ಕರ್ನಾಟಕ ಸರ್ಕಾರದ ಸ್ವಾವಲಂಬಿ ಸಾರಥಿ ಯೋಜನೆಯ ಬಗ್ಗೆ ಸುಳ್ಳು ಸುದ್ದಿ ಪ್ರಕಟಿಸಿದ ಆರೋಪದ ಹಿನ್ನೆಲೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಆಜ್‌ತಕ್ ವಾಹಿನಿ ಮತ್ತು ಅದರ ಪ್ರಧಾನ ಸಂಪಾದಕ ಹಾಗೂ ಸುದ್ದಿ ನಿರೂಪಕ ಸುಧೀರ್ ಚೌಧರಿ ಅವರ ವಿರುದ್ಧ ಸೆಪ್ಟೆಂಬರ್ 20ರವರೆಗೆ ಯಾವುದೇ ಬಲವಂತದ ಕ್ರಮಕೈಗೊಳ್ಳದಂತೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ಪೊಲೀಸರಿಗೆ ನಿರ್ದೇಶಿಸಿದೆ.
ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತದ ಸಹಾಯಕ ಆಡಳಿತಾಧಿಕಾರಿ ಎಸ್ ಶಿವಕುಮಾರ್ ನೀಡಿರುವ ದೂರಿನ ಅನ್ವಯ ಬೆಂಗಳೂರಿನ ಶೇಷಾದ್ರಿಪುರಂ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ತಡೆಯಾಜ್ಞೆ ಕೋರಿ ಸುಧೀರ್ ಚೌಧರಿ ಮತ್ತು ಆಜ್‌ತಕ್ ಸಂಸ್ಥೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಹೇಮಂತ್ ಚಂದನ್‌ಗೌಡರ್ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.
“ಅರ್ಜಿದಾರರ ಕೋರಿಕೆಯಂತೆ (ತನಿಖೆಗೆ) ತಡೆಯಾಜ್ಞೆ ನೀಡುವುದಿಲ್ಲ. ಆದರೆ, ಪೊಲೀಸರು ಅರ್ಜಿದಾರರ ವಿರುದ್ಧ ದುರುದ್ದೇಶಪೂರಿತ ಕ್ರಮಕೈಗೊಳ್ಳಬಾರದು. ಎಲ್ಲಾ ವಿಚಾರ ಸಾರ್ವಜನಿಕ ಅಂಗಳದಲ್ಲಿದ್ದು, ಅರ್ಜಿದಾರರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವ ಅಗತ್ಯವಿಲ್ಲ. ಮುಂದಿನ ಬುಧವಾರ ಅರ್ಜಿಯನ್ನು ಇತ್ಯರ್ಥಪಡಿಸಲಾಗುವುದು” ಎಂದು ಪೀಠವು ಮೌಖಿಕವಾಗಿ ಹೇಳಿತು.
ವಿಚಾರಣೆಯ ಒಂದು ಹಂತದಲ್ಲಿ ಪೀಠವು ಮೇಲ್ನೋಟಕ್ಕೆ ಪ್ರಕರಣ ಇದೆ ಎಂದು ಅರಿವಾದರೆ ಚೌಧರಿ ಅರ್ಜಿಯನ್ನು ವಜಾ ಮಾಡಲಾಗುವುದು ಎಂದೂ ಹೇಳಿತು.
ಆಜ್‌ತಕ್ ಪ್ರಸಾರ ಮಾಡಿರುವ ಸುದ್ದಿಯು ಧರ್ಮಗಳ ನಡುವೆ ದ್ವೇಷ ಬಿತ್ತಿದೆಯೇ ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ. ಅಲ್ಲದೇ, ಚೌಧರಿ ವಿರುದ್ಧ ಮೇಲ್ನೋಟಕ್ಕೆ ಪ್ರಕರಣ ಇದ್ದಂತೆ ಇದೆ ಎಂದಿತು. “ಸ್ವಾವಲಂಬಿ ಸಾರಥಿ ಯೋಜನೆ ಬಗ್ಗೆ ಪತ್ರಿಕೆಯಲ್ಲಿ ನಾನು ಓದಿದ ಪ್ರಕಾರ ಇದು ಹಿಂದೆಯೂ ಇತ್ತು. ಸದ್ಯದ ನಿರ್ದಿಷ್ಟ ಆರೋಪವು ಈ ಯೋಜನೆಯನ್ನು ಹಾಲಿ ಸರ್ಕಾರವು ಅಲ್ಪಸಂಖ್ಯಾತರಿಗೆ ಮಾತ್ರ ರೂಪಿಸಿದ್ದು, ಹಿಂದೂಗಳಿಗೆ ನಿರಾಕರಿಸಲಾಗಿದೆ ಎಂಬುದಾಗಿದೆ. ಹಲವು ಯೋಜನೆಗಳು ಜಾರಿಯಲ್ಲಿದ್ದು, ದೇಶದ ಎಲ್ಲಾ ಜನರನ್ನು ಸಮಾನವಾಗಿ ಪರಿಗಣಿಸಲಾಗುತ್ತದೆ. ಪ್ರತಿಯೊಬ್ಬರೂ ಫಲಾನುಭವಿಗಳಾಗಿದ್ದಾರೆ. ಆರೋಪಗಳನ್ನು ನೋಡಿದರೆ ಮೇಲ್ನೋಟಕ್ಕೆ ಪ್ರಕರಣ ಇದ್ದಂತಿದೆ. ಇದರ ಕುರಿತು ತನಿಖೆಯಾಗಬೇಕಿದೆ” ಎಂದು ಪೀಠ ಹೇಳಿತು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಉದಯ್ ಹೊಳ್ಳ ಅವರು “ತನಗಾಗುತ್ತಿರುವ ತಾರತಮ್ಯದ ಬಗ್ಗೆ ಮಾತನಾಡಿದರೆ ಅದನ್ನು ದ್ವೇಷ ಭಾಷಣ ಎನ್ನಬಹುದೇ” ಎಂದು ಪ್ರಶ್ನಿಸಿದರು.
