೆಯೊಂದನ್ನು ಸೇರ್ಪಡೆ ಮಾಡಲಾಗಿದೆ. ಎಇಆರ್‌ 2020ರ ಅಡಿ ಪರಿಷ್ಕೃತ ಗ್ರೇಡಿಂಗ್ ಯೋಜನೆ ಪರಿಚಯಿಸಲಾಗಿದೆ, ಇದರ ಅನ್ವಯ ಒಬ್ಬ ವಿದ್ಯಾರ್ಥಿಯು ಹಿಂದಿನ ನಿಯಮಗಳ ಅಡಿಯಲ್ಲಿ ಉತ್ತೀರ್ಣರಾಗಲು ಅಗತ್ಯವಿರುವ ಕನಿಷ್ಠ 50 ಅಂಕಗಳ ಬದಲಾಗಿ ಕನಿಷ್ಠ 40 ಅಂಕಗಳನ್ನು ('ಸಿ' ಗ್ರೇಡ್) ಗಳಿಸಿದರೆ ಕೋರ್ಸ್‌ನಲ್ಲಿ ಉತ್ತೀರ್ಣವಾದಂತೆ ಎಂದು ಹೇಳಲಾಗಿದೆ.

ವಾಣಿಜ್ಯ ಒಪ್ಪಂದ ವಿಷಯದಲ್ಲಿ ಎಫ್‌ ಗ್ರೇಡ್‌ ಪಡೆದಿದ್ದ ಪ್ರತಿವಾದಿ ವಿದ್ಯಾರ್ಥಿಯು ಪರಿಷ್ಕೃತ ಗ್ರೇಡ್‌ ಪ್ರಕಾರ ಸಿ ಗ್ರೇಡ್‌ಗೆ ಬಡ್ತಿ ಹೊಂದಿದ್ದರು. 2019-20ನೇ ಶೈಕ್ಷಣಿಕ ವರ್ಷದ ಅಂತ್ಯಕ್ಕೆ ತ್ರೈಮಾಸಿಕ ಒಂದರಲ್ಲೇ ಮೂರು ವಿಷಯಗಳ ಕುರಿತು ಸಲ್ಲಿಸಿದ್ದ ಪ್ರಾಜೆಕ್ಟ್‌ನಲ್ಲಿ ವ್ಯಾಪಕ ಕೃತಿಚೌರ್ಯ ನಡೆಸಿದ್ದ ಹಿನ್ನೆಲೆಯಲ್ಲಿ ಅವರನ್ನು ಮೂರನೇ ವರ್ಷದಲ್ಲೇ ಉಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ವಿದ್ಯಾರ್ಥಿಯು ಹೈಕೋರ್ಟ್‌ ಮೆಟ್ಟಿಲೇರಿದ್ದು, ಏಕಸದಸ್ಯ ಪೀಠವು ಮಧ್ಯಂತರ ಆದೇಶ ಹೊರಡಿಸಿತ್ತು. ಇದರಲ್ಲಿ ಮನವಿಯ ಅಂತಿಮ ವಿಚಾರಣೆಗೆ ಒಳಪಟ್ಟು ವಿದ್ಯಾರ್ಥಿಯನ್ನು ನಾಲ್ಕನೇ ವರ್ಷಕ್ಕೆ ಪಾಸು ಮಾಡುವಂತೆ ಎನ್‌ಎಲ್‌ಎಸ್‌ಐಯುಗೆ ಪೀಠವು ಆದೇಶ ಮಾಡಿತ್ತು.

Also Read
ಎನ್‌ಎಲ್‌ಎಸ್‌ಐಯು ಸ್ಥಳೀಯ ಮೀಸಲಾತಿ ಪ್ರಕರಣ: ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಮೂರ್ತಿ ಅನಿರುದ್ಧ ಬೋಸ್

2020-20ರ ಶೈಕ್ಷಣಿಕ ವರ್ಷದ ಆರಂಭದಿಂದಲೂ ನಾಲ್ಕು ಕೋರ್ಸ್‌ಗಳಲ್ಲಿ ವಿದ್ಯಾರ್ಥಿಯು ಎಫ್‌ ಗ್ರೇಡ್‌ ಪಡೆದಿದ್ದದ್ದು ಎನ್‌ಎಲ್‌ಎಸ್‌ಐಯು ಗಮನಕ್ಕೆ ಬಂದಿತ್ತು. ಹೀಗಾಗಿ ಎಇಆರ್‌ ಅಡಿ ಪದೋನ್ನತಿ ಪಡೆಯಲು ಮಾನದಂಡ ಪೂರೈಸಲು ವಿದ್ಯಾರ್ಥಿ ವಿಫಲವಾಗಿದ್ದರು. ಸದರಿ ಪ್ರಕರಣದಲ್ಲಿ ಎನ್‌ಎಲ್‌ಎಸ್‌ಐಯು ವಾದವನ್ನು ಆಲಿಸದೇ ಪೀಠವು ಮೇ 12ರಂದು ಆದೇಶ ಹೊರಡಿಸಿದ್ದು, ಮೇನಲ್ಲಿ ಪರೀಕ್ಷೆ ಬರೆಯಲು ಅನುಮತಿಸಿತ್ತು. ಜೂನ್‌ 3ರಂದು ಪ್ರಕರಣ ವಿಚಾರಣೆಗೆ ಬಂದಿದ್ದು, ವಿದ್ಯಾರ್ಥಿಯ ಸುದೀರ್ಘ ವಾದ ಆಲಿಸಿದ ಪೀಠವು ವಿಚಾರಣೆಯನ್ನು ಮುಂದೂಡಿತ್ತು.

ಹೀಗಾಗಿ, ಮೇ 12 ಮತ್ತು ಜೂನ್ 3ರ ಆದೇಶವನ್ನು ಪ್ರಶ್ನಿಸಿ ಎನ್‌ಎಲ್‌ಎಸ್‌ಐಯು ವಿಭಾಗೀಯ ಪೀಠದ ಮುಂದೆ ಮನವಿ ಸಲ್ಲಿಸಿತ್ತು. ಚಿಂತನೆ ನಡೆಸದೇ ಎರಡೂ ಆದೇಶಗಳನ್ನು ಹೊರಡಿಸಲಾಗಿದ್ದು, ಅವುಗಳನ್ನು ವಜಾ ಮಾಡುವಂತೆ ಎನ್‌ಎಲ್‌ಎಸ್‌ಐಯು ಕೋರಿತ್ತು. ಅಂತಿಮವಾಗಿ ಪ್ರಕರಣವು ಸೌಹಾರ್ದಯುತವಾಗಿ ಬಗೆಹರಿದಿರುವುದರಿಂದ ಎನ್‌ಎಲ್‌ಎಸ್‌ಐಯು ಮನವಿ ಹಿಂಪಡೆದಿದೆ.

Related Stories

No stories found.