ಕೆಎಸ್‌ಎಲ್‌ಯು ಆಫ್‌ಲೈನ್‌ ಪರೀಕ್ಷೆ ಸುತೋಲೆ: ಮತ್ತೊಂದು ನೋಟಿಸ್‌ ಜಾರಿ, ಮಾನಸಿಕ ವೇದನೆಗೆ ₹5 ಲಕ್ಷ ಪರಿಹಾರ ಕೋರಿಕೆ

ಕಳೆದ ಸೆಮಿಸ್ಟರ್‌ನ ಪರೀಕ್ಷೆಗಳನ್ನೇ ಕೆಎಸ್‌ಎಲ್‌ಯು ನಡೆಸಿಲ್ಲ. ಈ ಮೂಲಕ ಯುಜಿಸಿ ಶೈಕ್ಷಣಿಕ ವೇಳಾಪಟ್ಟಿ‌ ಪ್ರಕಾರ ಎಂಟು ತಿಂಗಳನ್ನು ದಾಟಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.
High Court of Karnataka
High Court of Karnataka

ಇಂಟರ್‌ಮೀಡಿಯೇಟ್‌ ಕಾನೂನು ವಿದ್ಯಾರ್ಥಿಗಳಿಗೆ ಆಫ್‌ಲೈನ್‌ ಪರೀಕ್ಷೆ ನಡೆಸುವ ಕುರಿತು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (ಕೆಎಸ್‌ಎಲ್‌ಯು) ಹೊರಡಿಸಿರುವ ಸುತ್ತೋಲೆಯನ್ನು ವಜಾಗೊಳಿಸುವ ಕುರಿತು ಮೂವರು ಕಾನೂನು ವಿದ್ಯಾರ್ಥಿಗಳು ಸಲ್ಲಿಸಿರುವ ಮನವಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿದ್ದು, ಪ್ರತಿಕ್ರಿಯಿಸುವಂತೆ ಸೂಚಿಸಿದೆ.

ಕೆಎಸ್‌ಎಲ್‌ಯು ಶೈಕ್ಷಣಿಕ ವೇಳಾಪಟ್ಟಿ‌ ವಿಸ್ತರಿಸಿರುವುದರಿಂದ ತಮಗಾಗಿರುವ ಮಾನಸಿಕ ವೇದನೆಗೆ 5 ಲಕ್ಷ ರೂಪಾಯಿ ಪರಿಹಾರ ಕೊಡಿಸುವಂತೆಯೂ ನ್ಯಾಯಾಲಯಕ್ಕೆ ಮನವಿದಾರರು ಕೋರಿದ್ದಾರೆ. ಈ ಸಂಬಂಧ ನ್ಯಾಯಮೂರ್ತಿ ಆರ್‌ ದೇವದಾಸ್‌ ಅವರಿದ್ದ ಏಕಸದಸ್ಯ ಪೀಠವು ಭಾರತೀಯ ವಕೀಲರ ಪರಿಷತ್ತು, ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ), ಕೆಎಸ್‌ಎಲ್‌ಯು ಮತ್ತು ರಾಜ್ಯ ಸರ್ಕಾರಕ್ಕೆ ಶುಕ್ರವಾರ ನೋಟಿಸ್‌ ಜಾರಿ ಮಾಡಿದೆ.

2020ರ ಏಪ್ರಿಲ್‌ 29ರ ಯುಜಿಸಿ ಮಾರ್ಗಸೂಚಿಯ ಅನ್ವಯ ಯುಜಿಸಿ ಶೈಕ್ಷಣಿಕ ಕ್ಯಾಲೆಂಡರ್‌ ಸಿದ್ಧಪಡಿಸಲಾಗಿದ್ದು, 2019-20ರ ಇಂಟರ್‌ಮೀಡಿಯೆಟ್‌‌ ಪರೀಕ್ಷೆಗಳು ಜುಲೈ 31ರ ಒಳಗೆ ಮುಗಿದಿರಬೇಕು ಎಂದು ಹೇಳಿದೆ. 2020ರ ಆಗಸ್ಟ್‌ 14ರ ಒಳಗೆ ಫಲಿತಾಂಶವನ್ನೂ ಘೋಷಿಸಬೇಕು ಎಂದು ಹೇಳಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ. ಬಿಸಿಐ ನವೆಂಬರ್‌ 1ರಂದು ಹೊರಡಿಸಿದ ಮಾರ್ಗಸೂಚಿಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಆನ್‌ಲೈನ್‌ ಮತ್ತು ಆಫ್‌ಲೈನ್‌ ಅವಕಾಶ ಕಲ್ಪಿಸುವಂತೆ ಸೂಚಿಸಿರುವುದರತ್ತಲೂ ಬೊಟ್ಟು ಮಾಡಲಾಗಿದೆ.

