ರೋಡ್‌ ರೇಜ್‌ ಪ್ರಕರಣ: ಮಾಲೂರು ನ್ಯಾಯಾಧೀಶೆ ಗಾಯತ್ರಿಯವರ ವಿರುದ್ಧ ಕ್ರಮಕ್ಕೆ ಹೈಕೋರ್ಟ್‌ ನಿರ್ದೇಶನ

ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದವರ ವಿರುದ್ಧ ಜಗಳವಾಡಿದ್ದಲ್ಲದೆ, ಬೈಕ್‌ ಸವಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ನ್ಯಾಯಾಧೀಶೆ ಗಾಯತ್ರಿ ಒತ್ತಾಯಿಸಿರುವುದನ್ನು ಸಾಕ್ಷ್ಯಗಳು ಬಹಿರಂಗಪಡಿಸಿವೆ ಎಂದು ನ್ಯಾಯಾಲಯ ಹೇಳಿದೆ.
Gayatri, Prl. Civil Judge and JMFC, Malur
Gayatri, Prl. Civil Judge and JMFC, Malur
Published on

ರೋಡ್‌ ರೇಜ್‌ ಪ್ರಕರಣದ ಸಂಬಂಧ ಬೈಕ್‌ ಸವಾರ ಮತ್ತು ಹಿಂಬದಿ ಸವಾರನ ವಿರುದ್ಧ ಕಲಹ ನಡೆಸಿದ್ದಲ್ಲದೇ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸುವಂತೆ ಮಾಡಿದ್ದ ಕೋಲಾರ ಜಿಲ್ಲೆಯ ಮಾಲೂರಿನ ಪ್ರಧಾನ ಸಿವಿಲ್‌ ನ್ಯಾಯಾಧೀಶೆ ಗಾಯತ್ರಿ ಅವರನ್ನು ಕರ್ನಾಟಕ ಹೈಕೋರ್ಟ್‌ ಬುಧವಾರ ಕಟುವಾಗಿ ಟೀಕಿಸಿದೆ.

ತಮ್ಮ ಕಾರನ್ನು ಬೈಕ್‌ ಸವಾರರು ಹಿಂದಿಕ್ಕಿ ಮುಂದೆ ಹೋಗಿದ್ದರಿಂದ ಕೆರಳಿದ ನ್ಯಾಯಾಧೀಶೆ ಗಾಯತ್ರಿ ಮತ್ತು ಅವರ ಪತಿಯು ಅವರನ್ನು ಹಿಂಬಾಲಿಸಿ, ರಸ್ತೆಯಲ್ಲಿ ಕಲಹ ತೆಗೆದಿದ್ದರು. ಆನಂತರ ಬೈಕ್‌ ಸವಾರ, ಹಿಂಬದಿ ಸವಾರ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರ ಮೇಲೆ ಒತ್ತಡ ಹೇರಿದ್ದರು. ಈ ಪ್ರಕರಣ ರದ್ದತಿ ಕೋರಿ ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

Justice M Nagaprasanna
Justice M Nagaprasanna

“ರೋಡ್‌ ರೇಜ್‌ಗೆ ಸಂಬಂಧಿಸಿದ ವಿಡಿಯೊ ನೋಡಿದರೆ ಮೇಲ್ನೋಟಕ್ಕೆ ಇದು ನ್ಯಾಯಾಂಗ ಅಧಿಕಾರಿಯ ಘನತೆಗೆ ತಕ್ಕಂತಿಲ್ಲ. ಕಾರಿನಿಂದ ಇಳಿದು ಅವರು ಸಾಮಾನ್ಯ ವ್ಯಕ್ತಿಯ ಜೊತೆಗೆ ಜಗಳ ತೆಗೆದಿದ್ದಾರೆ. ಆತ ಮಾಡಿದ ಏಕೈಕ ತಪ್ಪು ನ್ಯಾಯಾಧೀಶೆಯ ಕಾರನ್ನು ಹಿಂದಿಕ್ಕಿ ಮುಂದೆ ಹೋಗಿದ್ದು ಮತ್ತು ನಿಧಾನವಾಗಿ ಕಾರು ಚಲಾಯಿಸುವಂತೆ ಹೇಳಿರುವುದು. ಇದು ನ್ಯಾಯಾಧೀಶೆಯನ್ನು ಕೆರಳಿಸಿದ್ದರೆ ಅಥವಾ ಅವರ ಅಹಂಗೆ ಪೆಟ್ಟು ನೀಡಿ ನೋಯಿಸಿದ್ದರೆ, ನ್ಯಾಯಾಂಗ ಅಧಿಕಾರಿಯ ಕಚೇರಿಯ ದುರುಪಯೋಗಕ್ಕೆ ಇದಕ್ಕಿಂತ ಶ್ರೇಷ್ಠ ಉದಾಹರಣೆ ಇನ್ನೊಂದಿಲ್ಲ” ಎಂದು ನ್ಯಾಯಾಲಯ ಹೇಳಿದೆ.

"ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿರುವ ವಿಡಿಯೊ ನೋಡಿದರೆ ನ್ಯಾಯಾಂಗ ಅಧಿಕಾರಿಯು ಹೊಂದಿರುವ ಹುದ್ದೆಗೆ ಸಂಪೂರ್ಣವಾಗಿ ಅನುಚಿತವಾದ ರೀತಿಯಲ್ಲಿ ವರ್ತಿಸಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ” ಎಂದಿರುವ ನ್ಯಾಯಾಲಯವು ತನ್ನ ಆದೇಶವನ್ನು ನ್ಯಾಯಾಂಗ ಅಧಿಕಾರಿಯ ವಿರುದ್ಧ ಕ್ರಮಕೈಗೊಳ್ಳಲು ಮುಖ್ಯ ನ್ಯಾಯಮೂರ್ತಿ ಅವರ ಮುಂದೆ ಮಂಡಿಸುವಂತೆ ರಿಜಿಸ್ಟ್ರಿಗೆ ಹೈಕೋರ್ಟ್ ನಿರ್ದೇಶಿಸಿದೆ.

ರಾಜ್ಯ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು “ಬೈಕ್‌ನಲ್ಲಿ ಇಬ್ಬರು ಮಾತ್ರ ತೆರಳುತ್ತಿದ್ದರು. ನ್ಯಾಯಾಧೀಶೆ ಗಾಯತ್ರಿ ಅವರ ಸೂಚನೆಯಂತೆ ಮೂರನೇ ವ್ಯಕ್ತಿಯಾದ 70 ವರ್ಷ ವೃದ್ಧರನ್ನೂ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದರು. ಆನಂತರ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ” ಎಂದರು.

ಬೆಂಗಳೂರು ವಕೀಲರ ಸಂಘ ಪ್ರತಿನಿಧಿಸಿದ್ದ ಹಿರಿಯ ವಕೀಲ ಡಿ ಆರ್‌ ರವಿಶಂಕರ್‌ ಅವರು “ನ್ಯಾಯಾಧೀಶೆ ಗಾಯತ್ರಿ ಅವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವಂತೆ ಕೋಲಾರ ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿಗಳಿಗೆ ಮನವಿ ಸಲ್ಲಿಸಲಾಗಿದೆ. ಇದರ ಜೊತೆಗೆ ನ್ಯಾಯಾಧೀಶೆ ಗಾಯತ್ರಿ ಅವರ ನಡವಳಿಕೆ ಕುರಿತು ವಕೀಲರು ನೀಡಿರುವ ಇತರೆ ದೂರುಗಳನ್ನೂ ಮನವಿಯಲ್ಲಿ ಉಲ್ಲೇಖಿಸಲಾಗಿದೆ” ಎಂದರು.

"ನ್ಯಾಯಾಂಗ ಅಧಿಕಾರಿಯ ಹುದ್ದೆಯು ನ್ಯಾಯಾಲಯದ ಆವರಣಕ್ಕೆ ಮಾತ್ರ ಸೀಮಿತವಾಗಿಲ್ಲ. ನ್ಯಾಯಾಂಗ ಕಚೇರಿಯು ನಿರಂತರ ಸಾರ್ವಜನಿಕ ನಂಬಿಕೆಯನ್ನು ಹೊಂದಿದೆ. ನ್ಯಾಯಾಲಯದ ಒಳಗೆ ನಡೆಯುವ ಕೆಲಸ ಮಾತ್ರವಲ್ಲ; ನ್ಯಾಯಾಲಯದ ಹೊರಗಿನ ನಡವಳಿಕೆಯು ಸಂಸ್ಥೆಯ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಉಳಿಸಿಕೊಳ್ಳುತ್ತದೆ ಅಥವಾ ಕುಗ್ಗಿಸುತ್ತದೆ. ನ್ಯಾಯಾಂಗ ಅಧಿಕಾರಿಯ ಪ್ರತಿಯೊಂದು ನಡೆಯೂ ನ್ಯಾಯಾಲಯದ ನಾಲ್ಕು ಗೋಡೆಗಳಿಗೆ ಸೀಮಿತವಾಗಿಲ್ಲ. ಸಾರ್ವಜನಿಕರೊಂದಿಗೆ ಸಂವಹನ ನಡೆದಾಗಲೆಲ್ಲಾ ಅದು ನ್ಯಾಯಾಲಯದ ಸಭಾಂಗಣವನ್ನು ಮೀರಿ ಪ್ರಯಾಣಿಸುತ್ತದೆ" ಎಂದು ಹೈಕೋರ್ಟ್ ಒತ್ತಿ ಹೇಳಿದೆ.

"ಈ ಅರ್ಜಿದಾರರ ವಿರುದ್ಧದ ಅಪರಾಧಗಳಲ್ಲಿ ಅವರನ್ನು ಹೇಗೆ ವಶಕ್ಕೆ ಪಡೆಯಲಾಗಿದೆ ಎಂಬುದು ಆಶ್ಚರ್ಯ ಉಂಟು ಮಾಡಿದೆ. ದೂರುದಾರೆ ನ್ಯಾಯಾಂಗ ಅಧಿಕಾರಿ ಎಂಬ ಕಾರಣಕ್ಕೆ ನಾಗರಿಕರನ್ನು ಅವರು ನಿರ್ದೇಶಿಸಿದ ರೀತಿಯಲ್ಲಿ ನಡೆಸಿಕೊಳ್ಳಬಹುದು ಎಂದು ಅರ್ಥವಲ್ಲ” ಎಂದು ನ್ಯಾಯಾಲಯವು ಪೊಲೀಸರ ವಿರುದ್ಧ ಕಿಡಿಕಾರಿದೆ.

ಅಂತಿಮವಾಗಿ ಅರ್ಜಿದಾರರ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ ನೀಡಿದ್ದು, ವಿಚಾರಣೆ ಮುಂದೂಡಿತು.

Kannada Bar & Bench
kannada.barandbench.com