ಯೋಜನೆಯನ್ನು ಸಮಾಜದ ಎಲ್ಲಾ ವರ್ಗದ ಜನರಿಗೆ ವಿಸ್ತರಿಸಲಾಗಿದೆಯೇ ಎಂದು ಪೀಠವು ಪ್ರಶ್ನಿಸಿದ್ದಕ್ಕೆ ಹೊಳ್ಳ ಅವರು ಇದು ಅಲ್ಪಸಂಖ್ಯಾತರಿಗೆ ಮಾತ್ರ ಇರುವ ಯೋಜನೆ ಎಂದರು.
ಪ್ರಕರಣದ ವಿಚಾರಣೆಯು ಊಟದ ಸಮಯದ ನಂತರವೂ ಮುಂದುವರೆಯಿತು. ಒಂದು ಸಂದರ್ಭದಲ್ಲಿ ಅರ್ಜಿದಾರರ ವಾದ ಬೆಂಬಲಿಸಿ ಪೀಠವು ಮಧ್ಯಂತರ ತಡೆ ನೀಡಲು ಮುಂದಾಯಿತು. ಆದರೆ, ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು ಇದಕ್ಕೆ ತೀವ್ರ ವಿರೋಧ ದಾಖಲಿಸಿದರು.
ಈ ಹಿನ್ನೆಲೆಯಲ್ಲಿ ಮಧ್ಯಂತರ ತಡೆ ನಿರಾಕರಿಸಿದ ಪೀಠವು ಅರ್ಜಿದಾರರ ವಿರುದ್ಧ ಬಲವಂತದ ಕ್ರಮಕೈಗೊಳ್ಳಬಾರದು ಎಂದು ಪೊಲೀಸರಿಗೆ ನಿರ್ದೇಶಿಸಿ, ವಿಚಾರಣೆಯನ್ನು ಸೆಪ್ಟೆಂಬರ್ 20ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತವು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತ ಸಮುದಾಯದ ಜನರಿಗೆ ವಿವಿಧ ಯೋಜನೆಗಳ ಅಡಿ ಸಾಲ-ಸೌಲಭ್ಯ ಕಲ್ಪಿಸುತ್ತಿದೆ. ಅಲ್ಪಸಂಖ್ಯಾತ ಸಮುದಾಯದ ಫಲಾನುಭವಿಗಳು ಬ್ಯಾಂಕ್ ಮೂಲಕ ಸಾಲ ಪಡೆದು ಟ್ಯಾಕ್ಸಿ/ಗೂಡ್ಸ್ ವಾಹನ/ ಆಟೊರಿಕ್ಷಾ ಖರೀದಿಸಲು ಬಯಸಿದ್ದಲ್ಲಿ ನಿಗಮದಿಂದ ಶೇ. 50ರಷ್ಟು, ಗರಿಷ್ಠ 3 ಲಕ್ಷ ರೂಪಾಯಿವರೆಗೆ ಸಹಾಯಧನ ನೀಡಲಾಗುತ್ತದೆ. ಈ ಯೋಜನೆಯು ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುವ ಅಂಬೇಡ್ಕರ್ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ಇತರೆ ಜಾತಿಯ ನಿಗಮಗಳಲ್ಲಿ ಅನುಷ್ಠಾನದಲ್ಲಿದೆ.