ಕಳೆದ ಸೆಮಿಸ್ಟರ್‌ ಪರೀಕ್ಷೆಯನ್ನೇ ಕೆಎಸ್‌ಎಲ್‌ಯು ಇನ್ನೂ ನಡೆಸಿಲ್ಲ. ಈ ಮೂಲಕ ಯುಜಿಸಿ ಶೈಕ್ಷಣಿಕ ಕ್ಯಾಲೆಂಡರ್‌ ಪ್ರಕಾರ ಎಂಟು ತಿಂಗಳ ಗಡಿಯನ್ನು ದಾಟಲಾಗಿದೆ ಎಂದು ಹೇಳಿದೆ. ಸೆಮಿಸ್ಟರ್‌ ಪರೀಕ್ಷೆಗಳನ್ನು ನಡೆಸದ ಕೆಎಸ್‌ಎಲ್‌ಯು ಯುಜಿಸಿ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಕಡ್ಡಾಯವಾಗಿ ಆಫ್‌ಲೈನ್‌ ಮೂಲಕ ಮಾತ್ರ ಪರೀಕ್ಷೆಗಳನ್ನು ಬರೆಯುವಂತೆ ಸೂಚಿಸಿದೆ.

Also Read
ಇಂಟರ್‌ಮೀಡಿಯಟ್‌ ಸೆಮಿಸ್ಟರ್‌ ಪರೀಕ್ಷೆ ನಡೆಸುವ ಬಿಸಿಐ,ಕೆಎಸ್‌ಎಲ್‌ಯು ನಿರ್ಧಾರ ಪ್ರಶ್ನಿಸಿದ ಕಾನೂನು ವಿದ್ಯಾರ್ಥಿಗಳು

ಜನವರಿ 13ರಂದು ಸುತ್ತೋಲೆ ಹೊರಡಿಸಿರುವ ಕೆಎಸ್‌ಎಲ್‌ಯು ಇಂಟರ್‌ಮೀಡಿಯೇಟ್‌ ಕಾನೂನು ವಿದ್ಯಾರ್ಥಿಗಳಿಗೆ ಆಫ್‌ಲೈನ್‌ ಮೂಲಕ ಪರೀಕ್ಷೆ ನಡೆಸುವುದಾಗಿ ಹೇಳಿದೆ. ಈ ಮೂಲಕ ಕೊನೆಯ ಸೆಮಿಸ್ಟರ್‌ ಪರೀಕ್ಷೆಗಳನ್ನು ಒಂದಾದ ಮೇಲೊಂದರಂತೆ ಬರೆಯುವಂತೆ ವಿದ್ಯಾರ್ಥಿಗಳಿಗೆ ಸೂಚಿಸುತ್ತಿದೆ. ಇದರರ್ಥ ಒಟ್ಟು ನಾಲ್ಕು ಕೊನೆಯ ಸೆಮಿಸ್ಟರ್‌ ಪರೀಕ್ಷೆಗಳನ್ನು ಒಂದೇ ವರ್ಷದಲ್ಲಿ ಬರೆಯುವಂತೆ ನಿರ್ದೇಶಿಸಲಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಪರೀಕ್ಷೆ ನಡೆಸಲು ಸಾಕಷ್ಟು ವಿಳಂಬ ನೀತಿ ಅನುಸರಿಸುವ ಮೂಲಕ ವಿದ್ಯಾರ್ಥಿಗಳಿಗೆ ಮಾನಸಿಕ ವೇದನೆ ಉಂಟು ಮಾಡುವುದರ ಜೊತೆಗೆ ಸರಿಪಡಿಸಲಾಗದ ಹಾನಿಯನ್ನು ಕೆಎಸ್‌ಎಲ್‌ಯು ಮಾಡಿದೆ. ಯುಜಿಸಿ ಕ್ಯಾಲೆಂಡರ್‌ ಅನ್ವಯ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಬೇಕಿದ್ದು, ಯುಜಿಸಿ ಮಾರ್ಗಸೂಚಿಗಳನ್ನು ಅನುಸರಿಸುವುದು ದೇಶದ ಎಲ್ಲಾ ವಿಶ್ವವಿದ್ಯಾಲಯಗಳ ಶಾಸನಬದ್ಧ ಕರ್ತವ್ಯವಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com