ಆದರೆ, ಸೆಪ್ಟೆಂಬರ್ 11ರಂದು ರಾತ್ರಿ 9.55ರ ವೇಳೆಗೆ ರಾಷ್ಟ್ರೀಯ ಸುದ್ದಿ ವಾಹಿನಿಯಾದ ಆಜ್ ತಕ್‌ನಲ್ಲಿ ಅದರ ಪ್ರಧಾನ ಸಂಪಾದಕ ಸುಧೀರ್ ಚೌಧರಿ ಅವರು ಯೋಜನೆಯ ಪ್ರಯೋಜನವನ್ನು ಕೇವಲ ಅಲ್ಪಸಂಖ್ಯಾತರಿಗೆ ಮಾತ್ರ ಕರ್ನಾಟಕ ಸರ್ಕಾರದಿಂದ ನೀಡಲಾಗುತ್ತಿದೆ ಎಂದು ಸುದ್ದಿ ಪ್ರಸಾರ ಮಾಡಿದ್ದಾರೆ ಎಂದು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತದ ಸಹಾಯಕ ಆಡಳಿತಾಧಿಕಾರಿ ಎಸ್ ಶಿವಕುಮಾರ್ ಶೇಷಾದ್ರಿಪುರಂ ಠಾಣೆಯಲ್ಲಿ ದೂರು ನೀಡಿದ್ದರು. ಅಲ್ಪಸಂಖ್ಯಾತರಲ್ಲದ ಹಿಂದೂಗಳಿಗೆ ಈ ಯೋಜನೆ ನೀಡದೇ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡಲಾಗುತ್ತಿದೆ. ಇದರಿಂದ ರಾಜ್ಯದಲ್ಲಿ ಅಲ್ಪಸಂಖ್ಯಾತರಲ್ಲದ ಬಡ ಹಿಂದೂಗಳಿಗೆ ಅನ್ಯಾಯವಾಗಿರುತ್ತದೆ ಎಂದು ಕೋಮು ಪ್ರಚೋದನಾಕಾರಿ ಸುದ್ದಿ ಪ್ರಸಾರ ಮಾಡುವ ಮೂಲಕ ಹಿಂದೂ ಧರ್ಮ ಮತ್ತು ಇತರ ಧರ್ಮಗಳ ನಡುವೆ ದ್ವೇಷ ಹರಡುವ, ಅಶಾಂತಿಯ ವಾತಾವರಣ ಮತ್ತು ಕೋಮು ಗಲಭೆ ನಡೆಸಲು ಪ್ರಚೋದನೆ ನೀಡಿರುತ್ತಾರೆ ಎಂದು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತದ ಸಹಾಯಕ ಆಡಳಿತಾಧಿಕಾರಿ ಎಸ್ ಶಿವಕುಮಾರ್ ಶೇಷಾದ್ರಿಪುರಂ ಠಾಣೆಯಲ್ಲಿ ದೂರು ನೀಡಿದ್ದರು.
ಅಲ್ಲದೇ, ಚೌಧರಿ ಅವರು ತಾವಾಡುವ ಮಾತುಗಳ ಬಗ್ಗೆ ಸ್ಪಷ್ಟ ಅರಿವಿದ್ದರೂ ಸುಳ್ಳು ಸುದ್ದಿ ಬಿತ್ತರಿಸಿ, ರಾಜ್ಯದಲ್ಲಿ ಕೋಮು ಸಾಮರಸ್ಯ ಹಾಳು ಮಾಡಲು ಸಂಚು ಮಾಡಿದ್ದಾರೆ. ರಾಜ್ಯ ಸರ್ಕಾರ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಯೋಜನೆಯ ಬಗ್ಗೆ ಸುಳ್ಳು ಮತ್ತು ಕೋಮು ಪ್ರಚೋದನಕಾರಿ ಸುದ್ದಿ ಬಿತ್ತರಿಸಿದ ಆಜ್ ತಕ್ ಸುದ್ದಿ ವಾಹಿನಿ ಮತ್ತು ಅದರ ಮುಖ್ಯ ಸಂಪಾದಕ ಸುಧೀರ್ ಚೌಧರಿ ಹಾಗೂ ಕಾರ್ಯಕ್ರಮ ಆಯೋಜಿಸಿರುವ ಆಜ್ ತಕ್ ವಾಹಿನಿಯ ಸಂಘಟಕರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತದ ಸಹಾಯಕ ಆಡಳಿತಾಧಿಕಾರಿ ಎಸ್ ಶಿವಕುಮಾರ್ ಶೇಷಾದ್ರಿಪುರಂ ಠಾಣೆಯಲ್ಲಿ ದೂರು ನೀಡಿದ್ದರು.
ಇದನ್ನು ಆಧರಿಸಿ ಸುಧೀರ್ ಚೌಧರಿ, ಆಜ್ ತಕ್ ಸುದ್ದಿ ವಾಹಿನಿ, ವಾಹಿನಿಯ ಸಂಘಟಕರನ್ನು ಕ್ರಮವಾಗಿ ಮೂವರು ಆರೋಪಿಗಳನ್ನಾಗಿಸಿ, ಅವರ ವಿರುದ್ಧ ಐಪಿಸಿ ಸೆಕ್ಷನ್ 153ಎ ಮತ್ತು 505 ಅಡಿ ಪ್ರಕರಣ ದಾಖಲಿಸಲಾಗಿದೆ. ಇದಕ್ಕೆ ಮಧ್ಯಂತರ ಪರಿಹಾರದ ಭಾಗವಾಗಿ ತಡೆ ಕೋರಲಾಗಿದೆ.